ವಲಸೆಯನ್ನೇ ಅರಿಯದ ನವಾಹೋ ಜನಾಂಗ : ಸೃಷ್ಟಿ ಕಥನಗಳು

navaho“ನಮ್ಮ ಸಂಪ್ರದಾಯದಲ್ಲಿ ವಲಸೆ ಅನ್ನುವ ಅರ್ಥ ಹೊಂದಿರುವ ಯಾವ ಪದವೂ ಇಲ್ಲ. ನಮ್ಮಲ್ಲಿ ವಲಸೆ ಹೋಗುವುದು ಅಂದರೆ ಇಲ್ಲವಾಗುವುದು ಎಂದೇ ಅರ್ಥ” ~ ಇದು ನವಾಹೋಗಳ ಮಾತು. 

ಕೊಲರಾಡೋದ ಸಿಸ್ನಾಜಿನಿ (ಬ್ಲಾಂಕಾ ಶಿಖರ) ಹಾಗೂ ಡಿಬೆ ನಿಸಾ (ಹೆಸ್ಪಿರಸ್ ಶಿಖರ), ನ್ಯೂ ಮೆಕ್ಸಿಕೋದ ಸೂಡ್ಜಿ (ಮೌಂಟ್ ಟೇಲರ್ ಶಿಖರ), ಆರಿಜೋನಾದ ಡೂಕ್ ‘ಒ ಊಸ್ಲಿಡ್ (ಸ್ಯಾನ್‍ಫ್ರಾನ್ಸಿಸ್ಕೋ ಶಿಖರ) – ಈ ನಾಲ್ಕು ಬೆಟ್ಟಗಳ ನಡುವೆ ಜೀವಿಸುವ ಜನಾಂಗವೇ ನವಾಹೋ ಜನಾಂಗ. ನವಾಹೋ ಜನಗಳು ತಮ್ಮ ನೆಲವನ್ನು ಅತ್ಯಂತ ಪೂಜ್ಯ ಭಾವನೆಯಿಂದ ಕಾಣುತ್ತಾರೆ. ಸ್ವತಃ ಸೃಷ್ಟಿಕರ್ತನೇ ತಮ್ಮನ್ನು ಇಲ್ಲಿ ಇರಿಸಿರುವನೆಂದು ಅವರು ಭಾವಿಸುತ್ತಾರೆ. ಆದ್ದರಿಂದ, ಈ ನೆಲವನ್ನು ತೊರೆದು ವಲಸೆ ಹೋಗುವುದು ಅಂದರೆ ದೇವರಿಗೆ ದ್ರೋಹ ಬಗೆದಂತೆಯೇ ಎಂದವರು ಭಾವಿಸುತ್ತಾರೆ. ಯಾವ ಸನ್ನಿವೇಶದ ಅಡಿಯಲ್ಲೂ ಈ ನೆಲವನ್ನು ತೊರೆಯದಂತೆ  ಭಗವಂತನ ಆದೇಶವಿದೆ ಎಂದವರು ನಂಬಿದ್ದಾರೆ. ಅವರ ಪಾಲಿಗೆ ಭಗವಂತನಿಂದ ನಿರ್ದೇಶಿಸಲ್ಪಟ್ಟ ಭೂಭಾಗದಲ್ಲಿ ನೆಲೆಸಿರುವುದೇ ಅವರ ಧರ್ಮ.

ನವಾಹೋ ಜನಗಳಿಗೆ ತಮ್ಮ ನೆಲದ ಬಗ್ಗೆ ಅದೆಷ್ಟು ಒಲವೆಂದರೆ, ಅವರು ವಾಸಿಸುವ ಮನೆಗಳು ಕೂಡ ಅವರ ಪ್ರಾಂತ್ಯದ ಪ್ರತಿನಿಧಿಯಂತೆ ಕಟ್ಟಲ್ಪಟ್ಟಿರುತ್ತವೆ. ಸಾಂಪ್ರದಾಯಿಕ ನವಾಹೋ ಮನೆಗಳನ್ನು ‘ಹೊಗನ್’ಗಳೆಂದು ಕರೆಯಲಾಗುತ್ತದೆ. ಈ ಮನೆಯ ನಾಲ್ಕು ಸ್ತಂಭಗಳು ನಾಲ್ಕು ಪವಿತ್ರ ಬೆಟ್ಟಗಳನ್ನು ಸೂಚಿಸುತ್ತವೆ.
ಉಳಿದಂತೆ ಮನೆಯ ಕಟ್ಟೋಣಕ್ಕೆ ಮರದ ದಿಮ್ಮಿ, ತೊಗಟೆಗಳನ್ನು ಬಳಸುತ್ತಾರೆ. ಸುತ್ತ ಮಣ್ಣಿನ ಗಾರೆ ಮಾಡಿ, ಗುಮ್ಮಟದಂತಹ ಮಾಡು ಕಟ್ಟುತ್ತಾರೆ. ಈ ವಾಸ್ತು ಶೈಲಿ ಕೂಡ ಭಗವಂತನೇ ನಿರ್ದೇಶಿಸಿದ್ದು ಎಂದು ನವಾಹೋಗಳು ಹೇಳುತ್ತಾರೆ.  

