ಸಮಾಜ ಸುಧಾರಕ ಆಧ್ಯಾತ್ಮಿಕ ಪಥದರ್ಶಕ : ಶ್ರೀ ನಾರಾಯಣ ಗುರು

“ಪ್ರಪಂಚದ ನಾನಾ ದೇಶಗಳಲ್ಲಿ ಹಲವಾರು ಸಂತರು, ದಾರ್ಶನಿಕರನ್ನು ನಾನು ಭೇಟಿಯಾಗಿದ್ದೇನೆ. ಆದರೆ, ಶ್ರೀ ನಾರಾಯಣ ಗುರುಗಳಂಥ ಮಹಾ ಪುರುಷರನ್ನು ನಾನು ಎಲ್ಲೂ ಕಂಡಿಲ್ಲ!” ಎಂದು ಕವಿ ರವೀಂದ್ರರು ಉದ್ಗರಿಸಿದ್ದರು  ~ ಗಾಯತ್ರಿ

ಧಾರ್ಮಿಕ ಸಿದ್ಧಾಂತಗಳು ವಾದಿಸಲಿಕ್ಕೂ ಅಲ್ಲ, ವಾದಿಸಿ ಜಯಿಸಲಿಕ್ಕೂ ಅಲ್ಲ. ಅದು ಸರ್ವರ ಸಮನ್ವಯ ಜೀವನಕ್ಕೆ ಜೀವಾಳವಾಗಬೇಕು.
ಮನುಷ್ಯನನ್ನು ಒಳ್ಳೆಯ ಮನುಷ್ಯನನ್ನಾಗಿ ಮಾಡುವುದೇ ಎಲ್ಲಾ ಧರ್ಮಗಳ ಉದ್ದೇಶಗಳು. ಮತ ಯಾವುದಾದರೇನು, ಮನುಷ್ಯ ಒಳ್ಳೆಯವನಾದರೆ ಸಾಕು.
ಇರುವುದೊಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು; ಜಾತಿಯ ಬಗ್ಗೆ ಕೇಳಬೇಡ, ಹೇಳಬೇಡ, ಚಿಂತಿಸಬೇಡ.

ನಾರಾಯಣ ಗುರು

ದೇವಭೂಮಿ ಎಂದೇ ಖ್ಯಾತಿ ಪಡೆದಿರುವ ಕೇರಳ ಶತಮಾನದ ಹಿಂದೆ ವಿಷಕನ್ನಿಕೆಯಂತೆ ತನ್ನೊಳಗೆ ಅಸಮಾನತೆ, ಅಸ್ಪೃಷ್ಯತೆಗಳ ನಂಜು ತುಂಬಿಕೊಂಡಿತ್ತು. ಜಾತಿಭೇದದ ದಬ್ಬಾಳಿಕೆ ಅಲ್ಲಿನ ಸಮಾಜವನ್ನು ಸತ್ವಹೀನಗೊಳಿಸಿತ್ತು. ಅಲ್ಲಿನ ಜನರ ಮೌಢ್ಯತೆಯನ್ನು ಕಂಡ ಕ್ರಾಂತಿಕಾರಿ ಸಂತ ಸ್ವಾಮಿ ವಿವೇಕಾನಂದರೇ ‘ಕೇರಳವೊಂದು ಹುಚ್ಚರ ಆಸ್ಪತ್ರೆ’ ಎಂಬ ವಿಷಣ್ಣ ಉದ್ಗಾರದೊಂದಿಗೆ ಕೈಚೆಲ್ಲಿದ್ದರು. ಈ ಮೌಢ್ಯದ ಪರದೆಯನ್ನು ಸರಿಸಿ ಕತ್ತಲೆ ಅಳಿಸಲು ಆ ನೆಲದಿಂದಲೇ ಮೂಡಿ ಬಂದ ಬೆಳಕು ಸ್ವಾಮಿ ನಾರಾಯಣ ಗುರುಗಳು.

