ಯಕ್ಷ ಪ್ರಶ್ನೆಗಳು ಮತ್ತು ಯುಧಿಷ್ಠಿರನ ಉತ್ತರಗಳು

ಮಹಾಭಾರತದ ಅರಣ್ಯಪರ್ವದಲ್ಲಿ ಯಕ್ಷಪ್ರಶ್ನೆಗಳ ಅಧ್ಯಾಯ ಬರುತ್ತದೆ.  ಬಕರೂಪದಲ್ಲಿದ್ದ ಯಕ್ಷನು ಕೇಳುವ ಪ್ರಶ್ನೆಗಳಿಗೆ ಯುಧಿಷ್ಠಿರನು ನೀಡಿದ ಉತ್ತರಗಳ ಸಂಗ್ರಹ ಇಲ್ಲಿದೆ…

Yudhistira_and_Yaksha
ವನವಾಸದಲ್ಲಿದ್ದ ಪಾಂಡವರು ಒಂದು ದಿನ ಕಾಡಿನಲ್ಲಿ ಅಲೆಯುತ್ತ ವಿಪರೀತ ದಣಿದರು. ಧರ್ಮರಾಯ ತನ್ನ ತಮ್ಮಂದಿರಿಗೆ ನೀರು ತರಲು ಹೇಳಿದಾಗ ಒಬ್ಬೊಬ್ಬರೇ ಹೋದರೂ, ಯಾರೂ ಮರಳಲಿಲ್ಲ. ಕಾರಣವೇನೆಂದು ತಿಳಿಯಲು ಸ್ವತಃ ಯುಧಿಷ್ಠಿರನೇ ತಮ್ಮಂದಿರನ್ನು ಹುಡುಕುತ್ತಾ ಹೊರಟನು.  ಯಕ್ಷನೊಬ್ಬನ ಒಡೆತನದಲ್ಲಿದ್ದ ಕೊಳದ ಬಳಿಯಲ್ಲಿ ನಾಲ್ವರೂ ಪಾಂಡವರು ಪ್ರಜ್ಞಾಶೂನ್ಯರಾಗಿ ಬಿದ್ದುದನ್ನು ನೋಡಿದನು. ಮತ್ತು ಯಕ್ಷನಲ್ಲಿ ವಿಚಾರಿಸಿದನು.

ಆಗ ಯಕ್ಷನು, “ಧರ್ಮರಾಯ! ನನ್ನ ಪ್ರಶ್ನೆಗಳಿಗೆ ಉತ್ತರ ಹೇಳುವವರಿಗಷ್ಟೇ ಇಲ್ಲಿ ನೀರು ಕುಡಿಯಲು ಅವಕಾಶ. ನಾನು ಎಷ್ಟು ತಡೆದರೂ ನಿನ್ನ ಈ ತಮ್ಮಂದಿರು ನನಗೆ ಉತ್ತರಿಸದೆ ನೀರನ್ನು ತೆಗೆದುಕೊಳ್ಳಲು ಮುಂದಾದರು. ಆದುದರಿಂದ ನಾನು ಅವರ ಪ್ರಾಣ ತೆಗೆಯಬೇಕಾಯಿತು. ನನ್ನ ಪ್ರಶ್ನೆಗಳಿಗೆ ಉತ್ತರಿಸಲು ನಿನ್ನಿಂದ ಸಾಧ್ಯವಾದರೆ, ಅನಂತರ ಈ ನೀರನ್ನು ಕುಡಿಯಬಹುದು!” ಎಂದು ಯಕ್ಷನು ಉತ್ತರಿಸುತ್ತಾನೆ.

ಅದಕ್ಕೆ ಉತ್ತರವಾಗಿ ಯುದಿಷ್ಠಿರನು, “ಯಕ್ಷ! ನಾನು ನಿನ್ನ ಕರಾರನ್ನು ಉಲ್ಲಂಘಿಸುವುದಿಲ್ಲ. ನಿನ್ನ ಪ್ರಶ್ನೆಗಳನ್ನು ಕೇಳು” ಎಂದು ಹೇಳಿದನು.

