ಸರಮಾ ದೇವಶುನೀ : ಋಷಿಗೆ ಹಸುಗಳನ್ನು ಹುಡುಕಿಕೊಟ್ಟ ಹೆಣ್ಣುನಾಯಿ

ಸರಮೆ ದೇವಲೋಕದ ಹೆಣ್ಣುನಾಯಿ. ಮನುಷ್ಯರಿಗೆ ಹಸುಗಳ ಹಾಲನ್ನು ದೊರಕಿಸಿಕೊಟ್ಟ ಕೀರ್ತಿ ಇದರದ್ದೇ. ಅಸುರರು ಕದ್ದೊಯ್ದ ಹಸುಗಳನ್ನು ಇಂದ್ರನಿಗೆ ಪತ್ತೆ ಮಾಡಿಕೊಟ್ಟಿದ್ದೂ ಇದೇ. ಋಗ್ವೇದದಲ್ಲಿ ಇದರ ಉಲ್ಲೇಖ ಬರುತ್ತದೆ. ಇದರ ಹೆಸರಿನಲ್ಲಿ ಒಂದು ಋಚೆಯೂ ಇದೆ. ನಮ್ಮ ವೇದಗಳು “ಯಾವ ಪ್ರಾಣಿಯೂ ಹೆಚ್ಚಲ್ಲ, ಯಾವುದೂ ಕಡಿಮೆಯೂ ಅಲ್ಲ” ಎಂಬುದನ್ನು ಈ ಮೂಲಕ ಸ್ಪಷ್ಟವಾಗಿ ಸಾರಿವೆ ~ ಗಾಯತ್ರಿ

sarama

ನಾಯಿ ಮನುಷ್ಯ ಸಂಕುಲದ ಮೊದಲ ಸಾಕು ಪ್ರಾಣಿ ಎಂದು ಹೇಳಲಾಗುತ್ತದೆ. ಈ ಕಾರಣದಿಂದಲೇ ಬಹುಶಃ ನಮ್ಮ ಪ್ರಾಚೀನ ಸಾಹಿತ್ಯದಲ್ಲಿ, ಅಲ್ಲಲ್ಲಿ ನಾಯಿಯ ಪ್ರಸ್ತಾಪವಿದೆ. ಕಾಲಭೈರವನ ಸುತ್ತ ನಾಯಿಗಳಿರುವ ಚಿತ್ರ ನೋಡಿದ್ದೇವೆ. ದತ್ತಾತ್ರೇಯನ ಸುತ್ತಲೂ ನಾಯಿಗಳಿರುತ್ತವೆ. ಮಹಾಭಾರತದಲ್ಲಿ ಯುಧಿಷ್ಠಿರನ ಬೆನ್ನು ಹತ್ತುವ ನಾಯಿಯ ಬಗ್ಗೆ ನಾವು ಓದಿದ್ದೇವೆ.  ಆದರೆ, ಅದಕ್ಕೂ ಮುಂಚೆ, ವೇದಸಾಹಿತ್ಯದಲ್ಲೇ ನಾಯಿಯೊಂದು ಮುಖ್ಯಪಾತ್ರಧಾರಿಯಾಗಿತ್ತು ಎಂಬುದು ಗೊತ್ತಿದೆಯೇ?

ಸರಮಾ, ದೇವಲೋಕದಲ್ಲಿ ವಾಸವಿದ್ದ ಹೆಣ್ಣು ನಾಯಿ. ನಾಯಿಗೆ ‘ಸಾರಮೇಯ’ ಎಂಬ ಹೆಸರು ಬಂದಿರುವುದು ಇದರಿಂದಲೇ. “ಸರಮೆಯ ಪುತ್ರ ಸಾರಮೇಯ” ಎಂದು ಇದರ ವಿಸ್ತೃತಾರ್ಥ. ಋಗ್ವೇದವು ಸರಮೆಯನ್ನು ಸುಪಾದ, ಸುಭಗಾ ಎಂದೂ ಕರೆದಿದೆ.

