ಫಲಕ್ಕಿಂತ ಕರ್ಮದಲ್ಲೇ ಹೆಚ್ಚು ಆನಂದ : ಸಾನೆ ಗುರೂಜಿ #6

Pandurang_Sadashiv_Sane

ನಮಗೆ ಸಂಯಮವೇ ಇಲ್ಲ. ಮಾವಿನ ಓಟೆಯನ್ನು ಹುಗಿದು, ಅದು ಮೊಳೆತಿದೆಯೋ ಇಲ್ಲವೋ ಎಂದು ಪ್ರತಿದಿನವೂ ತೆಗೆದು ನೋಡುತ್ತಿದ್ದ ಬಾಲಕನಂತೆ ನಮ್ಮ ವರ್ತನೆ ಇರುತ್ತದೆ. ಹಾಗೆ ಹುಗಿದ ಓಟೆಯನ್ನು ತೆಗೆದುನೋಡುತ್ತಲೇ ಇದ್ದರೆ ಅದು ಎಂದಿಗಾದರೂ ಚಿಗುರಲು ಸಾಧ್ಯವೇ? ಹಾಗೆಯೇ, ಕರ್ಮಫಲದ ಬಗ್ಗೆ ತಲೆಕೆಡಿಸಿಕೊಂಡು, ಅದನ್ನೇ ಚಿಂತಿಸುತ್ತಿದ್ದರೆ, ಫಲ ದೊರೆಯುವುದು ಸಾಧ್ಯವೇ? ~ ಸಾನೆ ಗುರೂಜಿ

ಗವದ್ಗೀತೆ ಮುಖ್ಯವಾಗಿ ಕರ್ಮ ಮತ್ತು ಕರ್ಮಫಲತ್ಯಾಗವನ್ನು ಬೋಧಿಸುತ್ತದೆ. ಜ್ಞಾನವಿಜ್ಞಾನಪೂರ್ವಕವಾಗಿ, ನಿಷ್ಠೆಯಿಂದ ಮತ್ತು ಪ್ರೀತಿಯಿಂದ ನಮ್ಮ ಕರ್ಮವನ್ನು – ಅಂದರೆ ಕೆಲಸವನ್ನು ನಾವು ಮಾಡಬೇಕು. ಇದು ಸಾಧ್ಯವಾಗಬೇಕೆಂದರೆ ಸಂಯಮವನ್ನು ರೂಢಿಸಿಕೊಳ್ಳುವುದು ಬಹಳ ಮುಖ್ಯ. ಸಂಯಮವಿಲ್ಲದೆ ಹೋದರೆ ನಮ್ಮ ಕೆಲಸವನ್ನು ನಾವು ಪ್ರೀತಿಯಿಂದ ಮಾಡಲು ಸಾಧ್ಯವಾಗುವುದಿಲ್ಲ.

ನಾವು ಮಾಡುವ ಕೆಲಸದಲ್ಲಿ ಶ್ರದ್ಧೆಯಿಟ್ಟು, ಅದರಲ್ಲೇ ತಲ್ಲೀನರಾಗುತ್ತಾ, ಸೃಷ್ಟಿಯೊಡನೆ ಗೆಳೆತನ ಬೆಳೆಸಿ, ಮನಸ್ಸನ್ನು ಭೇದಗಳಾಚೆ ಒಯ್ದು, ಅದನ್ನು ಚಿನ್ಮಯ ಸಾಮ್ರಾಜ್ಯದಲ್ಲಿ ತೇಲಾಡಿಸಬೇಕು ಎಂದು ಗೀತೆ ಹೇಳುತ್ತದೆ.