ಮುಂದೆ ನಡೆದ ಪ್ರಶ್ನೋತ್ತರ ಹೀಗಿದೆ:

ಯಕ್ಷ : “ಆದಿತ್ಯನನ್ನು ಉದಯಗೊಳಿಸುವುದು ಏನು? ಅವನೊಂದಿಗೆ ಸಂಚರಿಸುವವರು ಯಾರು? ಅವನನ್ನು ಮುಳುಗಿಸುವುದು ಯಾವುದು? ಮತ್ತು ಅವನು ಯಾವುದರ ಆಧಾರದ ಮೇಲಿದ್ದಾನೆ?”

ಯುಧಿಷ್ಠಿರ : “ಬ್ರಹ್ಮನು ಆದಿತ್ಯನನ್ನು ಉದಯಿಸುವಂತೆ ಮಾಡುತ್ತಾನೆ. ದೇವತೆಗಳು ಅವನ ಅಭಿಚರರು. ಧರ್ಮವು ಅವನನ್ನು ಅಸ್ತಗೊಳಿಸುತ್ತದೆ. ಮತ್ತು ಸತ್ಯದಲ್ಲಿ ಅವನು ಪ್ರತಿಷ್ಠಿತನಾಗಿದ್ದಾನೆ.”

ಯಕ್ಷ:  “ಯಾವುದರಿಂದ ಶ್ರೋತ್ರಿಯಾಗಬಹುದು? ಯಾವುದರಿಂದ ಮಹಾಗತಿಯನ್ನು ಪಡೆಯಬಹುದು? ಯಾವುದರಿಂದ ಎರಡನೆಯದನ್ನು ಪಡೆದುಕೊಳ್ಳಬಹುದು ಮತ್ತು ಯಾವುದರಿಂದ ಬುದ್ಧಿವಂತನಾಗಬಹುದು?”

ಯುಧಿಷ್ಠಿರ : “ಶೃತಿಯಿಂದ ಶ್ರೋತ್ರನಾಗಬಹುದು. ತಪಸ್ಸಿನಿಂದ ಮಹಾಗತಿಯನ್ನು ಪಡೆಯಬಹುದು. ಧೃತಿಯಿಂದ ಎರಡನೆಯನ್ನು ಪಡೆದುಕೊಳ್ಳಬಹುದು ಮತ್ತು ವೃದ್ಧರ ಸೇವೆಯಿಂದ ಬುದ್ಧಿವಂತನಾಗಬಹುದು.”

ಯಕ್ಷ: “ಕೆಳಗೆ ಬೀಳುವವುಗಳಲ್ಲಿ ಶ್ರೇಷ್ಠವಾದುದು ಏನು? ಕೆಳಗೆ ಹೋಗುವವುಗಳಲ್ಲಿ ಶ್ರೇಷ್ಠವಾದುದು ಏನು? ನಿಂತಿರುವವುಗಳಲ್ಲಿ ಶ್ರೇಷ್ಠವಾದುದು ಏನು? ಮಾತನಾಡುವವುಗಳಲ್ಲಿ ಶ್ರೇಷ್ಠವಾದುದು ಏನು?”

ಯುಧಿಷ್ಠಿರ : “ಕೆಳಗೆ ಬೀಳುವವುಗಳಲ್ಲಿ ಮಳೆಯೇ ಶ್ರೇಷ್ಠ. ಕೆಳಗೆ ಹೋಗುವವುಗಳಲ್ಲಿ ಬೀಜವೇ ಶ್ರೇಷ್ಠ. ನಿಂತಿರುವವುಗಳಲ್ಲಿ ಗೋವೇ ಶ್ರೇಷ್ಠ. ಮತ್ತು ಮಾತನಾಡುವವುಗಳಲ್ಲಿ ಪುತ್ರನೇ ಶ್ರೇಷ್ಠ.”

