ನರಕಕ್ಕೆ ಹೋದ ಹಕ್ಸ್ಲೆ ಮತ್ತು ಡಾರ್ವಿನ್ ಮಾಡಿದ್ದೇನು ಗೊತ್ತಾ!?

ಇಂಗ್ಲೆಂಡಿನಲ್ಲಿ ಒಬ್ಬ ಪಾದ್ರಿ ಇದ್ದನು. ಅವನು ಯಾವಾಗಲೂ ಪಾಪ, ಪುಣ್ಯ; ಸ್ವರ್ಗ, ನರಕಗಳ ಬಗ್ಗೆಯೇ ಚಿಂತಿಸುತ್ತಿದ್ದನು. ಹೀಗಿರುತ್ತ, ಒಮ್ಮೆ ಅವನಿಗೆ ಮಹಾನ್ ವಿಜ್ಞಾನಿಗಳಾದ ಹಕ್ಸ್ಲೆ ಮತ್ತು ಡಾರ್ವಿನ್ ಸತ್ತ ಮೇಲೆ ನರಕಕ್ಕೆ ಹೋಗಿರುತ್ತಾರೋ ಸ್ವರ್ಗಕ್ಕೆ ಹೋಗಿರುತ್ತಾರೋ ಅನ್ನುವ ಜಿಜ್ಞಾಸೆ ಉಂಟಾಯಿತು.

“ಹಕ್ಸ್ಲೆಯಾಗಲೀ, ಡಾರ್ವಿನ್ ಆಗಲೀ ಆಸ್ತಿಕರಾಗಿರಲಿಲ್ಲ. ಬೈಬಲ್ ಅನ್ನೂ ಕ್ರಿಸ್ತನನ್ನೂ ನಂಬುತ್ತಿರಲಿಲ್ಲ. ಆದ್ದರಿಂದ ಅವರು ನರಕಕ್ಕೇ ಹೋಗಿರಬೇಕು” ಎಂದು ಒಂದು ಸಲ ಅನ್ನಿಸಿದರೆ, ಮರುಕ್ಷಣ “ಛೆಛೆ… ಅವರಿಬ್ಬರೂ ನಾಸ್ತಿಕರಾಗಿದ್ದರೂ ಯಾವ ಅಪರಾಧವನ್ನೂ ಮಾಡಿದವರಲ್ಲ. ಜನೋಪಯೋಗಿಯಾಗಿ ಬಾಳಿದವರು. ಹಾಗಾದರೆ ಸ್ವರ್ಗಕ್ಕೇ ಹೋಗಿದ್ದಾರು” ಅನ್ನಿಸುವುದು.

ಹೀಗೆ ಯೋಚಿಸುತ್ತಾ ಯೋಚಿಸುತ್ತಾ ಪಾದ್ರಿ ಮಲಗಿ ನಿದ್ದೆಹೋದನು. ಕನಸಿನಲ್ಲಿ ಅವನ ಯೋಚನೆ ಮುಂದುವರೆಯಿತು. ಕನಸಿನಲ್ಲಿ ಪಾದ್ರಿಯೂ ಸತ್ತು ಸ್ವರ್ಗಕ್ಕೆ ಹೋದನು. ಅಲ್ಲಿ ಅವನಿಗೆ ತಾನು ಆವರೆಗೆ ಬಲ್ಲ ಶ್ರೇಷ್ಠಾತಿಶ್ರೇಷ್ಠ ಜನರೆಲ್ಲರ ದರ್ಶನವಾಯ್ತು. ನಿರಂತರವಾಗಿ ಚರ್ಚ್’ಗೆ ಭೇಟಿ ಕೊಡುತ್ತಿದ್ದ ಜನಸಾಮಾನ್ಯರನ್ನೂ ಅಲ್ಲಿ ಕಂಡನು. ಆದರೆ ಹಕ್ಸ್ಲೆ ಮತ್ತು ಡಾರ್ವಿನ್ನರ ಪತ್ತೆಯೇ ಇಲ್ಲ!