ಇದನ್ನು ಸಾಧಿಸಬೇಕಾದರೆ, ಇನ್ನೂ ಒಂದು ವಸ್ತುವಿನ ಅಗತ್ಯವಿದೆ; ಅದು, ಕರ್ಮಫಲತ್ಯಾಗ. ಅಂದರೆ, ಫಲದ ಆಸೆಯನ್ನು ಬಿಟ್ಟು ಕೆಲಸ ಮಾಡುವುದು. ಕರ್ಮದಲ್ಲಿ ಅದೆಷ್ಟು ತಲ್ಲೀನರಾಗಬೇಕೆಂದರೆ, ಫಲಕ್ಕಾಗೆ ಆಸೆಪಡಲೂ ಪುರುಸೊತ್ತು ಸಿಗಬಾರದು. ಸಂತ ಜನಾಬಾಯಿ “ದೇವರನ್ನೇ ತಿನ್ನಬೇಕು, ದೇವರನ್ನೆ ಕುಡಿಯಬೇಕು” ಎನ್ನುತ್ತಿದ್ದರು. ಹಾಗೆಯೇ, ಜೀವನವು ಕರ್ಮದಿಂದ ತುಂಬಿತುಳುಕಬೇಕು. ನಮ್ಮ ಧ್ಯೇಯ, ನಮ್ಮ ಸೇವಾಕರ್ಮ – ಅದನ್ನೇ ತಿನ್ನುವುದು, ಕುಡಿಯುವುದು… ಯಾವಾಗಲೂ ಕರ್ಮದ ವಿಚಾರವೇ ನಮ್ಮಲ್ಲಿ ತುಂಬಿರಬೇಕೆಂದು ಇದರ ಅರ್ಥ. ನಿದ್ರಿಸುವಾಗಲೂ ನಮಗೆ ಈ ಪ್ರಜ್ಞೆ ಇರಬೇಕು.

ಮಹಾತ್ಮಾ ಗಾಂಧೀಜಿ, “ನನಗೆ ನಿದ್ರಿಸುವಾಗಲೂ ಹರಿಜನ ಸೇವೆಯ ಕನಸುಗಳೇ ಬೀಳುತ್ತವೆ” ಎನ್ನುತ್ತಿದ್ದರು. ರಾಮತೀರ್ಥರು ನಿದ್ದೆಯಲ್ಲಿ ಗಣಿತದ ಸಮಸ್ಯೆಗಳನ್ನು ಬಿಡಿಸುತ್ತಿದ್ದರು. ಗುರುನಾನಕರು ಭಗವಂತನಲ್ಲಿ “ನನಗೆ ಮತ್ತೇನೂ ಬೇಡ, ನಿನ್ನ ಸ್ಮರಣೆಯೇ ನನ್ನ ಬದುಕಾಗಲಿ” ಎಂದು ಬೇಡಿಕೊಂಡಿದ್ದರಂತೆ. ಅರ್ಜುನನ ವಿಷಯವಾಗಿಯೂ ಇಂಥದೊಂದು ಕಥೆಯಿದೆ. ಒಮ್ಮೆ ಕೃಷ್ಣನು ಉದ್ಧವನನ್ನು ಕುರಿತು, “ಅರ್ಜುನ ಏನು ಮಾಡುತ್ತಿದ್ದಾನೆ ನೋಡಿಕೊಂಡು ಬಾ” ಅನ್ನುತ್ತಾನೆ. ಉದ್ಧವ ಹೋಗಿ ನೋಡಿದಾಗ, ಅರ್ಜುನ ತನ್ನ ಕೋಣೆಯಲ್ಲಿ ಮಲಗಿ ನಿದ್ರಿಸುತ್ತಿರುತ್ತಾನೆ. ಆದರೆ ಅವನ ಮೈಯಿಂದ “ಕೃಷ್ಣ… ಕೃಷ್ಣ…” ಎಂಬ ಮಧುರ ಸಂಕೀರ್ತನ ಕೇಳುತ್ತಾ ಇರುತ್ತದೆ. ಅರ್ಜುನ ಮಲಗಿದ್ದರೂ ಸದಾ ಕೃಷ್ಣಸ್ಮರಣೆಯೇ ಅವನಲ್ಲಿ ತುಂಬಿಕೊಂಡಿರುವುದರಿಂದ ಅವನ ರೋಮರೋಮಗಳೂ ಕೃಷ್ಣ ಕೃಷ್ಣ ಎಂದು ಪಠಿಸುತ್ತಿರುತ್ತವೆ.

