ರಾಮಾಯಣ: ಭಾಗ 2 | ಸನಾತನ ಸಾಹಿತ್ಯ ~ ಮೂಲಪಾಠಗಳು #30

ನಾವು ಇಂದು ಓದುತ್ತಿರುವ ಮೂಲ ರಾಮಾಯಣವು ನೈಜ ಕಥನವನ್ನು ಆಧರಿಸಿ ಹಲವು ಹಂತಗಳಲ್ಲಿ, ಹಲವು ಕವಿಗಳಿಂದ ರಚಿಸಲ್ಪಟ್ಟ ಕೃತಿ ಎಂದು ಹೇಳಲಾಗುತ್ತದೆ. ಈ ಕೃತಿಯಲ್ಲಿ ಅಧ್ಯಾಯಗಳಲ್ಲಿ ಬಳಕೆಯಾಗಿರುವ ಸಂಸ್ಕೃತ ಪ್ರಯೋಗದಲ್ಲಿನ ವ್ಯತ್ಯಾಸ, ನಿರೂಪಣೆಯಲ್ಲಿನ ವಿಭಿನ್ನತೆಗಳು ಈ ತೀರ್ಮಾನಕ್ಕೆ ಕಾರಣವಾಗಿವೆ.

ರಾಮಾಯಣದ ಕಥೆ ವಾಲ್ಮೀಕಿಯು ಕಾವ್ಯ ರೂಪದಲ್ಲಿ ರಚಿಸುವ ಮೊದಲೇ ಜನಜನಿತವಾಗಿತ್ತೆಂದು ತೋರುತ್ತದೆ. ಇದು ಕೇವಲ ಕಲ್ಪಿತ ಕಾವ್ಯವಾಗಿರದೆ, ಐತಿಹಾಸಿಕ ಸತ್ಯ ಎಂದೂ ಹೇಳಲಾಗುತ್ತದೆ. ರಾಮಾಯಣದಲ್ಲಿ ಉಲ್ಲೇಖಗೊಂಡಿರುವ ಅಯೋಧ್ಯೆ, ಮಿಥಿಲೆ, ಚಿತ್ರಕೂಟ, ಗೋಮತಿ, ತಮಸಾನದಿ, ದಂಡಕಾರಣ್ಯ, ಕಿಷ್ಕಿಂಧೆ ಮುಂತಾದ ಸ್ಥಳಗಳು, ಕಾಡು ಕಣಿವೆ ಮತ್ತು ನದಿಗಳು ಇಂದಿಗೂ ಪ್ರಸಿದ್ಧವಾಗಿದೆ. ನಾವು ಇಂದು ಓದುತ್ತಿರುವ ಮೂಲ ರಾಮಾಯಣವು ನೈಜ ಕಥನವನ್ನು ಆಧರಿಸಿ ಹಲವು ಹಂತಗಳಲ್ಲಿ, ಹಲವು ಕವಿಗಳಿಂದ ರಚಿಸಲ್ಪಟ್ಟ ಕೃತಿ ಎಂದು ಹೇಳಲಾಗುತ್ತದೆ. ಈ ಕೃತಿಯಲ್ಲಿ ಅಧ್ಯಾಯಗಳಲ್ಲಿ ಬಳಕೆಯಾಗಿರುವ ಸಂಸ್ಕೃತ ಪ್ರಯೋಗದಲ್ಲಿನ ವ್ಯತ್ಯಾಸ, ನಿರೂಪಣೆಯಲ್ಲಿನ ವಿಭಿನ್ನತೆಗಳು ಈ ತೀರ್ಮಾನಕ್ಕೆ ಕಾರಣವಾಗಿವೆ.

