ಗೆಳೆಯರು ನಮ್ಮ ಬದುಕಿಗೆ ಬಾಧ್ಯಸ್ಥರಲ್ಲ : ಫೇಸ್ ಬುಕ್ ಕಲಿಸುವ ಪಾಠ

ನಾವು ಯಾರಾದರೂ ನಮಗೆ ಸಹಾಯ ಮಾಡಬೇಕೆಂದು, ನಮ್ಮ ಕಷ್ಟ ಸುಖಕ್ಕೆ ಒದಗಬೇಕೆಂದು ಯಾಕೆ ಬಯಸಬೇಕು? ಕೇವಲ ಪರದೆಯ ಮೇಲೆ ಮೂಡುವ ಅಕ್ಷರಗಳಲ್ಲಿ ಮತ್ತು ಅಪ್’ಲೋಡ್ ಮಾಡುವ ಫೋಟೋಗಳಲ್ಲಿ ಮಾತ್ರ ಅಸ್ತಿತ್ವ ಹೊಂದಿರುವ ಜಾಲತಾಣದ ಗೆಳೆಯರಿಂದ ಯಾಕಾದರೂ ಅದನ್ನು ನಿರೀಕ್ಷಿಸಬೇಕು? ~ ಅಲಾವಿಕಾ

fbb

ಸಾಮಾಜಿಕ ಜಾಲತಾಣಗಳಲ್ಲಿ ಫೇಸ್ ಬುಕ್ ಸಾಕಷ್ಟು ಜನಪ್ರಿಯ. ಬಹುಶಃ ಅದರಲ್ಲಿ ನಿಮ್ಮದೂ ಒಂದು ಖಾತೆ ಇರಬಹುದು. ಹಾಗಿದ್ದಲ್ಲಿ ನಿಮಗೆ ಆಗಾಗ ಒಂದು ಮಾತು ಕಿವಿಗೆ ಬಿದ್ದಿರುತ್ತದೆ. “ಫೇಸ್ ಬುಕ್’ನಲ್ಲಿ ಅಷ್ಟು ಗೆಳೆಯರಿದ್ದಾರೆ, ಇಷ್ಟು ಫ್ಯಾನ್ ಫಾಲೋಯರ್’ಗಳಿದ್ದಾರೆ ಎಂದು ಬೀಗುವುದರಲ್ಲಿ ಅರ್ಥವಿಲ್ಲ. ಅವರು ಯಾರೂ ಕಷ್ಟ ಅಂದಾಗ ಸಹಾಯಕ್ಕೆ ಬರುವುದಿಲ್ಲ” ಎಂದು ಕೆಲವರು ಹಿತವಚನ ನೀಡುತ್ತ ಇರುತ್ತಾರೆ. ಈ ಮಾತನ್ನು ಕೇಳಿ ನೀವು ಭ್ರಮನಿರಸನಕ್ಕೆ ಒಳಗಾದಿರಿ ಎಂದರೆ, ನೀವು ಸಹಜ ಗೆಳೆತನದ ಸವಿಯನ್ನು ಕಳೆದುಕೊಳ್ಳುವವರಿದ್ದೀರಿ ಎಂದರ್ಥ.

ಫೇಸ್ ಬುಕ್ ಆಚೆಗೆ, ನಮ್ಮ ನಿಜ ಜೀವನದಲ್ಲಿ ಕೂಡ ಹೀಗಾಗುತ್ತದೆ. ಗೆಳೆಯರು ಸಾಕಷ್ಟು ಸಂಖ್ಯೆಯಲ್ಲಿರುತ್ತಾರೆ. ನಮ್ಮ ಕಷ್ಟಕಾಲಕ್ಕೆ ಒದಗುವವರು ಅತ್ಯಂತ ಕಡಿಮೆ. ಬಹಳ ಸಲ ಕೆಲವರ ಪಾಲಿಗೆ ಯಾರೂ ಬರುವುದೇ ಇಲ್ಲ. ನಿಜ ಜೀವನದಲ್ಲಿ ಇದನ್ನು ಅರಗಿಸಿಕೊಳ್ಳಲಾಗದವರು ಫೇಸ್ ಬುಕ್ ಗೆಳೆತನಕ್ಕೆ ಇದನ್ನು ಆರೋಪಿಸಿ ಎಚ್ಚರಿಕೆ ಹೇಳುತ್ತಾರೆ. ಆದ್ದರಿಂದ ನಾವು ಈ ಸಂಗತಿಯನ್ನು ಫೇಸ್ ಬುಕ್ ಮೂಲಕವೇ ಅರ್ಥ ಮಾಡಿಕೊಳ್ಳಲು ಯತ್ನಿಸೋಣ.

