ಧ್ಯಾನವು ಥಾಯ್ ಮಕ್ಕಳನ್ನು ಸುರಕ್ಷಿತವಾಗಿಟ್ಟಿದ್ದು ಹೇಗೆ?

ಗುಹೆಯಲ್ಲಿ ಸಿಲುಕಿಕೊಂಡಿದ್ದ ಥಾಯ್ಲೆಂಡ್ ಫುಟ್ ಬಾಲ್ ಟೀಮ್ ಒಂದರ ಮಕ್ಕಳು ಮತ್ತು ಕೋಚ್ ಬದುಕುಳಿದದ್ದು; ಇನ್ನಿತರ ಸಹಾಯಗಳ ಜೊತೆಗೆ ತಮ್ಮ ಧೈರ್ಯ, ಆತ್ಮವಿಶ್ವಾಸ ಹಾಗೂ ಪ್ರಯತ್ನಗಳಿಂದ. ಮತ್ತು, ಈ ಧೈರ್ಯ, ಆತ್ಮವಿಶ್ವಾಸ ಹಾಗೂ ಪ್ರಯತ್ನಗಳನ್ನು ಕಾಯ್ದಿಟ್ಟಿದ್ದು ‘ಧ್ಯಾನ’!! ~ ಸಾ.ಹಿರಣ್ಮಯಿ

med
ಗುಹೆಯೊಳಗೆ ಹಸಿವಿನಿಂದ ನಲುಗಿಯೂ ನಗುತ್ತಿರುವ ಥಾಯ್ ಹುಡುಗರು | ಇಂಟರ್ನೆಟ್ ಚಿತ್ರ

ಧ್ಯಾನವೆಂದರೆ ಏಕಾಗ್ರತೆ. ಧ್ಯಾನವೆಂದರೆ ಉಸಿರಾಟದ ನಿಯಂತ್ರಣ. ಧ್ಯಾನವೆಂದರೆ ಆತ್ಮವಿಶ್ವಾಸ ಮತ್ತು ದೃಢತೆಗಳನ್ನು ಹೆಚ್ಚಿಸುವ ಅಂತರಂಗದ ಔಷಧ.

ಧ್ಯಾನ, ನಿಧಿದ್ಯಾಸನದ ಮುಂಚಿನ ಅವಸ್ಥೆ. ಕೇವಲ ಧ್ಯಾನ ಸಂಪೂರ್ಣ ಆಧ್ಯಾತ್ಮಿಕ ಸಂಗತಿಯಲ್ಲ. ಅದು ಅಧ್ಯಾತ್ಮದತ್ತ ಕರೆದೊಯ್ಯುವ ದಾರಿ. ಇದು ಎಲ್ಲಾ ಕಾಲಕ್ಕೂ ನಿಜವಾದ ಸಂಗತಿ. ಧ್ಯಾನವನ್ನು ಆಚರಿಸುವವರಿಗೆ ಅದರಲ್ಲಿ ಶ್ರದ್ಧೆ ಇರಬೇಕಷ್ಟೆ.
ಧ್ಯಾನದ ಪರಿಣಾಮಗಳು ಮನೋವೈಜ್ಞಾನಿಕವಾಗಿಯೂ ಸಿದ್ಧಗೊಂಡಿವೆ. ದೈಹಿಕವಾಗಿಯೂ ಸಿದ್ಧಗೊಂಡಿದೆ. ಆಧುನಿಕ ವೈದ್ಯಕೀಯವೂ ಇದರ ಫಲಿತಾಂಶಗಳನ್ನು ಒಪ್ಪಿಕೊಳ್ಳುತ್ತದೆ. ದಿನದಲ್ಲಿ 25 ನಿಮಿಷಗಳ ಕಾಲ ಧ್ಯಾನ ಮತ್ತು ಯೋಗ ಮಾಡುವುದರಿಂದ ಮೆದುಳಿಗೆ ಉತ್ತೇಜನ ದೊರೆಯುವುದಲ್ಲದೆ, ದೇಹ್ಕಕೂ ಶಕ್ತಿ ದೊರೆಯುತ್ತದೆ; ಅನಗತ್ಯ ವಿಚಾರಗಳ ಚಿಂತೆ ತೊಲಗಿ ಮನಸ್ಸು ಉಲ್ಲಸಿತವಾಗಿರುತ್ತದೆ ಎಂದು ಕಳೆದ ಸೆಪ್ಟೆಂಬರ್’ನಲ್ಲಿ ವಾಷಿಂಗ್ಟನ್’ನ ವಾಟರ್ಲೂ ವಿಶ್ವ ವಿದ್ಯಾಲಯವು ಅಧ್ಯಯನ ವರದಿ ನೀಡಿದೆ. ಅದಕ್ಕಿಂತ ಹಿಂದೆಯೂ ಭಾರತ ಮಾತ್ರವಲ್ಲದೆ ವಿದೇಶಗಳ ಹಲವು ಅಧ್ಯಯನ ಸಂಸ್ಥೆಗಳು ಧ್ಯಾನದ ಶಕ್ತಿಯನ್ನು ಸತತ ಅಧ್ಯಯನದಿಂದ ಕಂಡುಕೊಂಡಿವೆ.