ಪಾದ್ರಿ ಸ್ವರ್ಗದ ವ್ಯವಸ್ಥಾಪಕರ ಬಳಿ ತೆರಳಿ ಅವರಿಬ್ಬರಿಗಾಗಿ ವಿಚಾರಿಸಿದನು. ಅವರು ಕಡತ ತೆರೆದು ನೋಡಿ, ಅವರಿಬ್ಬರನ್ನೂ ಅತ್ಯಂತ ಕೆಳ ಹಂತದ ನರಕಕ್ಕೆ ಹಾಕಲಾಗಿದೆ ಎಂದು ಉತ್ತರಿಸಿದರು. ಅದನ್ನು ಕೇಳಿದ ಪಾದ್ರಿಗೆ ಸ್ವಲ್ಪ ಬೇಸರವೇ ಆಯಿತು. “ಅವರು ತೀರ ಕೆಟ್ಟವರೇನಲ್ಲ. ನಾನು ಅವರ ಬಳಿ ಮಾತನಾಡಿ ಧಾರ್ಮಿಕ ಪ್ರವೃತ್ತಿಯ ಕಡೆಗೆ ಮನವೊಲಿಸುವೆ. ಒಂದಷ್ಟು ಬೋಧನೆ ಮಾಡಿ ಅವರ ಪಾಪಗಳನ್ನು ಕಳೆಯುವೆ. ಅವರಿದ್ದಲ್ಲಿಗೆ ಹೋಗಲು ಏರ್ಪಾಟು ಮಾಡಬಹುದೆ?” ಎಂದು ಕೇಳಿದ.

ವ್ಯವಸ್ಥಾಪಕರು ಈ ವಿಚಿತ್ರ ಬೇಡಿಕೆಯನ್ನು ತಮ್ಮೊಳಗೆ ಚರ್ಚಿಸಿ, ಕೊನೆಗೂ ಪಾದ್ರಿಯನ್ನು ನರಕಕ್ಕೆ ಕಳುಹಿಸಲು ರೈಲಿನ ವ್ಯವಸ್ಥೆ ಮಾಡಿದರು. ಹಕ್ಸ್ಲೆ ಮತ್ತು ಡಾರ್ವಿನ್ ಇದ್ದ ನರಕ ಅತ್ಯಂತ ಹೀನಾಯವಾದದ್ದು. ಎಲ್ಲ ನರಕಗಳಿಗಿಂತ ಕೆಳಗಿತ್ತು. ಪಾದ್ರಿ ದಾರಿಯುದ್ದಕ್ಕೂ ಇತರ ನರಕಗಳನ್ನು ಹಾದು ಹೋಗಬೇಕಿತ್ತು. ಒಂದಕ್ಕಿಂತ ಒಂದು ಅಸಹ್ಯ, ಅಸಹನೀಯ, ಅಮಾನುಷ ದೃಶ್ಯಗಳನ್ನು ಹೊತ್ತಿದ್ದ ನರಕಗಳು ಅವು. ಮೊದಲನೆಯದಕ್ಕಿಂತ ಎರಡನೆಯದು ಘೋರ. ಎರಡನೆಯದಕ್ಕಿಂತ ಮೂರನೆಯದು, ಅದಕ್ಕಿಂತ ನಾಲ್ಕನೆಯದು…

ಹೀಗೆ ಎಲ್ಲವನ್ನೂ ಹಾದು ರೈಲು ಕೊನೆಯ, ಕೆಳ ಹಂತದ ನರಕದಲ್ಲಿ ನಿಂತಿತು. ನಿರ್ವಾಹಕನು ನರಕಗಳ ದರ್ಶನದಿಂದ ದುಃಖಿತನೂ ಮೂರ್ಛಿತನೂ ಆಗಿದ್ದ ಪಾದ್ರಿಯ ಮೈಮುಟ್ಟಿ ಎಬ್ಬಿಸಿದ. “ಎಲ್ಲಕ್ಕಿಂತ ಘೋರವಾದ ಕೊನೆಯ ನರಕ ಬಂದಿತು. ಇಳಿಯಿರಿ” ಎಂದ.