ಯಕ್ಷ:  “ಇಂದ್ರಿಯಗಳ ಮೂಲಕ ವಿಷಯಗಳನ್ನು ಅನುಭವಿಸುವ, ಬುದ್ಧಿವಂತನಾಗಿರುವ, ಲೋಕಪೂಜಿತನಾಗಿರುವ, ಸರ್ವಭೂತಗಳಿಂದ ಗೌರವಿಸಲ್ಪಡುವ, ಉಸಿರಾಡುತ್ತಿದ್ದರೂ ಜೀವಂತನಾಗಿರದವನು ಯಾರು?”

ಯುಧಿಷ್ಠಿರ : “ದೇವತೆಗಳು, ಅತಿಥಿಗಳು, ಭೃತ್ಯರು, ಪಿತೃಗಳು ಮತ್ತು ಆತ್ಮ – ಈ ಐವರಿಗೆ ಯಾರು ಕೊಡುವುದಿಲ್ಲವೋ ಅವನು ಉಸಿರಾಡುತ್ತಿದ್ದರೂ ಜೀವಂತನಾಗಿರುವುದಿಲ್ಲ!”

ಯಕ್ಷ : “ಭೂಮಿಗಿಂತಲೂ ಭಾರವಾದುದು ಏನು? ಆಕಾಶಕ್ಕಿಂತಲೂ ಎತ್ತರವಾದುದು ಏನು? ಗಾಳಿಗಿಂತಲೂ ವೇಗವಾದದ್ದು ಏನು? ಮನುಷ್ಯರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿರುವುದು ಏನು?”

ಯುಧಿಷ್ಠಿರ : “ತಾಯಿಯು ಭೂಮಿಗಿಂತಲೂ ಭಾರ. ತಂದೆಯು ಆಕಾಶಕ್ಕಿಂತಲೂ ಎತ್ತರ. ಮನಸ್ಸು ಗಾಳಿಗಿಂತಲೂ ಶೀಘ್ರ. ಚಿಂತೆಗಳು ಮನುಷ್ಯರ ಸಂಖ್ಯೆಗಿಂತಲೂ ಹೆಚ್ಚು!”

ಯಕ್ಷ: “ಯಾವುದು ಮಲಗಿರುವಾಗಲೂ ಕಣ್ಣುಮುಚ್ಚಿರುವುದಿಲ್ಲ? ಯಾವುದು ಹುಟ್ಟಿದರೂ ಚಲಿಸುವುದಿಲ್ಲ? ಯಾವುದಕ್ಕೆ ಹೃದಯವಿಲ್ಲ? ವೇಗದಲ್ಲಿರುವಾಗ ಯಾವುದು ಬೆಳೆಯುತ್ತದೆ?”

ಯುಧಿಷ್ಠಿರ : “ಮೀನು ಮಲಗಿದ್ದರೂ ಕಣ್ಣು ಮುಚ್ಚಿರುವುದಿಲ್ಲ. ಮೊಟ್ಟೆಯು ಹುಟ್ಟಿದರೂ ಚಲಿಸುವುದಿಲ್ಲ. ಕಲ್ಲಿಗೆ ಹೃದಯವಿಲ್ಲ. ನದಿಯು ವೇಗದಲ್ಲಿರುವಾಗ ಬೆಳೆಯುತ್ತದೆ.”

ಯಕ್ಷ : “ಪ್ರಯಾಣದಲ್ಲಿ ಮಿತ್ರನು ಯಾರು? ಮನೆಯಲ್ಲಿ ಮಿತ್ರನು ಯಾರು? ರೋಗಿಯ ಮಿತ್ರನು ಯಾರು? ಮೃತನಾದವನ ಮಿತ್ರನು ಯಾರು?”

