ಅರಳಿಮರಕ್ಕೆ 150 ದಿನಗಳು ; ನಮ್ಮಿಂದ ನೀವು ಏನನ್ನು ಬಯಸುತ್ತೀರಿ?

ಅರಳಿಮರ ಜಾಲತಾಣ ಆರಂಭಗೊಂಡು 150 ದಿನಗಳು, ಅಂದರೆ ಐದು ತಿಂಗಳು ಸಂದಿವೆ. ಈ ಸಂದರ್ಭದಲ್ಲಿ ‘ಅರಳಿಮರ’ವು ನಿಮಗೆ ಏನನ್ನು ಕೊಡಲು ಬಯಸುತ್ತದೆ ಎಂದು ಹೇಳುವುದರ ಜೊತೆಗೇ, ‘ಅರಳಿಮರ’ದಿಂದ ನೀವು ಏನನ್ನು ಬಯಸುತ್ತಿದ್ದೀರಿ ಎಂದು ತಿಳಿಯುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಆದ್ದರಿಂದ, ನಿಮ್ಮ ಅನ್ನಿಸಿಕೆಗಳನ್ನು ದಯವಿಟ್ಟು ಹಂಚಿಕೊಳ್ಳಿ…. | ಅರಳಿಬಳಗ

new am
‘ಅರಳಿಮರ ~ ಹೃದಯದ ಮಾತು’ ಅನ್ನುವ ಶಿರೋನಾಮೆಯೇ ಈ ಜಾಲತಾಣದ ಉದ್ದೇಶವನ್ನು ಸಾರುತ್ತದೆ.
ಅರಳಿಮರಕ್ಕೂ ಹೃದಯದ ಮಾತಿಗೂ ಏನು ಸಂಬಂಧ ಎನ್ನುವ ಪ್ರಶ್ನೆಯನ್ನು ‘ಅರಳಿಬಳಗ’ವು ಆರಂಭದಲ್ಲಿಯೇ ಎದುರಿಸಿತ್ತು. ಇದಕ್ಕೆ ಸರಳ ವಿವರಣೆ: “ಪ್ರೇಮವಿಲ್ಲದೆ ಜ್ಞಾನವೂ ಅರ್ಥಪೂರ್ಣವಾಗಿ ಸಿದ್ಧಿಸುವುದಿಲ್ಲ. ಅರಳಿಮರ ಜ್ಞಾನವನ್ನು ಸಂಕೇತಿಸಿದರೆ, ಹೃದಯವು ಪ್ರೇಮದ ಸಂಕೇತ. ಪ್ರೇಮ ಮಾರ್ಗದ ಮೂಲಕ ಜ್ಞಾನವನ್ನು ಅರಸುವ ಪ್ರಯತ್ನವಿದು” ಎಂದು ಹೇಳಬಹುದು.
ಮತ್ತು; ಮಾಹಿತಿ ರೂಪದಲ್ಲಿ ಅಥವಾ ಕಲಿಕೆಯ ರೂಪದಲ್ಲಿರುವ ಜ್ಞಾನವನ್ನು ದಕ್ಕಿಸಿಕೊಳ್ಳಲು ಪ್ರಜ್ಞೆ ಅತ್ಯಗತ್ಯ. ಪ್ರಜ್ಞಾವಂತಿಕೆಯೇ ಇಲ್ಲದೆ ಮಾಹಿತಿ ಕಲೆಹಾಕಿ ಪ್ರಯೋಜನವಿಲ್ಲ. ಮತ್ತು, ಕಲಿಕೆಯು ತಿಳಿವಳಿಕೆಯಾಗಬೇಕೆಂದರೆ, ಕಲಿಕೆಯು ಪ್ರಜ್ಞಾಪೂರ್ಣವಾಗಿ ನಡೆಯಬೇಕು. ಪ್ರಜ್ಞೆ ಜಾಗೃತಗೊಳ್ಳುವುದು ಆದ್ಯಾ ಚಕ್ರದಲ್ಲಿ. ಕುಂಡಲಿನಿಯಿಂದ ಎದ್ದು ನಮ್ಮ ಸೂಕ್ಷ್ಮ ಶರೀರದೊಳಗೆ ಒಂದೊಂದೇ ಚಕ್ರ ಹಾಯುತ್ತಾ ಸಾಗುವ ನಮ್ಮ ವಿಚಾರಧಾರೆಗಳು ಅನಾಹತದಲ್ಲಿ ಶುದ್ಧಗೊಂಡ ನಂತರವಷ್ಟೆ ಆದ್ಯಾ ಚಕ್ರವನ್ನು ತಲುಪುತ್ತವೆ. ಅನಾಹತ ಇರುವುದು ಹೃದಯದಲ್ಲಿ. ಈ ಕಾರಣಕ್ಕಾಗಿಯೂ ಇದು ‘ಹೃದಯದ ಮಾತು’.
ನೀವು ಬಯಸುವುದೇನು?
ಜಾಲತಾಣದ FB ಮತ್ತು whatsappಗಳಿಗೆ ಬರುವ ಸಂದೇಶಗಳಲ್ಲಿ ಕೆಲವರು ‘ಸುಭಾಷಿತಗಳನ್ನು ಹಾಕಿ’ ‘ಪುರಾಣಗಳನ್ನು ಹಾಕಿ’ ‘ಪಾಶ್ಚಾತ್ಯ ತತ್ತ್ವಜ್ಞಾನ ಪರಿಚಯಿಸಿ’ ಎಂದು ಕೇಳುತ್ತಾ ಇರುತ್ತಾರೆ. ಎಲ್ಲವನ್ನೂ ಪೂರೈಸಲು ಸಾಧ್ಯವಾಗದೆ ಹೋದರೂ ‘ಅರಳಿಬಳಗ’ವು ತನ್ನ ಮಿತಿಯಲ್ಲಿ ಅದನ್ನು ನಡೆಸುತ್ತಿದೆ, ಮುಂದೆಯೂ ನಡೆಸಲಿದೆ.
ಹಾಗೆಯೇ ಅರಳಿಬಳಗವು ಸಾಮಾನ್ಯ ಓದುಗರ ಪರಿಚಿತ ವಲಯದಾಚೆಗೂ ಕೈಚಾಚಿ, ಅಧ್ಯಾತ್ಮ ಜಗತ್ತಿನ ಮುತ್ತು ರತ್ನಗಳನ್ನು ಹೆಕ್ಕಿ ತಂದಿಡುವ ಪ್ರಯತ್ನ ನಡೆಸಿದೆ. ಝೆನ್, ತಾವೋ, ಸೂಫಿ ಸಂತರು ಮತ್ತು ಕತೆಗಳ ಅನುವಾದಗಳನ್ನು ಪ್ರಕಟಿಸುತ್ತಿರುವುದು ಈ ಕಾರಣಕ್ಕೇ. “ಆಧ್ಯಾತ್ಮಿಕ ಜಗತ್ತು ಎಲ್ಲಿಂದ ಎಲ್ಲಿಗೆ ಹೋದರೂ ಸಾರುವುದು ಇದನ್ನೇ” ಎಂದು ಮನದಟ್ಟು ಮಾಡುವುದು ಬಳಗದ ಉದ್ದೇಶ.
