ಕೃಷ್ಣ ದ್ವೈಪಾಯನ ವ್ಯಾಸರಿಂದ ರಚಿಸಲ್ಪಟ್ಟ ಮಹಾಭಾರತ ಮಹತ್ಕೃತಿಯು ಭಾರತೀಯ / ಸನಾತನ ಸಾಹಿತ್ಯದಲ್ಲೇ ವಿಶಿಷ್ಟ ಸ್ಥಾನಮಾನವನ್ನು ಹೊಂದಿದೆ. ಈ ಕೃತಿಯ ಕೆಲವು ಪ್ರಾಥಮಿಕ ಮಾಹಿತಿ ಇಲ್ಲಿದೆ…
ಐದನೆಯ ವೇದ ಎಂದೇ ಕರೆಸಿಕೊಳ್ಳುವ ಮಹಾಭಾರತವು ಮೂಲತಃ ‘ಜಯ’ ಎಂಬ ಹೆಸರಿನಲ್ಲಿ ವ್ಯಾಸ ಮಹರ್ಷಿಯಿಂದ ರಚಿಸಲ್ಪಟ್ಟ ಮಹತ್ ಕೃತಿ. ನಾಲ್ಕು ಪುರುಷಾರ್ಥಗಳಾದ ಅರ್ಥ, ಕಾಮ, ಧರ್ಮ ಮತ್ತು ಮೋಕ್ಷ ಸಾಧನೆಯ ಬಗ್ಗೆ ತಿಳಿಸುವುದೇ ಈ ಕೃತಿಯ ಮುಖ್ಯ ಉದ್ದೇಶವೆಂದು ರಚನೆಕಾರರು ಒಂದೆಡೆ ಹೇಳಿಕೊಂಡಿದ್ದಾರೆ.
ಕುರುವಂಶದ ಒಳಗಿನ ಘಟನೆಗಳನ್ನು ಕೇಂದ್ರವಾಗಿಟ್ಟುಕೊಂಡು ಅನ್ಯಾಯದ ವಿರುದ್ಧ ನ್ಯಾಯದ ಹೋರಾಟ ಈ ಕೃತಿಯ ಮುಖ್ಯ ವಸ್ತು. ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಶ್ಲೋಕಗಳನ್ನು ಹೊಂದಿರುವ ಮಹಾಭಾರತ, ಹದಿನೆಂಟು ಪರ್ವಗಳಲ್ಲಿ ನಿರೂಪಣೆಗೊಂಡಿದೆ.
ಮಹಾಭಾರತದ 18 ಪರ್ವಗಳು ಹೀಗಿವೆ :
1. ಆದಿಪರ್ವ: ಪರಿಚಯ, ವಿಶ್ವಸೃಷ್ಟಿಯ ವಿವರ, ಹಿನ್ನೆಲೆ, ಪಾಂಡವ ಮತ್ತು ಕೌರವರ ಜನನ ಹಾಗೂ ಬೆಳವಣಿಗೆ
2. ಸಭಾಪರ್ವ: ಆಸ್ಥಾನದ ಜೀವನ, ಪಗಡೆಯಾಟ, ಇಂದ್ರಪ್ರಸ್ಥ, ಪಾಂಡವರ ವನವಾಸ ಆರಂಭ
3. ಅರಣ್ಯಕಪರ್ವ: ಹನ್ನೆರಡು ವರ್ಷದ ವನವಾಸ
4. ವಿರಾಟಪರ್ವ: ವಿರಾಟನ ಆಸ್ಥಾನದಲ್ಲಿ ಒಂದು ವರ್ಷದ ಅಜ್ಞಾತವಾಸ
5. ಉದ್ಯೋಗಪರ್ವ: ಯುದ್ಧದ ತಯಾರಿ
6. ಭೀಷ್ಮಪರ್ವ: ಯುದ್ಧ ಆರಂಭ, ಭೀಷ್ಮ ಕೌರವರ ಸೇನಾನಿ – ಶ್ರೀ ಕೃಷ್ಣನಿಂದ ಭಗವದ್ಗೀತೆ ಉಪದೇಶ