ಫೇಸ್ ಬುಕ್ ಒಂದು ಸಾಮಾಜಿಕ ಜಾಲತಾಣ. ಬಹುತೇಕವಾಗಿ ಸಮಾನ ಅಭಿರುಚಿಯ ಜನರು ಇಲ್ಲಿ ಪರಸ್ಪರ ಸಂಪರ್ಕಕ್ಕೆ ಬರುತ್ತಾರೆ, ಗೆಳೆಯರಾಗುತ್ತಾರೆ. ಹಾಗೆಯೇ ಕೆಲವು ಸಲ ಭಿನ್ನ ಅಭಿರುಚಿಯವರೂ ಗೆಳೆತನ ಬೆಳೆಸುತ್ತಾರೆ. ಹಲವು ವಿಚಾರಗಳ ಕೊಡು ಕೊಳ್ಳುವಿಕೆಯಿಂದ ಅಲ್ಲೊಂದು ವೈವಿಧ್ಯಮಯ ವಾತಾವರಣ ಏರ್ಪಡುತ್ತದೆ. ವಾಸ್ತವದಲ್ಲಿ ಫೇಸ್ ಬುಕ್ ನಮಗೆ ಸಹಜ ಗೆಳೆತನದ ಖುಷಿಯನ್ನು ನಿಡುತ್ತದೆ. ಇಲ್ಲಿ ಗೆಳೆಯರು ನೇರ ಸಂಪರ್ಕಕ್ಕೆ ಬರದೆ ಇರುವುದರಿಂದ ನಿರೀಕ್ಷೆಗಳಿಗೆ, ಪೊಸೆಸಿವ್’ನೆಸ್ಸಿಗೆ, ದ್ವೇಷ ಮತ್ಸರಗಳಿಗೆ ಅವಕಾಶ ಇರುವುದಿಲ್ಲ. ನಮ್ಮ ಕೆಲಸದ ವೇಳೆಯ ಅಥವಾ ಮನೆಗೆಲಸದ ಏಕತಾನತೆಯನ್ನು ಮುರಿದು ಕೊಂಚ ಸಮಯವನ್ನು ಲಘುವಾಗಿ ಕಳೆಯಲು ಇದೊಂದು ತಾಣ.

ಆದರೆ ಕೆಲವರು ಈ ಗೆಳೆತನವನ್ನು ಅತಿಯಾಗಿ ತೆಗೆದುಕೊಳ್ಳುತ್ತಾರೆ. ಅಂತರ್ಜಾಲದ ಭ್ರಮಾಜಗತ್ತಿನ ಪರಿಚಯವನ್ನು ಆಜನ್ಮ ಸಂಬಂಧವೆಂಬ ಅತಿರೇಕಕ್ಕೆ ಎಳಸುತ್ತಾರೆ. ಅದರ ಪರಿಣಾಮವಾಗಿಯೇ ನಿರೀಕ್ಷೆಗಳು ಹುಟ್ಟಿಕೊಳ್ಳುವುದು ಮತ್ತು ಹಕ್ಕು ಸಾಧಿಸುವ ಹಠಕ್ಕೆ ಬೀಳುವುದು. ಇದರಿಂದ ನಾವು ಹಲವು ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುತ್ತೇವೆ. ಕಹಿಯನ್ನು ಅನುಭವಿಸುತ್ತೇವೆ. ಮೊದಮೊದಲು ಕಾಲಯಾಪನೆಯ ನಲ್ದಾಣವಾಗಿದ್ದ ಫೇಸ್ ಬುಕ್ ಬರಬರುತ್ತಾ ಉಸಿರುಗಟ್ಟಿಸತೊಡಗುತ್ತದೆ. ಕೊನೆಗೆ “ಈ ಭ್ರಮಾಲೋಕವೇ ಇಷ್ಟು” ಎಂಬ ನಿರ್ಧಾರಕ್ಕೆ ಬಂದುಬಿಡುತ್ತೇವೆ. ಮತ್ತು ಆ ಮೂಲಕ ನಮ್ಮ ಮನಸ್ಸನ್ನು ಹಗುರಾಗಿಸಿಕೊಳ್ಳುವ, ಆನಂದ ಹೊಂದುವ, ಚರ್ಚಿಸುವ, ವಿಚಾರ ವಿನಿಮಯ ಮಾಡಿಕೊಳ್ಳುವ, ಕಲಿಯುವ ತಾಣವೊಂದನ್ನು ಕಳೆದುಕೊಳ್ಳುತ್ತೇವೆ.

