ಪ್ರವಾದಿ ಯೂಸುಫರು ನೀಡಿದ ಸ್ವಪ್ನ ಫಲ ವಿವರಣೆ

ಅರಳಿಮರ ಸಂಗ್ರಹದಿಂದ | ಆಕರ: ಪವಿತ್ರ ಕುರ್ ಆನ್; ಅಧ್ಯಾಯ 12, ಯೂಸುಫ್

ಮ್ಮೆ ಅಝೀಝ್ ಎನ್ನುವವನ ಹೆಂಡತಿಯ ಕುತಂತ್ರದಿಂದಾಗಿ ಪ್ರವಾದಿ ಯೂಸುಫರು ಸೆರೆಮನೆಯಲ್ಲಿ ಇರಬೇಕಾಗಿ ಬಂತು. ಅವರನ್ನಿರಿಸಿದ ಸೆರೆಕೋಣೆಗೆ ಇಬ್ಬರು ಗುಲಾಮರು ಬಂದು ಸೇರಿದರು.

ಒಂದು ದಿನ ಅವರಲ್ಲೊಬ್ಬನು ತಾನು ಸಾರಾಯಿ ಭಟ್ಟಿ ಇಳಿಸುತ್ತಿರುವುದಾಗಿ ಕನಸು ಕಂಡನು. ಇನ್ನೊಬ್ಬನು, ತನ್ನ ತಲೆಯ ಮೇಲೆ ರೊಟ್ಟಿ ಇರಿಸಿದಂತೆಯೂ ಪಕ್ಷಿಗಳು ಬಂದು ಅದನ್ನು ತಿನ್ನುತ್ತಿರುವಂತೆಯೂ ಕನಸು ಕಂಡನು. ಅವರಿಬ್ಬರೂ ಯೂಸುಫರ ಬಳಿ ಬಂದು, “ನೀವು ಖಂಡಿತವಾಗಿಯೂ ಸಜ್ಜನರೇ ಇದ್ದೀರಿ. ನಿಮಗೆ ಈ ಕನಸುಗಳ ಅರ್ಥ ತಿಳಿದಿರಬೇಕು. ದಯವಿಟ್ಟು ಹೇಳಿ” ಎಂದು ಕೇಳಿಕೊಂಡರು.
ಕೊಂಚ ಹೊತ್ತು ಯೋಚಿಸಿದ ಯೂಸುಫರು “ಹಗಾದರೆ ಕೇಳಿರಿ! ಮೊದಲನೆಯವನು ತನ್ನ ಪ್ರಭುವಿಗೆ, ಅಂದರೆ ಈಜಿಪ್ತಿನ ದೊರೆಗೆ ಮದ್ಯ ಕುಡಿಸುವ ವೃತ್ತಿಗೆ ಸೇರಿಕೊಳ್ಳುವನು. ಎರಡನೆಯವನು ಗಲ್ಲಿಗೇರಿಸಲ್ಪಡುವನು ಮತ್ತು ಅವನ ತಲೆಯನ್ನು ಹಕ್ಕಿಗಳು ಕುಕ್ಕಿ ತಿನ್ನುವವು” ಎಂದನು. ಈ ಫಲಗಳನ್ನು ಹೇಳಿಯಾದ ಮೇಲೆ ಯೂಸುಫರು ಮೊದಲನೆಯವನನ್ನು ಕುರಿತು, “ನೀನು ದೊರೆಯ ಬಳಿ ಕೆಲಸಕ್ಕೆ ಸೇರಿದಾಗ ನನ್ನ ಪ್ರಸ್ತಾಪ ಮಾಡಬೇಕು” ಎಂದು ಸೂಚಿಸಿದರು.

ಕೆಲ ಕಾಲಾನಂತರ ಮೊದಲನೆಯ ಗುಲಾಮನು ಬಿಡುಗಡೆಯಾಗಿ ಹೋದನು. ಅವನು ಈಜಿಪ್ತಿನ ದೊರೆಯ ಬಳಿ ಕೆಲಸಕ್ಕೆ ಸೇರಿಕೊಂಡನು. ಆದರೆ ಅವನು ಯೂಸುಫರ ತಾಕೀತನ್ನು ಮರೆತುಬಿಟ್ಟನು. ಆದ್ದರಿಂದ ಯೂಸುಫರು ದೀರ್ಘ ಕಾಲ ಸೆರೆಯಲ್ಲಿ ಇರಬೇಕಾಗಿ ಬಂತು.