ಬಹುಶಃ ಮೊದಲು ವಾಲ್ಮೀಕಿ ಕವಿಯು ಇತಿಹಾಸವನ್ನು ಆಧರಿಸಿ (ಅಥವಾ ತಾನೇ ಸಾಕ್ಷಿಯಾಗಿದ್ದು ನೋಡಿದ ಕಥನವನ್ನು ಆಧರಿಸಿ) ತನ್ನ ಕಾವ್ಯಶಕ್ತಿಯ ಸಂಪೂರ್ಣ ಸಾಮರ್ಥ್ಯವನ್ನು ಧಾರೆ ಎರೆದು ರಾಮಾಯಣವನ್ನು ರಚಿಸಿರಬೇಕು. ನಂತರದಲ್ಲಿ ಅದಕ್ಕೆ ಇನ್ನೊಬ್ಬ ಕವಿಯು ಬಾಲಕಾಂಡ ಮತ್ತು ಉತ್ತರ ಕಾಂಡಗಳನ್ನು ಜೋಡಿಸಿರಬೇಕು.

ಅದೇನೇ ಇದ್ದರೂ ರಾಮಾಯಣ ನಮ್ಮ ರಾಷ್ಟ್ರೀಯ ಮಹಾಕಾವ್ಯ. ಈ ಮನ್ನಣೆಯನ್ನು ಪಡೆದಿರುವ ಮತ್ತೊಂದು ಕೃತಿ, ಮಹಾಭಾರತ.

ರಾಮಾಯಣದ ಪಾತ್ರಗಳು, ಪ್ರದೇಶಗಳು, ಸನ್ನಿವೇಶಗಳು…. ಪ್ರತಿಯೊಂದೂ, ಕೃತಿ ರಚನೆಯ ಸಾವಿರಾರು ವರ್ಷಗಳ ನಂತರವೂ ಭಾರತದ ಜನಜೀವನದಲ್ಲಿ ಹಾಸುಹೊಕ್ಕಾಗಿದೆ. ಇತ್ತೀಚಿನವರೆಗೆ ರಾಮಾಯಣವು ಜಾತಿಭೇದಗಳಿಲ್ಲದೆ ಪ್ರತಿಯೊಬ್ಬರ ಮಾತು – ಚಿಂತನೆಗಳಲ್ಲಿ ಒಂದಲ್ಲ ಒಂದು ಬಗೆಯಲ್ಲಿ ಕಾಣಿಸಿಕೊಳ್ಳುತ್ತಿತ್ತು. ಈಗ ಪರಿಸ್ಥಿತಿ ಸ್ವಲ್ಪ ವಿಚಲಿತಗೊಂಡಿದೆಯಾದರೂ, ಜನಸಾಮಾನ್ಯರ ಅಂತರಂಗದಲ್ಲಿ ‘ರಾಮ’ ಕೊನೆಯಪಕ್ಷ ಒಂದು ಉದ್ಗಾರವಾಗಿಯಾದರೂ ನೆಲೆಸಿದ್ದಾನೆ.

ರಾಮಾಯಣದ ಕುರಿತು ಹೆಚ್ಚಿನ ವಿವರಕ್ಕೆ ಹೋಗುವ ಮುನ್ನ, ಇದೊಂದು ಏಕಶ್ಲೋಕಿ ರಾಮಾಯಣವನ್ನು ನೋಡೋಣ. ಇದನ್ನು ಮಜ್ಜಿಗೆ ರಾಮಾಯಣ ಎಂದೂ ಕರೆಯುತ್ತಾರೆ. ಹೀಗೆ ಕರೆಯಲು ಕಾರಣವೂ ಇದೆ.

ಒಮ್ಮೆ ಪಂಡಿತನೊಬ್ಬ ಮತ್ತೊಂದು ಹಳ್ಳಿಗೆ ನಡೆದುಹೋಗುತ್ತಾ ಇರುತ್ತಾನೆ. ದಾರಿಯಲ್ಲಿ ವಿಪರೀತ ಬಾಯಾರಿಕೆಯಾಗುತ್ತದೆ. ಮೊದಲು ಸಿಕ್ಕ ಮನೆಯ ಕದ ಬಡಿಯುತ್ತಾನೆ. ಪುಟ್ಟ ಹುಡುಗಿಯೊಬ್ಬಳು ಬಾಗಿಲು ತೆಗೆಯುತ್ತಾಳೆ.

