ಮದನಪಲ್ಲಿಯ ಮಿ.ಡಂಕನ್ ಗ್ರೀನ್ ಲೀಸ್ ಬರೆದ ಪತ್ರ ಮತ್ತು ಅದಕ್ಕೆ ರಮಣ ಮಹರ್ಷಿಗಳ ಪ್ರತಿಕ್ರಿಯೆಯನ್ನು ಇಲ್ಲಿ ನೀಡಲಾಗಿದೆ…
ಡಂಕನ್ ಪತ್ರ : ಆತ್ಮನನ್ನೂ ಒಳಗೊಂಡು, ಅದರ ಆಚೆಗೂ ಪಸರಿಸುವಂತಹ ದಿವ್ಯಜ್ಯೋತಿಯು ಒಮ್ಮೊಮ್ಮೆ ಕಾಣುತ್ತದೆ. ಮನಸ್ಸಿನ ತಾತ್ತ್ವಿಕ ವಿವರಣೆಯನ್ನು ಬದಿಗಿಟ್ಟು, ಇಂತಹ ಅನುಭವವನ್ನು ಪಡೆಯಲು, ಅದನ್ನು ಉಳಿಸಿಕೊಳ್ಳಲು, ವಿಸ್ತರಿಸಲು ಮಾರ್ಗ ಯಾವುದು ಎಂಬುದನ್ನು ಮಹರ್ಷಿಗಳು ತಿಳಿಸಬಲ್ಲರೆ? ಅಂತಹ ಸಂದರ್ಭಗಳಲ್ಲಿ ಅಭ್ಯಾಸ ಎಂದರೆ ಕರ್ಮ ವಿಶ್ರಾಂತಿಯೆ? ನಿವೃತ್ತಿಯೆ?
ರಮಣ ಮಹರ್ಷಿಗಳ ಉತ್ತರ : ಈ ಒಳಗೆ – ಹೊರಗೆ ಎಂಬುದೆಲ್ಲಾ ಯಾರಿಗೆ? ವಸ್ತು – ವ್ಯಕ್ತಿ ಇರುವವರೆಗೆ ಮಾತ್ರ ಈ ಎಲ್ಲವೂ ಇರಬಲ್ಲವು. ಈ ಒಳ – ಹೊರ ಎಂಬ ಕಲ್ಪನೆಗಳಾದರೂ ಯಾರಿಗೆ? ಅವೆರಡೂ ವ್ಯಕ್ತಿಯಲ್ಲಿಯೇ ಅಡಗಿವೆ. ಆ ವ್ಯಕ್ತಿ ಯಾರೆಂದು ಹುಡುಕಿ. ಆಗ ವ್ಯಕ್ತಿಗಿಂತಲೂ ಅತೀತವಾದ ಪರಿಶುದ್ಧ ಚೈತನ್ಯದ ಅನುಭವ ಉಂಟಾಗುತ್ತದೆ.
ಮನಸ್ಸು ಸಾಮಾನ್ಯ ಆತ್ಮ. ಅದಕ್ಕೆ ತನ್ನದೇ ಪರಿಮಿತಿಗಳಿವೆ. ಆದರೆ ಪರಿಶುದ್ಧ ಚೇತನ ಇಂತಹ ಪರಿಮಿತಿಗಳನ್ನು ಮೀರಿದೆ. ಮೇಲೆ ಹೇಳಿದಂತೆ ವಿಚಾರ ಮಾಡುವುದರಿಂದ ಅದು ದೊರೆಯುತ್ತದೆ.
ಇನ್ನು, ಅದನ್ನು ಪಡೆಯುವ ವಿಷಯ; ಆತ್ಮವು ಯಾವಾಗಲೂ ಇದ್ದೇ ಇರುತ್ತದೆ. ಅದಕ್ಕಿರುವ ಆವರಣಗಳನ್ನು ಕಳಚಿಕೊಳ್ಳುವುದೇ ಸಾಧಕನ ಪ್ರಯತ್ನವಾಗಿರುತ್ತದೆ.
ಹೀಗೆ ಆತ್ಮವನ್ನು ಅರಿತಮೇಲೆ, ಅದನ್ನು ಪ್ರತ್ಯೇಕವಾಗಿ ಉಳಿಸಿಕೊಳ್ಳುವ ಪ್ರಮೇಯವೇ ಬರುವುದಿಲ್ಲ. ಅದು ನಮ್ಮ ಅರಿವಿನಲ್ಲಿ ಇದ್ದೇ ಇರುತ್ತದೆ, ಎಲ್ಲೂ ಕಳೆದುಹೋಗುವುದಿಲ್ಲ.
ವಿಸ್ತರಿಸುವ ಪ್ರಶ್ನೆ ಬಂದರೆ; ಅದು ಅಗತ್ಯವೇ ಇಲ್ಲದ ಮಾತು. ಏಕೆಂದರೆ ಆತ್ಮವು ಹಿಗ್ಗುವುದೂ ಇಲ್ಲ, ಕುಗ್ಗುವುದೂ ಇಲ್ಲ. ಇನ್ನು ವಿಸ್ತರಣೆ ಎಲ್ಲಿಂದ?
ಆತ್ಮದ ನಿವೃತ್ತಿಯ ವಿಚಾರವಾಗಿ ಹೇಳುವುದಾದರೆ, ಆತ್ಮದಲ್ಲಿ ರಮಿಸುವುದೇ ಏಕಾಂತ. ಅದಕ್ಕೆ ಯಾವುದೂ ಹೊರತಲ್ಲ. ಒಂದು ಕ್ಷೇತ್ರದಿಂದ ಮತ್ತೊಂದರಲ್ಲಿ ವಿರಮಿಸುವುದು ನಿವೃತ್ತಿಯಷ್ಟೆ? ಆದರೆ ಆತ್ಮದಿಂದ ಬೇರೆಯಾದ ಕ್ಷೇತ್ರವೇ ಇಲ್ಲವಲ್ಲ! ಆದುದರಿಂದ; ಎಲ್ಲವೂ ಆತ್ಮವಾಗಿರುವುದರಿಂದ, ನಿವೃತ್ತಿ ಅಸಾಧ್ಯವಷ್ಟೇ ಅಲ್ಲ, ಅಸಂಬದ್ಧವೂ ಕೂಡಾ.
ಆತ್ಮಪರೀಕ್ಷಣವೇ ಅಭ್ಯಾಸ.
ಸಂದರ್ಶಕರು ಹಾಗೂ ಶಿಷ್ಯರು ಕೇಳಿದ ಪ್ರಶ್ನೆಗಳಿಗೆ ರಮಣ ಮಹರ್ಷಿಗಳು ನೀಡಿದ ಉತ್ತರಗಳನ್ನು ‘ಶ್ರೀ ರಮಣ ಮಹರ್ಷಿಗಳೊಡನೆ ಮಾತುಕತೆ’ ಕೃತಿಯಲ್ಲಿ ಸಂಕಲಿಸಲಾಗಿದೆ. ಈ ಕೃತಿಯಿಂದ ಪ್ರಶ್ನೋತ್ತರಗಳನ್ನು ಆಯ್ದ, ಸರಳೀಕರಿಸಿ ಇಲ್ಲಿ ನೀಡಲಾಗಿದೆ…