ಹೀಗೆ ಮನುಷ್ಯನು ಯಾವಾಗ ಸ್ವಕರ್ಮದಲ್ಲಿಯೇ ತಲ್ಲೀನನಾಗಲು ಸಾಧ್ಯವಾಗುವುದು? ತಾನು ಮಾಡುವ ಕರ್ಮದ ಫಲವನ್ನು ಮರೆತಾಗ ಮಾತ್ರ ಇದು ಸಾಧ್ಯವಾಗುವುದು. ಆದರೆ ನಮಗೆ ಸಂಯಮವೇ ಇಲ್ಲ. ಮಾವಿನ ಓಟೆಯನ್ನು ಹುಗಿದು, ಅದು ಮೊಳೆತಿದೆಯೋ ಇಲ್ಲವೋ ಎಂದು ಪ್ರತಿದಿನವೂ ತೆಗೆದು ನೋಡುತ್ತಿದ್ದ ಬಾಲಕನಂತೆ ನಮ್ಮ ವರ್ತನೆ ಇರುತ್ತದೆ. ಹಾಗೆ ಹುಗಿದ ಓಟೆಯನ್ನು ತೆಗೆದುನೋಡುತ್ತಲೇ ಇದ್ದರೆ ಅದು ಎಂದಿಗಾದರೂ ಚಿಗುರಲು ಸಾಧ್ಯವೇ? ಹಾಗೆಯೇ, ಕರ್ಮಫಲದ ಬಗ್ಗೆ ತಲೆಕೆಡಿಸಿಕೊಂಡು, ಅದನ್ನೇ ಚಿಂತಿಸುತ್ತಿದ್ದರೆ, ಫಲ ದೊರೆಯುವುದು ಸಾಧ್ಯವೇ?

ಆಳವಾಗಿ ನೋಡಿದರೆ ಮನುಷ್ಯನ ಆನಂದವೆಲ್ಲಾ ಕರ್ಮದಲ್ಲಿ ಇರುವುದೇ ಹೊರತು, ಕರ್ಮಫಲದಲ್ಲಿ ಅಲ್ಲ. ನಮ್ಮ ಕೈ – ಕಾಲು, ಬುದ್ಧ – ಹೃದಯಗಳೆಲ್ಲ ಯಾವಾಗಲೂ ಸತ್ಕರ್ಮದಲ್ಲಿ ತೊಡಗಿಕೊಂಡಿದ್ದರೆ ನಿರಂತರ ಆನಂದ ನಮ್ಮದಾಗಿರುತ್ತದೆ. ಇಂಗ್ಲೆಂಡಿನ ಪ್ರಸಿದ್ಧ ಇತಿಹಾಸಕಾರ ಗಿಬನ್’ನು ಪ್ರಪಂಚದ ಇತಿಹಾಸ ಬರೆದು ಮುಗಿಸಿದ ರಾತ್ರಿ ಬಿಕ್ಕಿಬಿಕ್ಕಿ ಅತ್ತುಬಿಟ್ಟನಂತೆ. ಇತಿಹಾಸವನ್ನು ಬರೆಯುವಾಗ ಪ್ರತಿಕ್ಷಣವನ್ನೂ ಆನಂದಿಸಿದ್ದ ಅವನಿಗೆ, ಬರೆದು ಮುಗಿಸಿದ ಮೇಲೆ ಆನಂದಸ್ರೋತವೇ ಹರಿದುಹೋದಂತಾಯಿತು. ಮುಂದೇ ಮಾಡುವುದೇನು? ಆನಂದದ ಮೂಲವೆಲ್ಲಿದೆ? ಎಂಬ ಯೋಚನೆ ಅವನನ್ನು ಕಾಡತೊಡಗಿತು. ಬರೆದು ಮುಗಿಸಿದ ನಂತರ ದೊರೆಯುವ ಕರ್ಮಫಲಕ್ಕಿಂತ, ಬರೆಯುವ ಕರ್ಮವೇ ಅವನಿಗೆ ಪ್ರಿಯವಾಗಿತ್ತು.

