ನಿಯತಿ : ಅಸ್ತಿತ್ವದ ಯೋಜನೆಯ ಕಾರ್ಯನಿರ್ವಾಹಕಿ

‘ಈ ಸೃಷ್ಟಿಯೊಂದು ಕಾಸ್ಮಿಕ್ ಕಾನ್ಸ್‍ಪಿರೆಸಿ – ಅಸ್ತಿತ್ವದ ಪಿತೂರಿ’ ಅನ್ನುತ್ತಾರೆ ಓಶೋ ರಜನೀಶ್. ಎಲ್ಲವನ್ನೂ ಅದು ಮೊದಲೇ ನಿರ್ಧರಿಸಿಯಾಗಿರುತ್ತದೆ. ತನ್ನ ನಡೆಯನ್ನೇ ಅದು ನಡೆಯುತ್ತಲೂ ಇರುತ್ತದೆ. ಸೃಷ್ಟಿಯ ಎಲ್ಲ ಜಡ ಚೇತನಗಳನ್ನು ಅದರ ಈಡೇರಿಕೆಗಾಗಿ ಬಳಸಿಕೊಳ್ಳುತ್ತದೆ. ಅಸ್ತಿತ್ವದ ಈ ಯೋಜನೆಯ ಕಾರ್ಯನಿರ್ವಾಹಕಿಯೇ `ನಿಯತಿ’. ನಿಯತಿಯು `ವಿಧಿ’ಯ ಒಡತಿ.  ~ಆನಂದಪೂರ್ಣ

fate
ವಿಧಿ ದೇವತೆ ‘ನಿಯತಿ’ – ಇಂಟರ್’ನೆಟ್ ಚಿತ್ರ

ಸೃಷ್ಟಿಯ ಯಾವುದೇ ಜೀವಿ ಪರಿಪೂರ್ಣ ಸ್ವಾತಂತ್ರ್ಯ ಹೊಂದಿರುವುದಿಲ್ಲ. ರಂಗಮಂಚದ ಮೇಲೆ ನಟರು ಎಷ್ಟೇ ಸ್ವತಂತ್ರವಾಗಿ ಪಾತ್ರ ನಿಭಾಯಿಸುತ್ತಿದ್ದರೂ ಅವರ ಪಾತ್ರ ಹಾಗೂ ಕಥನಗಳು ಸೂತ್ರಧಾರನ ನಿರ್ದೇಶನಕ್ಕೆ ತಕ್ಕಂತೆ ಇರುತ್ತದೆಯಲ್ಲವೆ? ಹಾಗೂ ಪೂರಕ ಪಾತ್ರಧಾರಿಗಳ ನಡೆಗೆ ತಕ್ಕಂತೆ ಇರುತ್ತದೆಯಲ್ಲವೆ? ಹಾಗೆಯೇ ಪ್ರತಿಯೊಂದು ಜೀವಿಗೂ ಅದಕ್ಕೇ ಆದ ಜೀವನವು ಕೊಡಲ್ಪಟ್ಟಿದ್ದರೂ ವಿಧಿ ವಿಧಾನಗಳನ್ನು ನೀಡಲಾಗಿದ್ದರೂ ಅದರ ಅಸ್ತಿತ್ವವು ಮತ್ತೊಂದು ಅಸ್ತಿತ್ವದ ಜೊತೆಗೆ ಅಂತಃಸಂಬಂಧ ಹೊಂದಿರುತ್ತದೆ.