ಪಾದ್ರಿಯ ಮೈನಡುಗಿತು. ದಾರಿಯುದ್ದಕ್ಕೂ ನೋಡಿದ ಸಾಮಾನ್ಯ ನರಕಗಳೇ ಅಷ್ಟು ಭೀಕರವಿದ್ದಾಗ, ಈ ಕೊನೆಯ – ಘೋರ ನರಕ ಹೇಗಿದ್ದೀತು ಎಂದು ಹಿಂಜರಿಯುತ್ತಲೇ ಕಣ್ಮುಚ್ಚಿ ಕೆಳಗಿದ. ಅವನನ್ನು ತಂದಿದ್ದ ರೈಲು ಹೊರಟುಹೋಯಿತು. ಪಾದ್ರಿ  ಮೆಲ್ಲನೆ ಕಣ್ತೆರೆದ. ಅಚ್ಚರಿಯಾಯ್ತು. ಕಣ್ಣುಗಳನ್ನು ಉಜ್ಜಿಕೊಂಡು ಮತ್ತೊಮ್ಮೆ ಸುತ್ತಲೂ ನೋಡಿದ. ಮತ್ತಷ್ಟು ಅಚ್ಚರಿಯಾಯ್ತು. ತಾನು ಮೂರ್ಛೆಯಲ್ಲೇ ಇರಬೇಕು ಮತ್ತಿದು ಕನಸಿರಬೇಕು ಎಂದುಕೊಂಡು ತನ್ನನ್ನು ತಾನು ಚಿವುಟಿಕೊಂಡ. ಅವನು ಎಚ್ಚರದಲ್ಲೇ ಇರುವುದು ಖಾತ್ರಿಯಾಯಿತು. ಆ ಕೊನೆಯ ನರಕ, ಯಾವುದು ಅತಿ ಘೋರವೆಂದು ಹೇಳಲಾಗಿತ್ತೋ ಆ ನರಕ ಸ್ವರ್ಗಕ್ಕೆ ಪೈಪೋಟಿ ಒಡ್ಡುವಷ್ಟು ಸುಂದರವಾಗಿತ್ತು.

ಇದೇನು ಸೋಜಿಗವೆಂದು ಅವನು ಮುಂದೆ ನಡೆಯತೊಡಗಿದ. ಪರಿಚಿತರಂತೆ ಕಾಣುವ ಇಬ್ಬರು ವ್ಯಕ್ತಿಗಳು ಎದುರಾದರು. ಅರೆ! ಹಕ್ಸ್ಲೆ ಮತ್ತು ಡಾರ್ವಿನ್! ಪಾದ್ರಿಗೆ ಕುಣಿದು ಕುಪ್ಪಳಿಸುವಷ್ಟು ಖುಷಿಯಾಯ್ತು. ಅವರ ಬಳಿ ಧಾವಿಸಿ “ಇದು ಅಧಮಾಧಮ ನರಕವೇ ಹೌದು ತಾನೆ?” ಎಂದು ಕೇಳಿದ. ಅವರಿಬ್ಬರೂ ಹೌದೆಂದು ತಲೆಯಾಡಿಸಿದರು.

“ಮತ್ತಿದು ಇಷ್ಟು ಸುಂದರವಾಗಿ ಇರುವುದು ಹೇಗೆ? ಎಲ್ಲ ಸೌಕರ್ಯಗಳೂ ಇಲ್ಲಿವೆಯಲ್ಲ! ನಾನು ನಿಮಗೆ ಧರ್ಮೋಪದೇಶ ಕೊಟ್ಟು ಪಾಪಮುಕ್ತರನ್ನಾಗಿಸಲು ಇಲ್ಲಿಗೆ ಬಂದೆ. ಆದರೆ ನೀವು ಯಾವ ಸ್ವರ್ಗಕ್ಕೂ ಕಡಿಮೆ ಇಲ್ಲದಂತೆ ಇದ್ದೀರಿ” ಎಂದು ಚಕಿತಗೊಂಡನು.

