ಕಾಯಕದ ಕುರಿತು : ಖಲೀಲ್ ಗಿಬ್ರಾನನ ‘ಪ್ರವಾದಿ’ ~ ಅಧ್ಯಾಯ 7

ದ ಪ್ರಾಫೆಟ್’ ಕೃತಿಯು ಜಗತ್ತಿನ ಬಹುತೇಕ ಭಾಷೆಗಳಿಗೆ ಅನುವಾದಗೊಂಡಿದ್ದು, ಕನ್ನಡದಕ್ಕೂ ಬಂದಿವೆ. ‘ಅರಳಿಬಳಗ’ದ ಕವಿ ಚಿದಂಬರ ನರೇಂದ್ರ ಮತ್ತೊಮ್ಮೆ ಇದರ ಅನುಭಾವವನ್ನು ಅನುವಾದದ ಮೂಲಕ ಹರಿಸುವ ಪ್ರಯತ್ನ ಮಾಡಿದ್ದಾರೆ.

ನಂತರ ಅವನು
ರೈತನೊಬ್ಬ ಕಾಯಕದ ಬಗ್ಗೆ ಕೇಳಿದ ಪ್ರಶ್ನೆಗಳಿಗೆ
ಸಮಾಧಾನ ಹೇಳತೊಡಗಿದ.

ಮನುಷ್ಯ
ಕಾಯಕಕ್ಕೆ ಮುಂದಾಗುವುದು
ಭೂಮಿಯ ಗತಿಯೊಂದಿಗೆ, ಆತ್ಮದೊಂದಿಗೆ
ಜೊತೆ ಜೊತೆಯಾಗಿ ಹೆಜ್ಜೆ ಹಾಕಲು.

ಸೋಮಾರಿಯಾಗುವುದೆಂದರೆ,
ಋತುಮಾನಗಳಿಗೆ ಅಪರಿಚಿತನಾದಂತೆ.
ಗಂಭೀರವಾಗಿ, ತಲೆ ಎತ್ತಿಕೊಂಡು
ಅಪಾರದತ್ತ ಹೆಜ್ಜೆ ಹಾಕುತ್ತಿರುವ
ಬದುಕಿನ ಮೆರವಣಿಗೆಯಿಂದ
ಹೊರಗುಳಿದಂತೆ.

ಕಾಯಕಕ್ಕಿಳಿದಾಗ ನೀವೊಂದು ಕೊಳಲಿನಂತೆ.
ಆಗ ನಿಮ್ಮ ಎದೆಯ ಮೂಲಕ
ಹಾಯ್ದು ಹೋಗುವ ಕಾಲದ ಪಿಸುಮಾತು,
ಸಂಗೀತವಾಗುತ್ತದೆ.

ಬಾಕಿ ಎಲ್ಲ
ಒಂದೇ ಶ್ರುತಿಯಲ್ಲಿ ಹಾಡುತ್ತಿರುವಾಗ
ಯಾರು ನಿಮ್ಮಲ್ಲಿ ಆ ಕೆಲವರು
ಮೂಕ ಮೌನದ ಕೊಳಲಾಗಬಯಸುವವರು?

ಕೆಲಸ, ಶಾಪ.
ದುಡಿಮೆ, ದೌರ್ಭಾಗ್ಯದ ಫಲ.
ಹೀಗೆ ಹೇಳಿ ಹೇಳಿ ತುಂಬಲಾಗಿದೆ
ಈ ಮಾತುಗಳನ್ನ
ನಿಮ್ಮ ತಲೆಯಲ್ಲಿ.

ಆದರೆ ಕಾಯಕಕ್ಕಿಳಿದಾಗ, ನೀವು
ಭೂಮಿತಾಯಿ ಕಂಡ
ಕನಸೊಂದರ ಭಾಗವನ್ನು ನನಸಾಗಿಸುತ್ತೀರಿ.
ಈ ಜವಾಬ್ದಾರಿಯನ್ನು
ಕನಸು ಹುಟ್ಟಿದಾಗಲೇ ವಹಿಸಲಾಗಿತ್ತು ನಿಮಗೆ.