“ವಿಶ್ವಾದ್ಯಂತ ಆಧ್ಯಾತ್ಮಿಕ ಜಗತ್ತು ಸಾರುವುದು ಯಾವುದನ್ನು?”
“ಶಾಂತಿಯನ್ನು, ಪ್ರೇಮವನ್ನು, ಸಂಭ್ರಮವನ್ನು ಮತ್ತು ಸಮಾನತೆಯನ್ನು”.
ಹಾಗೆಯೇ “ಬದುಕು ಬಹಳ ಸರಳ ಎಂಬ ಸತ್ಯವನ್ನೂ”.
ಅಷ್ಟು ಮಾತ್ರವಲ್ಲ, ಶುದ್ಧ ಆಧ್ಯಾತ್ಮಿಕ ವಿಚಾರ, ಕಥನ – ಕಾವ್ಯಗಳ ಜೊತೆಗೆ ಅರಳಿಬಳಗವು ಗ್ರೀಕ್ ಪುರಾಣ ಕಥೆಗಳ ಅನುವಾದ ಸರಣಿಯನ್ನು ಪ್ರಕಟಿಸಿತು. ಈಗ ವಾರ / ಹದಿನೈದು ದಿನಗಳಿಗೊಮ್ಮೆ ಜಗತ್ತಿನ ವಿವಿಧ ಜನಾಂಗಗಳ ನಂಬಿಕೆಯ ಸೃಷ್ಟಿ ಕಥನಗಳ ಅನುವಾದ ಸರಣಿಯನ್ನು ಪ್ರಕಟಿಸುತ್ತಿದೆ. ಹೀಗೆ ಇದು ಮುಂದುವರೆಯುತ್ತಲೇ ಹೋಗುತ್ತದೆ. ಭಾರತದ ನುಡಿಗಟ್ಟುಗಳಲ್ಲಿ, ಗಾದೆ ಮಾತುಗಳಲ್ಲಿ, ಜನಪದಗಳಲ್ಲೂ ಹಾಸುಹೊಕ್ಕಾಗಿರುವ ಪುರಾಣ, ಲೋಕ ಗೀತೆಗಳು ಮೊದಲಾದವನ್ನೂ, ಸನಾತನ ಸಾಹಿತ್ಯವನ್ನೂ, ವಚನ – ದಾಸ ಸಾಹಿತ್ಯವನ್ನೂ ಪರಿಚಯಿಸುವ ಸಿದ್ಧತೆ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಲೇಖನಗಳ ಸಂಗ್ರಹ ಸಾಗಿದೆ. ಆದರೆ, ಎಷ್ಟು ಪ್ರಯತ್ನ ಹಾಕಿದರೂ ಇದು ಸಮುದ್ರವನ್ನು ಚಮಚೆಯಲ್ಲಿ ಕೊಟ್ಟಂತೆ ಎನ್ನುವ ಅರಿವು ಬಳಗಕ್ಕೆ ಇದೆ.
ಈ ಎಲ್ಲ ಶ್ರಮದ ಉದ್ದೇಶ, ಅಧ್ಯಾತ್ಮ ಹುಬ್ಬುಗಂಟಿನ ಚರ್ಚೆಯಲ್ಲ ಎನ್ನುವುದಕ್ಕಾಗಿ. ಏಕೆಂದರೆ, ಅಧ್ಯಾತ್ಮ – ಲವಲವಿಕೆಯ ಬದುಕು. ಅದರ ಕಲಿಕೆಯೂ ಲವಲವಿಕೆಯಿಂದಲೇ ಸಾಗಬೇಕು.
ಹೀಗೆ ಏನೆಲ್ಲ ಮಾಡಿದರೂ ಅರಳಿಬಳಗವು ತನ್ನ ಆಲೋಚನೆಗೆ ತಕ್ಕಂತೆ ಮಾಡುತ್ತಿದೆ. ಅದು ಕೊಡುವುದನ್ನಷ್ಟೆ ನೀವು ಓದಬೇಕು ಅನ್ನುವ ಯೋಚನೆ ಬಳಗಕ್ಕಿಲ್ಲ. ಆತ್ಯಂತಿಕವಾಗಿ ಆಸಕ್ತರ ಪ್ರಯೋಜನಕ್ಕೆ ಒದಗುವುದೇ ಬಳಗದ ಗುರಿಯಾದ್ದರಿಂದ, ನಿಮಗೇನು ಬೇಕು ಎಂದು ಕೇಳುವುದು ಅದರ ಕರ್ತವ್ಯವೇ ಆಗಿದೆ.
ಆದ್ದರಿಂದ, ಅರಳಿಮರದಲ್ಲಿ ಪ್ರಕಟಿಸುತ್ತಿರುವ ವಿಷಯಗಳ ಜೊತೆಗೆ, ನೀವು ಏನನ್ನು ಓದಲು ಬಯಸುತ್ತೀರಿ ಎಂದು ಇಲ್ಲಿ ಹಂಚಿಕೊಳ್ಳಿ. ಕಾಲಕ್ರಮೇಣ…. ಒಂದು ತಿಂಗಳು ಅಥವಾ ಒಂದು ವರ್ಷದವರೆಗಿನ ಅವಧಿಯಲ್ಲಾದರೂ ಸರಿ, ಅವನ್ನು ಒಳಗೊಳಿಸಿಕೊಳ್ಳಲು ಅರಳಿಬಳಗವು ಪ್ರಯತ್ನಿಸುತ್ತದೆ.
ಸಹಕಾರವಿರಲಿ.
ಇಲ್ಲಿಯೇ ಕಮೆಂಟ್ ಮಾಡುವ ಮೂಲಕ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ. ಅಥವಾ aralimara123@gmail.com ಗೆ mail ಮಾಡಿ.
ಪ್ರೀತಿಗೆ ಆಭಾರಿ,
ಅರಳಿಬಳಗ

