ಆಗಮ ಸೂತ್ರದಿಂದ ಒಂದು ಕಥೆ

ಬ್ಬ ಮನುಷ್ಯನಿಗೆ ನಾಲ್ಕು ಜನ ಹೆಂಡಂದಿರಿದ್ದರು. ಮೊದಲನೇಯವಳು ಸದಾ ಅವನೊಡನೇ ಇರುತ್ತಿದ್ದಳು. ಅವನಿಗೂ ಕೂಡ ಆಕೆ ಎಂದರೆ ಬಲು ಪ್ರೇಮ, ಅವಳಿಗೆ ಬೇಕಾದ ಎಲ್ಲ ಸೌಕರ್ಯಗಳನ್ನು ಮಾಡಿಕೊಡುತ್ತಿದ್ದ.
ಎರಡನೇಯವಳ ಜೊತೆ ಅವನಿಗೆ ಅಂಥ ಮಧುರ ಬಾಂಧವ್ಯ ಏನಿರಲಿಲ್ಲ, ಆದರೂ ಅವಳು ದೂರವಿದ್ದಾಗ ಮಾತ್ರ ಅವಳು ಬೇಕನಿಸುತ್ತಿತ್ತು, ಅವಳಿಗಾಗಿ ತೀವ್ರ ಚಡಪಡಿಕೆಯಾಗುತ್ತಿತ್ತು.
ಮೂರನೇಯವಳು ಬಹುತೇಕ ಎರಡನೇಯವಳ ಥರ, ಒಂದು ವ್ಯತ್ಯಾಸವೆಂದರೆ ತನಗೆ ತೊಂದರೆ, ಸಂಕಟ ಆದಾಗಲೆಲ್ಲ ಅವ, ಇವಳ ಜೊತೆ ತನ್ನ ತಳಮಳವ ಹಂಚಿಕೊಳ್ಳುತ್ತಿದ್ದ. ಅದನ್ನು ಬಿಟ್ಟರೆ ಹಬ್ಬ ಹರಿದಿನ, ಸಮಾರಂಭಗಳ ದಿನಗಳಲ್ಲಿ ಮಾತ್ರ ಅವಳನ್ನು ಭೇಟಿಯಾಗುತ್ತಿದ್ದ.
ನಾಲ್ಕನೇಯವಳು ಒಂದು ಥರ ಮನೆಯ ಆಳು, ತನಗೆ ಬೇಕಾದ ಎಲ್ಲ ಕೆಲಸ ಅವಳಿಂದ ಮಾಡಿಸಿಕೊಳ್ಳುತ್ತಿದ್ದ, ಒಮ್ಮೆಯೂ ಅವಳಿಗೆ ಧನ್ಯವಾದ ಹೇಳಿರಲಿಲ್ಲ.

ಹೀಗಿರುವಾಗ, ಅವನಿಗೆ ಒಮ್ಮೆ ತನ್ನ ಸಾಯುವ ದಿನ ಹತ್ತಿರ ಬಂದಂತೆ ಭಾಸವಾಯಿತು. ಪರಲೋಕದಲ್ಲಿ ತಾನು ಒಂಟಿಯಾಗಿರಬೇಕಲ್ಲ ಎಂದು ತೀವ್ರ ಆತಂಕ ಉಂಟಾಯಿತು. ಆಗ ಮೂದಲ ಹೆಂಡತಿಯನ್ನು ಕರೆದು ಅವಳನ್ನು ತನ್ನೊಂದಿಗೆ ಸಾಯುವಂತೆ ವಿನಂತಿಸಿದ. ಆದರೆ ಅವಳು ಸಾರಾಸಗಟಾಗಿ ನಿರಾಕರಿಸಿದಳು. ಆಗ ಎರಡನೇಯವಳನ್ನು ತನ್ನೊಡನೆ ಪರಲೋಕಕ್ಕೆ ಆಹ್ವಾನಿಸಿದ. “ನಾನ್ಯಾಕೆ? ಬರಲ್ಲ…” ಎಂದು ಅವಳೂ ಹಿಂದೇಟು ಹಾಕಿದಳು. ಆಗ ತಾನು ಆಗಾಗ ಭೇಟಿ ಮಾಡುತ್ತಿದ್ದ ಮೂರನೇಯವಳನ್ನು ಬೇಡಿಕೊಂಡ. ಆತ ಮೊದಲೇ ಊಹಿಸಿದಂತೆ ಆಕೆ ಕೂಡ ಇಲ್ಲ ಎಂದಳು. ನಾಲ್ಕನೇಯವಳು ಮಾತ್ರ ಅವನು ಕೇಳವುದಕ್ಕಿಂತ ಮೊದಲೇ ಅವನೊಡನೆ ಸಾಯಲು ಸಿದ್ಧಳಾದಳು.

ಸೂತ್ರದಲ್ಲಿ ಈ ನಾಲ್ಕು ಹೆಂಡತಿಯರನ್ನು ಹೀಗೆ ವಿವರಿಸಲಾಗಿದೆ. ಮೂದಲ ಹೆಂಡತಿ ನಿಮ್ಮ ದೇಹ, ಎರಡನೇಯ ಹೆಂಡತಿ ನಿಮ್ಮ ಆಸ್ತಿ, ಮೂರನೇಯವಳು ನಿಮ್ಮ ಸಂಬಂಧಿಕರು ಮತ್ತು ನಾಲ್ಕನೇಯವಳು ನಿಮ್ಮ ಬುದ್ಧಿ.

(ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ)

Leave a Reply