ಸಹಜವಾಗಿಯೇ ಪ್ರಾಚೀನವಾದ್ದೆಲ್ಲವೂ ಪರಿತ್ಯಜಿಸಲು ಯೋಗ್ಯ ಎಂದುಕೊಳ್ಳುವ ಕೆಲವರು ಧ್ಯಾನ ನಿಷ್ಪ್ರಯೋಜಕ ಎಂದು ವಾದಿಸುತ್ತಾರೆ. ಹಾಗೆ ವಾದಿಸುವವರ ತರ್ಕವನ್ನೂ ಗೌರವಿಸೋಣ. ಎಷ್ಟು ನಿರಾಕರಣೆ ಇರುತ್ತದೋ ಅಷ್ಟು ಸಾಬೀತು ಮಾಡುವ ದಾರಿಗಳೂ ತೆರೆದುಕೊಳ್ಳುತ್ತವೆ.
ಈ ಮಾತಿಗೆ ಹೊಸತೊಂದು ನಿದರ್ಶನ ಸೇರ್ಪಡೆಯಾಗಿದೆ. ಎರಡು ವಾರಗಳ ಕಾಲ ಥಾಯ್ಲೆಂಡ್’ನ ಗುಹೆಯೊಂದರಲ್ಲಿ ಸಿಲುಕಿಕೊಂಡಿದ್ದ ಫುಟ್ ಬಾಲ್ ಟೀಮ್’ನ 12 ಮಕ್ಕಳು ಮತ್ತು 25 ವರ್ಷದ ಕೋಚ್ ಸುರಕ್ಷಿತವಾಗಿ ಹೊರಗೆ ಬಂದಿದ್ದಾರೆ.
ಅಷ್ಟು ದಿನಗಳ ಕಾಲ ಗುಹೆಯ ಕತ್ತಲಲ್ಲಿ, ಆಮ್ಲಜನಕದ ಕೊರತೆ ಮತ್ತು ಥಂಡಿಯಲ್ಲಿ, ತಿನ್ನಲಿಕ್ಕೆ ತೃಣವೂ ಇಲ್ಲದ ಸನ್ನಿವೇಶದಲ್ಲಿ ಅವರು ಉಳಿದಿದ್ದು ಹೇಗೆ? 12 ಬಾಲಕರಲ್ಲಿ ಆರು ಮಕ್ಕಳು ಸಂಪೂರ್ಣ ಆರೋಗ್ಯದಿಂದ ಇದ್ದಾರೆ ಮತ್ತು ಇಬ್ಬರಿಗೆ ಮಾತ್ರ ಶ್ವಾಸಕೋಶದ ಸೋಂಕು ಉಂಟಾಗಿದ್ದು, ಆ ಮಕ್ಕಳೂ ಚೇತರಿಸಿಕೊಳ್ಳುತ್ತಿದ್ದಾರೆ. ಉಳಿದವರಿಗೆ ಸಹಜವಾಗಿಯೇ ಚಿಕ್ಕಪುಟ್ಟ ಸಮಸ್ಯೆಗಳಾಗಿವೆ ಹೊರತು ಜೀವಕ್ಕೆ ಯಾವುದೇ ಬಗೆಯ ಅಪಾಯವಿಲ್ಲ ಎಂದು ವರದಿಗಳು ಹೇಳುತ್ತಿವೆ.

