ಸರದಾರ ನಡೆಸಿದ ನಿಜಾಯಿತಿ ಪರೀಕ್ಷೆ : ಮಾಧವ ಲಾಹೋರಿ ಕಥೆಗಳು

ಮುಸ್ಸಂಜೆ ಕವಿಯುವಾಗ ಮಾಧವ ಲಾಹೋರಿಗೆ ಅಚ್ಚರಿ ಕಾದಿತ್ತು. ಸರದಾರ ಊರ ಜನರನ್ನು ಕರೆದುಕೊಂಡು ಲಾಹೊರಿಯ ಮನೆ ಮುಂದೆ ಬಂದ. ಅವನ ಹೆಂಡತಿಯೂ ಪಲ್ಲಕ್ಕಿಯಲ್ಲಿ ಬಂದಿದ್ದಳು. ಎಲ್ಲರೂ ಅಲ್ಲಿ ನೆರೆಯುತ್ತಲೇ ಸರದಾರನ ಸಹಾಯಕನಿಗೆ ಹೇಳಿ ಕಳಿಸಲಾಯಿತು ~ ಆನಂದಪೂರ್ಣ

lahori2

ಮಾಧವ ಲಾಹೋರಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮಹಾನ್ ಸತ್ಯವಂತನೆಂದೇ ಹೆಸರಾಗಿದ್ದ. ಎಲ್ಲರೂ ಅವನನ್ನು ಸತ್ಯಸಂಧನೆಂದು ಕೊಂಡಾಡುತ್ತಿದ್ದರು. ಆದರೆ ಮಾಧವ ಲಾಹೋರಿ “ಅಂಥದ್ದೇನಿಲ್ಲ… ನನಗೆ ಸುಳ್ಳು ಹೇಳುವ ಅಗತ್ಯವೇ ಬಂದಿಲ್ಲ ಅಷ್ಟೆ” ಎಂದು ಬಿರುದುಬಾವಲಿಗಳನ್ನು ನಯವಾಗಿ ನಿರಾಕರಿಸಿಬಿಡುತ್ತಿದ್ದ.

ಅಷ್ಟಾದರೂ ಜನ ಅವನ ಬೆನ್ನು ಬಿಡುತ್ತಿರಲಿಲ್ಲ. ಸತ್ಯಸಂಧನೆಂದು ಹಾಡಿ ಹೊಗಳುತ್ತಿದ್ದರು. ಈ ಹೊಗಳಿಕೆ ಒಂದಲ್ಲಾ ಒಂದು ದಿನ ತನ್ನ ಕುತ್ತಿಗೆಗೆ ತರುವುದೆಂದು ಮಾಧೋನಿಗೆ ಅನಿಸುತ್ತಿತ್ತು.

ಮತ್ತು… ಹಾಗೆಯೇ ಆಗಲಿತ್ತು ಕೂಡಾ!

ಒಂದು ಸೋಮಾರಿ ಮಧ್ಯಾಹ್ನ. ಜಗಲಿಯಲ್ಲಿ ಮಾಧೋ ಮತ್ತು ಗೌಸ್ಪೀರ್ ಹುಕ್ಕಾ ಸೇದುತ್ತಾ ಹರಟಿಕೊಂಡು ಕುಳಿತಿದ್ದರು. ಅಂಥಾ ಹೊತ್ತಲ್ಲಿ ಸರದಾರನ ಸೇವಕನೊಬ್ಬ ಓಡೋಡಿ ಬಂದ. ಬಂದವನೇ, “ಮಾಧೋ! ಸರದಾರ ನಿನ್ನನ್ನು ಬರಹೇಳಿದ್ದಾರೆ” ಅಂದ.