ಯುಧಿಷ್ಠಿರ : “ಜೊತೆಗೆ ಪ್ರಯಾಣಿಸುವವರು ಪ್ರಯಾಣದಲ್ಲಿ ಮಿತ್ರರು. ಮನೆಯಲ್ಲಿ ಪತ್ನಿಯು ಮಿತ್ರೆಯು. ರೋಗಿಗೆ ವೈದ್ಯನು ಮಿತ್ರ. ಮರಣಹೊಂದಿದವನಿಗೆ ದಾನವು ಮಿತ್ರ.”

ಯಕ್ಷ:  “ಒಂಟಿಯಾಗಿ ಸಂಚರಿಸುವುದು ಯಾವುದು? ಯಾವುದು ಹುಟ್ಟಿ ಪುನಃ ಹುಟ್ಟುತ್ತದೆ? ಹಿಮಕ್ಕೆ ಚಿಕಿತ್ಸೆಯು ಯಾವುದು? ಅತಿ ದೊಡ್ಡ ಜಾಗವು ಯಾವುದು?”

ಯುಧಿಷ್ಠಿರ : “ಸೂರ್ಯನು ಒಂಟಿಯಾಗಿ ಸಂಚರಿಸುತ್ತಾನೆ. ಚಂದ್ರನು ಪುನಃ ಹುಟ್ಟುತ್ತಾನೆ. ಅಗ್ನಿಯು ಹಿಮದ ಚಿಕಿತ್ಸೆ. ಭೂಮಿಯೇ ಅತಿ ದೊಡ್ಡ ಜಾಗ.”

ಯಕ್ಷ : “ಧರ್ಮದ ಒಂದು ಪದವು ಯಾವುದು? ಯಶಸ್ಸಿನ ಒಂದು ಪದವು ಯಾವುದು? ಸ್ವರ್ಗದ ಒಂದು ಪದವು ಯಾವುದು? ಸುಖದ ಒಂದು ಪದವು ಯಾವುದು?”

ಯುಧಿಷ್ಠಿರ : “ದಕ್ಷತೆಯು ಧರ್ಮದ ಒಂದು ಪದ. ದಾನವು ಯಶಸ್ಸಿನ ಒಂದು ಪದ. ಸತ್ಯವು ಸ್ವರ್ಗದ ಒಂದು ಪದ. ಶೀಲವು ಸುಖದ ಒಂದು ಪದ.”

ಯಕ್ಷ : “ಮನುಷ್ಯನ ಆತ್ಮವು ಯಾವುದು? ಅವನ ದೈವಕೃತ ಸಖನ್ಯಾರು? ಅವನ ಉಪಜೀವನವು ಯಾವುದು? ಅವನ ಪರಾಯಣವು ಯಾವುದು?”

ಯುಧಿಷ್ಠಿರ : “ಪುತ್ರನೇ ಮನುಷ್ಯನ ಆತ್ಮ. ಭಾರ್ಯೆಯೇ ಅವನ ದೈವಕೃತ ಸಖಿ. ಪರ್ಜನ್ಯವು ಅವನ ಉಪಜೀವನ ಮತ್ತು ದಾನವೇ ಅವನ ಪರಾಯಣ.”

ಯಕ್ಷ : “ಧನಿಗಳಿಗೆ ಉತ್ತಮವಾದುದು ಏನು? ಸಂಪತ್ತುಗಳಲ್ಲಿ ಯಾವುದು ಉತ್ತಮ? ಲಾಭಗಳಲ್ಲಿ ಉತ್ತಮವಾದುದು ಏನು? ಸುಖಗಳಲ್ಲಿ ಉತ್ತಮವಾದುದು ಏನು?”