ಒಮ್ಮೆ ದೊರೆಯು ತನ್ನ ದರ್ಬಾರಿನಲ್ಲಿ, “ನಾನು ಕನಸಿನಲ್ಲಿ ಏಳು ಕೊಬ್ಬಿದ ಹಸುಗಳು ಏಳು ಕೃಶವಾದ ಹಸುಗಳನ್ನು ತಿನ್ನುತ್ತಿರುವುದನ್ನೂ; ಧಾನ್ಯದ ಏಳು ತೆನೆಗಳು ಹಸಿರಾಗಿದ್ದು, ಏಳು ಒಣಗಿರುವುದನ್ನೂ ಕಂಡೆನು. ಆಸ್ಥಾನಿಕರೇ, ಇಲ್ಲಿ ಸ್ವಪ್ನ ಫಲ ಹೇಳುವವರು ಯಾರಾದರೂ ಇದ್ದರೆ ಈ ಕನಸಿನ ಅರ್ಥವನ್ನು ತಿಳಿಸಿರಿ” ಎಂದನು.

ಈ ಮಾತನ್ನು ಕೇಳಿದ ಮೊದಲನೆಯ ಗುಲಾಮನಿಗೆ ಯೂಸುಫರ ನೆನಪಾಯಿತು. ಆತ ದೊರೆಯ ಬಳಿ ಪ್ರಸ್ತಾಪವೆತ್ತಲು ಹೇಳಿದ್ದರೆಂದೂ ನೆನಪಾಯಿತು. ಅವನು ದೊರೆಯನ್ನು ಕುರಿತು, “ನನ್ನನ್ನು ಸ್ವಲ್ಪ ಹೊತ್ತಿನ ಮಟ್ಟಿಗೆ ಸೆರೆಮೆನೆಗೆ – ಯೂಸುಫರಿರುವಲ್ಲಿಗೆ ಕಳಿಸಿಕೊಡಿ. ನಾನು ನಿಮ್ಮ ಸ್ವಪ್ನಫಲದ ವಿವರಣೆ ತರುತ್ತೇನೆ’ ಎಂದು ವಿನಂತಿ ಮಾಡಿದನು.

ಅದರಂತೆ ಗುಲಾಮನನ್ನು ಯೂಸುಫರ ಬಳಿ ಕಳುಹಿಸಲಾಯ್ತು. ಆತನಿಂದ ಕನಸನ್ನು ತಿಳಿದ ಯೂಸುಫರು, “ಏಳು ವರ್ಷಗಳ ತನಕ ನೀವು ನಿರಂತರವಾಗಿ ಕೃಷಿ ಮಾಡುತ್ತಿರುವಿರಿ. ಆ ಕಾಲಾವಧಿಯಲ್ಲಿ ನೀವು ಕೊಯ್ಯುವ ಬೆಳೆಯಿಂದ ನಿಮ್ಮ ಆಹಾರಕ್ಕೆ ಬೇಕಾದಷ್ಟು ಅಂಶವನ್ನು ತೆಗೆದು ಉಳಿದುದನ್ನು ಅದರ ತೆನೆಗಳಲ್ಲಿಯೇ ಇರಗೊಡಿರಿ. ಅನಂತರ ಏಳು ಕಠಿಣ ವರ್ಷಗಳು ಬರುವವು. ಆಗ, ಆ ಕಾಲಕ್ಕಾಗಿ ಸಂಗ್ರಹಿಸಿಟ್ಟುದನ್ನು ಉಣ್ಣಬಹುದು. ನೀವು ಜೋಪಾನವಾಗಿ ಇರಿಸಿದ್ದು ಮಾತ್ರ ಉಳಿದುಕೊಳ್ಳುವುದು. ಅನಂತರ ಬರುವ ಇನ್ನೊಂದು ವರ್ಷದಲ್ಲಿ ಕೃಪಾವೃಷ್ಟಿಯ ಮೂಲಕ ಜನರ ಸಂಕಷ್ಟ ನಿವಾರಣೆಯಾಗುವುದು ಮತ್ತು ಅವರು ಧಾನ್ಯದ ರಸ ಹಿಂಡುವರು” ಎಂದು ಸ್ವಪ್ನವನ್ನು ವಿವರಿಸಿದರು.

ಗುಲಾಮನು ಯೂಸುಫರ ವಿವರಣೆಯನ್ನು ದೊರೆಗೆ ಯಥಾವತ್ತಾಗಿ ತಿಳಿಸಲು, ದೊರೆಯು ಆನಂದಿತನಾಗಿ ಅವರನ್ನು ತನ್ನ ಬಳಿ ಕರೆಸಿಕೊಂಡನು. ಅನಂತರ ಅವರ ಯೋಗ್ಯತೆಯನ್ನರಿತು, ದೇಶದ ಭಂಡಾರಗಳ ಉಸ್ತುವಾರಿಯನ್ನು ಅವರಿಗೆ ವಹಿಸಿಕೊಟ್ಟನು.

ಹೀಗೆ ಪ್ರವಾದಿ ಯೂಸುಫರು ತಮ್ಮ ವಿಶೇಷ ಜ್ಞಾನದಿಂದ ಸೆರೆಯಿಂದ ಮುಕ್ತರಾದುದು ಮಾತ್ರವಲ್ಲದೆ, ತಮಗೆ ತಕ್ಕುನಾದ ಸ್ಥಾನವನ್ನೂ ಪಡೆದರು.

Leave a Reply