ಹದಿನೆಂಟು – ಹತ್ತೊಂಬತ್ತನೇ ಶತಮಾನದ ಅವಧಿಯಲ್ಲಿ ಕೇರಳ ಹಾಗೂ ಪೂರ್ವ ಕರಾವಳಿ ಭಾಗದ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿತ್ತು. ಅಸ್ಪೃಷ್ಯತೆ ಎಂಬ ಮನೋರೋಗ ಅಲ್ಲಿ ಭೀಕರ ವಾತಾವರಣವನ್ನೆ ಸೃಷ್ಟಿಸಿತ್ತು. ದೇವಸ್ಥಾನ ಪ್ರವೇಶದ ಮಾತಿರಲಿ, ಕೆಳವರ್ಗದ ಜನರು ಸಾರ್ವಜನಿಕ ರಸ್ತೆಗಳಲ್ಲಿ ಮುಕ್ತವಾಗಿ ಓಡಾಡುವಂತಿರಲಿಲ್ಲ. ತಲೆಗೆ ಮುಂಡಾಸು, ಕಾಲಿಗೆ ಚಪ್ಪಲಿ ಹಾಕುವಂತಿರಲಿಲ್ಲ. ಮಹಿಳೆಯರು ಎದೆ ಮುಚ್ಚಿಕೊಳ್ಳುವಂತಿರಲಿಲ್ಲ. ಸರ್ಕಾರಿ ಶಾಲೆಗಳಿಗೂ ಪ್ರವೇಶ ನಿಷಿದ್ಧವಾಗಿತ್ತು. ಇಂತಹ ಸಂದರ್ಭದಲ್ಲಿ ಕೆಳ ವರ್ಗವೊಂದರಿಂದಲೇ ಜನಿಸಿ ಬಂದ ನಾರಾಯಣ ಗುರುಗಳು ನಡೆಸಿದ ಕ್ರಾಂತಿ ಆ ಭಾಗದಲ್ಲಿ ದೊಡ್ಡದೊಂದ ಬದಲಾವಣೆಯನ್ನೆ ಹುಟ್ಟಿಹಾಕಿತು. ಅಷ್ಟು ಮಾತ್ರವಲ್ಲ, ನಾರಾಯಣ ಗುರುಗಳ ಸುಧಾರಣಾ ನೀತಿಗಳು ದೇಶದ ಇತರ ಭಾಗಗಳಲ್ಲಿನ ಸಾಮಾಜಿಕ ಹೋರಾಟಕ್ಕೂ ಮಾದರಿಯಾದವು.

ಕೇರಳದ ಬೆಂಪಳಂತಿ ಎಂಬ ಗ್ರಾಮದಲ್ಲಿ ಅಸ್ಪೃಷ್ಯತೆಯ ಅವಮಾನ ಉಣ್ಣುತ್ತಿದ್ದ ಈಳವ ಜಾತಿಯ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ ನಾರಾಯಣ ಗುರುಗಳು ಜನಿಸಿದರು. ಬಾಲ್ಯದಿಂದಲೂ ಅವರಿಗೆ ಅಧ್ಯಾತ್ಮದ ಸೆಳೆತ. ತಾರುಣ್ಯದ ಆರಂಭದಲ್ಲೇ ಸಂಸಾರ ಬಂಧನದಿಂದ ಹೊರಬಂದು ಊರೂರು ಅಲೆಯುತ್ತಾ ಸಾಧನೆ ನಡೆಸಿದರು. ಈ ಸಂದರ್ಭದಲ್ಲಿ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಶಿಕ್ಷಣದಿಂದ ವಂಚಿತವಾಗಿದ್ದ ಸಮುದಾಯದ ದುಃಸ್ಥಿತಿ ಅವರನ್ನು ಕರಗಿಸಿತು. ಅಸಮಾನತೆಯನ್ನು ಹೋಗಲಾಡಿಸಲು ಪ್ರತಿರೋಧಕ್ಕಿಂತ ಮೊದಲು ಸ್ವಾಭಿಮಾನ ಬೆಳೆಸುವುದು ಅಗತ್ಯವೆಂದು ಅವರು ಮನಗಂಡರು. ಈ ನಿಟ್ಟಿನಲ್ಲಿ ಅವರು ಇಟ್ಟ ಮೊದಲ ಹೆಜ್ಜೆ ಯೇ ದೇವಾಲಯ ಸ್ಥಾಪನೆ. ಗುರುಗಳ ಅನಂತರದ ನಡೆಗಳೆಲ್ಲವೂ ಈಗ ಸುವರ್ಣ ಇತಿಹಾಸ.

