ಏಕನಾಥ್ ರಾವ್ ಎಂಬ ಇಂಜಿನಿಯರ್ ಮತ್ತು ರಮಣ ಮಹರ್ಷಿಗಳ ನಡುವೆ ನಡೆದ ಒಂದು ಚುಟುಕು ಸಂಭಾಷಣೆ ಇಲ್ಲಿದೆ….
ಏಕನಾಥ ರಾವ್ : ವಿಚಾರ ಮಾಡಲು ಏಕಾಂತದ ಅಗತ್ಯವಿದೆಯೇ?
ರಮಣ ಮಹರ್ಷಿ: ಎಲ್ಲೆಲ್ಲೂ ಏಕಾಂತವೇ ಇದೆ. ಮಾನವನು ಯಾವಾಗಲೂ ಏಕಾಕಿ. ಆದರೆ ಅದನ್ನು ಬಾಹ್ಯದಲ್ಲಿ ಅಲ್ಲ, ಅಂತರಂಗದಲ್ಲಿ ಹುಡುಕಿಕೊಳ್ಳಬೇಕು.
ಏ.ರಾ : ಆದರೆ ದೈನಂದಿನ ಬದುಕು ಚಂಚಲತೆಯನ್ನು ಉಂಟುಮಾಡುತ್ತದೆ….
ರ.ಮ : ಹಾಗೆ ಚಂಚಲತೆಗೆ ಈಡಾಗಬೇಡಿ. ಅಂತಹ ಚಂಚಲತೆ ಉಂಟಾಗುತ್ತಿರುವುದು ಯಾರಿಗೆ ಎಂದು ವಿಚಾರ ಮಾಡಿ. ಕೊಂಚ ಸಾಧನೆಯ ನಂತರ ಅದು ನಿಮ್ಮನ್ನು ಬಾಧಿಸುವುದು ನಿಲ್ಲುತ್ತದೆ.
ಏ.ರಾ : ಸಾಧನೆಯ ಪ್ರಯತ್ನವೂ ಅಭ್ಯಾಸವಾಗಿಬಿಟ್ಟರೆ… ಆಗೇನು ಮಾಡುವುದು?
ರ.ಮ : ಪ್ರಯತ್ನ ಮಾಡಿ ನೋಡಿ. ಅಭ್ಯಾಸವಾಗದಂತೆ ತಡೆಯುವುದು ಕಷ್ಟವೇನಲ್ಲ.
ಏ.ರಾ : ಅಂತರಂಗದ ಶೋಧನೆಗೆ ಅಗತ್ಯವಾದ ಉತ್ತರವೇ ಬರುವುದಿಲ್ಲವಲ್ಲ…
ರ.ಮ : ಸಾಧಕನೇ ಸ್ವಯಂ ಉತ್ತರ. ಬೇರೆ ಉತ್ತರ ಬರುವುದು ಎಲ್ಲಿಂದ? ಹಾಗೇನಾದರೂ ಹೊಸದಾಗಿ ಬಂದಿದ್ದೇ ಆದರೆ, ಅದು ಸತ್ಯವಾದುದಲ್ಲ ಎಂದು ತಿಳಿಯಬೇಕು. ಯಾವುದು ಸದಾ ಇದೆಯೋ ಅದೇ ಸತ್ಯ.
ಸಂದರ್ಶಕರು ಹಾಗೂ ಶಿಷ್ಯರು ಕೇಳಿದ ಪ್ರಶ್ನೆಗಳಿಗೆ ರಮಣ ಮಹರ್ಷಿಗಳು ನೀಡಿದ ಉತ್ತರಗಳನ್ನು ‘ಶ್ರೀ ರಮಣ ಮಹರ್ಷಿಗಳೊಡನೆ ಮಾತುಕತೆ’ ಕೃತಿಯಲ್ಲಿ ಸಂಕಲಿಸಲಾಗಿದೆ. ಈ ಕೃತಿಯಿಂದ ಪ್ರಶ್ನೋತ್ತರಗಳನ್ನು ಆಯ್ದ, ಸರಳೀಕರಿಸಿ ಇಲ್ಲಿ ನೀಡಲಾಗಿದೆ.