ಇದು ಸಾಧ್ಯವಾಗಿದ್ದು ಹೇಗೆ?
ನಾವೂ ಹೀಗೆ ಎಲ್ಲೆಲ್ಲೋ ಯಾರುಯಾರೋ ದಿನಗಟ್ಟಲೆ, ತಿಂಗಳುಗಟ್ಟಲೆ ಕಳೆದುಹೋಗುವುದನ್ನು ಕೇಳಿದ್ದೇವೆ. ಕಾಡಿನಲ್ಲಿ, ದ್ವೀಪದಲ್ಲಿ, ಸಮುದ್ರದಲ್ಲಿ ಕಳೆದುಹೋದವರು ಸುರಕ್ಷಿತವಾಗಿ ಮರಳಿ ಬಂದಿದ್ದಾರೆ. ಆದರೆ ಇವರು 11ರಿಂದ 16ರವರೆಗಿನ ವಯಸ್ಸಿನ ಮಕ್ಕಳು. ಅವರ ಕೋಚ್ ಇನ್ನೂ 25 ವರ್ಷದವನು. ಅವರು ಸಿಲುಕಿಕೊಂಡಿದ್ದು ಕತ್ತಲ ಗವಿಯಲ್ಲಿ. ಜೌಗು ಜಾಗದಲ್ಲಿ.

dhyana
ಗುಹೆಯೊಳಗೆ ರಕ್ಷಣಾ ತಂಡ ತೆಗೆದ ಚಿತ್ರ | ಕೃಪೆ: ಫೇಸ್ ಬುಕ್

ಇದಕ್ಕೆ ಉತ್ತರ ‘ಧ್ಯಾನ’ ಎನ್ನುವ ಮಾತು ಕೇಳಿಬರುತ್ತಿದೆ. ಕೋಚ್ ಎಕಾಪೊಲ್ ಚಾಂಥವಾಂಗ್ ಮಕ್ಕಳಿಗೆ ಧ್ಯಾನ ಹೇಳಿಕೊಟ್ಟು ಅವರಿಂದ ಧ್ಯಾನ ಮಾಡಿಸುವ ಮೂಲಕ ಆತಂಕ ದೂರವಾಗಿ ಮಾನಸಿಕ ಸ್ಥಿಮಿತ ಕಾಪಾಡಿಕೊಳ್ಳಲು ಅವರಿಗೆ ನೆರವು ನೀಡಿದ್ದಾರೆ ಎಂದು ವರದಿಯಾಗಿದೆ. ಗುಹೆಯ ಮುಖ್ಯದ್ವಾರದಿಂದ ಸುಮಾರು 4.5 ಕಿ.ಮೀ. ಒಳಭಾಗದಲ್ಲಿ ಸಿಲುಕಿದ್ದ ಬಾಲಕರ ಬಳಿಗೆ ತೆರಳಿದ ರಕ್ಷಣಾ ಸಿಬ್ಬಂದಿ ಬಾಲಕರು ಧ್ಯಾನ ಮಾಡುತ್ತಿರುವುದನ್ನು ಮತ್ತು ಶಾಂತ ಚಿತ್ತದಿಂದ ಇದ್ದದ್ದನ್ನು ನೋಡಿದ್ದಾಗಿ ಹೇಳಿಕೊಂಡಿದ್ದಾರೆ ಮತ್ತು ಗುಹೆಯಲ್ಲಿ ಮಕ್ಕಳು ಧ್ಯಾನ ಮಾಡುತ್ತಿರುವ ಫೋಟೋಗಳನ್ನೂ ತೆಗೆದಿದ್ದಾರೆ.
ಮಕ್ಕಳನ್ನು ಅಷ್ಟು ದಿನಗಳ ಕಾಲ ಎದೆಗುಂದದ ಹಾಗೆ ಧ್ಯಾನದ ಮೂಲಕ ಕಾಪಾಡಿಕೊಂಡ ಎಕಾಪೊಲ್ ಚಾಂಥವಾಂಗ್ ಬಗ್ಗೆ ಈಗ ಎಲ್ಲೆಡೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.

