ಕೊಡುವುದರ ಬಗ್ಗೆ : ಖಲೀಲ್ ಗಿಬ್ರಾನನ ‘ಪ್ರವಾದಿ’ ~ ಅಧ್ಯಾಯ 5

ದ ಪ್ರಾಫೆಟ್’ ಕೃತಿಯು ಜಗತ್ತಿನ ಬಹುತೇಕ ಭಾಷೆಗಳಿಗೆ ಅನುವಾದಗೊಂಡಿದ್ದು, ಕನ್ನಡದಕ್ಕೂ ಬಂದಿವೆ. ‘ಅರಳಿಬಳಗ’ದ ಕವಿ ಚಿದಂಬರ ನರೇಂದ್ರ ಮತ್ತೊಮ್ಮೆ ಇದರ ಅನುಭಾವವನ್ನು ಅನುವಾದದ ಮೂಲಕ ಹರಿಸುವ ಪ್ರಯತ್ನ ಮಾಡಿದ್ದಾರೆ. 

ಮೇಲೆ,
ಕೊಡುವುದರ ಬಗ್ಗೆ ತನ್ನ ಕೆಲವು ಪ್ರಶ್ನೆಗಳನ್ನು ಕೇಳಿದ ಶ್ರೀಮಂತ ವರ್ತಕನೊಬ್ಬನಿಗೆ
ಉತ್ತರಿಸತೊಡಗಿದ ;

ಎಷ್ಟು ಕೊಟ್ಟರೂ ಕಡಿಮೆಯೇ
ಕೂಡಿಸಿ ಇಟ್ಟುಕೊಂಡಿರುವುದನ್ನ.

ಕೊಟ್ಟಂತೆ ನಿಜವಾಗಿ ನೀನು,
ಕೊಟ್ಟಾಗಲೇ
ಖುದ್ದು, ನಿನ್ನನ್ನ.

ಆಸ್ತಿ, ನಾಳೆಗೆ ಬೇಕೆಂಬ ಭಯ.

ಮತ್ತು ನಾಳೆ…
ಏನು ಕೊಟ್ಟಿದೆ ಈ ನಾಳೆ,
ಮರಳಲ್ಲಿ ಮೂಳೆಗಳ ಮುಚ್ಚಿಟ್ಟು
ತೀರ್ಥಯಾತ್ರಿಗಳ ಬೆನ್ನುಹತ್ತಿದ
ಅತಿ ಎಚ್ಚರದ ಜಾಗರೂಕ ನಾಯಿಗೆ?

ಬೇಕು ಎನ್ನುವುದೇ ಭಯವಾಗಿರುವಾಗ
ಬೇರೆ ಯಾವ ಭಯದ ಭಯ ಬಯಕೆಗೆ?

ತುಂಬಿ ತುಳುಕುತ್ತಿರುವ
ಬಾವಿಯ ಮುಂದೆ ಕುಳಿತಿದ್ದರೂ
ಬಾಯಾರಿಕೆ,
ಭಯದಿಂದ ನಡುಗುತ್ತಿದ್ದರೆ
ಅದು ಇಂಗದ ಬಾಯಾರಿಕೆ.

ಕೆಲವರಿದ್ದಾರೆ
ಸಾಗರವಿದ್ದರೂ, ಬೊಗಸೆ ಕೊಡುತ್ತಾರೆ
ಪ್ರತಿಷ್ಠೆಗಾಗಿ ಹಂಬಲಿಸುತ್ತಾರೆ
ಈ ಹಳಹಳಿಕೆ
ಕೊಳಕಾಗಿಸಿದೆ ಅವರ ಕೊಡುಗೆಗಳನ್ನ.

ಇದ್ದ ಒಂದೇ ಬಿಂದಿಗೆಯನ್ನೂ
ಕೊಟ್ಟುಬಿಡುತ್ತಾರೆ ಕೆಲವರು

ಇವರಿಗೆ
ಬದುಕಿನ ಮೇಲೆ ನಂಬಿಕೆ
ಬದುಕಿನ ಅಪಾರದ ಮೇಲೆ ವಿಶ್ವಾಸ.
ಇವರ ಖಜಾನೆ ಖಾಲಿ ಆಗಿರುವುದನ್ನ
ನೋಡಿದವರೇ ಇಲ್ಲ.

ಖುಶಿಯಿಂದ ಕೊಡುವವರನನ್ನು
ಖುಶಿ ಬೆನ್ನುಹತ್ತಿದರೆ

ಸಂಕಟದಿಂದ ಕೊಡುವವರನ್ನ
ಶುದ್ಧಿ ಮಾಡುತ್ತದೆ ಸಂಕಟ.

ಇನ್ನೂ ಕೆಲವರಿದ್ದಾರೆ
ಅವರು ಕೊಡುವಾಗ ಸಂತೋಷವನ್ನು ಹುಡುಕುವುದಿಲ್ಲ
ಸಂಕಟವನ್ನು ಹಿಂಬಾಲಿಸುವುದಿಲ್ಲ
ಧರ್ಮ, ಮೋಕ್ಷಗಳ ಬೆನ್ನು ಬೀಳುವುದಿಲ್ಲ.