ಕಾರಣವಿಷ್ಟೇ! ಕೆಲಸದ ನಿಮಿತ್ತವೋ ಮನದನ್ನೆಯರ ಭೇಟಿಗೋ ಊರಾಚೆ ಹೋಗುವಾಗ ಸರದಾರ ಸುಳ್ಳು ಹೇಳಿಬಿಡುತ್ತಿದ್ದ. ಅದರ ಸುಳಿವು ಸಿಕ್ಕ ಅವನ ಹೆಂಡತಿ, ಮೇಲಿಂದ ಮೇಲೆ ಅವನನ್ನು ಕುರಿತು “ಆ ಮಾಧೋನನ್ನು ನೋಡಿ ಕಲಿಯಿರಿ. ಅವನಿಗೆ ಸುಳ್ಳು ಅಂದರೇನು ಅಂತಲೇ ಗೊತ್ತಿಲ್ಲ….” ಅನ್ನುತ್ತಾ ತಲೆ ಚಚ್ಚಿಕೊಳ್ತಿದ್ದಳು. ಸರದಾರನಿಗೆ ಹೆಂಡತಿಯ ಗಲಾಟೆಯಿಂದೇನೂ ಬೇಸರವಾಗುತ್ತಿರಲಿಲ್ಲ. ಆದರೆ, ಮಾಧೋನನ್ನು ತನ್ನ ಹೆಂಡತಿ ಸತ್ಯಸಂಧ ಎಂದೆಲ್ಲ ಮೆಚ್ಚಿಕೊಳ್ಳುವುದು… ಸಾಲದ್ದಕ್ಕೆ ತನ್ನೆದುರು ಅವನನ್ನು ಆದರ್ಶವಾಗಿ ಇಡುವುದು ಅವನಿಗೆ ಸರಿಕಾಣಲಿಲ್ಲ. ಹೇಳಬೇಕೆಂದರೆ… ಅವನ ಗಂಡಸುತನವನ್ನು ಅದು ಕೆಣಕಿತ್ತು.

ಹೀಗಾಗಿ, ಆ ಸರದಾರ ಮಾಧವ ಲಾಹೋರಿಯ ನಿಜಾಯಿತಿಯನ್ನು ಖಾತ್ರಿಪಡಿಸಿಕೊಂಡೇಬಿಡೋಣ ಅಂತ ತೀರ್ಮಾನ ಮಾಡಿದ. ಸುಳ್ಳು ಹೇಳದ ಮನುಷ್ಯರು ಬದುಕಿರಲು ಸಾಧ್ಯವೇ ಇಲ್ಲ… ಅವನನ್ನು ಹೇಗಾದರೂ ಮಾಡಿ ಸಿಕ್ಕಿಸುತ್ತೇನೆ ಅನ್ನೋದು ಅವನ ಆಲೋಚನೆಯಾಗಿತ್ತು.

ಮಾಧೋ ಸಾಮಾನ್ಯವಾಗಿ ಹಾಗೆಲ್ಲ ಹೋಗುವವನಲ್ಲ. ಆದರೆ, ಅವನ ಸಾಸಿವೆ ಹೊಲದ ಕಂದಾಯ ಕಟ್ಟುವುದು ಸ್ವಲ್ಪ ಬಾಕಿ ಇದ್ದುಬಿಟ್ಟಿತ್ತು. ಅವನದೇನೂ ತಪ್ಪಿರಲಿಲ್ಲ.. ಯಾರೋ ಸಹಾಯ ಕೇಳಿಬಂದರೆಂದು ಕಂದಾಯ ಹಣ ಅವರಿಗೆ ಕೊಟ್ಟುಬಿಟ್ಟಿದ್ದ. ಆ ಮುಲಾಜಿಗೆ ಸರದಾರನನ್ನು ಕಾಣಲು ಹೋದ.

ಟೊಪ್ಪಿಗೆ ಸರಿ ಪಡಿಸಿಕೊಂಡ ಸರದಾರ ಕೇಳಿದ…”ಮಾಧವ ಲಾಹೋರಿ! ನೀನು ಸುಳ್ಳನ್ನೆ ಹೇಳುವುದಿಲ್ಲವಂತೆ ಹೌದಾ?”
“ನಾನು ಸುಳ್ಳು ಹೇಳುವುದಿಲ್ಲ ಸರದಾರ”
“ಹಿಂದೆ ಯಾವತ್ತೂ ಹೇಳಿಲ್ಲವೆ?”
“ಇಲ್ಲ ಸರದಾರ”
“ಮುಂದೆಯೂ ಹೇಳುವುದಿಲ್ಲವೆ?”
“ಇಲ್ಲ ಸರದಾರ”
“ಯಾಕೆ?”
“ನನಗೆ ಸುಳ್ಳು ಹೇಳುವ ಅಗತ್ಯವೇ ಬೀಳುವುದಿಲ್ಲ ಸರದಾರ”
“ಸರಿ… ಆಯಿತು ಹೋಗು… ಮತ್ತೊಮ್ಮೆ ಕರೆದಾಗ ಬರಬೇಕು. ತಿಳಿಯಿತಾ?”
“ಆಗಲಿ ಸರದಾರ”

ಹೀಗೆ ಸಂಭಾಷಣೆ ಮುಗಿಸಿ ಮಾಧೋ ಮನೆಯತ್ತ ಹೊರಟ. ಜೊತೆಯಲ್ಲಿದ್ದ ಗೌಸ್ಪೀರಿಗೆ ಏನೂ ಅರ್ಥವಾಗಲಿಲ್ಲ. ಆದರೆ ಲಾಹೋರಿಗೆ ಸದ್ಯದಲ್ಲೇ ಸಂಚು ಕಾದಿದೆ ಅನ್ನುವ ಸುಳಿವು ಸಿಕ್ಕಿಬಿಟ್ಟತ್ತು.