7. ದ್ರೋಣಪರ್ವ: ಯುದ್ಧದ ಮುಂದುವರಿಕೆ, ದ್ರೋಣರ ಸೇನಾಧಿಪತ್ಯದಲ್ಲಿ
8. ಕರ್ಣ ಪರ್ವ: ದ್ರೋಣರ ಮರಣಾನಂತರ, ಕರ್ಣನ ನೇತೃತ್ವದಲ್ಲಿ ಯುದ್ಧದ ಮುಂದುವರಿಕೆ
9. ಶಲ್ಯಪರ್ವ: ಶಲ್ಯನ ಸೇನಾಧಿಪತ್ಯ
10. ಸೌಪ್ತಿಕಪರ್ವ: ಅಶ್ವತ್ಥಾಮ ಪಾಂಡವರ ಮಕ್ಕಳನ್ನು ಕೊಲ್ಲುವುದು
11. ಸ್ತ್ರೀಪರ್ವ: ಗಾಂಧಾರಿಯ ವಿಲಾಪ
12. ಶಾಂತಿಪರ್ವ: ಯುಧಿಷ್ಠಿರನ ಪಟ್ಟಾಭಿಷೇಕ, ಭೀಷ್ಮನಿಂದ ಸಲಹೆ
13. ಅನುಶಾಸನಪರ್ವ: ಭೀಷ್ಮನ ಕೊನೆಯ ಮಾತುಗಳು
14. ಅಶ್ವಮೇಧಿಕಪರ್ವ: ಯುಧಿಷ್ಠಿರನಿಂದ ಅಶ್ವಮೇಧಯಾಗ/ಯಜ್ಞ
15. ಆಶ್ರಮವಾಸಿಕಪರ್ವ: ಧೃತರಾಷ್ಟ್ರ, ಗಾಂಧಾರಿ, ಕುಂತಿಯರ ಆಶ್ರಮವಾಸ, ಕೊನೆಗೆ ಮರಣ
16. ಮೌಸಲಪರ್ವ: ಯಾದವರಲ್ಲಿ ಕಲಹ
17. ಮಹಾಪ್ರಸ್ತಾನಿಕಪರ್ವ: ಪಾಂಡವರ ಮರಣ – ಮೊದಲ ಭಾಗ
18. ಸ್ವರ್ಗಾರೋಹಣಪರ್ವ: ಪಾಂಡವರ ಸ್ವರ್ಗಾರೋಹಣ
ಸನಾತನ ಧರ್ಮದ ಪ್ರಮುಖ ಆಧ್ಯಾತ್ಮಿಕ – ತಾತ್ತ್ವಿಕ ಪಠ್ಯವಾದ ಭಗವದ್ಗೀತೆಯು ಭೀಷ್ಮಪರ್ವದಲ್ಲಿ ಬರುತ್ತದೆ.
ಅನುಶಾಸನ ಪರ್ವದಲ್ಲಿ, ವಿಷ್ಣುವನ್ನು ಸಾವಿರ ಹೆಸರುಗಳಿಂದ ಸ್ತುತಿಸುವ ವಿಷ್ಣು ಸಹಸ್ರನಾಮವಿದೆ.
ಅರಣ್ಯಪರ್ವದಲ್ಲಿ ರಾಮಾಯಣದ ಕಥೆಯೂ ಸಂಕ್ಷಿಪ್ತವಾಗಿ ಬರುತ್ತದೆ.
ಇವಲ್ಲದೆ, ಸುಪ್ರಸಿದ್ಧ ನಳ ದಮಯಂತಿಯರ ಕಥೆ, ದುಷ್ಯಂತ ಶಕುಂತಲೆಯರ ಕಥೆಗಳೂ ಮಹಾಭಾರತದಲ್ಲಿ ಬರುತ್ತವೆ.
ಕೃಷ್ಣನ ಕಥೆಯು ಮಹಾಭಾರತದಲ್ಲಿ ವಿಸ್ತಾರವಾಗಿ ಹೇಳಲ್ಪಟ್ಟಿಲ್ಲ. ಅದು ಭಾಗವತ ಮಹಾಪುರಾಣದಲ್ಲಿ ವಿವರವಾಗಿ ನಿರೂಪಣೆಗೊಂಡಿದೆ.