ನೂರೈವತ್ತು ದಿನಗಳು ಪೂರೈಸಿದ ಈ ಸಂದರ್ಭದಲ್ಲಿ ದಿನದಿಂದ ದಿನಕ್ಕೆ ಓದುಗರ ಮೆಚ್ಚುಗೆ ಪಡೆಯುತ್ತಾ ಮುನ್ನಡೆದಿರುವ ಅರಳಿಮರವು ತನ್ನ ಬಳಗವನ್ನು ಪ್ರೀತಿಯಿಂದ ನೆನೆಯುತ್ತದೆ. ಜಾಲತಾಣದ ಮಾರ್ಗದರ್ಶಕರಾದ ಅಚಿಂತ್ಯ ಚೈತನ್ಯ, ಆರಂಭದಿಂದಲೂ ಜೊತೆಗಿರುವ ವಿದ್ಯಾಧರ (ಇವರ ಸಹಕಾರ ಮತ್ತು ಪ್ರೀತಿಯಿಂದ Whosoever Ji ಅವರ ಲೇಖನಗಳನ್ನು ಪ್ರಕಟಿಸುವುದು ಸಾಧ್ಯವಾಗಿದೆ), ಅಂಕಣಕಾರರಾದ ಚಿದಂಬರ ನರೇಂದ್ರ, ಆನಂದಪೂರ್ಣ, ಯಾದಿರಾ, ಸುನೈಫ್, ಹಿರಣ್ಮಯಿ ಮತ್ತು ಅರಳಿಮರ ಜಾಲತಾಣದ ಸಿಬ್ಬಂದಿ ಸೇರಿದಂತೆ ಹಲವು ಹಿತೈಶಿಗಳು ಒಗ್ಗೂಡಿ ಅರಳಿಬಳಗ ರೂಪುಗೊಂಡಿದೆ.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