ಉಗಮದ ಕಥೆ
ನವಾಹೋಗಳ ಉಗಮದ ಕಥೆಯೂ ಬಹುತೇಕ ಸೃಷ್ಟಿಕಥೆಗಳಂತೆ ಆದಿ ಪುರುಷ ಮತ್ತು ಆದಿ ಸ್ತ್ರೀ ಇಂದ ಆರಂಭವಾಗುತ್ತದೆ. ಇದರ ಪ್ರಕಾರ ಈ ಜಗತ್ತಿನಲ್ಲಿ ಆದಿ ಪುರುಷನು ನ್ಯೂ ಮೆಕ್ಸಿಕೋದ ಹ್ಯುರ್ಫಾನೊ ಬೆಟ್ಟದ ಮೇಲೆ ಕಾಣಿಸಿಕೊಂಡನು. ಅವನು ತನ್ನ ಬೆಟ್ಟದ ಸಮೀಪದಲ್ಲೇ ಒಂದು ಹೆಣ್ಣುಮಗುವನ್ನು ಕಂಡನು. ಆ ಮಗುವು ನಾಲ್ಕು ದಿನಗಳಲ್ಲಿ ಬೆಳೆದು ಹೆಂಗಸಾಯಿತು. ಈ ಹೆಂಗಸು ತನ್ನ ದೇಹದಿಂದ ನಾಲ್ವರು ಆದಿ ನವಾಹೋಗಳನ್ನು ಸೃಷ್ಟಿಸಿದಳು. ಈ ಮಕ್ಕಳು ರಾಕ್ಷಸರಿಂದ ಆವೃತವಾಗಿದ್ದ ನಾಲ್ಕು ಬೆಟ್ಟಗಳ ನಡುವಿನ ಪ್ರಾಂತ್ಯದ ರಕ್ಷಣೆಗೆ ನಿಂತರು. ರಾಕ್ಷಸರ ಮೇಲೆ ವಿಜಯ ಸಾಧಿಸಿ, ಅದನ್ನು ಶಾಂತಿ, ನೆಮ್ಮದಿಗಳ ತಾಣವನ್ನಾಗಿ ಮಾರ್ಪಡಿಸಿ, ಅಲ್ಲಿಯೇ ನೆಲೆ ನಿಂತರು. ತಾವೆಲ್ಲ ಆ ನಾಲ್ವರ ಮುಂದಿನ ಪೀಳಿಗೆಗೆಳೆಂದು ನವಾಹೋಗಳು ಹೇಳುತ್ತಾರೆ.

