ವಿದಾಯಕ್ಕೆ ಮುನ್ನ ~ ಪ್ರವಾದಿ : ಅಧ್ಯಾಯ 1

gibranಖಲೀಲ್ ಗಿಬ್ರಾನ್ ತನ್ನ ಅಲೌಕಿಕ ಕೃತಿ “ಪ್ರವಾದಿ” ಯನ್ನು (The Prophet) ಮೊದಲು ರಚಿಸಿದ್ದು ಅರೇಬಿಕ್ ಭಾಷೆಯಲ್ಲಿ; ತನ್ನ ಇಪ್ಪತ್ತರ ಹರೆಯದಲ್ಲಿ! ಆಮೇಲೆ ಇಂಗ್ಲೀಷ್ ಭಾಷೆಗೆ ಅದನ್ನು ತರ್ಜುಮೆ ಮಾಡಿದ್ದೂ ಅವನೇ. ಅಮೇರಿಕೆಯ ಉದ್ದಗಲಕ್ಕೂ “ಪುಟ್ಟ ಕಪ್ಪು ಪುಸ್ತಕ” “ಪುಟ್ಟ ಬೈಬಲ್” ಎಂದು ಈ ಪುಸ್ತಕ ಖ್ಯಾತಿ ಪಡೆಯಿತು. ಈ ಖ್ಯಾತಿಗೆ ತಲೆ ಕೊಡದ ಗಿಬ್ರಾನ್, “ನಾನು ಪ್ರವಾದಿ ಕೃತಿಯನ್ನು ಬರೆಯುತ್ತಿದ್ದಂತೆ, ಪ್ರವಾದಿ ಕೃತಿ ನನ್ನನ್ನು ಬರೆಯಿತು” ಎಂದುಬಿಟ್ಟಿದ್ದ.  

‘ದ ಪ್ರಾಫೆಟ್’ ಕೃತಿಯು ಜಗತ್ತಿನ ಬಹುತೇಕ ಭಾಷೆಗಳಿಗೆ ಅನುವಾದಗೊಂಡಿದ್ದು, ಕನ್ನಡದಕ್ಕೂ ಬಂದಿವೆ. ‘ಅರಳಿಬಳಗ’ದ ಕವಿ ಚಿದಂಬರ ನರೇಂದ್ರ ಮತ್ತೊಮ್ಮೆ ಇದರ ಅನುಭಾವವನ್ನು ಅನುವಾದದ ಮೂಲಕ ಹರಿಸುವ ಪ್ರಯತ್ನ ಮಾಡಿದ್ದಾರೆ.
ಇಂದಿನಿಂದ ಪ್ರತಿ ಶನಿವಾರ ‘ಪ್ರವಾದಿ’ಯ ‘ಚಿದಂಬರ ಅನುವಾದ’ ನಿಮಗೆ ದಕ್ಕಲಿದೆ.

ಅಧ್ಯಾಯ ~ 1

ಅಲ್ ಮುಸ್ತಫಾ,
ಅನುಗ್ರಹಕ್ಕೆ ಒಳಗಾದವನು, ಅನುರಾಗಕ್ಕೆ ಎಡೆಯಾದವನು.
ತನ್ನ ದಿನಗಳಿಗೆ ತಾನೇ ಬೆಳಕ ಹೊತ್ತು ತಂದವನು.
ಆರ್ಫಲೀಸ್ ಶಹರದಲ್ಲಿ ಹನ್ನೆರಡು ವರ್ಷ ಕಾದವನು.
ಹುಟ್ಟೂರಿಗೆ ಕರೆದೊಯ್ಯಲು ಬರುತಿರುವ
ಹಡಗಿನ ದರುಶನಕ್ಕಾಗಿ ತುದಿಗಾಲಲ್ಲಿ ನಿಂದವನು.