ಎಕಾಪೋಲ್, ಫುಟ್ಬಾಲ್ ಕೋಚ್ ಆಗುವುದಕ್ಕೂ ಮುನ್ನ ಬೌದ್ಧ ಸನ್ಯಾಸಿಯಾಗಿದ್ದರು. 10 – 11 ನೇ ವರ್ಷಕ್ಕೆಲ್ಲಾ ಬೌದ್ಧ ಸನ್ಯಾಸಿಯಾಗಿದ್ದ ಅವರು ಆ ನಂತರ ಕೆಲವು ವರ್ಷಗಳ ಕಾಲ ಮೇ ಸಾಯಿ ಮೊನಾಸ್ಟರಿಯಲ್ಲಿ ತರಬೇತಿ ಪಡೆದಿದ್ದರು. ತಮ್ಮ ಅಜ್ಜಿಯ ಅನಾರೋಗ್ಯದಿಂದ ಹಾಸಿಗೆ ಹಿಡಿದಾಗ ಅವರನ್ನು ನೋಡಿಕೊಳ್ಳಲು ಮನೆಗೆ ವಾಪಸು ಬಂದಿದ್ದರು. ಮನೆಗೆ ಮರಳಿದ ನಂತರವೂ ಪ್ರತಿದಿನ ಧ್ಯಾನ ಮಾಡುವ ಅಭ್ಯಾಸ ಎಕಾಪೋಲ್’ಗೆ ಇತ್ತು. ಅವರು ಇತ್ತೀಚೆಗಷ್ಟೆ ವೈಲ್ಡ್ ಬೋರ್ ಫುಟ್ಬಾಲ್ ತಂಡದಲ್ಲಿ ಅರೆಕಾಲಿಕ ಕೋಚ್ ಆಗಿ ಕೆಲಸಕ್ಕೆ ಸೇರಿದ್ದರು. ಟ್ರೆಕಿಂಗ್ ಇವರ ನೆಚ್ಚಿನ ಹವ್ಯಾಸಗಳಲ್ಲಿ ಒಂದು.