‘ಆಸರೆಗೆ ಏನಾದರೂ ಕೊಡು” ಅನ್ನುತ್ತಾನೆ ಪಂಡಿತ.

ಹುಡುಗಿ ಅಡುಗೆಮನೆ ತಡಕಾಡಿ, ಒಂದು ಲೋಟ ಮಜ್ಜಿಗೆ ಹಿಡಿದು ಬರುತ್ತಾಳೆ… “ಮಜ್ಜಿಗೆ ಹೊರತಾಗಿ ನಿಮಗೆ ಕೊಡಲು ಬೇರೇನೂ ಇಲ್ಲ…. ಇದನ್ನು ಕುಡಿದು ನೀವು ನನಗೆ ರಾಮಾಯಣ ಅಥವಾ ಮಹಾಭಾರತದ ಕಥೆ ಹೇಳಬೇಕು” ಅನ್ನುತ್ತಾಳೆ.

ಪಂಡಿತ ಆಗಲೆನ್ನುತ್ತಾನೆ. ಮಜ್ಜಿಗೆ ಕುಡಿದು ಈ ಕೆಳಗಿನ ಶ್ಲೋಕ ಹೇಳುತ್ತಾನೆ :

ರಾಮತಪೋವನಾಭಿಗಮನಂ ಹತ್ವಾ ಮೃಗಂ ಕಾಂಚನಂ
ವೈದೇಹಿ ಹರಣಂ ಜಟಾಯು ಮರಣಂ ಸುಗ್ರೀವ ಸಂಭಾಷಣಂ|
ವಾಲೀ ನಿರ್ದಲನಂ ಸಮುದ್ರ ತರಣಂ ಲಂಕಾಪುರೇ ದಾಹನಂ
ಪಶ್ಚಾದ್ರಾವಣ ಕುಂಭಕರ್ಣ ಹನನಂ ಏತದ್ಧಿ ರಾಮಾಯಣಂ||

ಕನ್ನಡದಲ್ಲಿ:

ಕಾಡಿಗೆ ಹೋದ ರಾಮ, ಚಿನ್ನದ ಜಿಂಕೆಯನ್ನು ಕೊಂದ. ವೈದೇಹಿಯ ಅಪಹರಣವಾಯಿತು, ತಡೆಯಲು ಹೋದ ಜಟಾಯುವಿನ ಮರಣವಾಯಿತು. ರಾಮನಿಗೆ ಸುಗ್ರೀವ ಸಿಕ್ಕು ಮಾತುಕತೆ ನಡೆಸಲಾಯಿತು. ವಾಲಿಯ ವಧೆಯಾಯಿತು. ಸಮುದ್ರವನ್ನು ಜಿಗಿದು, ಲಂಕೆಯನ್ನು ಸುಡಲಾಯಿತು. ಆಮೇಲೆ ರಾವಣ ಕುಂಭಕರ್ಣರ ಸಂಹಾರ ನಡೆಯಿತು. – ಇದು ರಾಮಾಯಣದ ಕಥೆ.

ಒಂದು ಲೋಟ ಮಜ್ಜಿಗೆಯ ಮೌಲ್ಯಕ್ಕೆ ಸರಿದೂಗುವಂತೆ ಇಡಿಯ ರಾಮಾಯಣವನ್ನು ಒಂದೇ ಶ್ಲೋಕದಲ್ಲಿ ಹೇಳುತ್ತಾನೆ ಪಂಡಿತ. ಈ ಕಥನವನ್ನು ಆಧರಿಸಿ ಏಕಶ್ಲೋಕಿ ರಾಮಾಯಣವನ್ನು ಮಜ್ಜಿಗೆ ರಾಮಾಯಣವೆಂದು ಕರೆಯುವ ರೂಢಿ ಮೊದಲಾಯಿತು!

(ಮುಂದುವರಿಯುತ್ತದೆ….)

ಹಿಂದಿನ ಭಾಗವನ್ನು ಇಲ್ಲಿ ಓದಿ : https://aralimara.com/2018/07/24/sanatana29/

Leave a Reply