ಹನ್ನೆರಡನೇ ವರ್ಷ, ಐಯೆಲೂಲ್ ಮಾಸದ ಏಳನೇ ದಿನ
ಸುತ್ತ ಮುತ್ತೆಲ್ಲ ಸುಗ್ಗಿಯ ಹಿಗ್ಗು.
ಸರಸರನೇ ಗೋಡೆಗಳಿಲ್ಲದ ಬೆಟ್ಟ ಏರಿ
ಸಾಗರದತ್ತ ಕಣ್ಣು ಹಾಯಿಸಿದ,
ಮಂಜು ಹೊದ್ದು ಹಾತೊರೆಯುತ್ತಿದ್ದ ಹಡಗನ್ನು ಕಣ್ತುಂಬಿಕೊಂಡ.

ಎದೆಯ ಬಾಗಿಲು ತೆರೆದದ್ದೇ ಸಾಕು
ಖುಷಿ, ಹುಚ್ಚು ಹೊಳೆಯಾಗಿ ಹರಿದು ಸಮುದ್ರವನ್ನಾವರಿಸಿಕೊಂಡಿತು.
ಕಣ್ಣು ಮುಚ್ಚಿದ,
ಆತ್ಮ, ಮಾತು ನಿಲ್ಲಿಸಿದ ಜಾಗದಲ್ಲಿ ನಿಂತು ದೀನನಾದ.

ಬೆಟ್ಟ ಇಳಿಯತೊಡಗಿದಂತೆ ವಿಷಾದ ಆಳಕ್ಕಿಳಿಯತೊಡಗಿತು
ಒಂದು ಹನಿ ಸಂಕಟವೂ ಇಲ್ಲದ ಶಾಂತಿ,
ಒಂದು ಗಾಯದ ಗೀಚೂ ಇಲ್ಲದ ಮನಸ್ಸಿನೊಂದಿಗೆ
ಬಿಟ್ಟು ಹೋಗಬಲ್ಲೆನೆ ಈ ಊರ ?

ಗೋಡೆಗಳ ನಡುವೆ, ಸಂಕಟಗಳೊಡನೆ ಕಳೆದ ದಿನಗಳೆಷ್ಟೋ ?
ಏಕಾಂತದ ಜೊತೆ ಮಲಗಿದ ರಾತ್ರಿಗಳೆಷ್ಟೋ ?
ಯಾರು ತಾನೆ ಬಿಟ್ಟು ಹೋಗಬಲ್ಲರು
ನೋವು, ಏಕಾಂತಗಳನ್ನು ವಿಷಾದದ ದನಿಯಿಲ್ಲದೆ.

ಊರಿನ ರಸ್ತೆಗಳಲ್ಲಿ ಚೂರು ಚೂರಾಗಿ ಬಿದ್ದಿವೆ
ನನ್ನ ಆತ್ಮದ ತುಣುಕುಗಳು.
ಬೆಟ್ಟ ಗುಡ್ಡಗಳ ನಡುವೆ ಬೆತ್ತಲೆಯಾಗಿ ಓಡಾಡುತ್ತಿದ್ದಾರೆ
ನನ್ನ ತವಕ ತಲ್ಲಣಗಳ ಮಕ್ಕಳು.
ಬಿಟ್ಟುಹೋಗಬಹುದೆ ಈ ಎಲ್ಲವನ್ನೂ,
ಹಗುರ ಎದೆಯಲ್ಲಿ
ನೋವಿನ ನೆನಪಿಲ್ಲದೆ ಒಂದಿನಿತೂ?

ಬಟ್ಟೆಯಲ್ಲ ಇದು,
ನಾನು ಕಳಚಿ ನಿಂತಿರುವುದು
ಚರ್ಮ, ನನ್ನ ಕೈಯ್ಯಾರೆ ನಾನೇ ಸುಲಿದಿದ್ದೇನೆ.

ಬಿಟ್ಟು ಹೋಗಲು, ಇದು ಮಾತಲ್ಲ.
ಹಸಿವೆ, ಬಾಯಾರಿಕೆಗಳಿಂದ ರುಚಿಗಟ್ಟಿರುವ ನನ್ನ ಎದೆಯ ಒಡಲು.