ಕಾಯಕದಲ್ಲಿ ಮಗ್ನರಾದಾಗಲೇ
ನೀವು ಬದುಕಿನೊಡನೆಯ ಪ್ರಣಯದಲ್ಲಿ ಸಂಲಗ್ನರು.

ಕಾಯಕದ ಮೂಲಕ
ಬದುಕನ್ನು ಪ್ರೇಮಿಸುವುದೆಂದರೆ
ಬದುಕಿನ ಹೇಳಿಕೊಳ್ಳಲಾಗದ ಬಯಕೆಯೊಂದಿಗೆ
ಸಲಿಗೆ ಬೆಳಸಿದಂತೆ.

ನೋವಿನಲ್ಲಿರುವಾಗ,
ಈ ಜನ್ಮ ಹಿಂಸೆಯೆಂದೂ,
ಈ ದೇಹ ಶ್ರಮ
ಹಣೆ ಮೇಲೆ ಬರೆದ ಶಾಪವೆಂದೂ,
ನೀವು ತೀರ್ಮಾನ ಮಾಡಿದರೆ,
ತಿಳಿದುಕೊಳ್ಳಿ, ಅದು ಹಾಗಲ್ಲ ;
ನೀವು ಸುರಿಸಿದ ಬೆವರಿಗೆ
ನಿಮ್ಮ ಹಣೆ ಬರಹ ಬದಲಾಯಿಸುವ ಶಕ್ತಿಯಿದೆ.

ಬದುಕು, ಕತ್ತಲೆ ಎಂದು
ಅಸಹನೆ ಹೇಳಿಕೊಟ್ಟ ಮಾತನ್ನೇ ನೀವು
ಮತ್ತೆ ಮತ್ತೆ ಹೇಳುತ್ತೀರಿ

ಬದುಕು ಕತ್ತಲೆ ನಿಜ
ಆದರೆ ಪ್ರೇರಣೆಗಳಿಲ್ಲದಾಗ

ಪ್ರೇರಣೆ ಕುರುಡು ನಿಜ
ಆದರೆ ತಿಳುವಳಿಕೆ ಇಲ್ಲದಾಗ.

ತಿಳುವಳಿಕೆ ಕೂಡ ವ್ಯರ್ಥ, ಕಾಯಕವಿಲ್ಲದಿರೆ

ಎಲ್ಲ ಕಾಯಕವೂ ಪೊಳ್ಳು, ಪ್ರೇಮವಿಲ್ಲದಾಗ.

ತುಂಬಿದ ಪ್ರೇಮ ಕಾಯಕಕ್ಕಿಳಿದಾಗ
ನೀವು, ನಿಮ್ಮೊಡನೆ,
ಇನ್ನೊಬ್ಬರೊಡನೆ ಮತ್ತು ಸ್ವತಃ
ಭಗವಂತನೊಡನೆ ಒಂದು.

ಕಾಯಕದಲ್ಲಿ
ಪ್ರೇಮವನ್ನು ಸಾಧ್ಯಗೊಳಿಸುವುದು
ಎಂದರೇನು?

ನಿಮ್ಮ ಪ್ರೇಮಿ ಉಡಬಹುದೆಂಬ
ಒಂದೇ ಒಂದು ಆಸೆಯಿಂದ
ಹೃದಯದಿಂದ ನೂಲು ಎಳೆದು ಎಳೆದು
ಬಟ್ಟೆ ನೇಯುವುದು.

ನಿಮ್ಮ ಪ್ರೇಮಿ ನೆಲೆಸಬಹುದೆಂಬ
ಒಂದೇ ಒಂದು ಆಸೆಯಿಂದ
ಒಂದೊಂದು ಇಟ್ಟಿಗೆಯನ್ನೂ ಪ್ರೀತಿಯಿಂದ ಇಟ್ಟು
ಮನೆಯ ಕಟ್ಟುವುದು.

