“ನೆಲೆ ಕಳಚಿದ ಎಲೆ ಮುಂದೇನು ಎಂದು ಯೋಚಿಸುತ್ತದೆಯೇ? ಅಸ್ತಿತ್ವ ಅದರ ಕಾಳಜಿ ವಹಿಸುತ್ತೆ. ಕಾಲದ ಹರಿವಿನ ಜೊತೆಗೆ ಅದು ಸದ್ಯಕ್ಕೆ ಹುಲ್ಲು ಹಾಸಿನ ಮೇಲೆ ನೆಲೆಸಿದೆ. ಮತ್ತೆ ಹರಿವಿನ ಜೊತೆಗೇ ಅದರ ಭವಿಷ್ಯವೂ ನಿರ್ಧಾರವಾಗುತ್ತೆ” ಎಂದು ಲಾವೋ ತ್ಸುಗೆ ಅನಿಸಿತು…
ಲಾವೋ ತ್ಸು, ಚೀನಾದ ಮಹಾ ದಾರ್ಶನಿಕ. ಝೆನ್ ಕವಲಿನ ಅನುಭಾವಿ ಸಂತ. ಅವನು ತನ್ನ ಸ್ವಂತ ತಿಳಿವನ್ನಾಧರಿಸಿ ತನ್ನದೇ ಆದ ದಾರಿಯೊಂದನ್ನು ಹಾಕಿಕೊಂಡ. ಅದನ್ನು `ದಾವ್’ ಎಂದು ಕರೆದ. ದಾವ್ ಎಂದರೇನೇ `ದಾರಿ’. ಪ್ರತಿಯೊಬ್ಬರೂ ತಮ್ಮ ದಾರಿ ತಾವೇ ಹುಡುಕಿಕೊಳ್ಳಬೇಕು ಎಂದವನು ಪ್ರತಿಪಾದಿಸಿದ.
ಲಾವೋತ್ಸು ಅಧ್ಯಾತ್ಮ ಪಥದ ಯಾನ ಶುರುವಿಟ್ಟು ಬಹಳ ಸಮಯವೇ ಆಗಿತ್ತು. ಶಿಶಿರ ಕಾಲದ ಒಂದು ಮಧ್ಯಾಹ್ನ ಆತ ಮರದ ಕೆಳಗೆ ವಿಶ್ರಮಿಸುತ್ತಿದ್ದ. ಅದಾಗಲೇ ಅವನಿಗೆ ಖಾಲಿತನದ ರುಚಿ ಹತ್ತಿತ್ತು. ಏನನ್ನೂ ಯೋಚಿಸದೆ, ಶುಭ್ರವಾಗಿ, ಪ್ರಕೃತಿಯನ್ನು ದಿಟ್ಟಿಸುತ್ತ ಕುಳಿತಿದ್ದ. ತೊಟ್ಟು ಕಳಚಿದ ಎಲೆಯೊಂದು ತೊನೆಯುತ್ತ ಅವನ ಕಣ್ಮುಂದೆ ಸುಳಿಯಿತು. ಗಾಳಿ ಬೀಸಿದಂತೆ ಅದರ ಚಲನೆ. ಸುರುಳಿ ಸುತ್ತಿ, ಲಘುವಾಗಿ ಹುಲ್ಲು ಹಾಸಿನ ಮೇಲೆ ಇಳಿಯಿತು.
`ನೆಲೆ ಕಳಚಿದ ಎಲೆ ಮುಂದೇನು ಎಂದು ಯೋಚಿಸುತ್ತದೆಯೇ? ಅಸ್ತಿತ್ವ ಅದರ ಕಾಳಜಿ ವಹಿಸುತ್ತೆ. ಕಾಲದ ಹರಿವಿನ ಜೊತೆಗೆ ಅದು ಸದ್ಯಕ್ಕೆ ಹುಲ್ಲು ಹಾಸಿನ ಮೇಲೆ ನೆಲೆಸಿದೆ. ಮತ್ತೆ ಹರಿವಿನ ಜೊತೆಗೇ ಅದರ ಭವಿಷ್ಯವೂ ನಿರ್ಧಾರವಾಗುತ್ತೆ!’
ತಿಳಿವು ಹೊಳೆಯಿತು. ದಾವ್ ತೆರೆದುಕೊಂಡಿತು. ತನ್ನೆಲ್ಲ ಗ್ರಹಿಕೆಯನ್ನೂ ಜನರ ಆಗ್ರಹದ ಮೇರೆಗೆ ಬರೆದಿಟ್ಟ ಲಾವೋ ತ್ಸು, ಯಾರ ಕೈಗೂ ಸಿಗದಂತೆ ಮರೆಯಾದ. ತನ್ನ ದಾರಿಯಲ್ಲಿ ನಡೆದು ತಿಳಿವಿನ ತುದಿ ಮುಟ್ಟಿದ.