8 Responses

 1. ಮನುಷ್ಯ ಮನಸ್ಸುಗಳನ್ನು ಅರಳಿಸುತ್ತಿರುವ ‘ಅರಳಿ ಮರ’ ೧೫೦ ದಿನಗಳಲ್ಲಿ ದೊಡ್ಡ ಆಕಾರ ತಾಳಿದೆ. ಅಭಿನಂದನೆಗಳು. ಸುಂದರ ಲೇಖನಗಳ ಕೊಡುಗೆಗೆ ಧನ್ಯವಾದಗಳು.

  Like

 2. ಡಿ. ಎಸ್.ರಾಮಸ್ವಾಮಿ

  ಅರಳಿಮರ ಬಳಗದ ಪ್ರಿಯ ಗೆಳೆಯರೆ,

  ಸದ್ಯದ ಮಾಧ್ಯಮಗಳನ್ನು ಸ್ವಂತದ ತುತ್ತೂರಿಯಾಗಿ, ಯಾರಿಂದಲೋ ಫಾರ್ವರ್ಡ್ ಆದ ಬರಹವೊಂದನ್ನು ಎಗ್ಗಿಲ್ಲದೇ ತಮ್ಮದೆನ್ನುವಂತೆ ಗುಂಪಿನಲ್ಲಿ ಹಂಚುವವರಿರುವಂತೆಯೇ ಸುದ್ದಿಯನ್ನು ತಿರುಚತ್ತ, ಎಡ ಬಲದ ಅವಿವೇಕ ವಿಚಾರಗಳಲ್ಲೇ ಮುಳುಗಿ ವರ್ತಮಾನದ ರಿಕ್ತತೆಯನ್ನು ಮೀರಿದವರಂತೆ ವರ್ತಿಸುತ್ತಿರುವವರಿರುವ ದುರಿತ ಕಾಲದಲ್ಲಿ ನಿಮ್ಮ ಪ್ರಯತ್ನವು ಗಾಢಾಂದಕಾರದಲ್ಲಿ ಕಾಣುತ್ತಿರುವ ಬೆಳಕಿನ ಬುಗ್ಗೆಯಾಗಿದೆ, ವಿಚಾರದ ಕಾವಿನಲ್ಲಿ ಅಹಂಕಾರವನ್ನು ಕರಗಿಸುವ ಕುಲುಮೆಯಾಗಿಯೂ ಕಾಣುತ್ತಿದೆ.

