ಸುಭಾಷಿತಕಾರನ ಅಳಲು ~ ಭರ್ತೃಹರಿಯ ಸುಭಾಷಿತಗಳು #1

ಬೋದ್ಧಾರೋ ಮತ್ಸರಗ್ರಸ್ತಾಃ ಪ್ರಭವಃ ಸ್ಮಯದೂಷಿತಾಃ | 
ಅಬೋಧೋಪಹತಾಶ್ಚಾನ್ಯೇ ಜೀರ್ಣಮಂಗೇ ಸುಭಾಷಿತಮ್ ||1||

ಅರ್ಥ : ತಿಳಿದವರು ನನ್ನ ಸುಭಾಷಿತಗಳನ್ನು ಮತ್ಸರದಿಂದ ಓದುವುದಿಲ್ಲ. ತಿಳಿಯದವರು ಓದಿಯೂ (ಅವರು ಅರ್ಥ ಮಾಡಿಕೊಳ್ಳಲಾಗದೆ) ಉಪಯೋಗವಾಗುವುದಿಲ್ಲ. ಈ ಸುಭಾಷಿತಗಳು ನನ್ನೊಳಗೇ ಜೀರ್ಣವಾಗಿಬಿಡುತ್ತವೆಯೋ ಏನೋ!

ತಾತ್ಪರ್ಯ: ಈ ಶ್ಲೋಕದಲ್ಲಿ ಭರ್ತೃಹರಿಯ ಅಳಲು ವ್ಯಕ್ತವಾಗಿದೆ.
“ನಾನು ಯಾರಿಗಾಗಿ ಸುಭಾಷಿತಗಳನ್ನು ಹೇಳಬೇಕು ? ಸುಭಾಷಿತದ ಒಳ ಅರ್ಥವನ್ನು ತಿಳಿಯಬಲ್ಲವರು, ತಿಳಿದು ಆಸ್ವಾದಿಸುವವರು, ಪಂಡಿತರು ಅಥವಾ ಜ್ಞಾನಿಗಳು ಮಾತ್ರ. ಆದರೆ ಈ ಪಂಡಿತರ ಸಹಜ ಸ್ವಭಾವ ಮತ್ಸರದಿಂದ  (ಹೊಟ್ಟೆಕಿಚ್ಚಿನಿಂದ) ಕೂಡಿದೆ. ವಿದ್ವಾಂಸರು ಇನ್ನೊಬ್ಬ ವಿದ್ವಾಂಸನನ್ನು ಸುಲಭದಲ್ಲಿ ಮೆಚ್ಚಿಕೊಳ್ಳುವುದಿಲ್ಲ. ಆದ್ದರಿಂದ ನನ್ನ  ಸುಭಾಷಿತವನ್ನು ಅವರು ಓದದೇ ಹೋಗಬಹುದು. ಜನಸಾಮಾನ್ಯರಾದರೂ ಓದುತ್ತಾರೆ ಅಂದುಕೊಂಡರೆ, ಅವರಿಗೆ ನಾನು ಏನು ಹೇಳಿದ್ದೇನೆ ಅನ್ನುವುದೇ ಅರ್ಥವಾಗದೆ ಹೋಗಬಹುದು. ಅವರು ತಮ್ಮದೇ ಅರ್ಥ ಹಚ್ಚಿ, ಅಪಾರ್ಥ ಉಂಟುಮಾಡಲೂಬಹುದು! ಹೀಗೆ ಯಾರೂ ಕೇಳುವವರಿಲ್ಲದೆ ನನ್ನ ಸುಭಾಷಿತಗಳು ಮನಸ್ಸಿನಲ್ಲೇ ಹುದುಗಿ ಕೊನೆಗೆ ನನ್ನ ದೇಹದೊಂದಿಗೆ ಜೀರ್ಣವಾಗಿಹೋಗುತ್ತವೆ” ಎಂದು ಭರ್ತೃಹರಿ ಸುಭಾಷಿತ ರಚನೆಗೆ ಮೊದಲು ತನ್ನ ದುಃಖವನ್ನು ತೋಡಿಕೊಳ್ಳುತ್ತಾನೆ.
ಆದರೂ ಮುಂದೆ ಎಂದಾದರೂ ತನ್ನ ಸುಭಾಷಿತಗಳನ್ನು ಓದಿ ಅರ್ಥ ಮಾಡಿಕೊಳ್ಳಬಲ್ಲ ಪೀಳಿಗೆ ಜನಿಸುತ್ತದೆ ಎಂಬ ಭರವಸೆಯಿಂದ ಸುಭಾಷಿತ ರಚನೆಗೆ ಮುಂದಾಗುತ್ತಾನೆ.

ಭರ್ತೃಹರಿಯ ರಚನೆಯ ಅಂತಹಾ ಕೆಲವು ಸೂಭಾಷಿತಗಳನ್ನು ಮುಂದಿನ ಕೆಲವು ದಿನಗಳ ಕಾಲ ಇಲ್ಲಿ ನೀಡಲಿದ್ದೇವೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.