ನಾಲ್ಕು ದಿನ ಕಳೆದು ಸರದಾರ ಮತ್ತೆ ಲಾಹೋರಿಯನ್ನು ಕರೆಸಿದ. ಪೂರ್ವನಿಯೋಜಿತ ನಾಟಕದಂತೆ, ಅವನ ಸೇವಕರು ಬಳಿ ಇರಲಿಲ್ಲ. ಸರದಾರ ಅರ್ಜೆಂಟಾಗಿ ಎಲ್ಲಿಗೋ ಹೋಗಬೇಕೆಂದಾಯ್ತು.

ಅವನು ಮಾಧೋನ ಬಳಿ, “ನೋಡು ಲಾಹೋರಿ! ನಾನು ಈಗಲೇ ದಕ್ಷಿಣ ದಿಕ್ಕಿಗೆ ಹೊರಡಬೇಕಾಗಿದೆ. ನನ್ನ ಸಹಾಯಕ ಕಂದಾಯ ಸಂಗ್ರಹಕ್ಕೆ ಹೋಗಿದ್ದಾನೆ. ಸ್ವಲ್ಪ ಕಾದಿದ್ದು, ಅವನು ಬರುತ್ತಲೇ, ಸರದಾರ ದಕ್ಷಿಣ ದಿಕ್ಕಿಗೆ ಹೋದರು, ಹಣವನ್ನು ನೀನೇ ಇಟ್ಟುಕೊಂಡಿರು ಎಂದು ಹೇಳು. ನಾನು ನಾಳೆ ಬರುತ್ತೇನೆಂದು ಅವನಿಗೆ ಹೇಳು” ಅಂದ.

ಮಾಧೋ ತಲೆಯಾಡಿಸಿದ. ಸರದಾರ ಕುದುರೆ ಏರಿ ಕೈಬೀಸಿ ಹೊರಟುಹೋದ. ಹತ್ತು ನಿಮಿಷದಲ್ಲೇ ಸಹಾಯಕ ಕಚೇರಿಗೆ ಮರಳಿದ. ಸರದಾರ ಎಲ್ಲಿ ಎಂದು ಲಾಹೋರಿಯನ್ನು ಪ್ರಶ್ನಿಸಿದ. “ಸರದಾರರು ದಕ್ಷಿಣ ದಿಕ್ಕಿಗೆ ಹೋಗುತ್ತೇನೆಂದು ಹೇಳಿದರು. ಹಣವನ್ನು ನೀನೇ ಇಟ್ಟುಕೊಂಡಿರಬೇಕೆಂದು ಸೂಚಿಸಿದ್ದಾರೆ” ಅಂದ. ಸಹಾಯಕ ಅದರಂತೆಯೇ ಮಾಡಿ, “ಸರದಾರ ಯಾವಾಗ ಮರಳುತ್ತಾರೆ ಗೊತ್ತೆ?” ಎಂದು ಕೇಳಿದ.

“ನಾಳೆ ಮರಳುತ್ತೇನೆಂದು ಹೇಳಿದ್ದಾರೆ” ಅಂದ ಲಾಹೋರಿ.

ಆಮೇಲೆ ಅವನು ತನ್ನ ಮನೆಗೆ ವಾಪಸಾದ. ಮುಸ್ಸಂಜೆ ಕವಿಯುವಾಗ ಅವನಿಗೊಂದು ಅಚ್ಚರಿ ಕಾದಿತ್ತು. ಸರದಾರ ಊರ ಜನರನ್ನು ಕರೆದುಕೊಂಡು ಲಾಹೊರಿಯ ಮನೆ ಮುಂದೆ ಬಂದ. ಅವನ ಹೆಂಡತಿಯೂ ಪಲ್ಲಕ್ಕಿಯಲ್ಲಿ ಬಂದಿದ್ದಳು. ಎಲ್ಲರೂ ಅಲ್ಲಿ ನೆರೆಯುತ್ತಲೇ ಸರದಾರನ ಸಹಾಯಕನಿಗೆ ಹೇಳಿ ಕಳಿಸಲಾಯಿತು.

ಅವನು ಬರುತ್ತಲೇ ಸರದಾರ ಮೀಸೆ ತಿರುವುತ್ತಾ, “ಲಾಹೋರಿ ನನ್ನ ಬಗ್ಗೆ ಏನು ಹೇಳಿದ?” ಎಂದು ಕೇಳಿದ.