ಋಗ್ವೇದದ ಒಂದು, ಮೂರು, ನಾಲ್ಕು ಮತ್ತು ಐದನೇ ಮಂಡಲಗಳಲ್ಲಿ ಸುರಮೆಯ ಉಲ್ಲೇಖವಿದೆ. ಅಸುರರ ಒಂದು ಬಣವಾದ “ಫಣಿ”ಗಳು ಅಂಗೀರಸ ಋಷಿಗೆ ಸೇರಿದ ಹಸುಗಳನ್ನು ಕದ್ದುಕೊಂಡು ಹೋಗಿ, ಗುಹೆಯಲ್ಲಿ ಬಚ್ಚಿಡುತ್ತಾರೆ. ಅಂಗೀರಸರು ಇಂದ್ರನ ಬಳಿ ಅವನ್ನು ಹುಡುಕಿಕೊಡುವಂತೆ ಕೇಳಿಕೊಳ್ಳುತ್ತಾರೆ. ಆಗ, ಆ ಹಸುಗಳನ್ನು ಹುಡುಕಲು ಇಂದ್ರನಿಗೆ ಸಹಾಯ ಮಾಡುವುದು ಈ ಸರಮಾ.

ವಾಲ ಎಂಬ ಶಿಲಾವೃತ ಗುಹೆಯಲ್ಲಿ ಬಚ್ಚಿಡಲಾಗಿದ್ದ ಹಸುಗಳನ್ನು ಹುಡುಕುವುದಕ್ಕೆ ಮುಂಚೆ, ಸರಮೆ ಇಂದ್ರನಲ್ಲಿ ಒಂದು ಕರಾರು ಹಾಕಿರುತ್ತಾಳೆ. ಆಕಾಶದಲ್ಲಿ ವಿಹರಿಸುವಾಗ ಭೂಲೋಕದ ಮನುಷ್ಯರು ಆಹಾರಕ್ಕಾಗಿ ಒದ್ದಾಡುವುದನ್ನು ಕಂಡಿದ್ದ ಸರಮೆಗೆ, ತನ್ನ ಪುಟ್ಟ ಮರಿಗಳ ಬಿಳುಚಿದ ಉಗುರಗಳ ನೆನಪಾಗುತ್ತದೆ. ಮಕ್ಕಳಿಗಾಗಿಯೂ ಮನುಷ್ಯರಿಗಾಗಿಯೂ ಮರುಗುವ ಹೆಣ್ಣು ನಾಯಿ ಸರಮೆ, ಅದನ್ನು ನೆನಪಿಸಿಕೊಂಡು ಇಂದ್ರನಲ್ಲಿ, “ನಾನೇನೋ ಹಸುಗಳನ್ನು ಪತ್ತೆ ಮಾಡಿಕೊಡುತ್ತೇನೆ. ಆದರೆ, ಅದರ ಹಾಲನ್ನು ನೀನು ನನ್ನ ಮರಿಗಳಿಗೂ ಭೂಮಿಯ ಮನುಷ್ಯರಿಗೂ ಕೊಡಬೇಕು” ಅನ್ನುತ್ತಾಳೆ. ಇಂದ್ರ ಅದಕ್ಕೆ ಒಪ್ಪುತ್ತಾನೆ. ಹಸುವಿನ ಹಾಲನ್ನು ಮನುಷ್ಯರು ಕುಡಿಯಲು ಶುರು ಮಾಡಿದ್ದು ಹೀಗೆ ಅನ್ನುತ್ತವೆ ತೈತ್ತಿರೀಯ ಬ್ರಾಹ್ಮಣ ಮತ್ತು ಆಪಸ್ತಂಭ ಸೂತ್ರಗಳು.

ಅಷ್ಟೇ ಅಲ್ಲ, ಹಾಲಿನಿಂದ ಮಜ್ಜಿಗೆ, ಮೊಸರು, ಬೆಣ್ಣೆ, ತುಪ್ಪಗಳ ಆವಿಷ್ಕಾರವನ್ನೂ, ತುಪ್ಪವನ್ನು ಹೋಮಕ್ಕೆ ಬಳಸುವುದನ್ನೂ ತಿಳಿಸಿಕೊಟ್ಟವಳು ಸರಮೆಯೇ ಎಂಬ ಹೇಳಿಕೆಯೂ ವೇದಗಳಲ್ಲಿ ಬರುತ್ತದೆ. ಅಂದಿನಿಂದ ಸರಮಾ ಮತ್ತು ಸಾರಮೇಯಗಳು ಮನುಷ್ಯರ ಗೆಳೆಯರಾದರು ಎನ್ನುವುದೊಂದು ಕಥೆ.