ಆದರೂ ಇನ್ನು ಇಲ್ಲಿರುವುದು ಸಾಧ್ಯವಿಲ್ಲ.

ಎಲ್ಲವನ್ನೂ ತನ್ನೊಳಗೆ ಆಹ್ವಾನಿಸುವ ಸಮುದ್ರ
ಕೂಗಿ ಕೂಗಿ ಕರೆಯುತ್ತಿದೆ.
ಕಾಲು ಕೀಳಲೇ ಬೇಕಿನ್ನು.

ರಾತ್ರಿಯೆನೋ ಕಾಲ, ಸುಟ್ಟು ಹೋಗುತ್ತದೆ
ಇನ್ನು ಇಲ್ಲಿರುವುದೆಂದರೆ
ಒಂದೇ ಎರಕದಲ್ಲಿ ಸಿಕ್ಕು ಹೆಪ್ಪುಗಟ್ಟಿದಂತೆ, ಗುಡಿಗಟ್ಟಿದಂತೆ.

ಇಲ್ಲಿರುವುದನ್ನೆಲ್ಲ ಒಯ್ಯಬಹುದಾದರೆ ಎಷ್ಟು ಚೆನ್ನ ?

ಆದರೆ ಹೇಗೆ ?

ದನಿಗೆ ಸಾಧ್ಯವಿಲ್ಲ
ನಾಲಿಗೆಯ ಎಳೆದುಕೊಂಡು ಹೋಗುವುದು.
ಹಾರುವುದ ಕಲಿಸಿಕೊಟ್ಟ ತುಟಿಗಳನ್ನು
ಕಟ್ಟಿಕೊಂಡು ಹಾರುವುದು.
ಏಕಾಂಗಿಯಾಗಿ ನಿಂತು ಎದುರಿಸಬೇಕಿನ್ನು ಅಪಾರ ಆಕಾಶವನ್ನು.

ಗೂಡು ತೊರೆಯ ಬೇಕು ಗರುಡ ಹಾರಬೇಕು ಏಕಾಂಗಿಯಾಗಿ,
ರವಿತೇಜನ ಬೇಲಿ.

ಬೆಟ್ಟ ಇಳಿದವನು ಸಾಗರನೆಡೆಗೆ ಮುಖ ಮಾಡಿ ನಿಂತ.
ತೀರದೆಡೆಗೆ ಸಮೀಪವಾಗುತ್ತಿತ್ತು ಹಡಗು.
ಹಡಗಿನ ಅಂಗಳದಲ್ಲಿ ಊರಿನ ನಾವಿಕರು.

ಎದೆ ತುಂಬಿ ಬಂತು. ಚೀರಿದ ;

ನನ್ನ ಮಹಾ ತಾಯಿಯ ಮಕ್ಕಳೆ, ಒಡ ಹುಟ್ಟಿದವರೆ,
ಸಾಗರದ ಅಲೆಗಳ ಸರದಾರರೆ….
ಎಷ್ಟೋ ಬಾರಿ ಕನಸಲ್ಲಿ ತೇಲಿ ಬಂದಿರುವಿರಿ.
ಆದರೆ ಇಂದು ಕಾಣಿಸಿಕೊಂಡಿರುವುದು ಎಚ್ಚರದಲ್ಲಿ
ನನ್ನ ಇನ್ನೂ ಆಳದ ಕನಸಿನಲ್ಲಿ.

ನಾನು ಸಿದ್ಧ,
ನನಗಿಂತಲೂ ಮೊದಲು ಹೊರಗೆ ಕಾಲಿಟ್ಟಿದೆ
ನನ್ನ ಆತುರ.
ಗಾಳಿ ಬೀಸುವುದೊಂದೇ ಬಾಕಿ ಈಗ.

ಇನ್ನು ಒಂದೇ ಒಂದು ಉಸಿರು ಈ ಗಾಳಿಯಲ್ಲಿ,
ನಿಲ್ಲಿ, ಒಮ್ಮೆ ಅಕ್ಕರೆಯಿಂದ ಕಣ್ತುಂಬಿಕೊಳ್ಳುತ್ತೇನೆ ಈ ನೆಲದ ನೋಟ.