ಇದೊಂದು ಹೆಣಿಗೆಯಂತೆ. ಒಂದು ಗಂಟು ಬಿಚ್ಚಿದರೆ ಉಳಿದವು ತಾವಾಗೆಯೇ ಬಿಡಿಸಿಕೊಳ್ಳುತ್ತ ಮುಗಿದು ಹೋಗುತ್ತವೆ. ಅಥವಾ ಒಂದು ಗಂಟನ್ನು ಎಳೆದು ಬಿಗಿಗೊಳಿಸಿದರೆ, ಅದರ ಪರಿಣಾಮ ಉಳಿದವುಗಳ ಮೇಲೂ ಆಗುತ್ತದೆ. ನಮ್ಮ ಆಸೆಗಳಿಗೆ ಮಿತಿಯಿಲ್ಲ. ವೈಯಕ್ತಿಕ ಸಂಗತಿಯಿಂದ ಹಿಡಿದು ವಿಶ್ವದಲ್ಲಿ ಇಂಥದ್ದು ಘಟಿಸಲಿ ಎಂದೆಲ್ಲ ಬಯಸುತ್ತಿರುತ್ತೇವೆ. ಕೆಲವೊಮ್ಮೆ ಆ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನವನ್ನೂ ಹಾಕಿರುತ್ತೇವೆ. ಆದರೂ ಬಹಳ ಬಾರಿ ಅದು ನೆರವೇರುವುದಿಲ್ಲ. ಯಾವುದೇ ವ್ಯಕ್ತಿಯ ಇಚ್ಛೆ, ವಿಶ್ವದ ಇಚ್ಛೆಯೂ ಆದಾಗ ಮಾತ್ರ ಅದು ಘಟಿಸುತ್ತದೆ.

ಉದಾಹರಣೆಗೆ ನೋಡಿ. ಎಂಥಾ ಶ್ರೇಷ್ಠ ಅರಸರು, ಧರ್ಮಾತ್ಮರು ಸ್ಥಾನಚ್ಯುತರಾಗುತ್ತಾರೆ. ಅಕಾಲ ಮರಣ ಹೊಂದುತ್ತಾರೆ. ನ್ಯಾಯಕ್ಕಾಗಿ ಹೋರಾಡಿದವರು ಅನ್ಯಾಯದಿಂದ ಕೊನೆಯಾಗಿಹೋಗುತ್ತಾರೆ. ಅವರೆಲ್ಲರ ಪ್ರಯತ್ನಗಳು ಸತ್ವಶಾಲಿಯೂ ಜೀವನ್ಮುಖಿಯೂ ಪ್ರಾಮಾಣಿಕವೂ ಆಗಿರುತ್ತವೆ. ಅವರ ಕೆಲಸ ಕಾರ್ಯಗಳೊಡನೆ ಸಮಾಜದ ಪ್ರಾರ್ಥನೆ ಬೆರೆತಿರುತ್ತದೆ. ಆದರೂ ಹಾಗೇಕೆ ಆಗುತ್ತದೆ? ಇದಕ್ಕೆ ಉತ್ತರ ನಿಯತಿಯ ನಿಗೂಢ ನಡಿಗೆಯಲ್ಲಿ ಅಡಗಿದೆ. ಅದರ ಯೋಜನೆಯೇ ಬೇರೆ ಇರುತ್ತದೆ. ಆ ಆತ್ಯಂತಿಕ ಯೋಜನೆಗಾಗಿ ಅದು ಏನೆಲ್ಲದರ ಬಲಿಯನ್ನೂ ಬೇಡುತ್ತದೆ.

