ಜಾಗತಿಕ ಸಾಹಿತ್ಯದಲ್ಲಿ ಭಗವದ್ಗೀತೆ : ಸನಾತನ ಸಾಹಿತ್ಯ ~ ಮೂಲಪಾಠಗಳು #23

ಭಗವದ್ಗೀತೆಯು ಲೌಕಿಕ – ಪರಮಾರ್ಥಗಳೆರಕ್ಕೂ ಸಲ್ಲುವ ಧಾರ್ಮಿಕ ಸಾಹಿತ್ಯವಾಗಿದೆ. ಯಾವುದೇ ರಚನೆ – ಬೋಧನೆ – ನಿರ್ಣಯಗಳು ಎಷ್ಟೇ ಸಾರ್ವಕಾಲಿಕವಾಗಿದ್ದರೂ ಆಯಾ ಕಾಲದ ಅಗತ್ಯವನ್ನೂ ಚಿಂತನೆಯನ್ನೂ ಹೊತ್ತುಕೊಂಡಿರುತ್ತದೆ. ಭಗವದ್ಗೀತೆಯ ಜ್ಞಾನಸಾಗರದಲ್ಲಿ ಮುತ್ತುಗಳನ್ನು ಆಯ್ದುಕೊಳ್ಳುವ ಸಹನೆ ಮತ್ತು ಶ್ರದ್ಧೆ ನಮ್ಮದಾಗಿರಬೇಕಷ್ಟೆ.

bgಕುರುಕ್ಷೇತ್ರದಲ್ಲಿ ಪುನರುಚ್ಚರಿಸಲ್ಪಟ್ಟ ಭಗವದ್ಗೀತೆಯನ್ನು ಕೃಷ್ಣ ದ್ವೈಪಾಯನರು ಮಹಾಭಾರತದಲ್ಲಿ ಮುಖ್ಯವಾಗಿ ಸೇರಿಸಿದರು. ಮಹಾಭಾರತದ ಅಂಗವಾಗಿಯೇ ಇದ್ದ ಭಗವದ್ಗೀತೆಯು ಅದರ ಹೊರತಾಗಿಯೂ ಪ್ರತ್ಯೇಕ ಗುರುತು ಪಡೆದು ಜಾಗತಿಕ ಮನ್ನಣೆ ಪಡೆಯಿತು. ಇದಕ್ಕೆ ಕಾರಣ ಗೀತೆಯಲ್ಲಿನ ವಿಜ್ಞಾನ ಮತ್ತು ತತ್ತ್ವಜ್ಞಾನ.

ಭಗವದ್ಗೀತೆ ಆಂಗ್ಲಭಾಷೆಗೆ ಅನುವಾದಗೊಂಡಿದ್ದು 1785ರಲ್ಲಿ, ಚಾಲ್ರ್ಸ್ ವಿಲ್ಕಿನ್ಸ್‍ರಿಂದ. ಅದಾಗಿ ಕೇವಲ ಐದು ವರ್ಷಗಳಲ್ಲಿ ಭಗವದ್ಗೀತೆ ಇಂಗ್ಲೀಷಿನಲ್ಲಿ 40 ಅನುವಾದಗಳನ್ನು ಕಂಡಿತು. ಈಗ ಈ ಸಂಖ್ಯೆ 150ನ್ನು ದಾಟಿದೆ. ಅಲ್ಲದೆ, ವಿವಿಧ ವ್ಯಾಖ್ಯಾನಗಳು, ಅನ್ವಯಗಳು ಹಾಗೂ ವಿಶ್ಲೇಷಣೆಗಳನ್ನೊಳಗೊಂಡ ಬೇರೆ ಬೇರೆ ಶೈಲಿಯ ಅನುವಾದಗಳೂ ಇಂಗ್ಲಿಷ್ ಸೇರಿದಂತೆ ಇತರ ಪಾಶ್ಚಾತ್ಯ ಭಾಷೆಗಳಲ್ಲಿ ಭಗವದ್ಗೀತೆ ವಿಸ್ತರಿಸಿಕೊಂಡಿದೆ.

ಮುಘಲ್ ವಂಶದ ಅರಸ ದಾರಾಷುಕೋ ಉಪನಿಷತ್ತುಗಳೊಡನೆ ಭಗವದ್ಗೀತೆಯನ್ನೂ ಸಂಸ್ಕೃತದಿಂದ ಪರ್ಷಿಯನ್ ಭಾಷೆಗೆ ಅನುವಾದಿಸಿದ್ದ. ಈ ಅನುವಾದದ ಮೂಲಕ ಭಗವದ್ಗೀತೆಯು ಭಕ್ತಿ ಮಾರ್ಗದ ಅಧ್ಯಾತ್ಮ ಪಂಥ – ಇಸ್ಲಾಮ್ ಕವಲಿನ ಸೂಫೀಗಳನ್ನು ಮತ್ತಷ್ಟು ವ್ಯಾಪಕವಾಗಿ ತಟ್ಟಿತು.

ತಾತ್ತ್ವಿಕ – ಆಧ್ಯಾತ್ಮಿಕ ಪ್ರಭಾವಗಳನ್ನಷ್ಟೇ ಅಲ್ಲ, ಭಗವದ್ಗೀತೆಯು ಜಾಗತಿಕ ಸಾಹಿತ್ಯದ ಮೇಲೂ ಸಾಕಷ್ಟು ಪ್ರಭಾವ ಬೀರಿದೆ. ಬಾರ್ಬರಾ ಸ್ಟೋಲರ್ ಎಂಬ ವಿದ್ವಾಂಸರು ಪ್ರಸಿದ್ಧ ಕವಿಗಳಾದ ಟಿ.ಎಸ್.ಈಲಿಯಟ್, ಹೆನ್ರಿ ಡೇವಿಡ್ ಥೋರಿ ಹಾಗೂ ರಾಲ್ಫ್ ವಾಲ್ಡೊ ಎಮರ್ಸನ್ನರ ರಚನೆಗಳಲ್ಲಿ ಭಗವದ್ಗೀತೆಯ ಪ್ರಭಾವವನ್ನು ಗುರುತಿಸುವ ಒಂದು ಕೃತಿಯನ್ನು 1986ರಲ್ಲಿ ಹೊರತಂದಿದ್ದಾರೆ. ಈ ಕೃತಿಯು ಭಗವದ್ಗೀತೆಯನ್ನು ಒಂದು ಕಾವ್ಯವಾಗಿ ನೋಡುತ್ತದೆ ಮತ್ತು ಪ್ರಚಲಿತ ವಿದ್ಯಮಾನಗಳೊಂದಿಗೆ ಜೋಡಿಸುತ್ತದೆ. ಭಗವದ್ಗೀತೆಯ ಆಂಗ್ಲಾನುವಾದಗಳಲ್ಲೇ ವಿಶಿಷ್ಟ ಮತ್ತು ವಿಭಿನ್ನವಾದ ಪ್ರಯೋಗ ಇದಾಗಿದೆ.

 

 

Leave a Reply