ಅವರಿಗೆ ಕೊಡುವುದೆಂದರೆ
ಕಣ್ಣಳತೆಯ ಕಣಿವೆಯಲ್ಲಿ
ಪನ್ನೀರಿನ ಹೂ
ಪರಿಮಳವ ಉಸಿರಾಡಿದಂತೆ

ಇಂಥವರ ಮೂಲಕವೇ
ಭಗವಂತನ ಮಾತು.
ಇವರ ಕಣ್ಣುಗಳ ಮೂಲಕವೇ
ಜಗತ್ತಿನ ಸಮಸ್ತದ ಮೇಲೆ
ಅಂತಃಕರಣ.

ಕೇಳಿದಾಗ ಕೊಡುವುದೇನೋ
ಒಳ್ಳೆಯದೇ
ಆದರೆ ಕಂಡಾಗ ಕೊಡುವುದು, ಶ್ರೇಷ್ಠ ;

ಕೊಡುಗೈಗೆ ಕೊಡುವುದಕ್ಕಿಂತ
ಪಡೆಯುವ ಕೈಗಳನ್ನು ಹುಡುಕುವುದೇ
ಒಂದು ಖುಶಿಯ ವಿಷಯ.

ಕೊಡದೇ ತಡೆ ಹಿಡಿಯುವುದು
ಇದೆಯೇ ಏನಾದರೂ ?

ಕೊಡಲೇಬೇಕಲ್ಲ ಎಲ್ಲ
ಒಮ್ಮಿಲ್ಲ ಒಮ್ಮೆ.

ಕೂಡಲೇ ಸಿದ್ಧರಾಗಿ
ಆ ಅದೃಷ್ಟದ ಘಳಿಗೆ ಕೇವಲ ನಿಮ್ಮದಾಗಲಿ
ನಿಮ್ಮ ವಾರಸುದಾರರದಲ್ಲ.

“ ಅರ್ಹರಿಗೆ ಮಾತ್ರ ಕೊಡುತ್ತೇನೆ “
ಈ ಮಾತನ್ನ ಕೇಳಿದ್ದೇನೆ ಆಗಾಗ.

ನಿಮ್ಮ ತೋಟದ ಗಿಡ, ಮರಗಳು
ನಿಮ್ಮ ಕೊಟ್ಟಿಗೆಯ ದನಕರುಗಳು
ಹೀಗೆ ಮಾತಾಡುವುದನ್ನು
ಕೇಳಿರುವಿರಾ ಎಂದಾದರೂ?

ಕೂಡುತ್ತಿರುವುದರಿಂದಲೇ ಅಲ್ಲವೆ
ಬದುಕಿಕೊಂಡಿವೆ ಎಲ್ಲ,
ತಡೆ ಹಾಕಿದ್ದರೆ
ಸತ್ತು ಹೋಗಿಬಿಡುತ್ತಿದ್ದವು ಎಂದೋ.

ತನಗಾಗಿ ಮೀಸಲಾಗಿರುವ
ದಿನಗಳನ್ನೂ, ರಾತ್ರಿಗಳನ್ನೂ ಸ್ವೀಕರಿಸಲು
ಅರ್ಹನಾಗಿದ್ದಾನೆಂದರೆ
ನಿನ್ನಿಂದ ಬೇರೆಲ್ಲ ಪಡೆದು ಧರಿಸಲೂ ಕೂಡ
ಅವನು ಅರ್ಹ.

ಬದುಕಿನ ಸಮುದ್ರಕ್ಕೆ ನಾಲಿಗೆ ಚಾಚಲು
ಅರ್ಹನಾಗಿದ್ದಾನೆಂದರೆ
ನಿನ್ನ ಸಣ್ಣ ಝರಿಯಿಂದ
ತನ್ನ ಬಟ್ಟಲು ತುಂಬಿಸಿಕೊಳ್ಳಲೂ
ಅವನು ಯೋಗ್ಯ.

ಸ್ವೀಕರಿಸುವ ಧೈರ್ಯ ಮತ್ತು ವಿಶ್ವಾಸ
ಅಲ್ಲ ಅಲ್ಲ
ಸ್ವೀಕರಿಸುವ ಔದಾರ್ಯಕ್ಕಿಂತ
ಮಿಗಿಲಾದ
ಇನ್ನೊಂದು ಯೋಗ್ಯತೆ ಇದೆಯೆ?

ಜನ, ತಮ್ಮ ಎದೆ ಬಿಚ್ಚಿ ,
ದೀನರಾಗಿ
ಬೆತ್ತಲೆಯಾಗಿ, ನಿರ್ಲಜ್ಜೆಯಿಂದ
ತಮ್ಮ ಯೋಗ್ಯತೆಯನ್ನು
ನಿನ್ನ ಮುಂದೆ ಸಾಬೀತುಮಾಡಲು
ನೀನು ಯಾರು?