ನಾವು ಯಾರಾದರೂ ನಮಗೆ ಸಹಾಯ ಮಾಡಬೇಕೆಂದು, ನಮ್ಮ ಕಷ್ಟ ಸುಖಕ್ಕೆ ಒದಗಬೇಕೆಂದು ಬಯಸಬೇಕು? ಕೇವಲ ಪರದೆಯ ಮೇಲೆ ಮೂಡುವ ಅಕ್ಷರಗಳಲ್ಲಿ ಮತ್ತು ಅಪ್’ಲೋಡ್ ಮಾಡುವ ಫೋಟೋಗಳಲ್ಲಿ ಮಾತ್ರ ಅಸ್ತಿತ್ವ ಹೊಂದಿರುವ ಜಾಲತಾಣದ ಗೆಳೆಯರಿಂದ ಯಾಕಾದರೂ ಅದನ್ನು ನಿರೀಕ್ಷಿಸಬೇಕು? ಈ ಗೆಳೆತನ ಕೇವಲ ನಮ್ಮ ಅಂತರಂಗದ ಸಂತಸ ಮತ್ತು ಸಮಾಧಾನಕ್ಕಾಗಿ ಇರುತ್ತದೆ. ಫೇಸ್ ಬುಕ್’ನ ಒಡನಾಟಗಳಲ್ಲಿ ನಾವು ಇದನ್ನು ಪ್ರಜ್ಞಾಪೂರ್ವಕವಾಗಿ ರೂಢಿ ಮಾಡಿಕೊಳ್ಳಬೇಕು.

ವಾಸ್ತವದಲ್ಲಿ ನಾವು ಫೇಸ್ ಬುಕ್ ಆಚೆಗಿನ ಜೀವನದಲ್ಲಿ ಇರಬೇಕಾದುದೂ ಹಾಗೆಯೇ. ಗೆಳೆಯರು ನಮ್ಮ ಸುಖ ದುಃಖಗಳಿಗೆ ಬಾಧ್ಯಸ್ಥರಲ್ಲ. ತಾವಾಗಿಯೇ ಚಾಚುವ ಕೈಯನ್ನು ನಾವು ಚುಂಬಿಸಿ ಕೃತಜ್ಞತೆ ತೋರುವುದು ಸರಿ. ಆದರೆ ಅವರು ಹಾಗೆ ಚಾಚಲೆಂದು ನಿರೀಕ್ಷೆ ಇಟ್ಟುಕೊಳ್ಳಬಾರದು. ಯಾರಿಗೇ ಆದರೂ ತಮ್ಮದೇ ಬದುಕು, ಆದ್ಯತೆ, ಸಮಸ್ಯೆ ಮತ್ತು ಮಿತಿಗಳಿರುತ್ತವೆ. ನಾವು ಕೂಡ ಮತ್ತೊಬ್ಬರ ಪಾಲಿಗೆ ಹಾಗೆಯ ಇರುತ್ತೇವೆ. ಆದ್ದರಿಂದ ಎಷ್ಟೇ ಹತ್ತಿರದವರೆಂದು ನಾವು ಭಾವಿಸಿದರೂ ಅವರು ಸಹಾಯಕ್ಕೆ ಒದಗುತ್ತಾರೆಂದು ಭಾವಿಸಬಾರದು. ನಾವು ಪ್ರತಿಯೊಬ್ಬರೂ ಜೀವನ ಯಾನದ ಪ್ರಯಾಣಿಕರು. ನಮ್ಮ ನಮ್ಮ ಪ್ರಯಾಣ ನಾವೇ ಮಾಡಬೇಕು. ಗೆಳೆಯರು ನಮ್ಮ ಸಹಯಾತ್ರಿಗಳಷ್ಟೆ. ಹೆಚ್ಚೆಂದರೆ ಅವರು ನಮ್ಮ ಪ್ರಯಾಣವನ್ನು ಸುಖಮಯವೂ ಸಹ್ಯವೂ ಆಗಿಸಬಲ್ಲರು. ಆದರೆ ನಮ್ಮ ಪ್ರಯಾಣವನ್ನು ಅವರು ಮಾಡುವುದು ಸಾಧ್ಯವಿಲ್ಲದ ಮಾತು.

ಇಷ್ಟು ನಮಗೆ ಮನದಟ್ಟಾದರೆ, ಅದು ಫೇಸ್ ಬುಕ್ ಆಗಿರಲಿ, ನಿಜ ಜೀವನವೇ ಆಗಿರಲಿ…. ಗೆಳೆತನದ ಸವಿಯನ್ನು ಯಾವುದೇ ಅಪೇಕ್ಷೆ – ನಿರಾಸೆಗಳ ಹೊರೆಯಿಲ್ಲದೆ ಸಂತಸದಿಂದ ಅನುಭವಿಸಬಹುದು. ಮತ್ತು, “ಸಮಯ ಅಂದಾಗ ಯಾರೂ ಸಹಾಯಕ್ಕೆ ಒದಗುವುದಿಲ್ಲ” ಎಂದು ದೂರುವುದನ್ನೂ ನಿಲ್ಲಿಸಬಹುದು.

 

Leave a Reply