‘ಈ ಸೃಷ್ಟಿಯೊಂದು ಕಾಸ್ಮಿಕ್ ಕಾನ್ಸ್‍ಪಿರೆಸಿ – ಅಸ್ತಿತ್ವದ ಪಿತೂರಿ’ ಅನ್ನುತ್ತಾರೆ ಓಶೋ ರಜನೀಶ್. ಎಲ್ಲವನ್ನೂ ಅದು ಮೊದಲೇ ನಿರ್ಧರಿಸಿಯಾಗಿರುತ್ತದೆ. ತನ್ನ ನಡೆಯನ್ನೇ ಅದು ನಡೆಯುತ್ತಲೂ ಇರುತ್ತದೆ. ಸೃಷ್ಟಿಯ ಎಲ್ಲ ಜಡ ಚೇತನಗಳನ್ನು ಅದರ ಈಡೇರಿಕೆಗಾಗಿ ಬಳಸಿಕೊಳ್ಳುತ್ತದೆ. ಅಸ್ತಿತ್ವದ ಈ ಯೋಜನೆಯ ಕಾರ್ಯನಿರ್ವಾಹಕಿಯೇ `ನಿಯತಿ’. ನಿಯತಿಯು `ವಿಧಿ’ಯ ಒಡತಿ. ಅವಳು ವಿಧಿಸದಂತೆ ಎಲ್ಲವೂ ಘಟಿಸುತ್ತವೆ. ಅವಳು ಸೃಷ್ಟಿಯ ಇತಿವೃತ್ತಗಳನ್ನು ಬರೆಯುತ್ತಾಳೆ. ಅವಳು ಯಾವುದನ್ನು ನಿರ್ಧರಿಸುತ್ತಾಳೆ, ಯಾವುದನ್ನು ಎಲ್ಲಿ ಮತ್ತು ಹೇಗೆ ಕೊನೆಗೊಳಿಸುತ್ತಾಳೆ ಎಂಬುದನ್ನು ಊಹಿಸಲು ಯಾರಿಗೂ ಸಾಧ್ಯವಿಲ್ಲ. ಮತ್ತು, ಹಾಗೊಮ್ಮೆ ಊಹಿಸಲು ಸಾಧ್ಯವಾದರೂ ಅದನ್ನು ತಡೆಯುವುದಕ್ಕಾಗಲೀ ಬದಲಿಸುವುದಕ್ಕಾಗಲೀ ಸ್ವತಃ ಆಕೆಯಿಂದಲೇ ಸಾಧ್ಯವಿಲ್ಲ. ಏಕೆಂದರೆ ಆಕೆ ಬರೆಯುವ ವಿಧಿಲೇಖ, ಬರೆದ ತತ್‍ಕ್ಷಣ ಭೂತಕಾಲಕ್ಕೆ ಸರಿದು ಹೋಗುತ್ತದೆ. ಭೂತಕಾಲದಲ್ಲಿ ನಡೆದ ಯಾವುದನ್ನಾದರೂ ಯಾರಿಂದಲಾದರೂ ಬದಲಿಸುವುದಕ್ಕೆ ಸಾಧ್ಯವೆ? ನಡೆದು ಹೋದದ್ದನ್ನು ಯಾರಿಂದಲಾದರೂ ಬದಲಿಸಿಲು ಸಾಧ್ಯವೇ!? ಆದ್ದರಿಂದಲೇ ಅದನ್ನು ಅಸ್ತಿತ್ವದ ಪಿತೂರಿ ಎಂದಿದ್ದು ಓಶೋ!

ಹಾಗಾದರೆ ನಿಯತಿಯ ನಿರ್ಧಾರಗಳ ಪರಿಣಾಮವನ್ನು ಎದುರಿಸುವುದು ಹೇಗೆ? ಅದರ ಸಂತಸದ, ಒಳಿತಿನ ಪರಿಣಾಮಗಳನ್ನು ಒಪ್ಪಿಕೊಳ್ಳಲು ಯಾರಿಗೂ ಅಡ್ಡಿ ಇಲ್ಲ. ಆದರೆ ದುಷ್ಪರಿಣಾಮಗಳನ್ನು ಎದುರಿಸುವುದು ಹೇಗೆ? ಈ ಪ್ರಶ್ನೆ ಕೇಳುವ ಮೊದಲು ಒಂದು ಅಂಶವನ್ನು ಮನದಟ್ಟು ಮಾಡಿಕೊಳ್ಳಬೇಕು. ಈ ಸಮಸ್ತ ಸೃಷ್ಟಿಯಲ್ಲಿ ಮೂಲತಃ ಒಳತು – ಕೆಡುಕುಗಳೆಂಬ ಪ್ರತ್ಯೇಕತೆಯೇ ಇಲ್ಲ. ನಮಗೆ ಈ ಕ್ಷಣದಲ್ಲಿ ಕೆಟ್ಟದಾಯಿತು ಎಂದು ಅನ್ನಿಸಿದ್ದು ಕಾಲಾಂತರದಲ್ಲಿ ಒಳಿತಾಗುವ ನಿಟ್ಟಿನಲ್ಲಿ ಪೂರಕ ಹೆಜ್ಜೆಯಾಗಿರುತ್ತದೆ. ಅಥವಾ, ನಮಗಾಗುವ ವೈಯಕ್ತಿಕ ಕೆಡುಕು ಸಮಷ್ಟಿಯ ಹಿತಚಿಂತನೆಗೆ ಕಾಯುವುದಕ್ಕಾಗಿಯೇ ಘಟಿಸಿರುತ್ತದೆ. ಇದನ್ನು ಅರ್ಥ ಮಾಡಿಕೊಂಡರೆ ನಿಯತಿಯ ಪರಿಣಾಮಗಳನ್ನು ಎದುರಿಸುವ ಪ್ರಶ್ನೆಯೇ ಮೂಡುವುದಿಲ್ಲ. ಇದನ್ನು ಮನಗಂಡಿದ್ದರಿಂದಲೇ ನಮ್ಮ ದಾಸ ವರೇಣ್ಯರು `ಆದದ್ದೆಲ್ಲ ಒಳಿತೇ ಆಯಿತು’ ಎಂದು ಹಾಡಿದ್ದು.