ಯುಧಿಷ್ಠಿರ : “ದಕ್ಷತೆಯು ಧನಿಗಳಿಗೆ ಉತ್ತಮ. ಸಂಪತ್ತುಗಳಲ್ಲಿ ಧನವು ಉತ್ತಮ. ಲಾಭಗಳಲ್ಲಿ ಉತ್ತಮವಾದುದು ಆರೋಗ್ಯ. ಸುಖಗಳಲ್ಲಿ ತೃಪ್ತಿಯೇ ಉತ್ತಮವಾದುದು.”

ಯಕ್ಷ : “ಲೋಕದಲ್ಲಿ ಪರಮ ಧರ್ಮವು ಯಾವುದು? ಸದಾ ಫಲವನ್ನು ನೀಡುವ ಧರ್ಮವು ಯಾವುದು? ನಿಯಂತ್ರಣದಲ್ಲಿದ್ದ ಯಾವುದು ಶೋಕಿಸುವುದಿಲ್ಲ? ಯಾರೊಡಗಿನ ಸಂಬಂಧವು ದುರ್ಬಲವಾಗುವುದಿಲ್ಲ?”

ಯುಧಿಷ್ಠಿರ : “ಕ್ರೂರನಾಗಿಲ್ಲದಿರುವುದೇ ಲೋಕದಲ್ಲಿ ಪರಮ ಧರ್ಮ. ತ್ರಯೀ ಧರ್ಮವು ಸದಾ ಫಲವನ್ನು ನೀಡುತ್ತದೆ. ನಿಯಂತ್ರಣದಲ್ಲಿದ್ದ ಮನಸ್ಸು ಶೋಕಿಸುವುದಿಲ್ಲ. ಸಜ್ಜನರೊಡಗಿನ ಸಂಬಂಧವು ದುರ್ಬಲವಾಗುವುದಿಲ್ಲ.”

ಯಕ್ಷ : “ಯಾವುದನ್ನು ತೊರೆದು ಪ್ರೀತಿಪಾತ್ರನಾಗಬಲ್ಲದು? ಯಾವುದನ್ನು ತೊರೆದರೆ ಶೋಕವುಂಟಾಗುವುದಿಲ್ಲ? ಯಾವುದನ್ನು ತೊರೆದು ಧನವಂತನಾಗಬಹುದು? ಯಾವುದನ್ನು ತೊರೆದು ಸುಖಿಯಾಗಬಹುದು?”

ಯುಧಿಷ್ಠಿರ : “ಅಭಿಮಾನವನ್ನು ತೊರೆದರೆ ಪ್ರೀತಿಪಾತ್ರನಾಗಬಹುದು. ಸಿಟ್ಟನ್ನು ತೊರೆದರೆ ಶೋಕವುಂಟಾಗುವುದಿಲ್ಲ. ಆಸೆಗಳನ್ನು ತೊರೆದು ಧನವಂತನಾಗಬಹುದು. ಲೋಭವನ್ನು ತೊರೆದು ಸುಖಿಯಾಗಬಹುದು.”

ಯಕ್ಷ : “ಪುರುಷನು ಹೇಗೆ ಸಾಯುತ್ತಾನೆ? ರಾಷ್ಟ್ರವು ಹೇಗೆ ನಾಶವಾತ್ತದೆ? ಶ್ರಾದ್ಧವು ಹೇಗೆ ನಿಷ್ಫಲವಾಗುತ್ತದೆ? ಯಜ್ಞವು ಹೇಗೆ ನಾಶವಾಗುತ್ತದೆ?”

ಯುಧಿಷ್ಠಿರ : “ಬಡತನದಲ್ಲಿ ಪುರುಷನು ಸಾಯುತ್ತಾನೆ. ರಾಜನಿಲ್ಲದೇ ರಾಷ್ಟ್ರವು ನಾಶವಾಗುತ್ತದೆ. ಶ್ರೋತ್ರಿಯಿಲ್ಲದ ಶ್ರಾದ್ಧವು ನಿಷ್ಫಲವಾಗುತ್ತದೆ. ದಕ್ಷಿಣೆಯಿಲ್ಲದ ಯಜ್ಞವು ನಾಶವಾಗುತ್ತದೆ.”