ಕೊಡುವುದಕ್ಕೆ ಅಥವಾ
ಕೊಡುವ ಸಾಧನವಾಗುವುದಕ್ಕೆ
ನಾನು ಎಷ್ಟು ಅರ್ಹ ?
ಮೊದಲು ಕೇಳಿಕೊಳ್ಳಬೇಕಾದ ಪ್ರಶ್ನೆ.

ನಿಜದಲ್ಲಿ ಇದು
ಎರಡು ಬದುಕುಗಳ ನಡುವಿನ
ಕೊಡು ಕೊಳ್ಳುವಿಕೆ.
ನೀನು ಕೇವಲ ಸಾಕ್ಷಿ ಮಾತ್ರ.

ಮತ್ತು ನೀವು,
ಸ್ವೀಕರಿಸುವವರು,
ನೀವೆಲ್ಲರೂ ಸ್ವೀಕರಿಸುವವರೇ ;

ಕೃತಜ್ಞತೆಯ ಭಾರ ಹೊರದಿರಿ.
ಅಕಸ್ಮಾತ್ ಧರಿಸಿದ್ದೇ ಆದಲ್ಲಿ
ನೀವು ನರಳುವುದಷ್ಟೇ ಅಲ್ಲ
ಕೊಟ್ಟವರನ್ನೂ ನೋವಿಗೆ ನೂಕುವಿರಿ.

ಬದಲಾಗಿ
ರೆಕ್ಕೆಗಳನ್ನು ಪಡೆದ ಹಕ್ಕಿಯಂತೆ
ಕೊಟ್ಟವರನ್ನೂಡಗೂಡಿ ಮೇಲಕ್ಕೆ ಏರಿ.

ಋಣದ ಬಗ್ಗೆ
ಅತಿಯಾಗಿ ಚಿಂತಿಸುವುದೆಂದರೆ
ವಿಶಾಲ ಹೃದಯಿ ಭೂಮಿಯನ್ನು
ತಾಯಿಯಾಗಿ
ಅಪಾರ ಕರುಣೆಯ ಭಗವಂತನನ್ನು
ತಂದೆಯಾಗಿ ಪಡೆದವರನ್ನು
ಅನುಮಾನದಿಂದ ನೋಡಿದಂತೆ.

ಮುಂದುವರೆಯುತ್ತದೆ……….

gibranಲೇಖಕರ ಕುರಿತು: ಖಲೀಲ್ ಗಿಬ್ರಾನ್ ತನ್ನ ಅಲೌಕಿಕ ಕೃತಿ “ಪ್ರವಾದಿ” ಯನ್ನು (THE PROPHET) ಮೊದಲು ರಚಿಸಿದ್ದು ಅರೇಬಿಕ್ ಭಾಷೆಯಲ್ಲಿ; ತನ್ನ ಇಪ್ಪತ್ತರ ಹರೆಯದಲ್ಲಿ! ಆಮೇಲೆ ಇಂಗ್ಲೀಷ್ ಭಾಷೆಗೆ ಅದನ್ನು ತರ್ಜುಮೆ ಮಾಡಿದ್ದೂ ಅವನೇ. ಅಮೇರಿಕೆಯ ಉದ್ದಗಲಕ್ಕೂ “ಪುಟ್ಟ ಕಪ್ಪು ಪುಸ್ತಕ” “ಪುಟ್ಟ ಬೈಬಲ್” ಎಂದು ಈ ಪುಸ್ತಕ ಖ್ಯಾತಿ ಪಡೆಯಿತು. ಈ ಖ್ಯಾತಿಗೆ ತಲೆ ಕೊಡದ ಗಿಬ್ರಾನ್, “ನಾನು ಪ್ರವಾದಿ ಕೃತಿಯನ್ನು ಬರೆಯುತ್ತಿದ್ದಂತೆ, ಪ್ರವಾದಿ ಕೃತಿ ನನ್ನನ್ನು ಬರೆಯಿತು” ಎಂದುಬಿಟ್ಟಿದ್ದ.  

ChiNa

ಅನುವಾದಕರ ಕುರಿತು: ಚಿದಂಬರ ನರೇಂದ್ರಮೂಲತಃ ಧಾರವಾಡದವರು, ವೃತ್ತಿಯಿಂದ ಮೆಕಾನಿಕಲ್ ಇಂಜಿನಿಯರ್, ಕಂಪನಿಯೊಂದರಲ್ಲಿ ಡಿಸೈನ್ ವಿಭಾಗದ ಮುಖ್ಯಸ್ಥ.  ಸಿನೇಮಾ, ಸಾಹಿತ್ಯ ಹವ್ಯಾಸಗಳು. ಕವಿ ಮತ್ತು ಅನುವಾದಕ. ಝೆನ್ ಕಥೆ, ಸೂಫಿ ಕಾವ್ಯ, ಗುಲ್ಜಾರ್ ಕವಿತೆಗಳ ಅನುವಾದಗಳಿಂದ ಜನಪ್ರಿಯರು.

Leave a Reply