ಆಮೇಲೆ ನಾನು, ನಿಮ್ಮೊಳಗೊಬ್ಬ.
ಸಮುದ್ರಯಾತ್ರಿಗಳ ನಡುವೆ, ಇನ್ನೊಬ್ಬ ಸಮುದ್ರಯಾತ್ರಿ.

ಮತ್ತು
ನೀನು,
ಓ ಅಪಾರ ಸಮುದ್ರ,
ಮುಸುಕಿನೊಳಗಿನ ಮಹಾತಾಯಿ ;

ಸಕಲ ನದಿ, ತೊರೆಗಳ ಬಿಡುಗಡೆ,
ನಿಶ್ಚಿಂತೆಯ ಮಹಾಮನೆ….
ಈ ತೊರೆಗೆ ಇನ್ನೊಂದು ತಿರುವಿನ ಬಯಕೆ ಮಾತ್ರ,
ಈ ಕಾಡಿನ ಬಯಲಲ್ಲಿ ಇನ್ನೊಂದೇ ಒಂದು ಪಿಸುಮಾತಿನ ಆಸೆ ಮಾತ್ರ.
ಆಮೇಲೆ ನಿನ್ನ ಸೇರುತ್ತೇನೆ ಅಪರಿಮಿತ ಸಾಗರದಲ್ಲಿ ಮುಕ್ತ ಹನಿಯಾಗಿ.

ಎರಡು ಹೆಜ್ಜೆ ಮುಂದಿಡುತ್ತಿರುವಾಗಲೇ ಕಾಣಿಸಿಕೊಂಡರು
ಹೊಲಗಳಿಂದ, ದ್ರಾಕ್ಷಿಯ ತೋಟಗಳಿಂದ
ಶಹರದ ಹೆಬ್ಬಾಗಿಲಿಗೆ ಧಾವಿಸುತ್ತಿದ್ದ ಗಂಡಸರು, ಹೆಂಗಸರು.

ಎಷ್ಟೋ ಜನ ಅವನ ಹೆಸರು ಕೂಗುತ್ತಿದ್ದರು.
ಅವನ ಹಡಗು ಬಂದು ಮುಟ್ಟಿರುವ ಸುದ್ದಿಯನ್ನುಹೊಲದಿಂದ ಹೊಲಕ್ಕೆ ಮುಟ್ಟಿಸುತ್ತಿದ್ದರು.

ತನ್ನೊಳಗೇ ಅಂದುಕೊಂಡ;
ವಿದಾಯದ ದಿನ ಸಾಧ್ಯವೆ ಮಿಲನ ?
ಸಂಜೆಯಂತೆ ಕಂಡದ್ದು, ಬೆಳಗು ಆಗಿರಬಹುದೆ ?

ಹೊಲದಲ್ಲಿ ನೇಗಿಲು ಬಿಟ್ಟು ಬಂದವರಿಗೆ
ತೋಟದಲ್ಲಿ ದ್ರಾಕ್ಷಿಯ ಗಿರಣಿ ನಿಲ್ಲಿಸಿ ಬಂದವರಿಗೆ
ನಾನು ಕೊಡುವುದಾದರೂ ಏನು?
ಎದೆ ಹಣ್ಣಿನ ಮರವಾಗಿದ್ದರೆ
ಕಿತ್ತು ಕಿತ್ತು ಹಂಚಬಹುದಾಗಿತ್ತಲ್ಲವೆ ಈ ನನ್ನ ಗೆಳೆಯರಿಗೆ ?
ಹಂಬಲ, ಚಿಮ್ಮುವ ಕಾರಂಜಿಯಾಗಿದ್ದರೆ
ತುಂಬಿಸಬಹುದಿತ್ತಲ್ಲವೆಇವರ ಬಾಯಾರಿದ ಬಟ್ಟಲುಗಳನ್ನ ?