ನಿಮ್ಮ ಪ್ರೇಮಿ ಉಣಬಹುದೆಂಬ
ಒಂದೇ ಒಂದು ಆಸೆಯ ಸಲುವಾಗಿ
ಅಕ್ಕರೆಯಿಂದ ಬೀಜ ಬಿತ್ತಿ
ಜೋಪಾನವಾಗಿ ಸಾಕಿ, ಸಲಹಿ
ಖುಷಿಯಲ್ಲಿ ಬೆಳೆಯ
ಕಟಾವು ಮಾಡುವುದು.

ಪ್ರೀತಿಸಿದ ಎಲ್ಲವನ್ನೂ
ನಿಮ್ಮ ಆತ್ಮದ ಉಸಿರಿನಿಂದ
ಉದ್ದೀಪನಗೊಳಿಸುವುದು.

ಹರಸಿ ಹಾರೈಸಿದ ಪೂರ್ವಜರೆಲ್ಲ
ಸುತ್ತ ನಿಂತು ಗಮನಿಸುತ್ತಿರುವುದನ್ನು
ಮನಗಾಣುವುದು.

ನೀವು ಆಗಾಗ
ನಿದ್ದೆಯಲ್ಲಿ ಬಡಬಡಿಸುವಂತೆ ಮಾತನಾಡುತ್ತೀರಿ :

ಕಲ್ಲಿನಲ್ಲಿ ತನ್ನ ಆತ್ಮ ಗುರುತಿಸುವ
ಶಿಲ್ಪಿಯ ಕೆಲಸ
ಹೊಲದಲ್ಲಿ ನೆಲ ಉಳುವ ರೈತನಿಗಿಂತಲೂ
ಶ್ರೇಷ್ಠ.

ಮನುಷ್ಯ ಬಯಸಿದಂತೆಲ್ಲ
ಕಾಮನಬಿಲ್ಲಿನಿಂದ ಬಣ್ಣಗಳನ್ನು ತಂದು ತಂದು
ಬಟ್ಟೆಯ ಮೇಲೆ ಹರವಿ ಚಿತ್ರ ಮೂಡಿಸುವ ಚಿತ್ರಕಾರ,
ಚಪ್ಪಲಿ ಹೊಲೆಯುವ ಚಮ್ಮಾರನಿಗಿಂತಲೂ ಮೇಲಿನವ.

ನನ್ನ ಮಾತು ಕೇಳಿ,
ನಾನು ನಿದ್ದೆಯಲ್ಲಿಲ್ಲ,
ಮಟ ಮಟ ಮಧ್ಯಾಹ್ನದಂಥ
ಪ್ರಖರ ಎಚ್ಚರದಲ್ಲಿದ್ದೇನೆ.

ಹುಲ್ಲಿನ ಗರಿಗಳ ಜೊತೆಗೆ
ಗಾಳಿಯಾಡುವ ಪಿಸುಮಾತು
ಬೃಹತ್ ದೇವದಾರುವಿನ ಟೊಂಗೆಗಳ ಜೊತೆಗಿನ
ಮಾತಿನಷ್ಟೇ ಸಿಹಿ.

ಗಾಳಿಯ ದನಿಯ ಜೊತೆ
ತನ್ನ ಪ್ರೇಮದ ಉಸಿರು ಸೇರಿಸುತ್ತ
ಮಧುರ ಸಂಗೀತವನ್ನು ಸೃಷ್ಟಿಸುವವ ಮಾತ್ರ
ಕಲಾವಿದ.

ಕಾಯಕ ಬೇರೇನಲ್ಲ
ಪ್ರೇಮ ಪ್ರತ್ಯಕ್ಷವಾಗುವ ಒಂದು ವಿಧಾನ.

ಕಾಯಕದಲ್ಲಿ
ಪ್ರೇಮ ಸಾಧ್ಯವಾಗದೇ ಹೋದರೆ,
ಜಿಗುಪ್ಸೆ ಮುಂದೆ ಬಂದು ನಿಂತರೆ,
ತಕ್ಷಣ ಕೆಲಸ ಬಿಟ್ಟು ಹೊರ ನಡೆಯಿರಿ,
ದೇವಸ್ಥಾನದ ಬಾಗಿಲಲ್ಲಿ ಕುಳಿತು
ಖುಷಿಯಿಂದ ಕೆಲಸ ಮಾಡುವವರ ಎದುರು
ಕೈ ಚಾಚಿ.