ಆದ್ದರಿಂದ, ಕರ್ಮವು ಶ್ರೇಷ್ಠವಾಗಬೇಕಾದರೆ, ಕರ್ಮಫಲ ತ್ಯಾಗವು ಅತ್ಯವಶ್ಯಕ. ಯಾವಾಗಲೂ ಫಲದ ಚಿಂತೆಯಲ್ಲಿ ತೊಡಗಿದವನಿಗಿಂತ ಹೆಚ್ಚು ಫಲ ಕರ್ಮದಲ್ಲಿ ಮೈಮರೆತವನಿಗೆ ದೊರೆಯುತ್ತದೆ. ಫಲದ ಚಿಂತೆ ಮಾಡುವವನ ಅಧಿಕ ಸಮಯವು ಚಿಂತೆಯಲ್ಲೇ ಕಳೆದುಹೋಗುತ್ತದೆ ಮತ್ತು ಶ್ರದ್ಧೆ – ಏಕಾಗ್ರತೆಗಳಿಂದ ಸಮರ್ಥವಾಗಿ ಕೆಲಸ ಮಾಡಲು ಸಾಧ್ಯವಾಗದೆ ಹೋಗಬಹುದು.

ರಾಮಕೃಷ್ಣ ಪರಮಹಂಸರು ಒಂದು ಸಾಮತಿಯನ್ನು ಹೇಳುತ್ತಿದ್ದರು. ಅರಳುವುದು ತಾವರೆಯ ಸಹಜ ಸ್ವಭಾವ. ಹಗಲಿರುಳು ಕೆಸರಲ್ಲಿ ಒದ್ದಾಡುತ್ತಿರುವ ತಾವರೆಯು ಸೂರ್ಯನತ್ತ ಮುಖ ಮಾಡಿಕೊಂಡು ಅರಳಲು ಯತ್ನಿಸುತ್ತದೆ. ತನ್ನ ಈ ಪ್ರಯತ್ನದಲ್ಲಿ ಅದು ಅರಳುವುದನ್ನೇ ಮರೆತುಬಿಡುತ್ತದೆ. ಹೀಗೇ ಒಂದು ದಿನ ತಾವರೆ ಅರಳಿಕೊಳ್ಳುತ್ತದೆ. ಆಗ ಅದಕ್ಕೆ ತಾನು ಅರಳಿರುವ ಅರಿವೂ ಇರುವುದಿಲ್ಲ! ಅದರ ಬಣ್ಣ ಮತ್ತು ಕಂಪಿನತ್ತ ಆಕರ್ಷಿತವಾಗುವ ದುಂಬಿಗಳು ತಾವರೆಯ ಬಳಿ ಬಂದು ಮುದ್ದಿಡುತ್ತವೆ. ಹೀಗೆ ತಾವರೆಯ ಪ್ರಯತ್ನ ಸಾರ್ಥಕಗೊಳ್ಳುತ್ತದೆ.

ನಮ್ಮ ಸ್ಥಿತಿಯೂ ಹೀಗೇ ಆಗಬೇಕು. ಪ್ರಯತ್ನದಲ್ಲಿ ಎಷ್ಟು ಮೈಮರೆಯಬೇಕೆಂದರೆ, ಫಲ ದೊರಕಿರುವುದೂ ನಮಗೆ ಅರಿವಾಗಬಾರದು. ಆಗ ಮಾತ್ರ ನಮ್ಮ ಪ್ರಯತ್ನ ನಿಜವಾದ ಸಾರ್ಥಕ್ಯ ಪಡೆಯುವುದು.

ಹಿಂದಿನ ಭಾಗವನ್ನು ಇಲ್ಲಿ ಓದಿ : https://aralimara.com/2018/08/06/sane5/

ಪಾಂಡುರಂಗ ಸದಾಶಿವ ಸಾನೆ, ಮಹಾರಾಷ್ಟ್ರದಲ್ಲಿ ಆಗಿಹೋದ (1899 – 1950) ಚಿಂತಕ, ಲೇಖಕ, ಶಿಕ್ಷಕ ಮತ್ತು ಸಾಮಾಜಿಕ ಕಾರ್ಯಕರ್ತ. ಇವರು ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದರು.  ಮರಾಠಿ ಭಾಷೆಯಲ್ಲಿ ಇವರು ಹಲವು ಕೃತಿಗಳನ್ನು ರಚಿಸಿದ್ದು, ಅವುಗಳಲ್ಲಿ ಶ್ಯಾಮಾ ಚಿ ಆಯಿ ಮತ್ತು ಭಾರತೀಯ ಸಂಸ್ಕೃತಿ ಮುಖ್ಯವಾದವು. ಈ ಲೇಖನವನ್ನು ‘ಭಾರತೀಯ ಸಂಸ್ಕೃತಿ’ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ. 

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.