“ಯಾರು ನಾನು?
ಭಗವಂತನ ಬೆರಳು ಮುಟ್ಟಿದ ಸ್ವರ ತಂತಿಯೋ?
ಅವನ ಉಸಿರು ಹಾಯ್ದು ಹೋದ ಕೊಳಲೋ ?
ಪ್ರಶಾಂತ ಮೌನದ ಹುಡುಕಾಟ ನನ್ನದು
ನನಗೆ ಸಿಕ್ಕ ಯಾವ ನಿಧಿಯ ಹಂಚಿಬಿಡಬಹುದು ಧೈರ್ಯದಿಂದ?
ಇದು ನನ್ನ ಸುಗ್ಗಿಯ ದಿನವಾದರೆ
ಯಾವ ಹೊಲದಲ್ಲಿ ಬಿತ್ತಿದ್ದೆ ಬೀಜ, ಯಾವ ಮರೆತು ಹೋದ ಋತುವಿನಲ್ಲಿ?
ಇದು ನಾನು ದೀಪ ಎತ್ತಿಹಿಡಿಯಬೇಕಾದ ಸಮಯವಾದರೆ
ಇಲ್ಲಿ ಹೊತ್ತಿ ಉರಿಯುತ್ತಿರುವ ಜ್ಯೋತಿ ನನ್ನದಲ್ಲ.
ಎತ್ತಿ ಹಿಡಿದ ಹಣತೆ ಖಾಲಿ, ಆರಿಹೋಗಿದೆ ದೀಪ.
ರಾತ್ರಿಯ ಸಾಕುವವ ಬಂದು ತುಂಬಿಸಿ ಹೋಗುತ್ತಾನೆ ತೈಲ,
ತಾನೇ ಹೊತ್ತಿಸುತ್ತಾನೆ ಜ್ಯೋತಿ.”

~ ಇಷ್ಟು ಮಾತೇನೋ ಆಡಿದ,
ಆದರೆ ಆಡದೆ ಉಳಿದು ಹೋದ ಮಾತು ಬೇಕಾದಷ್ಟಿತ್ತು.
ತನಗೆ ತಾನೇ ಹೇಳಿಕೊಳ್ಳಲಾರದ ರಹಸ್ಯ ಅವನೊಳಗೇ ಉಳಿದುಹೋಗಿತ್ತು.

ಮತ್ತೆ ಶಹರದಲ್ಲಿ ಕಾಲಿಟ್ಟ
ಜನ ಮುಗಿದು ಬಿದ್ದರು; ಆರ್ತರಾದರು ಅವನಿಗಾಗಿ, ಒಂದೇ ದನಿಯಲ್ಲಿ.

ಊರ ಹಿರಿಯರು ಮುಂದೆ ಬಂದರು, ಮಾತಿಗೆ ಮಾತು ಸೇರಿಸಿದರು.
ಬಿಟ್ಟು ಹೋಗದಿರು
ನಮ್ಮ ಮುಸ್ಸಂಜೆಯ ಬೆಳಗುತ್ತಿರುವ ನಡುಹಗಲಿನ ಸೂರ್ಯ ನೀನು,
ನಿನ್ನ ಹರೆಯ ಕೊಟ್ಚಿರುವ ಕನಸುಗಳೇ ಈಗ ನಮ್ಮ ಕನಸುಗಳು.
ಅಪರಿಚಿತನಲ್ಲ, ಅತಿಥಿಯಲ್ಲ ನೀನು, ನಮ್ಮ ಪ್ರೀತಿಯ ಮನೆ ಮಗ.
ಮತ್ತೆ ಮತ್ತೆ ನಿನ್ನ ನೋಡುವ ಹಸಿವು ಬಳಲಿಸದಿರಲಿ ನಮ್ಮ ಕಣ್ಣು.