ಭಿನ್ನ ಹಾದಿಯ ನಡಿಗೆ
ಅಸ್ಪೃಶ್ಯತೆಯ ವಿರುದ್ಧದ ಹೋರಾಟದಲ್ಲಿ ದೇವಸ್ಥಾನ ಪ್ರವೇಶ ಚಳುವಳಿಯದು ಪ್ರಮುಖ ಪಾತ್ರ. ಈ ನಿಟ್ಟಿನಲ್ಲಿ ನಾರಾಯಣ ಗುರುಗಳದ್ದು ಭಿನ್ನ ಹಾದಿ. ಅವರು ಸವರ್ಣೀಯರ ಒಡೆತನದ ದೇವಾಲಯ ಪ್ರವೇಶಿಸಲಿಲ್ಲ. ಬದಲಾಗಿ ಅದನ್ನು ಬಹಿಷ್ಕರಿಸಿದರು. ‘ದೇವಾಲಯಕ್ಕೆ ಹೋಗುವ ಹಕ್ಕು ನಿಮಗಿಲ್ಲವೆಂದಾದರೆ ದೇವಾಲಯವನ್ನೇ ನಿಮ್ಮಲ್ಲಿಗೆ ತರುತ್ತೇನೆ’ ಎಂದು ಹೇಳಿ ಅಸ್ಪೃಶ್ಯರಿಗೆ ಪೂಜೆಯ ಹಕ್ಕನ್ನೂ ನೀಡಿದ್ದು ಕೆಳಜಾತಿಗಳಲ್ಲಿ ಸ್ವಾಭಿಮಾನದ ಜಾಗೃತಿಗೆ ಕಾರಣವಾಯಿತು. ಅಡ್ಡಿ ಪಡಿಸಿ ಪ್ರಶ್ನಿಸಲು ಬಂದವರಿಗೆ, ‘ಅದು ನಿಮ್ಮ ಶಿವ ಅಲ್ಲ, ಈಳವರ (ದೂರವಿಡಲ್ಪಟ್ಟ ಒಂದು ಸಮುದಾಯ) ಶಿವ. ಅದರ ಬಗ್ಗೆ ನಿಮಗೆ ಯಾಕೆ ವಿರೋಧ?’ ಎಂದು ಮಾರ್ಮಿಕವಾಗಿ ಪ್ರಶ್ನಿಸಿ ಬಾಯಿ ಮುಚ್ಚಿಸಿದರು. ಕೇರಳ ಮಾತ್ರವಲ್ಲದೆ ಮಂಗಳೂರು, ತಮಿಳುನಾಡುಗಳಲ್ಲೂ ಗುರುಗಳು ತಳ ಸಮುದಾಯಗಳಿಗಾಗಿ ದೇವಾಲಯಗಳನ್ನು ಸ್ಥಾಪಿಸಿದರು. ದಕ್ಷಿಣ ಭಾರತ ಹಾಗೂ ಶ್ರೀಲಂಕಾದಲ್ಲಿ ಒಟ್ಟು 79 ದೇವಸ್ಥಾನಗಳ ಸ್ಥಾಪನೆಗೆ ಗುರುಗಳು ಕಾರಣರಾದರು. ಇದನ್ನವರು ಸ್ವಾಭಿಮಾನ ಮೂಡಿಸುವ, ಕೀಳರಿಮೆ ತೊಲಗಿಸುವ ಮೊದಲ ಹೆಜ್ಜೆಯೆಂದೇ ಭಾವಿಸಿದ್ದರು.

ಸಾಮಾಜಿಕ ಅಸಮಾನತೆಗೆ ಶಿಕ್ಷಣವೇ ಸೂಕ್ತ ಮದ್ದು ಎಂಬುದನ್ನರಿತಿದ್ದ ನಾರಾಯಣ ಗುರುಗಳು ಹಿಂದುಳಿದ ಸಮುದಾಯದ ಮಕ್ಕಳಿಗೆಂದೇ ಶಾಲೆಗಳನ್ನು ತೆರೆಯಲು ಮುಂದಾದರು. ಆದರೆ ಇದಕ್ಕೆ ಆಡಳಿತದ ಪರವಾನಗಿಯ ಅಗತ್ಯವಿತ್ತು. ಜೊತೆಗೆ ದೇವಸ್ಥಾನ ಸ್ಥಾಪನೆಗೆ ಎದುರಾಗಿದ್ದಕ್ಕಿಂತಲೂ ಅತಿ ಹೆಚ್ಚು ಪಟ್ಟು ವಿರೋಧ ಶಾಲಾಸ್ಥಾಪನೆಗೆ ಉಂಟಾಯ್ತು. ಕೇರಳದ ನಾಯರ್ ಹಾಗೂ ಈಳವ ಸಮುದಾಯಗಳ ನಡುವೆ ದೊಡ್ಡ ಸಂಘರ್ಷವೇ ನಡೆದುಹೋಯ್ತು. ಮುಂದಿನ ದಿನಗಳಲ್ಲಿ ಈಳವ ಸಮುದಾಯದ ಶಾಲೆಗಳಿಗೆ ಪರವಾನಗಿ ದೊರಕಿದ್ದು ಮಾತ್ರವಲ್ಲದೆ, ಸರ್ಕಾರಿ ಶಾಲೆಗಳಲ್ಲಿ ಎಲ್ಲ ಜಾತಿ ಮತದವರಿಗೆ ಪ್ರವೇಶಾವಕಾಶವನ್ನೂ ಕಲ್ಪಿಸಲಾಯಿತು. ಈ ವೇಳೆಗೆ ಗುರುಗಳು ಕಾಲವಾಗಿದ್ದರೂ ಇದು ಅವರ ಚಳವಳಿಗೆ ಸಂದ ಜಯವಾಗಿತ್ತು.