‘ಕಾರಣವಿಲ್ಲದೆ ಯಾವುದೂ ಘಟಿಸುವುದಿಲ್ಲ’ ಎನ್ನುತ್ತವೆ ವೇದಗಳು. ನಮ್ಮ ಪ್ರತಿಯೊಂದು ಕ್ರಿಯೆ ಕೂಡ ಕಾರಣದ ಬೀಜವನ್ನು ಹೊತ್ತುಕೊಂಡೇ ಇರುತ್ತದೆ. ಕ್ರಿಯೆಯು ಯಾವ ಕಾರಣದ ಬೀಜವನ್ನು ಹೊತ್ತುಕೊಂಡಿರುತ್ತದೆಯೋ, ಕಾಲದೊಂದಿಗೆ ಅದು ಮೊಳೆಯಲೇ ಬೇಕು, ಫಲ ನೀಡಲೇಬೇಕು. ಪ್ರಳಯ ಕೂಡ ಪುನರ್ ಸೃಷ್ಟಿಗೆ ಮುಂಚಿನ ಶುದ್ಧೀಕರಣ ಕ್ರಿಯೆ ಎನ್ನಲಾಗುತ್ತದೆ. ಸಾವು ಕೂಡ ದೇಹಕ್ಕೆ ದೊರೆಯುವ ಮುಕ್ತಿಯೇ ಆಗಿರುತ್ತದೆ. ನಮ್ಮ ಕಾಯುವಿಕೆಗಳು, ಬಡತನವೋ ನಿರುದ್ಯೋಗವೋ ಮೊದಲಾದ ಸಮಸ್ಯೆಗಳು, ವಿಷಾದ – ಇವೆಲ್ಲವೂ ನಮ್ಮ ಕರ್ಮಗಳನ್ನು ತೊಳೆದು ಮೋಕ್ಷದ ಹಾದಿಯ ಅಡ್ಡಿಗಳನ್ನು ನಿವಾರಿಸಲೆಂದೇ ಒದಗಿ ಬರುತ್ತವೆ. ಇಷ್ಟನ್ನು ಅರ್ಥ ಮಾಡಿಕೊಂಡರೆ, ನಮ್ಮಲ್ಲಿ `ಎಲ್ಲವೂ ಒಳಿತಿಗಾಗಿಯೇ ಇವೆ’ ಎನ್ನುವ ವಿಶ್ವಾಸ ಮೂಡುತ್ತದೆ.

ಇಷ್ಟಾಗಿಯೂ ಕೆಲವೊಮ್ಮೆ ನಿಯತಿಯ ಪರಿಣಾಮಗಳನ್ನು ಕೊಂಚ ಮೃದುಗೊಳಿಸುವ ಅಗತ್ಯ ಉಂಟಾಗುತ್ತದೆ. ಅದರ ಓಘಕ್ಕೊಂದು ಲಘುವಾದ ತಾತ್ಕಾಲಿಕ ತಡೆ ಬೇಕಾಗುತ್ತದೆ. ಇದನ್ನು ಸಾಧ್ಯವಾಗಿಸಲೆಂದೇ ಸಂತ – ಸಾಧಕರು ಅವತರಿಸಿ ಬರುವುದು. ನಿಯತಿಯ ಜೊತೆ, ವಿಧಿಲೇಖದ ಜೊತೆ ಸ್ಪರ್ಧಿಸಬಲ್ಲ, ಸಂವಾದಿಸಬಲ್ಲ ಶಕ್ತಿ ಯಾವುದಕ್ಕಾದರೂ ಇದ್ದರೆ, ಅದು ಸಂಕಲ್ಪ ಶಕ್ತಿಗೆ ಮಾತ್ರ. ಏಕೆಂದರೆ ಸಂಕಲ್ಪ ಶಕ್ತಿಯು ಸಾಕ್ಷಾತ್ ಭಗವಂತನ ಮೂಲ ಶಕ್ತಿ. ಪರಮ ಅಸ್ತಿತ್ವದ ಪ್ರಥಮೋನ್ನತ ಗುಣ. ಸಂತರು ಆ ಮಹಾ ಶಕ್ತಿಯನ್ನು ಧಾರಣೆ ಮಾಡಿಕೊಂಡು ನಿಯತಿಯ ನಡೆಯನ್ನು ಮಂದಗೊಳಿಸುವ ಅಥವಾ ಸೌಮ್ಯಗೊಳಿಸುವ ಕೆಲಸ ಮಾಡುತ್ತಾರೆ.

