ಶೂನ್ಯವು ಅನಂತ ಸಾಧ್ಯತೆಗಳ ತೊಟ್ಟಿಲು : ಅರಳಿಮರ POSTER

ಖಾಲಿಯಾಗಲು ಭಯಪಡಬೇಡಿ…. ಶೂನ್ಯವು ಅನಂತ ಸಾಧ್ಯತೆಗಳ ತೊಟ್ಟಿಲಾಗಿದೆ ~ ‘ಲಾ

4

ನಾವು ನಮ್ಮನ್ನು ಅದೆಷ್ಟು ತುಂಬಿಕೊಂಡಿದ್ದೇವೆಂದರೆ, ನಮ್ಮ ಅಸ್ತಿತ್ವ ಉಸಿರುಗಟ್ಟಿಹೋಗುವಷ್ಟು…. ಅನವಶ್ಯಕವಾದ ಅದೆಷ್ಟು ಸಂಗತಿಗಳು ನಮ್ಮನ್ನು ಉಬ್ಬಸಕ್ಕೆ ದೂಡುತ್ತಿವೆ ಎಂದು ನಾವು ಯೋಚಿಸುವ ಗೋಜಿಗೇ ಹೋಗುವುದಿಲ್ಲ! ಅದನ್ನು ಸರಿ ಮಾಡಿಕೊಳ್ಳುತ್ತಿದ್ದೇವೆ ಎಂದು ಭಾವಿಸುತ್ತಾ ಮತ್ತಷ್ಟನ್ನು ಒಳಗೆ ತುಂಬಿಕೊಳ್ಳತೊಡಗುತ್ತೇವೆ. ಇದರಿಂದ ಸಮಸ್ಯೆ ಉಲ್ಬಣಿಸುತ್ತದೆಯೇ ಹೊರತು ಪರಿಹಾರ ಸಾಧ್ಯವೇ ಆಗದು. 

ನಮ್ಮನ್ನು ನಾವು ತುಂಬಿಕೊಳ್ಳುವುದು ಸಂಪತ್ತಿನಲ್ಲಿ. ಕೀರ್ತಿಯಲ್ಲಿ.  ಸಂಬಂಧಗಳಲ್ಲಿ. ಹುದ್ದೆ, ಅಂತಸ್ತು ಇತ್ಯಾದಿ ಗುರುತುಗಳಲ್ಲಿ. ಆದರೆ ನಾವು ಯೋಚಿಸುವುದೇ ಇಲ್ಲ… ಒಂದಿಷ್ಟು ಸಂಪತ್ತು ಎಂಬ ಲೆಕ್ಕವಿಟ್ಟೊಡನೆ ನಮ್ಮ ಸಂಪತ್ತು ಅಲ್ಲಿಗೆ ಸೀಮಿತವಾಗಿಬಿಡುತ್ತದೆ. ಇಂಥದೊಂದು ಸಂಬಂಧ ಎಂದಕೂಡಲೇ ಆ ಸಂಬಂಧ್ಕೊಂದು ಪರಿಧಿ ಕಟ್ಟಿಕೊಳ್ಳುತ್ತದೆ. ಇಂಥದೊಂದು ಗುರುತು ಎಂದಾಕ್ಷಣ ನಾವು ಆ ಗುರುತೇ ಆಗಿಬಿಡುತ್ತೇವೆ. ಅದನ್ನು ಮೀರಿ ಬೆಳೆಯುವ ಆಲೋಚನೆಯನ್ನೇ ಮಾಡುವುದಿಲ್ಲ!

ಈ ಎಲ್ಲವೂ ಒಂದು ಬಿಂದುವಿನಂತೆ. ಶುರುವಾದಲ್ಲೇ ಮುಗಿದೂ ಹೋಗುವಂಥವು. ಬಿಂದುವಿಗೆ ವಿಸ್ತಾರವಿಲ್ಲ. ಅದು ಆರಂಭದೊಡನೇ ಅಂತ್ಯವಾಗುವ ಸಂಗತಿ. ಹಾಗೆಯೇ ನಮ್ಮ ಪರಿಚಯ, ಹುದ್ದೆ ಮೊದಲಾದ ತುಂಬುವಿಕೆಗಳೂ ಕೂಡ. ನಾವು ಅದನ್ನು ಮೀರುವ ಪ್ರಯತ್ನ ಮಾಡಬೇಕು. ಹಾಗಂದ ಮಾತ್ರಕ್ಕೆ ನಾವು ಅವೆಲ್ಲವನ್ನೂ ಬಿಡಬೇಕು ಎಂದಲ್ಲ, ಅವುಗಳನ್ನು ನಮ್ಮೊಳಗೆ ತುಂಬಿಕೊಳ್ಳುವುದನ್ನು ಬಿಡಬೇಕು. ಅವೆಲ್ಲವೂ ಕೇವಲ ಆವರಣವಾಗಿರಬೇಕು ಹೊರತು, ಅವುಗಳೇ ಹೂರಣವಾಗಿರಬಾರದು. ನಮ್ಮ ಅಸ್ತಿತ್ವವನ್ನು ಹಿಡಿದಿಡುವ ಪಾತ್ರೆಯಾಗಿರಬೇಕು ಅವೆಲ್ಲವೂ. ಮತ್ತು, ನಮ್ಮೊಳಗನ್ನು ನಾವು ಖಾಲಿ ಇಟ್ಟುಕೊಳ್ಳಬೇಕು. 

ಏಕೆಂದರೆ, ಯಾವುದು ಶೂನ್ಯವೋ ಅದು ಪೂರ್ಣವೂ ಆಗಿರುತ್ತದೆ. ಯಾವುದು ಪೂರ್ಣವೋ ಅದು ಅನಂತವೂ. 

Leave a Reply