  ಆರ್ಥಿಕ ಲಾಭವಿಲ್ಲದೇ ಉಗುರು ಮಣ್ಣನ್ನೂ ಸೋಕಿಸದ ಕಾಲದಲ್ಲಿ ಅದರಲ್ಲೂ ಅಧ್ಯಾತ್ಮವೆಂಬ ಸರಕನ್ನು ಉರಿಯ ಪೇಟೆಗಳಲ್ಲಿ ಬಿಕರಿಗೆ ತಂದಿರುವ ಸ್ವಯಂ ಘೋಷಿತ ದೇವಮಾನವರ ನಡುವೆ ನಿಮ್ಮ ಬಳಗ ಸದ್ದಿಲ್ಲದೆ ಮಾಡುತ್ತಿರುವ ಕೆಲಸಕ್ಕೆ ಕೃತಜ್ಞ ಅನ್ನುವುದಷ್ಟೇ ಈ ಹೊತ್ತು ನನ್ನಂತಹವರು ಮಾಡಬಹುದಾದ ಕೆಲಸ.

  ತತ್ವಜ್ಞಾನವನ್ನು ಧಾರ್ಮಿಕ ನೆಲೆಯಲ್ಲೇ ಅರ್ಥೈಸುವ ಭಾರತೀಯ ಪರಂಪರೆಗೆ ತತ್ವಶಾಸ್ತ್ರವೆಂಬುದು ಬೇರೆಯದೇ ಆದ ಜ್ಞಾನ ವಾಹಿನಿಯೆಂದು ನೀವು ಶೃತಪಡಿಸುತ್ತಿದ್ದೀರಿ. ಅಭಿನಂದನೆ.
  ಯುಜಿ, ಜಿಕೆ, ಆನಂದ ಕುಮಾರಸ್ವಾಮಿ, ರಮಣರೇ ಮೊದಲಾದವರ ಚಿಂತನೆಯನ್ನು ಸರಳೀಕರಿಸಿ ಸಾಮಾನ್ಯರೂ ಬದುಕಿನ ಸವಾಲನ್ನು ಸಮರ್ಥವಾಗಿ ಎದುರಿಸುವುದಕ್ಕೆ ನಿಮ್ಮೆಲ್ಲ ಅಂಕಣಗಳೂ ಸಹಕಾರಿಯಾಗಿವೆ. ವಿಮಾನದ ವೇಗದಂತೆಯೇ ಸಹಸ್ರಪದಿಗೂ ವೇಗವಿದ್ದೇ ಇರುತ್ತದೆ ಎಂಬ ತಿಳುವಳಿಕೆ ಮೂಡಿಸದರೆ ನಿಮ್ಮ ಶ್ರಮ ಸಾರ್ಥಕವಾಗುತ್ತದೆ.

  Like

 3. ಅರಲಿಮರ 150 ದಿನ ನಮಗೆ ಅತ್ಯುಪಯುಕ್ತ ಮಾಹಿತಿಯನ್ನು ಉಣಬಡಿಸಿದೆ ಇದಕ್ಕೆ ನನ್ನ ಧನ್ಯವಾದಗಳು . ಹೀಗಿಯೇ ನಿಮ್ಮ ಬರವಣಿಗೆಗಳು ಓದುಗರ ಅಭಿರುಚಿ ಇಮ್ಮಡಿಸಲಿ ಎಂದು ಆಶಿಸುತ್ತೇನೆ.

  Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.