ವರ್ಕಳದಲ್ಲಿ ಆಶ್ರಮವೊಂದನ್ನು ಸ್ಥಾಪಿಸಿದ್ದ ಗುರುಗಳು ಬೆಟ್ಟದ ಶಿಖರವೇರಿ ಧ್ಯಾನನಿರತರಾಗುತ್ತಿದ್ದರು. ಈ ಬೆಟ್ಟಕ್ಕೆ ಶಿವಗಿರಿ ಎಂದು ನಾಮಕರಣ ಮಾಡಿದರು. ಇಲ್ಲೊಂದು ಶಾರದಾ ಮಂದಿರವನ್ನೂ ಸ್ಥಾಪಿಸಿದರು. ಬಹುತೇಕವಾಗಿ ಗುರುಗಳು ಶಿವಲಿಂಗ ಹಾಗೂ ದೇವೀ ಮಂದಿರಗಳನ್ನೇ ಪ್ರತಿಷ್ಠಾಪನೆ ಮಾಡಿದ್ದು.

ಲೌಕಿಕದಲ್ಲೂ ಆತ್ಮೋನ್ನತಿ
ನಾರಾಯಣ ಗುರುಗಳು ರಾಜ್ಯಾದ್ಯಂತ ಪ್ರವಾಸ ಮಾಡಿ ಸಾಮಾಜಿಕ ಅನಿಷ್ಟಗಳ ವಿರುದ್ಧ ಜನಜಾಗೃತಿ ಮಾಡಿದ್ದರು. ಮೂಢನಂಬಿಕೆ ಮತ್ತು ದುಂದುವೆಚ್ಚದ ಅಂಧ ಸಂಪ್ರದಾಯಗಳನ್ನು ಕಿತ್ತೊಗೆಯಲು ಹೋರಾಟ ನಡೆಸಿದ್ದರು. ವಿವಾಹಗಳನ್ನು ಸರಳಗೊಳಿಸಿದರು. ಸಹಭೋಜನಕ್ಕೆ ಪ್ರೋತ್ಸಾಹ ನೀಡಿದರು. ಹೆಂಡ ಇಳಿಸುವುದಕ್ಕೆ ಪರ್ಯಾಯವಾಗಿ ತೆಂಗಿನ ನಾರಿನ ಉದ್ದಿಮೆಯಲ್ಲಿ ತೊಡಗುವಂತೆ ಪ್ರೇರೇಪಿಸಿದರು. ಇದಕ್ಕಾಗಿ ಕೈಗಾರಿಕಾ ಸಮ್ಮೇಳನಗಳನ್ನು ನಡೆಸಿದರು. ಇದರಿಂದಾಗಿಯೇ ಇಂದು ಕೇರಳ ರಾಜ್ಯವು ತೆಂಗಿನನಾರು ಉದ್ದಿಮೆಯಲ್ಲಿ ಮುಂಚೂಣಿಯನ್ನು ತಲುಪಿರುವುದು. 

‘ಸಂಘಟನೆಯಿಂದ ಶಕ್ತಿಯುತರಾಗಿರಿ, ಕೈಗಾರಿಕೆಗಳ ಮೂಲಕ ಆರ್ಥಿಕ ಸ್ವಾತಂತ್ರ್ಯ ಪಡೆಯಿರಿ, ಶಿಕ್ಷಣದ ಮೂಲಕ ಸ್ವತಂತ್ರರಾಗಿ’ ಎಂಬುದು ನಾರಾಯಣ ಗುರುಗಳ ಉಪದೇಶವಾಗಿತ್ತು. ಹೀಗೆ ಸಮುದಾಯದ ಆತ್ಮೋನ್ನತಿಗಾಗಿ ವ್ಯಾವಹಾರಿಕ ದಿಕ್ಕಿನಲ್ಲಿಯೂ ಚಿಂತನೆ ನಡೆಸಿದ ಧಾರ್ಮಿಕ ನೇತಾರರು ಕಾಣಸಿಗುವುದು ಅತಿ ವಿರಳ. ಈ ಕಾರಣದಿಂದಲೇ ಕವಿ ರವೀಂದ್ರರು `ಪ್ರಪಂಚದ ನಾನಾ ದೇಶಗಳಲ್ಲಿ ಹಲವಾರು ಸಂತರು, ದಾರ್ಶನಿಕರನ್ನು ನಾನು ಭೇಟಿಯಾಗಿದ್ದೇನೆ. ಆದರೆ, ಶ್ರೀ ನಾರಾಯಣ ಗುರುಗಳಂಥ ಮಹಾ ಪುರುಷರನ್ನು ನಾನು ಎಲ್ಲೂ ಕಂಡಿಲ್ಲ!’ ಎಂದು ಉದ್ಗರಿಸಿದ್ದು.

Leave a Reply