ಸಹಾಯಕ ವಿನಮ್ರನಾಗಿ “ನೀವು ದಕ್ಷಿಣ ದಿಕ್ಕಿಗೆ ಹೋಗುವುದಾಗಿ ಹೇಳಿದ್ದೀರೆಂದು ತಿಳಿಸಿದ” ಅಂದ. ಲಾಹೋರಿಯನ್ನು ಸಿಕ್ಕಿಸುತ್ತೇನೆ ಅನ್ನುವ ಹಮ್ಮಿನಲ್ಲಿದ್ದ ಸರದಾರನಿಗೆ ಒಂದು ಸಲ ಗಲಿಬಿಲಿಯಾಯಿತು. ಅವನು, “ನೀವು ದಕ್ಷಿಣ ದಿಕ್ಕಿಗೆ ಹೋದಿರೆಂದು ಹೇಳಿದ” ಅನ್ನುವ ಉತ್ತರ ನಿರೀಕ್ಷಿದ್ದ.

ಆದರೆ ಲಾಹೋರಿ ಜಾಣ! ತಾನು ಕೇಳಿಸಿಕೊಂಡಿದ್ದನ್ನು, ಹೇಳಿದವರ ಮಾತುಗಳಾಗಿಯೇ ಮತ್ತೊಬ್ಬರಿಗೆ ತಿಳಿಸಬೇಕೆಂದೂ, ಅದರ ಮೇಲೆ ತನ್ನ ಒಡೆತನ ಸಾಧಿಸಿ, ತನ್ನ ಮಾತುಗಳನ್ನಾಗಿ ಹೇಳಬಾರದೆಂದೂ ಅವನಿಗೆ ಗೊತ್ತಿತ್ತು.

“ಯಾವಾಗ ಮರಳುತ್ತೇನೆಂದು ಹೇಳಿದ?” ಈ ಬಾರಿ ಸರದಾರನ ದನಿ ತಗ್ಗಿತ್ತು.

“ನಾಳೆ ಬೆಳಗ್ಗೆ ಮರಳುವುದಾಗಿ ಹೇಳಿದ್ದೀರಿಂದು ಹೇಳಿದ” ಅಂದ ಸಹಾಯಕ.

ಸರದಾರ ಹೆಂಡತಿಯ ಕಡೆ ನೋಡಿದ. ಅವಳು ಮಾಧವ ಲಾಹೋರಿಗೆ ಕೈಮುಗಿದಳು. ಸರದಾರ ಊರ ಜನಕ್ಕೆ ಕೈಮುಗಿದು, “ನಿಮ್ಮ ಮಾತು ನಿಜ… ಮಾಧವ ಲಾಹೋರಿ ಸತ್ಯಸಂಧ” ಅಂತ ಒಪ್ಪಿಕೊಂಡ.

ಎಲ್ಲರೂ ತಮ್ಮ ತಮ್ಮ ಮನೆಗೆ ಹೊರಟುಹೋದರು.

ಗೌಸ್ಪೀರನಿಗೆ ಏನೊಂದೂ ಅರ್ಥವಾಗಲಿಲ್ಲ. ಮಾಧೋ ಹುಕ್ಕಾ ತಯಾರಿಸಲು ಹೊಗೆಸೊಪ್ಪು ಉಜ್ಜುತ್ತಾ, “ಮತ್ತೊಬ್ಬರ ಮಾತನ್ನು ನಮ್ಮದೇ ತೀರ್ಪಿನೊಂದಿಗೆ ಹೇಳುವುದು ಕೂಡಾ ಸುಳ್ಳಿನ ಮತ್ತೊಂದು ರೂಪ. ನಾನಾದರೂ ಅದನ್ನು ಯಾಕೆ ಮಾಡಲಿ!?” ಅಂದು ತಲೆಕೆರೆದುಕೊಂಡ. 

1 Comment

  1. ಮದೂ ಇದ್ದನೋ ಇಲ್ಲವೋ ಆದರೇ ನಾವೆಲ್ಲ ಗೊತ್ತಿದ್ದೋ ಗೊತ್ತಿಲ್ಲದೆಯೋ ಬೇರೆಯವರದನ್ನು ನಮ್ಮದೇ ಎಂಬಂತೆ ಬಿಂಬಿಸಿ ಮಾತನಾಡಿರುತ್ತೇವೆ… ಸತ್ಯ ಎಷ್ಟೊಂದು ಸರಳ ಸುಂದರ ಅಲ್ವಾ

Leave a Reply