ಪ್ರಸಹ್ಯ ಮಣಿಮುದ್ಧರೇನ್ಮಕರ ವಕ್ತ್ರ ದಂಷ್ಟ್ರಾಂತರಾತ್ ಸಮುದ್ರಮಪಿ ಸಂತರೇತ್ಪ್ರಚಲ ದೂರ್ಮಿಮಾಲಾಕುಲಮ್ |
ಭುಜಂಗಮಪಿ ಕೋಪಿತಂ ಶಿರಸಿ ಪುಷ್ಪವದ್ಧಾರಯೇತ್ ನ ತು ಪ್ರತಿನಿವಿಷ್ಟಮೂರ್ಖಜನ ಚಿತ್ತಮಾರಾಧಯೇತ್||3||
ಅರ್ಥ : ಮೊಸಳೆಯ ಹಲ್ಲುಗಳ ನಡುವೆ ಸಿಲುಕಿದ ಮಣಿಯನ್ನಾದರೂ ಹೊರಗೆ ತೆಗೆಯಬಹುದು; ಹೆದ್ದೆರೆಗಳಿಂದ ಆರ್ಭಟಿಸುತ್ತಿರುವ ಸಮುದ್ರವನ್ನಾದರೂ ದಾಟಿಬಿಡಬಹುದು; ಕೋಪದಿಂದ ಫೂತ್ಕರಿಸುತ್ತಿರುವ ವಿಷದ ಹಾವನ್ನೂ ಹೂವಿನಂತೆ ತಲೆಯಲ್ಲಿ ಹೊತ್ತು ತಿರುಗಬಹುದು. ಆದರೆ ಮೂರ್ಖರಿಗೆ ಬುದ್ಧಿ ಹೇಳುವುದು ಮಾತ್ರ ಸಾಧ್ಯವಾಗದ ಮಾತು.
ತಾತ್ಪರ್ಯ : ಹರಿತವಾಗ ಗರಗಸದಂಥ ಹಲ್ಲುಗಳುಳ್ಳ ಮೊಸಳೆಯ ಬಾಯಿಗೆ ಕೈಹಾಕುವುದೇ ಅಪಾಯಕಾರಿ ಸಂಗತಿ. ಇನ್ನು ಅದರ ಬಾಯಿಗೆ ಕೈಹಾಕಿ, ಅದರ ಹಲ್ಲುಗಳ ನಡುವೆ ಸಿಲುಕಿರುವ ಮಣಿಯನ್ನು ಹೊರಗೆ ತೆಗೆಯುವುದು ಸಾಧ್ಯವಿಲ್ಲದ ಮಾತು. ಆದರೂ ಹೇಗಾದರೂ ಧೈರ್ಯ ಮಾಡಿ ಆ ಕೆಲಸವನ್ನು ಸಾಧಿಸಿಬಿಡಬಹುದು.
ಹಾಗೆಯೇ ಹೆದ್ದೆರೆಗಳ ಸಮುದ್ರವನ್ನೂ ಸಾಹಸದಿಂದ ದಾಟಿಬಿಡಬಹುದು. ಅದು ಕಷ್ಟವಾದರೂ ಸಾಧಿಸಬಹುದಾದ ಸಂಗತಿ.
ಕೋಪದಿಂದ ಭುಸುಗುಡುತ್ತಾ ಎರಗುವ ಹಾವನ್ನೂ ಹೇಗಾದರೂ ಮಣಿಸಿ, ಪಳಗಿಸಿ, ತಲೆಯ ಮೇಲೆ ಹೊತ್ತು ತಿರುಗಬಹುದು. ಇದು ಕೂಡಾ ಅಸಾಧ್ಯವೇನಲ್ಲ.
ಆದರೆ, ಮೂರ್ಖರಿಗೆ ಬುದ್ಧಿ ಮಾತು ಹೇಳುವುದು ಮಾತ್ರ ಸಾಧ್ಯವೇ ಇಲ್ಲ. ಅದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ. ಅವರು ಅದನ್ನು ಅರ್ಥ ಮಾಡಿಕೊಂಡು ಸ್ಪಂದಿಸಲು ಸ್ವಲ್ಪವೂ ಸಿದ್ಧವಾಗಿರುವುದಿಲ್ಲ.
ಆದ್ದರಿಂದ ನನ್ನ ಸುಭಾಷಿತಗಳು ಮೂರ್ಖರಿಗಾಗಿ ಅಲ್ಲ ಎಂಬ ಇಂಗಿತವನ್ನು ಭರ್ತೃಹರಿ ವ್ಯಕ್ತಪಡಿಸುತ್ತಿದ್ದಾನೆ.
ಕಲಿಕೆ: ನಮ್ಮ ಕನ್ನಡದಲ್ಲಿಯೂ ಸರ್ವಜ್ಞ “ಮೂರ್ಖಂಗೆ ನೂರ್ಕಾಲ ಬುದ್ಧಿ ಹೇಳಿದರೆ” ಪ್ರಯೋಜನವಿಲ್ಲ ಎಂದು ಸಾರಿದ್ದಾನೆ. ಯಾವ ಬುದ್ಧಿವಂತರೂ ಮೂರ್ಖರೊಡನೆ ವಾದಿಸುವ ಸಾಹಸಕ್ಕೆ ಕೈಹಾಕಲಾರರು. ಅದು ನಿಷ್ಪ್ರಯೋಜಕ ಎಂದು ಅವರಿಗೆ ಗೊತ್ತಿರುತ್ತದೆ.
ನಾವು ಕೂಡ ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಮೂರ್ಖರು ಮೂಢರೂ ಆಗಿರುತ್ತಾರೆ. ಅವರನ್ನು ಬದಲಿಸುವುದು ಅಸಾಧ್ಯ. ಅದಕ್ಕಾಗಿ ನಮ್ಮ ಶ್ರಮ ಮತ್ತು ಸಮಯ ವ್ಯರ್ಥ ಮಾಡಿಕೊಳ್ಳೋದು ಬೇಡ.
ವಿಶೇಷವಾಗಿ ಈ ಕಾಲಕ್ಕೆ ಈ ಕಲಿಕೆ, ಫೇಸ್ ಬುಕ್’ನಲ್ಲಿ ವೃಥಾ ವಾಗ್ವಾದದಲ್ಲಿ ಕಾಲಹರಣ ಮಾಡುವವರಿಗೆ ಅನ್ವಯ.