ಗುರುವಿನ ಗುಣ : ಯಾದಿರಾ ಹೇಳುವ ‘ರಾ-ಉಮ್’ ಕಥೆಗಳು

: ಯಾದಿರಾ

ವಾ-ಐನ್-ಸಾಇಲ್ ಪೂರ್ವಾಶ್ರಮದಲ್ಲಿ ಮೂರ್ಖನಾಗಿದ್ದ ಎಂಬುದು ಆಶ್ರಮದಲ್ಲಿದ್ದ ಎಲ್ಲರಿಗೂ ತಿಳಿದಿದ್ದ ಸಂಗತಿ. ಇದನ್ನು ವಾ-ಐನ್ ಕೂಡಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ. ರಾ-ಉಮ್ ನ ಪ್ರೀತಿ ಪಾತ್ರ ಶಿಷ್ಯರಲ್ಲಿ ಒಬ್ಬನಾಗಿದ್ದ ಅವನ ಬಗ್ಗೆ ಇತರರಿಗೆ ಒಂದು ಬಗೆಯ ಅಸೂಯೆಯೂ ಇತ್ತು. ಕೆಲವರಂತೂ ವಾ-ಐನ್ ಈಗಲೂ ಮೂರ್ಖನೇ ಎಂದು ವಾದಿಸುತ್ತಿದ್ದರು.

ಒಂದು ದಿನ ರಾ-ಉಮ್ ತನ್ನ ಶಿಷ್ಯರನ್ನೆಲ್ಲಾ ಕರೆದು ಗೂಢ ಮಂತ್ರವೊಂದನ್ನು ಬೋಧಿಸಿ “ಕಷ್ಟ ಕಾಲದಲ್ಲಿ ಇದನ್ನು ಪಠಿಸಿದರೆ ಅದು ತಕ್ಷಣವೇ ನಿವಾರಣೆಯಾಗುವುದು. ಇದು ಪರಿಣಾಮಕಾರಿಯಾಗಿ ಉಳಿಯಬೇಕೆಂದರೆ ಈ ಮಂತ್ರ ನಿಮ್ಮಲ್ಲಷ್ಟೇ ಉಳಿದಿರಬೇಕು. ಇದನ್ನು ಯಾರಿಗಾದರೂ ಹೇಳಿಕೊಟ್ಟರೆ ಅದು ಕೆಲಸ ಮಾಡುವುದಿಲ್ಲ” ಎಂದು ಹೇಳಿದಳು.

ಗೂಢ ಮಂತ್ರವೊಂದು ದೊರೆತ ಖುಷಿಯಲ್ಲಿ ಶಿಷ್ಯರಿದ್ದರು. ಆ ದಿನವೇ ವಾ-ಐನ್ ಮಾತ್ರ ಪೇಟೆ ಬೀದಿಯಲ್ಲಿ ನಿಂತು ‘ಕಷ್ಟ ನಿವಾರಣಾ ಮಂತ್ರ’ವನ್ನು ಎಲ್ಲರಿಗೂ ಬೋಧಿಸುತ್ತಿದ್ದ. ಇದನ್ನು ಕಂಡು ಗಾಬರಿಯಾದ ಶಿಷ್ಯನೊಬ್ಬ ಕಂಡು ಓಡೋಡಿ ಬಂದು ರಾ-ಉಮ್ ಬಳಿ ಹೇಳಿದ ‘ಅವನೂ ಈಗಲೂ ಮೂರ್ಖನೇ. ಬೀದಿಯಲ್ಲಿ ನಿಂತು ಸಾರ್ವಜನಿಕವಾಗಿ ಕಷ್ಟನಿವಾರಣಾ ಮಂತ್ರವನ್ನು ಬೋಧಿಸುತ್ತಿದ್ದಾನೆ’

ರಾ-ಉಮ್ ಸ್ವಲ್ಪವೂ ವಿಚಲಿತಳಾಗದೆ ತನ್ನ ಪಾನೀಯದ ಬುರುಡೆಯನ್ನು ತೆರೆಯುತ್ತಾ ಹೇಳಿದಳು “ನಾನಂದುಕೊಂಡಿದ್ದು ನಿಜವಾಯಿತು. ಅವನು ಗುರುವಾಗುತ್ತಾನೆ”

2 Comments

Leave a Reply