ಅದಕ್ಕೆ ಉತ್ತರವಾಗಿ ಹಕ್ಸ್ಲೆ ಮತ್ತು ಡಾರ್ವಿನ್ ಸರದಿಯಲ್ಲಿ ಉತ್ತರಿಸಿದರು. “ನಮ್ಮನ್ನು ಇಲ್ಲಿ ಹಾಕಿದಾಗ ಕೊಳೆತು ನಾರುವ ಗುಂಡಿಗಳೂ, ಕಾದ ಕಬ್ಬಿಣದ ರಸದ ಕೊಳಗಳೂ ಇದ್ದವು. ಕಾಯಿಸುತ್ತಿರುವ ಕಬ್ಬಿಣದ ಶಲಾಕೆಗಳನ್ನು ಹಿಡಿಯುವ ಶಿಕ್ಷೆ ಅನುಭವಿಸುತ್ತಿದ್ದವರನ್ನೂ ನಾವು ನೋಡಿದ್ದೆವು. ಮೊದಲು ನಮ್ಮನ್ನು ದುರ್ವಾಸನೆಯ ಗುಂಡಿಯಲ್ಲಿ ಹಾಕಲಾಯ್ತು. ಆಗ ನಾವು ಗುಂಡಿಯ ನೀರನ್ನು ಕಬ್ಬಿಣದ ಶಲಾಕೆಗಳ ಮೇಲೆ ಎರಚುತ್ತಿದ್ದೆವು. ನಮ್ಮನ್ನು ಅವುಗಳ ಬಳಿ ಕರೆದೊಯ್ದು ಹಿಡಿಯಲು ಹೇಳುವ ವೇಳೆಗೆ ಆ ಶಲಾಕೆಗಳು ಸಾಕಷ್ಟು ಶಾಖ ಕಳೆದುಕೊಂಡಿದ್ದವು. ಅವನ್ನು ಬೇಕಾದಂತೆ ಕಾಯಿಸಿ ಯಂತ್ರಗಳನ್ನು ಮಾಡಿದೆವು. ಮತ್ತು ಶಲಾಕೆಗಳನ್ನು ಬಳಸಿ ನೆಲವನ್ನು ಅಗೆದು ಗುಂಡಿಯಿಂದ ಗೊಬ್ಬರ ತಂದು ಹಾಕಿದೆವು. ಗಿಡಗಳನ್ನು ನೆಟ್ಟೆವು. ಹೀಗೆ ಶಿಕ್ಷಿಸಲೆಂದು ಇಟ್ಟಿದ್ದ ಪರಿಕರಗಳನ್ನೆಲ್ಲ ಬಳಸಿ, ಶ್ರಮಪಟ್ಟು ಕೆಲಸ ಮಾಡಿದೆವು. ಈ ನರಕವೇ ಸ್ವರ್ಗವಾಗಿ ಬದಲಾಯಿತು”

ಪಾದ್ರಿ ಅಚ್ಚರಿಯಿಂದ ಮೂಕವಾಗಿ ನಿಂತಿದ್ದಾಗ ಅವನ ಹಿಂದೆ ಸ್ವರ್ಗಕ್ಕೆ ಮರಳುವ ರೈಲು ಸದ್ದು ಮಾಡುತ್ತಾ ಹೊರಟುಹೋಯಿತು.

(ಸ್ವಾಮಿ ರಾಮತೀರ್ಥರು ಹೇಳಿದ ದೃಷ್ಟಾಂತ ಕಥೆ)

Leave a Reply