ಯಕ್ಷ: “ಸಂತರ ದಿಕ್ಕು ಯಾವುದು? ಯಾವುದಕ್ಕೆ ನೀರೆಂದು ಹೇಳುತ್ತಾರೆ? ಯಾವುದು ಅನ್ನ? ಯಾವುದು ವಿಷ? ಶ್ರಾದ್ಧದ ಕಾಲವು ಯಾವುದು? ಇವುಗಳಿಗೆ ಉತ್ತರಿಸಿದ ನಂತರ ನೀರನ್ನು ತೆಗೆದುಕೊಂಡು ಕುಡಿ!”

ಯುಧಿಷ್ಠಿರ : “ಆಕಾಶವೇ ಸಂತರ ದಿಕ್ಕು. ಆಕಾಶವೇ ನೀರು. ಗೋವೇ ಅನ್ನ. ಬೇಡುವುದೇ ವಿಷ. ಬ್ರಾಹ್ಮಣನೇ ಶ್ರಾದ್ಧದ ಕಾಲ.” 

ಯಕ್ಷ: “ಯುಧಿಷ್ಠಿರ! ನೀನು ನನ್ನ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದ್ದೀಯೆ! ಈಗ ಹೇಳು. ಪುರುಷನು ಯಾರು ಮತ್ತು ಯಾವ ನರನು ಸರ್ವ ಸಂಪತ್ತನ್ನೂ ಹೊಂದಿದ್ದಾನೆ?”

ಯುಧಿಷ್ಠಿರ : “ಆಕಾಶ-ಭೂಮಿಗಳನ್ನು ಮುಟ್ಟುವ ಪ್ರಸಿದ್ದ ಪುಣ್ಯಕರ್ಮಿಯು ಎಲ್ಲಿಯವರೆಗೆ ಪ್ರಸಿದ್ಧನಾಗಿಯೇ ಇರುತ್ತಾನೋ ಅಲ್ಲಿಯವರೆಗೆ ಅವನನ್ನು ಪುರುಷ ಎಂದು ಕರೆಯುತ್ತಾರೆ! ಪ್ರಿಯ-ಅಪ್ರಿಯಗಳು, ಸುಖ-ದುಃಖಗಳು ಮತ್ತು ಭೂತ-ಭವಿಷ್ಯಗಳನ್ನು ಸಮನಾಗಿ ಕಾಣುವ ನರನೇ ಸರ್ವಧನಿಕ!”

ಯಕ್ಷ: “ರಾಜನ್! ಪುರುಷ ಮತ್ತು ಸರ್ವಧನೀ ನರರನ್ನು ಸರಿಯಾಗಿ ವ್ಯಾಖ್ಯಾಯಿಸಿದ್ದೀಯೆ! ಆದುದರಿಂದ ನಿನ್ನ ತಮ್ಮಂದಿರಲ್ಲಿ ನೀನು ಬಯಸಿದ ಒಬ್ಬನು ಜೀವಿಸುತ್ತಾನೆ!”

ಯುಧಿಷ್ಠಿರ : “ಯಕ್ಷ! ಕೆಂಪುಗಣ್ಣಿನ, ಕಪ್ಪುಬಣ್ಣದ, ಶಾಲವೃಕ್ಷದಂತೆ ಎತ್ತರವಾಗಿ ಬೆಳೆದಿರುವ, ವಿಶಾಲ ಎದೆಯ, ಮಹಾಬಾಹು ನಕುಲನು ಜೀವಿಸಲಿ!”