ಉದಾಸೀನರಾಗಿ ಬೇಯಿಸಿದ ರೊಟ್ಟಿ
ತಿನ್ನವು ಕಷ್ಟ ಅಷ್ಟೇ ಅಲ್ಲ
ಉಣ್ಣುವವನ ಅರ್ಧ ಹಸಿವೆಗೂ ನಷ್ಟ.

ಅಸಹನೆಯಿಂದ ಹಿಂಡಿದ
ದ್ರಾಕ್ಷಿಯ ವೈನ್ ನಲ್ಲಿ ಒಂದಾಗಿದೆ
ಅಸಹನೆ, ಭಟ್ಟಿ ಇಳಿಸಿದ ವಿಷ.

ನೀವು ಗಂಧರ್ವರಂತೆ ಹಾಡಬಹುದು
ಆದರೆ ಹಾಡುವುದನ್ನು ಪ್ರೇಮಿಸದೇ ಹೋದಲ್ಲಿ
ಮನುಷ್ಯನ ಕಿವಿಗಳನ್ನು
ದಿನದ ಮೌನಕ್ಕೆ
ಮತ್ತು ರಾತ್ರಿಯ ದನಿಗೆ
ಕಿವುಡಾಗಿಸುವಿರಿ

ಮುಂದುವರೆಯುತ್ತದೆ……….

gibran

ಲೇಖಕರ ಕುರಿತು: ಖಲೀಲ್ ಗಿಬ್ರಾನ್ ತನ್ನ ಅಲೌಕಿಕ ಕೃತಿ “ಪ್ರವಾದಿ” ಯನ್ನು (THE PROPHET) ಮೊದಲು ರಚಿಸಿದ್ದು ಅರೇಬಿಕ್ ಭಾಷೆಯಲ್ಲಿ; ತನ್ನ ಇಪ್ಪತ್ತರ ಹರೆಯದಲ್ಲಿ! ಆಮೇಲೆ ಇಂಗ್ಲೀಷ್ ಭಾಷೆಗೆ ಅದನ್ನು ತರ್ಜುಮೆ ಮಾಡಿದ್ದೂ ಅವನೇ. ಅಮೇರಿಕೆಯ ಉದ್ದಗಲಕ್ಕೂ “ಪುಟ್ಟ ಕಪ್ಪು ಪುಸ್ತಕ” “ಪುಟ್ಟ ಬೈಬಲ್” ಎಂದು ಈ ಪುಸ್ತಕ ಖ್ಯಾತಿ ಪಡೆಯಿತು. ಈ ಖ್ಯಾತಿಗೆ ತಲೆ ಕೊಡದ ಗಿಬ್ರಾನ್, “ನಾನು ಪ್ರವಾದಿ ಕೃತಿಯನ್ನು ಬರೆಯುತ್ತಿದ್ದಂತೆ, ಪ್ರವಾದಿ ಕೃತಿ ನನ್ನನ್ನು ಬರೆಯಿತು” ಎಂದುಬಿಟ್ಟಿದ್ದ.ChiNa

ಅನುವಾದಕರ ಕುರಿತು: ಚಿದಂಬರ ನರೇಂದ್ರ ಮೂಲತಃ ಧಾರವಾಡದವರು, ವೃತ್ತಿಯಿಂದ ಮೆಕಾನಿಕಲ್ ಇಂಜಿನಿಯರ್, ಕಂಪನಿಯೊಂದರಲ್ಲಿ ಡಿಸೈನ್ ವಿಭಾಗದ ಮುಖ್ಯಸ್ಥ. ಸಿನೇಮಾ, ಸಾಹಿತ್ಯ ಹವ್ಯಾಸಗಳು. ಕವಿ ಮತ್ತು ಅನುವಾದಕ. ಝೆನ್ ಕಥೆ, ಸೂಫಿ ಕಾವ್ಯ, ಗುಲ್ಜಾರ್ ಕವಿತೆಗಳ ಅನುವಾದಗಳಿಂದ ಜನಪ್ರಿಯರು.

1 Comment

Leave a Reply