ಈ ಸರಣಿಯಲ್ಲಿ ನಾವು ಸನಾತನ ಸಾಹಿತ್ಯದ ಪ್ರಾಥಮಿಕ ಮಾಹಿತಿಯನ್ನು ನೀಡುತ್ತಾ ಬಂದಿದ್ದೇವೆ. ವಿಶೇಷವಾಗಿ ಈ ಸಾಹಿತ್ಯದ ಕುರಿತು ಸಂಪೂರ್ಣ ಹೊಸತಾಗಿ ತಿಳಿಯಲು ಬಯಸುವ ಆಸಕ್ತರಿಗೆ ಮತ್ತು ಮಕ್ಕಳಿಗೆಂದೇ ಈ ಸರಣಿ ರೂಪಿಸಲಾಗಿದೆ.
ಹಿಂದಿನ ಭಾಗಗಳನ್ನು ಇಲ್ಲಿ ಓದಿ : https://aralimara.com/category/ಪರಂಪರೆ/ಅನುಭಾವ-ಸಾಹಿತ್ಯ/
ಅಧ್ಯಾಯ 16 : ದೈವಾಸುರ ಸಂಪದ್ವಿಭಾಗ ಯೋಗ
ಹದಿನಾರನೇ ಅಧ್ಯಾಯದಲ್ಲಿ ಭಗವಂತನ ಸಾಕ್ಷಾತ್ಕಾರಕ್ಕಾಗಿ ಸಾಧನೆ ಮಾಡುವವರಲ್ಲಿ ಇರಬೇಕಾದ ಗುಣಗಳ ಬಗ್ಗೆ ವಿವರಿಸಲಾಗಿದೆ. ಈ ನಿಟ್ಟಿನಲ್ಲಿ ಇರುವುದು ಎರಡೇ ದಾರಿ. ಬೆಳಕಿನ ದಾರಿ – ನಮ್ಮನ್ನು ಅಸ್ತಿತ್ವದ ಮೂಲ ಬಿಂದುವಿನೆಡೆಗೆ ಕೊಂಡೊಯ್ಯುತ್ತದೆ; ಕತ್ತಲಿನ ದಾರಿ – ನಾವು ಅದಕ್ಕೆ ಬೆನ್ನುಹಾಕಿ ನಡೆಯುವಂತೆ ಮಾಡುತ್ತದೆ. ಹೀಗೆಂದು ವಿವರಿಸುತ್ತಲೇ, ಈ ದಾರಿಯನ್ನರಸಿ ಹೋಗುವವರಲ್ಲಿ ಇರಬೇಕಾದ ಲಕ್ಷಣಗಳ ಬಗ್ಗೆ ಹೇಳುತ್ತ ಈ ಅಧ್ಯಾಯ ಪ್ರಾರಂಭವಾಗುತ್ತದೆ.
ಅಧ್ಯಾತ್ಮದಲ್ಲಿ ಖಂಡಿತವಾಗಿ ಬೇಕಾದ, ನಾವು ರೂಢಿಸಿಕೊಳ್ಳಬೇಕಾದ ಪ್ರಮುಖ ಇಪ್ಪತ್ತಾರು ಗುಣಗಳನ್ನು ಕೃಷ್ಣ ಈ ಅಧ್ಯಾಯದ ಮೊದಲ ಮೂರು ಶ್ಲೋಕದಲ್ಲಿ ವಿವರಿಸಿದ್ದಾನೆ.
ಇಲ್ಲಿ ಕೃಷ್ಣ ‘ದೈವೀಸ್ವಭಾವ’ ಮತ್ತು ‘ಆಸುರೀಸ್ವಭಾವ’ ಹಾಗು ಅದರ ಗುಣಲಕ್ಷಣಗಳನ್ನು ಸ್ಪಷ್ಟವಾಗಿ ನಮ್ಮ ಮುಂದೆ ತೆರೆದಿಟ್ಟಿದ್ದಾನೆ. ದೈವೀಸ್ವಭಾವ ಎಂದರೆ ದೇವತೆಗಳ ಸ್ವಭಾವ – ಇದು ಜ್ಞಾನ ಸಾಧನ. ಆಸುರೀಸ್ವಭಾವ ಎಂದರೆ ಅಸುರರ ಸ್ವಭಾವ – ಇದು ಜ್ಞಾನ ವಿರೋಧಿ.