ಯಕ್ಷ: “ರಾಜನ್! ನಿನಗೆ ಪ್ರಿಯನಾದವನು ಭೀಮಸೇನ. ಅರ್ಜುನನ ಮೇಲೆ ನೀನು ಅವಲಂಬಿಸಿರುವೆ. ಹೀಗಿರುವಾಗ ಏಕೆ ನಿನ್ನ ದಾಯಾದಿ ನಕುಲನು ಜೀವಿತನಾಗಲು ಬಯಸುತ್ತೀಯೆ? ಹತ್ತುಸಾವಿರ ಆನೆಗಳ ಬಲಗಳುಳ್ಳ ಭೀಮನನ್ನು ಬಿಟ್ಟು ನಕುಲನೇ ಜೀವಿತನಾಗಬೇಕೆಂದು ಏಕೆ ಬಯಸುತ್ತೀಯೆ? ಭೀಮಸೇನನೇ ನಿನಗೆ ಪ್ರಿಯನಾದವನೆಂದು ಜನರು ಹೇಳುತ್ತಾರೆ. ಹೀಗಿರುವಾಗ ಯಾವ ಭಾವನೆಯಿಂದ ನೀನು ನಿನ್ನ ಮಲತಾಯಿಯ ಮಗ ಈ ನಕುಲನು ಜೀವಿತನಾಗಬೇಕೆಂದು ಬಯಸುತ್ತೀಯೆ? ಯಾರ ಬಾಹುಬಲವನ್ನು ಸರ್ವ ಪಾಂಡವರೂ ಆಶ್ರಯಿಸಿರುವರೋ ಆ ಅರ್ಜುನನನ್ನು ಬಿಟ್ಟು ನಕುಲನೇ ಜೀವಿತನಾಗಬೇಕೆಂದು ಏಕೆ ಬಯಸುತ್ತೀಯೆ?”

ಯುಧಿಷ್ಠಿರನು ಹೇಳಿದನು: “ಕ್ರೂರಿಯಾಗದೇ ಇರುವುದು ಪರಮ ಧರ್ಮ. ಇದರ ಪರಮ ಅರ್ಥವು ನನಗೆ ತಿಳಿದಿದೆ. ನಾನು ಕ್ರೂರನಾಗಬಯಸುವುದಿಲ್ಲ. ಆದುದರಿಂದ ನಕುಲನು ಬದುಕಲಿ. ನನ್ನನ್ನು ಧರ್ಮಶೀಲ ರಾಜನೆಂದು ಜನರು ಸದಾ ತಿಳಿದುಕೊಂಡಿದ್ದಾರೆ. ಸ್ವಧರ್ಮದಿಂದ ನಾನು ವಿಚಲಿತನಾಗುವುದಿಲ್ಲ. ಆದುದರಿಂದ ನಕುಲನು ಬದುಕಲಿ. ಕುಂತಿಯಂತೆ ನನಗೆ ಮಾದ್ರಿಯೂ ಕೂಡ. ಅವರಿಬ್ಬರ ನಡುವೆ ನನಗೆ ಭೇದವಿಲ್ಲ. ಇಬ್ಬರು ತಾಯಂದಿರೂ ಸಮನಾಗಿರಬಯಸುತ್ತೇನೆ. ಆದುದರಿಂದ ನಕುಲನು ಜೀವಿಸಲಿ!”

ಈ ಉತ್ತರದಿಂದ ಸಂತುಷ್ಟನಾದ ಯಕ್ಷನು, “ಭರತರ್ಷಭ! ಅರ್ಥ-ಕಾಮಗಳಿಗಿಂತ ಅಕ್ರೂರತೆಯು ಪರಮ ಧರ್ಮವೆಂದು ನೀನು ತಿಳಿದಿದ್ದೀಯೆ. ಆದುದರಿಂದ ನಿನ್ನ ಎಲ್ಲ ತಮ್ಮಂದಿರೂ ಬದುಕಲಿ!” ಎಂದು ಹರಸಿ ಎಲ್ಲರನ್ನೂ ಜೀವಂತಗೊಳಿಸಿದನು.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.