ತಿನ್ನುವುದು ಮತ್ತು ಕುಡಿಯುವುದು : ಖಲೀಲ್ ಗಿಬ್ರಾನನ ‘ಪ್ರವಾದಿ’ ~ ಅಧ್ಯಾಯ 6

ದ ಪ್ರಾಫೆಟ್’ ಕೃತಿಯು ಜಗತ್ತಿನ ಬಹುತೇಕ ಭಾಷೆಗಳಿಗೆ ಅನುವಾದಗೊಂಡಿದ್ದು, ಕನ್ನಡದಕ್ಕೂ ಬಂದಿವೆ. ‘ಅರಳಿಬಳಗ’ದ ಕವಿ ಚಿದಂಬರ ನರೇಂದ್ರ ಮತ್ತೊಮ್ಮೆ ಇದರ ಅನುಭಾವವನ್ನು ಅನುವಾದದ ಮೂಲಕ ಹರಿಸುವ ಪ್ರಯತ್ನ ಮಾಡಿದ್ದಾರೆ.

prophet

ಸತಿಗೃಹದ ವೃದ್ಧ ಮಾಲಿಕನೊಬ್ಬ
ತಿನ್ನುವುದು ಮತ್ತು ಕುಡಿಯುವುದರ ವಿಷಯವಾಗಿ
ಕೇಳಿದ ಪ್ರಶ್ನೆಗಳಿಗೆ
ಉತ್ತರ ಕೊಡತೊಡಗಿದ.

ಬೆಳಕನ್ನು ಹೀರುತ್ತ
ಜೀವಂತವಾಗಿ ಇದ್ದುಬಿಡಬಲ್ಲ
ಗಾಳಿಯ ಗಿಡದಂತೆ
ದಿನಗಳನ್ನು ಕಳೆದು ಬಿಡಬಹುದೆ ನೀವು,
ಭೂಮಿಯ ಗಂಧವನ್ನು
ಉಸಿರಿಗೆ ಕಟ್ಚಿಕೊಂಡು?

ತಿನ್ನಲು ಕೊಲ್ಲಲೇಬೇಕಾಗಿರುವುದು,
ಬಾಯಾರಿಕೆ ಆರಿಸಿಕೊಳ್ಳಲು
ಈಗ ತಾನೇ ಹುಟ್ಟಿರುವ ಕರುವಿನ ತುಟಿಯಿಂದ
ತಾಯಿಯ ಹಾಲನ್ನು ಕದಿಯಲೇಬೇಕಾಗಿರುವುದು ನಿಶ್ಚಿತವಾದಲ್ಲಿ
ಪೂಜೆಯಂತೆ ವಿನಮ್ರರಾಗಿ.

ಅರಣ್ಯ ಪ್ರದೇಶದ, ಬಯಲು ಸೀಮೆಯ
ಮುಗ್ಧರು, ಅಪ್ಪಟ ದೇಸಿಗರು
ಮನುಷ್ಯನ ಅತ್ಯಂತ ಪವಿತ್ರ ಮತ್ತು ಅಪಾರ ಮುಗ್ಧತೆಗೆ
ಆಹಾರವಾಗಲೇ ಬೇಕಾದರೆ
ನಿಮ್ಮ ತಟ್ಟೆ ಯಜ್ಞಕುಂಡದಂತಿರಲಿ,
ಇದೊಂದು ಅಪರಿಮಿತ ತ್ಯಾಗದ ಕಥೆ ಎನ್ನುವುದು
ನೆನಪಿನಲ್ಲಿರಲಿ.

ಒಂದು ಜೀವವನ್ನು ಕೊಂದಾಗ
ಮನಸ್ಸಿನಲ್ಲಿ ಹೇಳಿಕೊಳ್ಳಿ :

“ನಿನ್ನ ಪ್ರಾಣ ತೆಗೆದ ಚೂರಿಯೇ,
ನನ್ನನ್ನೂ ಕತ್ತರಿಸುತ್ತದೆ ;
ನಾನು ಕೂಡ ಆಹಾರವಾಗುತ್ತೇನೆ.

ನಿನ್ನನ್ನು ನನಗೊಪ್ಪಿಸಿದ ವಿಧಿಯೇ
ನನ್ನನ್ನು ಇನ್ನೂ ಹರಿತ ದವಡೆಗಳಿಗೆ ನೂಕುತ್ತದೆ.

ನನ್ನ ರಕ್ತ, ನಿನ್ನ ನೆತ್ತರು
ಭಗವಂತ ನೆಟ್ಟ ದಿವ್ಯ ವೃಕ್ಷದ ಬೇರುಗಳಿಗೆ
ಜೀವ ರಸಗಳಲ್ಲದೇ ಬೇರೇನೂ ಅಲ್ಲ.

ಹಣ್ಣನ್ನು ನಿನ್ನ ಹಲ್ಲುಗಳಿಂದ ಕಚ್ಚಿದಾಗ
ಮನಸ್ಸಿನಲ್ಲಿ ಆ ಹಣ್ಣಿಗೆ ಹೇಳು :

“ನಿನ್ನ ಬೀಜಗಳು ನನ್ನ ದೇಹದಲ್ಲಿ ಜೀವಂತವಾಗಿವೆ.

ನಿನ್ನ ನಾಳೆಯ ಮೊಗ್ಗು
ನನ್ನ ಎದೆಯಲ್ಲಿ ನಿರಾಂತಕವಾಗಿ ಅರಳಲಿದೆ.