ದೈವೀ ಸ್ವಭಾವವನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಜ್ಞಾನ ಸಾಧನೆ ಸಾಧ್ಯ, ಅದನ್ನು ಬಿಟ್ಟು ಆಸುರಸ್ವಭಾವವನ್ನು ಅಳವಡಿಸಿಕೊಂಡರೆ ಅದು ನಮ್ಮನ್ನು ಅಜ್ಞಾನದ ದಾರಿಯಲ್ಲಿ ಕೊಂಡೊಯ್ಯುತ್ತದೆ. ಒಂದು ಬೆಳಕಿನ ದಾರಿಯಾದರೆ ಒಂದು ಕತ್ತಲಿನ ದಾರಿ. ಯಾವ ದಾರಿಯಲ್ಲಿ ನಡೆಯಬೇಕು ಎನ್ನುವ ತೀರ್ಮಾನ ನಮಗೆ ಬಿಟ್ಟಿದ್ದು. ನಮಗೆ ಬೆಳಕಿನ ದಾರಿ ಬೇಕಿದ್ದರೆ, ಆ ದಾರಿಯಲ್ಲಿ ಸಾಗಲು ಬೇಕಾದ ನಡೆಯನ್ನು ಈ ಅಧ್ಯಾಯ ತಿಳಿಸುತ್ತದೆ. ಅದೇ ರೀತಿ ಕತ್ತಲೆಯ ದಾರಿಯಲ್ಲಿ ಸಾಗುವವರ ಬುದ್ಧಿ ಹೇಗಿರುತ್ತದೆ ಎನ್ನುವುದನ್ನೂ ಇಲ್ಲಿ ವಿವರಿಸಲಾಗಿದೆ.
ಇಲ್ಲಿ ದೈವೀ ಮತ್ತು ಆಸುರೀ ಸ್ವಭಾವವನ್ನು ಬಿಟ್ಟು ಬೇರೆಯಾಗಿ ಮಾನವ ಸ್ವಭಾವವನ್ನು ವಿವರಿಸಿಲ್ಲ. ಏಕೆಂದರೆ ಮಾನವ ಸ್ವಭಾವ ಈ ಎರಡೂ ಸ್ವಭಾವದ ಮಿಶ್ರಣ. ಈ ಮಿಶ್ರಣದಲ್ಲಿನ ಪ್ರಮಾಣಭೇದದಿಂದ ಮಾನವರಲ್ಲಿ ವೈವಿಧ್ಯತೆ ಬರುತ್ತದೆ.
ಅಧ್ಯಾಯ 17 : ಶ್ರದ್ಧಾತ್ರಯ ವಿಭಾಗ ಯೋಗ
ಕರ್ಮ ಮಾಡುವಾಗ ನಾವು ತಿಳಿದುಕೊಳ್ಳಬೇಕಾದ ಒಂದು ಬಹಳ ಮುಖ್ಯವಾದ ವಿಚಾರವೆಂದರೆ: ಯಾವುದು ಸತ್ಕರ್ಮ ಮತ್ತು ಯಾವುದು ಅಸತ್ಕರ್ಮ ಎನ್ನುವದು. ಕೆಟ್ಟ ಕೆಲಸ ಮತ್ತು ಒಳ್ಳೆಯ ಕೆಲಸ ಎನ್ನುವುದು ನಾವು ತಿಳಿದಷ್ಟು ಸರಳವಾಗಿ ತಿಳಿಯುವ ವಿಚಾರವಲ್ಲ. ನಮಗೆ ಮೇಲ್ನೋಟಕ್ಕೆ ಒಳ್ಳೆಯ ಕೆಲಸ ಎಂದು ಕಂಡು ಬಂದದ್ದು ಕೆಟ್ಟ ಕೆಲಸವಾಗಿರಬಹುದು ಅಥವಾ ಕೆಟ್ಟ ಕೆಲಸವೆಂದು ಕಾಣಿಸಿದ್ದು ಒಳ್ಳೆಯ ಕೆಲಸವಾಗಿರಬಹುದು. ಇಲ್ಲಿ ಕೆಲಸದ ಹಿಂದಿರುವ ಭಾವ ಮುಖ್ಯವಾಗುತ್ತದೆ. ಒಂದೇ ಕ್ರಿಯೆ ಅದರ ಹಿಂದಿನ ಭಾವಕ್ಕನುಗುಣವಾಗಿ ಸತ್ಕರ್ಮವಾಗಬಹುದು ಅಥವಾ ದುಷ್ಕರ್ಮವಾಗಬಹುದು. ಆದ್ದರಿಂದ ನಾವು ಸತ್ಕರ್ಮ ಯಾವುದು ಅಸತ್ಕರ್ಮ ಯಾವುದು ಎನ್ನುವ ಜ್ಞಾನವನ್ನು ಪಡೆದು ಕರ್ಮ ಮಾಡುವುದು ಬಹಳ ಮುಖ್ಯವಾಗುತ್ತದೆ.