‘ನಾವು, ಐದು ಬೆರಳುಗಳುಳ್ಳ ಜೀವಿಗಳು ನಾಲ್ಕು ಕಾಲುಗಳುಳ್ಳ ಪ್ರಾಣಿಗಳೊಂದಿಗೆ, ರೆಕ್ಕೆ ಹೊಂದಿರುವ ಜೀವಿಗಳೊಂದಿಗೆ, ಆಧ್ಯಾತ್ಮಿಕ ಜೀವಿಗಳೊಂದಿಗೆ, ಪ್ರಕೃತಿಯೊಂದಿಗೆ ಸಂಬಂಧ ಹೊಂದಿದ್ದೇವೆ. ಭೂಮಿಯೇ ನಮಗೆ ತಾಯಿ. ಆಕಾಶವೇ ನಮಗೆ ತಂದೆ. ನಾವೆಲ್ಲರೂ ಸಂಬಂಧಿಕರು. ನಾವು ಒಬ್ಬರನ್ನೊಬ್ಬರು ಅಗಲಿರಲಾರೆವು. ಅವರನ್ನು ಹಿಂದೆ ಬಿಟ್ಟು ನಾವು ಮುಂದೆ ಸಾಗಲಾರೆವು’
ಇದು ನವಾಹೋ ಪಂಥದ ಪ್ರಾರ್ಥನೆಯ ಒಂದು ತುಣುಕು. ಈ ಪಂಥದ ಜನರು ಪ್ರಕೃತಿಯೊಂದಿಗೆ ಹೊಂದಿರುವ ಬಾಂಧವ್ಯವನ್ನು ಈ ಒಂದು ಚರಣವೇ ಸಮರ್ಥವಾಗಿ ಕಟ್ಟಿಕೊಡಬಲ್ಲದು. `ಜೀವ, ಭೂಮಿ ಮತ್ತು ಪ್ರಕೃತಿ’ ನವಾಹೋ ಪಂಥದ ಅಸ್ತಿಭಾರಗಳಿವು. ಪ್ರಪಂಚದ ಪ್ರತಿಯೊಂದೂ ಅಂತಸ್ಸಂಬಂಧ ಹೊಂದಿವೆ ಎಂದು ಸಾರುವ ಈ ಪಂಥ, ತಾನು ನೆಲೆಸಿರುವ ಭೂಪ್ರದೇಶಕ್ಕೂ ತನ್ನ ಧರ್ಮದ ಅಸ್ತಿತ್ವಕ್ಕೂ ಬಲವಾದ ನಂಟಿದೆ ಎಂದು ನಂಬಿಕೊಂಡಿದೆ. 

ಆಧುನಿಕ ನವಾಹೋ
ನವಾಹೋ ಪಂಗಡದವರಿಗಾಗಿಯೇ ಒಂದು ಪ್ರತ್ಯೇಕ ರಾಷ್ಟ್ರದ ಮಾನ್ಯತೆ ನೀಡಲಾಗಿದ್ದು, ಅದನ್ನು `ನವಾಹೋ ನೇಷನ್’ಎಂದು ಕರೆಯಲಾಗುತ್ತದೆ. ಇವರು ದಕ್ಷಿಣ ಅಮೆರಿಕಾದ ಅತಿ ದೊಡ್ಡ ಬುಡಕಟ್ಟು ಜನಾಂಗವೆಂದು ಗುರುತಿಸಲ್ಪಡುತ್ತಾರೆ. ಇವರ ಆಚಾರ ವಿಚಾರಗಳು ಹಾಗೂ ಪ್ರಕೃತಿ ಪೂಜೆಯ ಪ್ರಾಮುಖ್ಯತೆಗಳಿಂದಾಗಿ ನವಾಹೋಗಳನ್ನು `ನವಾಹೋ ಇಂಡಿಯನ್ಸ್’ ಎಂದೂ ಕರೆಯುತ್ತಾರೆ. ಅಮೆರಿಕಾದ ನಾಲ್ಕು ಮೂಲೆಗಳಲ್ಲಿ ನೆಲೆಸಿರುವ ಈ ಜನಾಂಗಕ್ಕೆ ಅವರದೇ ಆದ ಭಾಷೆ ಇದೆ. ಜೊತೆಗೆ ಈ ಜನರು ಇಂಗ್ಲೀಷನ್ನೂ ಬಲ್ಲವರಾಗಿದ್ದಾರೆ. ಜನಗಣತಿಯ ದಾಖಲೆಯಂತೆ ಪ್ರಸ್ತುತ ನವಾಹೋಗಳ ಸಂಖ್ಯೆ ಮೂರು ಲಕ್ಷದಷ್ಟಿದೆ. ಈ ಜನಾಂಗವು ಆಧುನಿಕತೆಗೆ ತೆರೆದುಕೊಂಡಿದ್ದು, ಸಾಕಷ್ಟು ಸುಶಿಕ್ಷಿತರೂ ಇವರ ನಡುವೆ ಇದ್ದಾರೆ. ಕ್ರೀಡೆ, ವೈದ್ಯಕೀಯ, ಕಲೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರೂ ಇದ್ದಾರೆ.

Leave a Reply