ಊರ ಮಂದಿರದಲ್ಲಿ ಪೂಜೆ ಮಾಡುವ
ಅರ್ಚಕರು, ಅರ್ಚಿಕೆಯರು …

ಸಮುದ್ರದ ತೆರೆಗಳು ನಮ್ಮನ್ನು ಈಗ ಬೇರೆ ಮಾಡದಿರಲಿ,
ನಮ್ನೊಡನೆ ನೀನು ಕಳೆದ ದಿನಗಳು ನೆನಪಾಗಿ ಉಳಿಯದಿರಲಿ.
ನೀನು ನಮ್ಮ ನಡುವೆ ಒಡನಾಡಿದ ಚೈತನ್ಯ ,
ನಿನ್ನ ನೆರಳು ನಮ್ಮ ಚಹರೆಗಳನ್ನು ಬೆಳಗಿದ ಬೆಳಕು.
ಅಪಾರವಾಗಿ ಪ್ರೀತಿಸಿದೆವು ನಿನ್ನ; ಆದರೆ ಇಲ್ಲಿ ಮಾತಿರಲಿಲ್ಲ
ಪ್ರೀತಿ, ಮುಸುಕಿನಲ್ಲಿ ಅಡಗಿ ನಿಂತಿತ್ತು.

ಇಂದಿಗೂ ಒದ್ದೆಯಾಗುತ್ತವೆ ಈ ಪ್ರೀತಿಯ ಕಣ್ಣು.
ನಿನ್ನೆದುರು ನಿಂತಾಗ ಮಾತ್ರ ಪೂರ್ತಿ ಬಯಲು

ಗೊತ್ತಿರಲಿಲ್ಲ ಈ ಪ್ರೀತಿಗೆ ತನ್ನ ಸ್ವಂತದ ಆಳ
ಕೊನೆಗೆ ನೀನು ಬಿಟ್ಟು ಹೋಗುವವರೆಗೂ.

ಆಮೇಲೆ ಎಲ್ಲ ಒಬ್ಬರಾಗಿ ಬಂದು ತಮ್ಮನ್ನು ತಾವು ತೋಡಿಕೊಂಡರು.

ಯಾರಿಗೂ ಉತ್ತರಿಸಲಿಲ್ಲ, ತಲೆ ಬಾಗಿಸಿದ
ಹತ್ತಿರ ನಿಂತವರಿಗೆ ಮಾತ್ರ ಕಾಣಿಸಿತು
ಕಣ್ಣೀರಿನಿಂದ ತೊಯ್ದ ಅವನ ವಿಶಾಲ ಎದೆ ಹರವು.

ಜನರ ಜೊತೆಗೂಡಿ ಮುಂದೆ ನಡೆದ
ದೇವಸ್ಥಾನದ ಮುಂದಿನ ವಿಶಾಲ ಚೌಕಿನೆಡೆಗೆ.

ಆಶ್ರಮದ ಬಾಗಿಲು ತೆರೆಯಿತು,
ಹೊರಬಂದಳು ಓರ್ವ ಯುವತಿ,
ಮುಂದಾಗುವುದ ಇಂದೇ ಹೇಳುವವಳು,
ಹೆಸರು ಆಲ್’ಮಿತ್ರ

ಅಂತಃಕರಣದಿಂದ ನೋಡಿದ ಅವಳ.
ಅವಳೇ ಅಲ್ಲವೆ ಅವನ ಮೊದಲು ಮಾತಾಡಿಸಿದವಳು, ನಂಬಿದವಳು,
ಶಹರದಲ್ಲಿ ಅವ ಕಾಲಿಟ್ಟ ದಿನ!?