ಸರಮೆಗೆ ಮೊದಲು ಇಂದ್ರ ದೇವಪಕ್ಷಿ ಸುಪರ್ಣನನ್ನು ಹಸುಗಳ ಪತ್ತೆಗಾಗಿ ಕಳಿಸಿರುತ್ತಾನೆ. ಆದರೆ ಸುಪರ್ಣ ಫಣಿಗಳ ಆಮಿಷಕ್ಕೆ ಮಣಿದು ಇಂದ್ರನನ್ನು ವಂಚಿಸುತ್ತಾನೆ. ಆದರೆ ಸರಮೆ ಯಾವ ಲೋಭಕ್ಕೂ ಒಳಗಾಗದೆ ಇಂದ್ರನಿಗೆ ನಿಷ್ಠಳಾಗಿ ಉಳಿಯುತ್ತಾಳೆ. ಈ ಕಾರಣಕ್ಕೆ ‘ನಾಯಿಯ ನಿಷ್ಠೆ’ ವಿಶೇಷವಾಗಿ ಗುರುತಿಸಲ್ಪಡುತ್ತದೆ ಅನ್ನುವುದು ಇನ್ನೊಂದು ಕಥೆ.

ಸರಮೆ ವಾಲದಲ್ಲಿ ಹಸುಗಳನ್ನು ಪತ್ತೆ ಹಚ್ಚಿದಾಗ ಅಸುರ ಫಣಿಗಳು ಅವಳಿಗೆ ಆಮಿಷವೊಡ್ಡುತ್ತಾರೆ. ಇಂದ್ರನಿಗೆ ಹೇಳಬೇಡ, ನಿನಗೆ ನಮ್ಮ ಕೊಳ್ಳೆಯಲ್ಲಿ ಪಾಲು ಕೊಡುತ್ತೇವೆ ಅನ್ನುತ್ತಾರೆ. ಸರಮೆ ಅದನ್ನು ನಿರಾಕರಿಸಿ, ತನ್ನ ನಿರಾಕರಣೆಯ ಕಾರಣಗಳನ್ನು ಅತ್ಯಂತ ತರ್ಕಬದ್ಧವಾಗಿ ವಿವರಿಸುತ್ತಾಳೆ. ಈ ಸಂಭಾಷಣೆಯು ಒಂದು ಋಚೆಯಾಗಿ, ಋಗ್ವೇದದ 10ನೇ ಮಂಡಲದಲ್ಲಿ (10:108) ಸರಮೆಯ ಹೆಸರಿನಲ್ಲಿಯೇ ದಾಖಲಾಗಿದೆ. ಆತ್ರೇಯ ಸೂಕ್ತ ಮತ್ತು ಯಾಸ್ಕನ ನಿರುಕ್ತಗಳಲ್ಲಿಯೂ ಈ ಸಂಭಾಷಣೆಯ ವಿವರಗಳಿವೆ.

ವರಾಹ ಪುರಾಣ ಮತ್ತು ಬೃಹದ್ದೇವತಾ ಕಥನಗಳು ಸರಮೆಯನ್ನು ಒಂದು ಹಂತದಲ್ಲಿ ಅಪ್ರಾಮಾಣಿಕವಾಗಿ ತೋರುತ್ತವೆ. ಆದರೆ, ವೇದಮೂಲ ಶ್ಲೋಕಗಳ ಆಧಾರವಿಟ್ಟು ನೋಡಿದರೆ ಪುರಾಣಗಳ ಈ ಕಥನಗಳು ಸಮಾಧಾನ ತರುವುದಿಲ್ಲ. ಈ ಕಾರಣದಿಂದ ಸುರಮೆಯನ್ನು ಮನುಷ್ಯಸ್ನೇಹಿ ಮತ್ತು ನಿಷ್ಠ ಪ್ರಾಣಿಯನ್ನಾಗಿಯೇ ನೋಡುವುದು ಸೂಕ್ತ ಅನ್ನಿಸುತ್ತದೆ.

ವೇದಕಥನಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ, “ಯಾವ ಪ್ರಾಣಿಯೂ ಹೆಚ್ಚಲ್ಲ, ಯಾವುದೂ ಕಡಿಮೆಯಲ್ಲ; ಯಾವುದೂ ದೈವಿಕವಲ್ಲ, ಯಾವುದೂ ದೈವಿಕ ಅಲ್ಲದೆಯೂ ಇಲ್ಲ; ಎಲ್ಲ ಪ್ರಾಣಿಗಳು ಪರಸ್ಪರ ಪೂರಕ” ಅನ್ನುವುದು ತಿಳಿಯುತ್ತದೆ.

Leave a Reply