ಊರಿನ ಜನಕ್ಕೆ ಇದೇನು ವಿಚಿತ್ರ ಅಂತ ಗಾಬರಿಯಾಯಿತು. ಬೇರೆ ಸಮಯದಲ್ಲೇನೋ ಸರಿ… ಮಗ ಸತ್ತುಹೋದಾಗಲೂ ಹೀಗೆ ಆಡಬೇಕೇ? ಎಂದು ಮಾತಾಡಿಕೊಂಡರು. ಇಷ್ಟಕ್ಕೂ ಮಾಧವ ಲಾಹೋರಿ ಹಾಗೆ ನಡೆದುಕೊಂಡಿದ್ದೇಕೆ ಗೊತ್ತೆ……? ~ ಆನಂದಪೂರ್ಣ
ಮಾಧವ ಲಾಹೋರಿ ಎಂಥಾ ವಿಲಕ್ಷಣ ಮನುಷ್ಯ ಅಂದರೆ, ಅವನ ವರ್ತನೆಯನ್ನು ನೋಡಿದವರು ಒಂದು ಕ್ಷಣ ದಂಗಾಗಿಬಿಡುತ್ತಿದ್ದರು. ಅವನನ್ನು ಚೆನ್ನಾಗಿ ಬೈದುಕೊಳ್ಳುತ್ತಿದ್ದರು. ನಂತರದಲ್ಲಿ ಯಾವಾಗಲೋ ಅವರಿಗೆ ಅವನ ವರ್ತನೆಗೆ ಕಾರಣ ತಿಳಿಯುತ್ತಿತ್ತು. ಆ ಕಾರಣ ಅವರನ್ನು ಮತ್ತಷ್ಟು ದಂಗುಬಡಿಸಿ, ಮಾಧೋನ ಬಗ್ಗೆ ಬೇಸರಪಡಬೇಕೋ, ಅವನನ್ನು ಗೌರವದಿಂದ ಆದರಿಸಬೇಕೋ ತಿಳಿಯದೆ ಗಲಿಬಿಲಿಗೊಳ್ಳುತ್ತಿದ್ದರು.
ಒಮ್ಮೆ ಹೀಗಾಯ್ತು.
ಮಾಧೋನ ಒಬ್ಬನೇ ಒಬ್ಬ ಮಗ ಸಾಸಿವೆ ಹೊಲದಲ್ಲಿ ಹಾವು ಕಚ್ಚಿ ಸತ್ತುಹೋದ. ಅವನ ಹೆಂಡತಿ ಬಾಯಿಗೆ ದುಪಟ್ಟಾ ಒತ್ತಿಕೊಂಡು ಬಿಕ್ಕಿಬಿಕ್ಕಿ ಅತ್ತಳು. ಮಾಧೋ ಮಗನ ಶವದ ಎದುರು ಸ್ವಲ್ಪ ಹೊತ್ತು ಕುಳಿತ. ಮಗನ ಮುಖ ನೋಡಿದ ಕೂಡಲೇ ತನ್ನ ಮುಖ ಮುಚ್ಚಿಕೊಂಡ ಮಾಧೋ, ಕೈಗಳನ್ನು ತೆಗೆಯುವಾಗ ನಗಲು ಆರಂಭಿಸಿದ್ದ. “ಹರ್ ಬೋಲ್… ಹರ್ ಬೋಲ್…” ಅನ್ನುತ್ತಾ, ಕುಣಿಯುತ್ತಾ ಮಗನ ಕಳೇವರವನ್ನು ತಾನೇ ಎತ್ತಿಕೊಂಡು ಹೋಗಿ ದಫನ್ ಮಾಡಿಬಂದ.
ಊರಿನ ಜನಕ್ಕೆ ಇದೇನು ವಿಚಿತ್ರ ಅಂತ ಗಾಬರಿಯಾಯಿತು. ಬೇರೆ ಸಮಯದಲ್ಲೇನೋ ಸರಿ… ಮಗ ಸತ್ತುಹೋದಾಗಲೂ ಹೀಗೆ ಆಡಬೇಕೇ? ಎಂದು ಮಾತಾಡಿಕೊಂಡರು.
“ಅವನಿಗೆ ಮಗನ ಸಾವಿನಿಂದ ಆಘಾತವಾಗಿರಬೇಕು” ಯಾರೋ ಅಂದರು. “ಬಹುಶಃ ಹುಚ್ಚೇನಾದರೂ….” ಎಂದು ಪಕ್ಕದಲ್ಲಿದ್ದವ ಮೆಲ್ಲನೆ ತನ್ನ ಮಾತು ಸೇರಿಸಿದ.
ಅಲ್ಲಿಯೇ ಇದ್ದ ಗೌಸ್ಪೀರನಿಗೆ ಇದನ್ನು ಕೇಳಿ ಸಿಟ್ಟೇ ಬಂದಿತು. ಮಾಧೋ ಏನೆಂದು ತಿಳಿದಿದ್ದುದು ಅವನೊಬ್ಬನಿಗೇ ತಾನೆ?