ವಂದಿಸಿದಳು;
ಭಗವಂತನ ಪ್ರವಾದಿಯೇ,
ಅನನ್ಯದ ಅನ್ನೇಷಣೆಯಲ್ಲಿ ಎಷ್ಟು ಹುಡುಕಾಡಿದೆ ನೀನು ನಿನ್ನ ಹಡಗಿಗಾಗಿ!
ಇಂದು ಬಂದು ನಿಂತಿದೆ ನಿನ್ನ ಹಡಗು. ಹೊರಡಲೇಬೇಕಾಗಿದೆ ನೀನು
ಎಷ್ಟು ಆಳ ನಿನ್ನ ತುಡಿತ, ನೆನಪುಗಳ ನಾಡಿಗಾಗಿ
ನಿನ್ನ ಉತ್ಕಟ ಬಯಕೆಗಳು ಬೇರೂರಿರುವ ಬೀಡಿಗಾಗಿ.
ಕಟ್ಟಿಹಾಕಲಾರವು ಇನ್ನು ನಿನ್ನ ನಮ್ಮ ಪ್ರೀತಿ ವಿಶ್ವಾಸಗಳು, ನಮ್ಮ ಬೇಕು ಬೇಡಗಳು.
ನಾವು ಕೇಳುವುದು ಇಷ್ಟೇ;
ಹೇಳಿ ಹೋಗು ದಯಮಾಡಿ ನೀನು ಕಂಡುಕೊಂಡ ನಿಜಗಳನ್ನ
ನಾವು ನಮ್ಮ ಮಕ್ಕಳಿಗೆ, ಅವರು ಅವರ ಮಕ್ಕಳಿಗೆ
ಹೀಗೇ ಮುಂದುವರೆಯುತ್ತದೆ ಸತತ, ಸಾವೇ ಇಲ್ಲ ನಿನ್ನ ನುಡಿಗೆ.

ನಿನ್ನ ಏಕಾಂತದಲ್ಲಿ ನಮ್ಮ ದಿನಗಳನ್ನು ಕಂಡಿರುವೆ,
ನಿನ್ನ ಎಚ್ಚರದಲ್ಲಿ, ನಿದ್ದೆಯೊಳಗಿನ ನಮ್ಮ ನಗುವನ್ನೂ ಅಳುವನ್ನೂ ಖುದ್ದು ಕೇಳಿರುವೆ.

ಇನ್ನಾದರೂ ತೋರಿಸು ನೀನು ನಮಗೆ ನಮ್ಮನ್ನ.
ಹುಟ್ಟು ಮತ್ತು ಸಾವಿನ ನಡುವೆ ನೀನು ನಿಲ್ಲಿಸಿ, ಮಾತಾಡಿಸಿರುವುದನ್ನ.

ಎದ್ದು ನಿಂತ,
“ಆರ್ಫಲೀಸ್ ನ ಮಹಾಜನರೇ!
ನಿಮ್ಮ ಮನಸ್ಸುಗಳಲ್ಲಿ ಬೇರೂರಿರುವ, ಇಂದೂ ಗದ್ದಲ ಹಾಕುತ್ತಿರುವ
ವಿಷಯಗಳನ್ನು ಬಿಟ್ಟು ಬೇರೆ ಏನು ತಾನೇ ಮಾತಾಡಲಿ ನಾನು?”

ಮುಂದುವರೆಯುತ್ತದೆ……….
(ಚಿತ್ರಕೃಪೆ: ಇಂಟರ್’ನೆಟ್)

ಲೇಖಕರ ಕುರಿತು:
ChiNa

ಚಿದಂಬರ ನರೇಂದ್ರ
ಮೂಲತಃ ಧಾರವಾಡದವರು, ವೃತ್ತಿಯಿಂದ ಮೆಕಾನಿಕಲ್ ಇಂಜಿನಿಯರ್, ಕಂಪನಿಯೊಂದರಲ್ಲಿ ಡಿಸೈನ್ ವಿಭಾಗದ ಮುಖ್ಯಸ್ಥ.  ಸಿನೇಮಾ, ಸಾಹಿತ್ಯ ಹವ್ಯಾಸಗಳು. ಕವಿ ಮತ್ತು ಅನುವಾದಕ. ಝೆನ್ ಕಥೆ, ಸೂಫಿ ಕಾವ್ಯ, ಗುಲ್ಜಾರ್ ಕವಿತೆಗಳ ಅನುವಾದಗಳಿಂದ ಜನಪ್ರಿಯರು.

Leave a Reply