ನಿನ್ನ ಪರಿಮಳ ನನ್ನ ಉಸಿರಾಗಲಿದೆ.

ಎಲ್ಲ ಋತುಗಳನ್ನು
ನಾವಿಬ್ಬರೂ ಕೂಡಿಯೇ ಸಂಭ್ರಮಿಸೋಣ.”

ಶರತ್ಕಾಲದಲ್ಲಿ ನಿಮ್ಮ ತೋಟದ
ದ್ರಾಕ್ಷಿಗಳನ್ನು ರಸ ತೆಗೆಯಲು ಗಿರಣಿಗೆ ಹಾಕುವಾಗ
ಮನಸ್ಸಿನಲ್ಲಿ ಅವುಗಳಿಗೆ ಹೇಳಿ :

“ನಾನೂ ಕೂಡ ದ್ರಾಕ್ಷಿಯ ತೋಟವೇ
ನನ್ನ ಹಣ್ಣುಗಳನ್ನೂ ಕೂಡ ಹಿಂಡಿ ರಸ ತೆಗೆಯುತ್ತಾರೆ.

ಹೊಸ ದ್ರಾಕ್ಷಾರಸವನ್ನು ಜೋಪಾನದಿಂದ ಕಾಯ್ದಿಡುವಂತೆ
ನನ್ನನ್ನು ಕೂಡ ಶಾಶ್ವತದ ಭಾಂಡಗಳಲ್ಲಿ ತುಂಬಿಡುತ್ತಾರೆ”

ಚಳಿಗಾಲದಲ್ಲಿ ವೈನ್ ಬಗ್ಗಿಸಿಕೊಳ್ಳುವಾಗ
ಒಂದೊಂದು ಬಟ್ಟಲಿಗೂ
ನಿಮ್ಮ ಎದೆಯಲ್ಲಿ ಒಂದೊಂದು ಹಾಡಿರಲಿ.

ಪ್ರತಿ ಹಾಡಿನಲ್ಲೂ
ಶರತ್ಕಾಲದ ಬಗ್ಗೆ,
ದ್ರಾಕ್ಷಿಯ ತೋಟದ ನೆನಪಿನ ಸಲುವಾಗಿ,
ಮತ್ತು, ಹಿಂಡುವ ಚಕ್ರದ ಸ್ಮರಣೆಗಾಗಿ
ಕೊನೆಯ ಪಕ್ಷ ಒಂದೊಂದು ಸಾಲು ಮೀಸಲಾಗಿರಲಿ.

ಮುಂದುವರೆಯುತ್ತದೆ……….

gibran

ಲೇಖಕರ ಕುರಿತು: ಖಲೀಲ್ ಗಿಬ್ರಾನ್ ತನ್ನ ಅಲೌಕಿಕ ಕೃತಿ “ಪ್ರವಾದಿ” ಯನ್ನು (THE PROPHET) ಮೊದಲು ರಚಿಸಿದ್ದು ಅರೇಬಿಕ್ ಭಾಷೆಯಲ್ಲಿ; ತನ್ನ ಇಪ್ಪತ್ತರ ಹರೆಯದಲ್ಲಿ! ಆಮೇಲೆ ಇಂಗ್ಲೀಷ್ ಭಾಷೆಗೆ ಅದನ್ನು ತರ್ಜುಮೆ ಮಾಡಿದ್ದೂ ಅವನೇ. ಅಮೇರಿಕೆಯ ಉದ್ದಗಲಕ್ಕೂ “ಪುಟ್ಟ ಕಪ್ಪು ಪುಸ್ತಕ” “ಪುಟ್ಟ ಬೈಬಲ್” ಎಂದು ಈ ಪುಸ್ತಕ ಖ್ಯಾತಿ ಪಡೆಯಿತು. ಈ ಖ್ಯಾತಿಗೆ ತಲೆ ಕೊಡದ ಗಿಬ್ರಾನ್, “ನಾನು ಪ್ರವಾದಿ ಕೃತಿಯನ್ನು ಬರೆಯುತ್ತಿದ್ದಂತೆ, ಪ್ರವಾದಿ ಕೃತಿ ನನ್ನನ್ನು ಬರೆಯಿತು” ಎಂದುಬಿಟ್ಟಿದ್ದ. ChiNa

ಅನುವಾದಕರ ಕುರಿತು: ಚಿದಂಬರ ನರೇಂದ್ರ ಮೂಲತಃ ಧಾರವಾಡದವರು, ವೃತ್ತಿಯಿಂದ ಮೆಕಾನಿಕಲ್ ಇಂಜಿನಿಯರ್, ಕಂಪನಿಯೊಂದರಲ್ಲಿ ಡಿಸೈನ್ ವಿಭಾಗದ ಮುಖ್ಯಸ್ಥ. ಸಿನೇಮಾ, ಸಾಹಿತ್ಯ ಹವ್ಯಾಸಗಳು. ಕವಿ ಮತ್ತು ಅನುವಾದಕ. ಝೆನ್ ಕಥೆ, ಸೂಫಿ ಕಾವ್ಯ, ಗುಲ್ಜಾರ್ ಕವಿತೆಗಳ ಅನುವಾದಗಳಿಂದ ಜನಪ್ರಿಯರು.

Leave a Reply