ಬ್ರಾಹ್ಮಣ್ಯ ಒಂದು ಧೋರಣೆಯಲ್ಲ. ಬ್ರಾಹ್ಮಣ ಒಂದು ಜಾತಿಯಲ್ಲ. ಸಂಕೇತಗಳನ್ನು ಧರಿಸಿದವರೆಲ್ಲ ಬ್ರಾಹ್ಮಣರಾಗುವುದೂ ಇಲ್ಲ. ಬ್ರಾಹ್ಮಣ್ಯವೆಂದರೆ ಶುದ್ಧಿ. ಅದು ಸತ್ಯವೇ ಮೇಲಾಗಿರುವ ಧರ್ಮ….
ಕಾಲಕ್ರಮದಲ್ಲಿ ನಾವು ಮೂಲವನ್ನು ಸಂಪೂರ್ಣ ತಿರುಚಿ ಎಲ್ಲವನ್ನೂ ಅಪಾರ್ಥಗೊಳಿಸಿಬಿಟ್ಟಿದ್ದೇವೆ. ಅನ್ವರ್ಥ ನಾಮಗಳು ಸೂಚಕ ಪದಗಳಾಗಿಬಿಟ್ಟಿವೆ. ಒಬ್ಬ ಮನುಷ್ಯ ಹುಟ್ಟಿ ಬೆಳೆಯುತ್ತಾ ಸತ್ಯಧರ್ಮಗಳ ಬದುಕನ್ನು ಬೆಳೆಸಿಕೊಂಡರೆ ಮಾತ್ರ ಅವನು ಬ್ರಾಹ್ಮಣನಾಗುತ್ತಾನೇ ಹೊರತು ಸಂಕೇತಗಳಿಂದಾಗಲೀ ಜಾತಿಯಿಂದಾಗಲೀ ಅಲ್ಲ. ಹಾಗೆಯೇ ವಿವಿಧ ಗುಣಕರ್ಮಗಳಿಗೆ ಅನುಸಾರವಾಗಿ ಅನ್ವರ್ಥ ನಾಮಗಳನ್ನು ನೀಡಲಾಗಿತ್ತು. ನಂತರದಲ್ಲಿ ಗುಣಕರ್ಮಗಳನ್ನೇ ಮೇಲುಕೀಳು ಎಂದು ವಿಭಜಿಸಿ ಶ್ರೇಷ್ಠತೆಯ ವ್ಯಸನ ಶುರುವಾಯಿತು. ಅಸ್ಪೃಶ್ಯತೆ ಆಚರಣೆಗೆ ಬಂತು.
ಈ ಸಂದರ್ಭದಲ್ಲಿಯೇ ಬುದ್ಧ ಬಹುಶಃ ಮೇಲಿನ ಮಾತುಗಳನ್ನು ಹೇಳಿದ್ದು.
(ಜಾತಿಯಿಂದ) ಬ್ರಾಹ್ಮಣ ಅನ್ನಿಸಿಕೊಂಡವರೆಲ್ಲರೂ ಸತ್ಯ – ಧರ್ಮಗಳನ್ನು ಉಳ್ಳ ಪರಿಶುದ್ಧರಲ್ಲ. (ಜಾತಿಯಿಂದ) ಬ್ರಾಹ್ಮಣರಲ್ಲದೆಯೂ ಸತ್ಯ – ಧರ್ಮವುಳ್ಳ ಪರಿಶುದ್ಧರು ನಿಜದಲ್ಲಿ ಬ್ರಾಹ್ಮಣರು. ಇದನ್ನು ನಾವು ಮನದಟ್ಟು ಮಾಡಿಕೊಳ್ಳಬೇಕು.