ಒಂದಾನೊಂದು ಕಾಲದ ಚೈನಾದಲ್ಲಿ ಶಿಷ್ಯನೊಬ್ಬ ತನ್ನ ಗುರುವಿನ ಜೊತೆ ಮಾತನಾಡುತ್ತಿದ್ದ.
“ ಗುರುಗಳೇ, ಜನರ ಜೊತೆ ವ್ಯವಹಾರ ಮಾಡುವಾಗ ಅತೀ ಮುಖ್ಯವಾಗಿ ಪಾಲಿಸಬೇಕಾದ ನಿಯಮವೆಂದರೆ, ನೀವು ನಿಮ್ಮನ್ನು ಬೇರೆಯವರು ಹೇಗೆ ಕಾಣಬೇಕೆಂದು ಬಯಸುತ್ತಿರೋ ಹಾಗೆಯೇ ನೀವು ಅವರನ್ನು ನೋಡಿಕೊಳ್ಳಬೇಕು, ಎನ್ನುವ ಮಾತು ಪ್ರಚಲಿತದಲ್ಲಿದೆ. ನಿಮ್ಮ ಅಭಿಪ್ರಾಯ ಏನು?
“ ರಾಜನೊಬ್ಬ ಸಮುದ್ರ ಪಕ್ಷಿಯನ್ನು ನೋಡಿಕೊಂಡ ಕಥೆ ಹೇಳುತ್ತೇನೆ ಕೇಳು “
ಎನ್ನುತ್ತ ಗುರುಗಳು ಕಥೆ ಹೇಳಲು ಶುರು ಮಾಡಿದರು.
ಒಂದು ದಿನ ಅಪರೂಪದ ಸುಂದರ ಸಮುದ್ರ ಪಕ್ಷಿಯೊಂದು ಬಿರುಗಾಳಿಯ ಹೊಡೆತಕ್ಕೆ ಸಿಕ್ಕು ಹಾರುತ್ತ ಹಾರುತ್ತ, ಲೂ ರಾಜ್ಯದ ರಾಜಧಾನಿಗೆ ಬಂತು. ಇಂಥ ಅದ್ಭುತ ಪಕ್ಷಿಯನ್ನು ಕಂಡು ರಾಜ ಖುಷಿಯಿಂದ ಕುಣಿದು ಕುಪ್ಪಳಿಸಿದ. ಸಮುದ್ರ ಪಕ್ಷಿಯನ್ನು ರಾಜ್ಯದ ವಿಶೇಷ ಅತಿಥಿಯೆಂದು ಘೋಷಿಸಿದ. ಸಂಪ್ರದಾಯದ ಪ್ರಕಾರ ಪಕ್ಷಿಗೆ ಸ್ವಾದಿಷ್ಟ ಭಕ್ಷ್ಯಗಳನ್ನು ಕೊಡಲಾಯಿತು. ರಾಜ್ಯದ ಪ್ರಸಿದ್ಧ ಸಂಗೀತಗಾರರು, ನೃತ್ಯಪಟುಗಳು ಪಕ್ಷಿಯ ಮನೋರಂಜನೆಗಾಗಿ ಪ್ರದರ್ಶನ ಕೊಟ್ಟರು. ಇದನ್ನೆಲ್ಲ ನೋಡಿದ ಪಕ್ಷಿ ಭಯದಿಂದ ತಲ್ಲಣಿಸಿತು, ಗೊಂದಲಕ್ಕೊಳಗಾಯಿತು. ಯಾವ ಆಹಾರವನ್ನೂ ಮುಟ್ಟಲಿಲ್ಲ. ಮೂರು ದಿನಗಳ ನಂತರ ತೀರಿಕೊಂಡಿತು.
ಆ ರಾಜ್ಯದ ರಾಜ, ತನ್ನನ್ನು ಬೇರೆಯವರು ಹೇಗೆ ನೋಡಿಕೊಳ್ಳಬೇಕೆಂದು ಬಯಸುತ್ತಿದ್ದನೋ ಹಾಗೆಯೇ ಆ ಪಕ್ಷಿಯನ್ನು ನೋಡಿಕೊಂಡಿದ್ದ.
ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