ಕರ್ಮ ಎನ್ನುವುದು ಸತ್ವ, ರಜಸ್ಸು, ತಮಸ್ಸುಗಳೆಂಬ ಮೂರು ವಿಧವಾದ ತ್ರಿಗುಣಗಳ ಪರಿಧಿಯಲ್ಲೇ ನಡೆಯುತ್ತದೆ. ನಾವು ಮಾಡುವ ಯಜ್ಞ, ದಾನ, ತಪಸ್ಸು; ನಾವು ಸೇವಿಸುವ ಆಹಾರ, ಎಲ್ಲದರಲ್ಲೂ ಈ ಗುಣತ್ರಯಗಳ ಪ್ರಭಾವ ಸೇರಿಕೊಂಡಿರುತ್ತದೆ. ಈ ಗುಣತ್ರಯಗಳ ಪ್ರಭಾವ ನಮ್ಮ ಕರ್ಮದ ಮೇಲೆ ಹೇಗಾಗುತ್ತದೆ ಎನ್ನುವುದನ್ನು ನಾವು ಸಾಧ್ಯವಾದಷ್ಟು ಅರಿತು, ಸತ್ವದ ಪರಿಧಿಯೊಳಗೆ ಕರ್ಮಾಚರಣೆ ಮಾಡಬೇಕು. – ಇದು ಹದಿನೇಳನೇ ಅಧ್ಯಾಯದ ಮುಖ್ಯಾಂಶ.
ಮುಖ್ಯವಾಗಿ ಯಾವ ಅನುಸಂಧಾನದಿಂದ ಕರ್ಮ ಮಾಡಿದಾಗ ಆ ಕ್ರಿಯೆ ಸಾತ್ವಿಕ, ರಾಜಸ ಅಥವಾ ತಾಮಸ ಕ್ರಿಯೆಯಾಗುತ್ತದೆ ಎನ್ನುವುದನ್ನು ಈ ಅಧ್ಯಾಯವು ವಿವರಿಸುತ್ತದೆ.
ಅಧ್ಯಾಯ 18 : ಮೋಕ್ಷ ಸಂನ್ಯಾಸ ಯೋಗ
ಹಿಂದಿನ ಹದಿನೇಳು ಅಧ್ಯಾಯಗಳಲ್ಲಿ ನಮ್ಮ ಸಾಧನೆ ಹೇಗಿರಬೇಕು ಎನ್ನುವುದನ್ನು ವಿವರಿಸಿದ್ದ ಗೀತಾಚಾರ್ಯನು, ಇಲ್ಲಿ ಆ ಸಾಧನೆಯ ಸಂದೇಶವನ್ನು ಸಂಗ್ರಹ ರೂಪದಲ್ಲಿ ಮತ್ತೊಮ್ಮೆ ನಮ್ಮ ಮುಂದೆ ಇಡುತ್ತಾನೆ. ಇದರ ಜೊತೆಗೆ ಅಧ್ಯಾಯ ಹದಿನೇಳರಲ್ಲಿ ವಿವರಿಸದೇ ಇರುವ ಸಾಧನೆಗೆ ಕುರಿತಾದ ತ್ರೈಗುಣ್ಯದ ಮುಂದುವರಿದ ವಿವರಣೆ ಕೂಡ ಇಲ್ಲಿದೆ. ಇದು ಗೀತೆಯ ಉಪಸಂಹಾರ.
ತಾನು ಹೇಳಬೇಕಾದ್ದೆಲ್ಲವನ್ನೂ ಹೇಳಿದ ಗೀತಾಚಾರ್ಯನು ಕೊನೆಯಲ್ಲಿ, “ಅಧ್ಯಾತ್ಮದ ಅಂತರಂಗ ರಹಸ್ಯವನ್ನು ನಿನಗೆ ಹೇಳಿದ್ದೇನೆ. ಅದನ್ನು ಅವಲೋಕಿಸಿ, ನಿನಗೆ ಮನವರಿಕೆಯಾದಂತೆ ಮಾಡು” ಎನ್ನುತ್ತಾನೆ. ಅರ್ಜುನನ ಗ್ರಹಣ ಸಾಮರ್ಥ್ಯವನ್ನೂ ಅರ್ಹತೆಯನ್ನೂ ಒರೆಗೆ ಹಚ್ಚುವ ಕೃಷ್ಣ, ಆಯ್ಕೆಯ ಸ್ವಾತಂತ್ರ್ಯವನ್ನೂ ನೀಡುತ್ತಾನೆ. ಈ ಮೂಲಕ ನಮ್ಮ ಅಭಿಪ್ರಾಯವನ್ನು ಮತ್ತೊಬ್ಬರ ಮೇಲೆ ಹೇರಬಾರದು ಅನ್ನುವ ಸಮಾಜನೀತಿಗೆ ಮಾದರಿ ಹಾಕಿಕೊಡುತ್ತಾನೆ.