ತ್ಯಾಗ ಬಲಿದಾನಗಳ ಸಂಸ್ಮರಣೆ : ಬಕ್ರೀದ್

ಅಲ್ಲಾಹನಲ್ಲಿ ಪ್ರೇಮ, ಶ್ರದ್ಧೆ, ದೃಢತೆಗಳು ಮತ್ತು ನಂಬಿಕೆಗಾಗಿ ಪ್ರಾಣವನ್ನೇ ಅರ್ಪಿಸುವ ಬಲಿದಾನಗಳು ಬಕ್ರೀದ್ ಹಬ್ಬದ ಆಚರಣೆಯನ್ನು ಸಂಕೇತಿಸುತ್ತವೆ ~ ಸುನೈಫ್

ಪ್ರತಿಯೊಂದು ಧರ್ಮದಲ್ಲೂ ಹಬ್ಬಗಳಿರುತ್ತವೆ ಮತ್ತು ಪ್ರತಿ ಹಬ್ಬದ ಆಚರಣೆಗೂ ಒಂದು ಕಥೆ ಇರುತ್ತದೆ. ಇಂದು ಮುಸ್ಲಿಮರು ಬಕ್ರೀದ್ ಆಚರಿಸುತ್ತಿದ್ದು, ಇದನ್ನು ‘ತ್ಯಾಗ ಬಲಿದಾನಗಳ ಹಬ್ಬ’ ಎಂದು ಕರೆಯಲಾಗುತ್ತದೆ. ಪ್ರವಾದಿ ಇಬ್ರಾಹೀಮ್ ಮತ್ತು ಮಗ ಇಸ್ಮಾಯೀಲ್ ಅಲ್ಲಾಹನ ಅತಿ ಕಠಿಣ ಪರೀಕ್ಷೆಯಲ್ಲಿ ಉತ್ತೀರ್ಣರಾದ ದಿನವನ್ನು ಸ್ಮರಿಸುವುದೇ ಈ ದಿನದ ಮುಖ್ಯ ಉದ್ದೇಶ.

ನಿಜದಲ್ಲಿ ಅಂದು ತನ್ನ ಏಕೈಕ ಪುತ್ರನನ್ನು ಬಲಿ ಅರ್ಪಿಸುವಂತೆ ದೇವರ ಆಜ್ಞೆಯಾದಾಗ ಇಬ್ರಾಹೀಮ್ ಕಿಂಚಿತ್ತೂ ವಿಚಲಿತರಾಗಿರಲಿಲ್ಲ. ಕಾರಣ ಅವರಿಗಿದ್ದಿದ್ದು ಅಲ್ಲಾಹನ ಮೇಲೆ ಭಯವಲ್ಲ, ಬದಲಾಗಿ ಪ್ರೇಮ. ಅಲ್ಲಾಹ್ ತನ್ನ ಪ್ರೇಮಿಯನ್ನು ಎಂದೂ ಕೈ ಬಿಡಲಾರ ಎಂಬ ಅಚಲವಾದ ನಂಬಿಕೆ ತನ್ನ ಮಗನ ಕುತ್ತಿಗೆಗೆ ಕತ್ತಿ ಇಟ್ಟಾಗಲೂ ಇಬ್ರಾಹೀಮರಿಗಿತ್ತು. ಹುಡುಗ ಇಸ್ಮಾಯೀಲ್ ಕೂಡಾ ತಂದೆಯದೇ ಹಾದಿಯಲ್ಲಿ ಅಲ್ಲಾಹನ ಪ್ರೇಮಿಯಾಗಿಬಿಟ್ಟಿದ್ದ.

ಆದ್ದರಿಂದಲೇ ಹಿಂಬಾಲಿಸಿ ಬಂದ ಶೈತಾನ ನಿನ್ನ ತಂದೆ ನಿನ್ನನ್ನು ಕೊಲ್ಲುತ್ತಾರೆ ಎಂದಾಗ ಅವನನ್ನು ಕಲ್ಲೆಸೆದು ಓಡಿಸಿದ್ದು. ಅವನಿಗೆ ತನ್ನ ತಂದೆ ತನ್ನನ್ನು ಕೊಲ್ಲುವುದು ತಾನು ಭಯಪಡಬೇಕಾದ ಸಂಗತಿಯೇ ಅಲ್ಲ ಎನ್ನುವ ವಿಶ್ವಾಸ. ಆದರೆ ಶೈತಾನ ಅವನಲ್ಲಿ ಭಯ ಬಿತ್ತಲು ಪ್ರಯತ್ನಿಸಿದ್ದ. ಆದರೆ ಇಸ್ಮಾಯೀಲನ ಪ್ರೇಮ ಭಯವನ್ನು ನಿವಾರಿಸಿತ್ತು.

ಇಸ್ಮಾಯೀಲ್ ಧೈರ್ಯದಿಂದ ಕತ್ತಿಗೆ ಕೊರಳೊಡ್ಡಿ ಕುಳಿತ. ಇಬ್ರಾಹೀಮರು ಕತ್ತಿಯನ್ನೆತ್ತಿ ಬೀಸಿದರು. ಆದರೆ ಮಗನ ರುಂಡ ಹಾರಿ ಬೀಳುವುದರಿಲಿ, ಅವನ ಕೂದಲೂ ಕೊಂಕಲಿಲ್ಲ!!

ಅವರಿಬ್ಬರೂ ಅಲ್ಲಾಹನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ನಂತರ ಸಾಂಕೇತಿಕವಾಗಿ ಕುರಿಯನ್ನು ಬಲಿಕೊಟ್ಟು ಭಗವಂತನಿಗೆ ಅರ್ಪಿಸಲಾಯಿತು.

ಈ ಘಟನೆಯ ಸ್ಮರಣೆಗೆಂದೇ ಬಕ್ರೀದ್ ಆಚರಣೆ ಆರಂಭವಾಯಿತು.

ಅಲ್ಲಾಹನಲ್ಲಿ ಪ್ರೇಮ, ಶ್ರದ್ಧೆ, ದೃಢತೆಗಳು ಮತ್ತು ನಂಬಿಕೆಗಾಗಿ ಪ್ರಾಣವನ್ನೇ ಅರ್ಪಿಸುವ ಬಲಿದಾನ ಬಕ್ರೀದ್ ಹಬ್ಬದ ಆಚರಣೆಯನ್ನು ಸಂಕೇತಿಸುತ್ತವೆ.

Leave a Reply