ಭಗವಂತ ನಿಯತಿಯ ಒಡೆಯ. ಅಂತೆಯೆ ಅವನ ಶಕ್ತಿಯೂ ನಿಯತಿಗಿಂತ ಮೇಲಿನ ಸ್ಥಾನದಲ್ಲಿರುತ್ತದೆ. ಆ ಕಾರಣದಿಂದಲೇ ಅದು ಸಂಕಲ್ಪ ಶಕ್ತಿಗೆ ಬಾಗಬೇಕಾಗುತ್ತದೆ. ನಮ್ಮಲ್ಲಿ ಅಷ್ಟು ತೀವ್ರತರವಾದ ಸಂಕಲ್ಪ ಶಕ್ತಿ ಸಾಧ್ಯವಾಗದೆ ಹೋಗಬಹುದು. ಆದರೆ ಅದರ ಪ್ರಯತ್ನ ಮಾಡುವ ಮೂಲಕ ಲೌಕಿಕದ ಚಿಕ್ಕ ಸಂಗತಿಗಳ ಬಾಧೆಯಿಂದಲಂತೂ ಖಂಡಿತವಾಗಿ ಮುಕ್ತರಾಗಬಹುದು. ಯಾವುದೇ ಕೆಲಸಕ್ಕೆ ಮುಂದಾಗುವಾಗ ಅದನ್ನು ಯಶಸ್ವಿಯಾಗಿ ನಡೆಸಿಯೇ ತೀರುತ್ತೇವೆ ಎಂದು ಸಂಕಲ್ಪ ಮಾಡಿ ಕಂಕಣ ತೊಡುವ ರೂಢಿ ನಮ್ಮಲ್ಲಿದೆ. ಇದು ಕೈಗೆತ್ತಿಕೊಂಡ ಕಾರ್ಯದಲ್ಲಿ ನಮ್ಮ ಬದ್ಧತೆಯನ್ನು ಕಾಯ್ದಿಡುತ್ತದೆ. ಹಾಗೂ ಅದರ ಫಲಾಫಲಗಳಿಗೆ ನಮ್ಮನ್ನೇ ಬಾಧ್ಯಸ್ಥರನ್ನಾಗಿ ಮಾಡುತ್ತದೆ. ಸಂಕಲ್ಪ ಬದ್ಧತೆಯು ನಾವು ಸೂತ್ರವೊಂದರ ಚಲನೆಗೆ ತಕ್ಕಂತೆ ವರ್ತಿಸುತ್ತಿದ್ದರೂ ಆ ವರ್ತನೆಯಲ್ಲಿ ಪ್ರಜ್ಞೆಯು ಅಡಕಗೊಳ್ಳುವಂತೆ ಮಾಡುತ್ತದೆ.

ಇಷ್ಟೆಲ್ಲ ವಿಲಕ್ಷಣ ಆಯ್ಕೆಗಳನ್ನು ಕೊಟ್ಟಿರುವ ಸೃಷ್ಟಿ ವೈಚಿತ್ರ್ಯದ ಬಗ್ಗೆ ಯೋಚಿಸುತ್ತ ಹೋದರೆ ನಾವೆಷ್ಟು ಬಿಂದು ಮಾತ್ರರು ಎನ್ನುವುದರ ಸ್ಪಷ್ಟ ಅರಿವಾಗುತ್ತದೆ.

1 Comment

Leave a Reply