ಎಕಾಪೋಲ್, ಮೊನಾಸ್ಟರಿಯಲ್ಲಿ ಅಳವಡಿಸಿಕೊಂಡಿದ್ದ ಜೀವನಶೈಲಿ ಮತ್ತು ಧ್ಯಾನದ ಮೂಲಕ ಸಿದ್ಧಿಸಿದ್ದ ದೃಢವಿಶ್ವಾಸಗಳೇ ಇಂದು ಅವರನ್ನೂ ಅವರ ತಂಡದ ಮಕ್ಕಳನ್ನೂ ಕಾಪಾಡಿದೆ ಎಂದು ಥಾಯ್ಲೆಂಡ್ ಮಾತಾಡಿಕೊಳ್ಳುತ್ತಿದೆ. ಮಾತ್ರವಲ್ಲ, ಆ ಪುಟ್ಟ ಹುಡುಗರು ಕಣ್ಣು ಮುಚ್ಚಿ ಧ್ಯಾನ ಭಂಗಿಯಲ್ಲಿ ಕುಳಿತ ಚಿತ್ರಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿವೆ. ಜೊತೆಗೆ ಧ್ಯಾನ ಜೀವನಶೈಲಿಯತ್ತ ಅರೆಗಣ್ಣು ಇಟ್ಟಿದ್ದ ಜನರೂ ಕುತೂಹಲದಿಂದ ಹೆಚ್ಚಿನ ವಿವರಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಧ್ಯಾನದಿಂದ ಇವೆಲ್ಲ ಸಾಧ್ಯವಾಗಿದ್ದು ಅಚ್ಚರಿ ಪಡಬೇಕಾದ ವಿಷಯವೇನಲ್ಲ. ಕ್ರಮಬದ್ಧ ಉಸಿರಾಟ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಡುತ್ತದೆ ಅನ್ನುವುದು ವೈಜ್ಞಾನಿಕ ಸತ್ಯ. ಧ್ಯಾನದ ಮೂಲಪಾಠವೇ ಕ್ರಮಬದ್ಧ ಉಸಿರಾಟ. ಇದು ದೇಹದಿಂದ ಕಡಿಮೆ ಶಕ್ತಿಯನ್ನು ಉರಿಸುತ್ತದೆ. ಜೋರು ಉಸಿರಾಟದಿಂದ ಬೇಗನೆ ಹಸಿವಾಗುತ್ತದೆ. ಏಕೆಂದರೆ ಅದು ಹೆಚ್ಚು ಶಕ್ತಿಯನ್ನು ಉರಿಸುತ್ತದೆ. ಆದ್ದರಿಂದ ಮಕ್ಕಳು ಹಸಿವು ಮತ್ತು ಆಕ್ಸಿಜನ್ ಕೊರತೆಯನ್ನು ಎದುರಿಸಲು ಎಕಾಪೋಲ್ ಧ್ಯಾನದ ಮೊರೆ ಹೋಗಿದ್ದು ಅತ್ಯುತ್ತಮ ನಿರ್ಧಾರವಾಗಿತ್ತು.
ಹಾಗೆಯೇ ಧ್ಯಾನವು ಮನಸ್ಸನ್ನು ಗೊಂದಲದಿಂದ ಹೊರಗೆ ತರುತ್ತದೆ. ಪ್ರಸನ್ನವಾಗಿಡುತ್ತದೆ. ಏಕಾಗ್ರಚಿತ್ತರಾಗಿ ನಾವು ಏನನ್ನಾದರೂ ಮಾಡುತ್ತಿರುವಾಗ ನಮಗೆ ಭಯವಾಗಲೀ ಆತಂಕವಾಗಲೀ ಕಾಡುತ್ತವೆಯೇ? ಇಲ್ಲವಲ್ಲ? ಹಾಗೆಯೇ ಗುಹೆಯೊಳಗೆ ಮಕ್ಕಳು ಏಕಾಗ್ರಚಿತ್ತರಾಗಿ ತಾವು ಹೊರಗೆ ಹೋಗುವ ಬಗ್ಗೆ ಭರವಸೆ ತಾಳಿದ್ದರು. ಅದರ ಸಕಾರಾತ್ಮಕ ಫಲಿತಾಂಶವನ್ನೂ ಪಡೆದರು!

ಧ್ಯಾನ ಮಾಡುವುದರಿಂದ ಯಾರೂ ಏನನ್ನೂ ಕಳೆದುಕೊಳ್ಳುವುದಿಲ್ಲ. ಹಾಗೆ ಕಳೆದುಕೊಂಡರೂ ಅದು ನಿಮ್ಮ ಗೊಂದಲ, ಒತ್ತಡ, ಇತ್ಯಾದಿಯನ್ನಷ್ಟೆ. ಆದ್ದರಿಂದ ತಡ ಬೇಡ; ದಿನದಲ್ಲಿ ಅರ್ಧ ಗಂಟೆ ನಿಮಗಾಗಿ ಕಣ್ಮುಚ್ಚಿ ಕೂರಲು ಇದೇ ಸರಿಯಾದ ಸಮಯ!

Leave a Reply