ಅವರನ್ನೆಲ್ಲ ತಳ್ಳಿ ಗೌಸ್ಪೀರ್, ಗೆಳೆಯನ ಹೆಂಡತಿಯ ಬಳಿಗೆ ಹೋದ. “ಸಮಾಧಾನ ಮಾಡಿಕೊಳ್ಳಿ ಅತ್ತಿಗೆ… ಎಲ್ಲಾ ಅಲ್ಲಾಹನ ಮರ್ಜಿ” ಎಂದು ಸಮಾಧಾನ ಮಾಡಿದ. ಆಮೇಲೆ ಗೆಳೆಯನ ಕಡೆ ತಿರುಗಿ, “ಅತ್ತುಬಿಡು ಮಾಧೋ! ದುಃಖ ನುಂಗಬೇಡ…” ಎಂದು ಅವನ ಹೆಗಲು ಒತ್ತಿದ.
ಮಾಧವ ಲಾಹೋರಿ ಮತ್ತೂ ನಕ್ಕ. “ಅಯ್ಯೋ ಹುಚ್ಚ! ನಾನೇಕೆ ಅಳಲಿ? ನಾನೇಕೆ ದುಃಖ ನುಂಗಲಿ? ನನ್ನ ಮತ್ತು ನನ್ನ ಹೆಂಡತಿಯ ಮೂಲಕ ಭೂಮಿಗೆ ಬಂದಿದ್ದ ಜೀವವೊಂದು ತನ್ನ ನೆಲೆಗೆ ಮರಳಿದೆ. ನಾವೆಲ್ಲರೂ ಇಲ್ಲಿ ಅತಿಥಿಗಳೇ. ಕೆಲವರು ದೀರ್ಘ ಕಾಲ ಇಲ್ಲಿ ತಂಗುತ್ತಾರೆ, ಕೆಲವರು ಬೇಗ ಹೊರಟುಹೋಗುತ್ತಾರೆ” ಅಂದ.
ಗೌಸ್ಪೀರನಿಗೆ ತನ್ನ ಗೆಳೆಯ ಇಂಥದ್ದೇ ಏನಾದರೂ ಹೇಳುತ್ತಾನೆಂದು ತಿಳಿದಿತ್ತು. ಈ ವೇಳೆಗೆ ಜನರ ಗುಸುಗುಸು ಕಡಿಮೆಯಾಗಿ ನಿಶ್ಶಬ್ದ ಆವರಿಸತೊಡಗಿತ್ತು.
ಲಾಹೋರಿ ಮುಂದುವರೆಸಿದ, “ನೋಡು ಗೌಸ್ಪೀರ್! ರಾಮ್ ಲಲ್ಲಾ ಹುಟ್ಟುವ ಮೊದಲು ನಾನು ಖುಷಿಯಾಗಿಯೇ ಇದ್ದೆನಲ್ಲವೆ? ಅವನು ಈ ಮನೆಯಲ್ಲಿ ಇಲ್ಲದಾಗ ನಾನು ನನ್ನ ಪಾಡಿಗೆ ಜೀವನ ನಡೆಸಿಕೊಂಡು ಇದ್ದೆನಲ್ಲವೆ? ಈಗ ಮತ್ತೆ ಅವನಿಲ್ಲ. ಮೊದಲು ಅವನು ಇಲ್ಲದಾಗ ಖುಷಿಯಿಂದ ಇದ್ದವನು, ಈಗ ಅವನು ಇಲ್ಲವಾದನೆಂದು ದುಃಖ ಪಡುವುದೇಕೆ? ಕೆಲವು ವರ್ಷಗಳ ಕಾಲ ನಮ್ಮ ಜೊತೆಗಿದ್ದನೆಂದು, ಸವಿ ನೆನಪುಗಳನ್ನು ಕೊಟ್ಟುಹೋದನೆಂದು ಅವನನ್ನು ನೆನೆಯುವುದು ಬಿಟ್ಟು ನಾನೇಕೆ ಬೇಸರಪಡಬೇಕು? ಅವನು ಇಲ್ಲದೆ ಇದ್ದಾಗ ನಾನು ಅತ್ತಿರಲಿಲ್ಲ. ಅವನು ಹೋದನೆಂದು ನಾನೇಕೆ ಅಳಲಿ?” ಎಂದು ಪ್ರಶ್ನಿಸಿದ.
ಗೌಸ್ಪೀರನ ಕಣ್ಣಲ್ಲಿ ತಿಳಿವಿನ ಹನಿ ಜಿನುಗಿತ್ತು. ಊರಿನ ಜನಕ್ಕೆ ಮಾಧವ ಲಾಹೋರಿಯ ಮಾತು ಅರ್ಥವಾದರೂ ಅರಗಿಸಿಕೊಳ್ಳಲಾಗದೆ, ಅವನ ಬಗ್ಗೆ ಗೌರವ ಭಾವನೆ ಹೊತ್ತುಕೊಂಡು ತಮ್ಮ ತಮ್ಮ ಮನೆಗಳಿಗೆ ತೆರಳಿದರು.