ಮಾಸ್ಟರ್ ಬಾಂಕಿಯ ಪ್ರವಚನ : ಝೆನ್ ಕಥೆ

ಮಾಸ್ಟರ್ ಬಾಂಕಿಯ ಪ್ರವಚನಗಳಿಗೆ ಬರೀ ಅವನ ಶಿಷ್ಯರಷ್ಟೇ ಅಲ್ಲ ಸುತ್ತಮುತ್ತಲಿನ ಊರುಗಳ ಎಲ್ಲಾ ಸ್ತರದ ಜನರೂ ಸೇರುತ್ತಿದ್ದರು.

ಬಾಂಕಿ, ತನ್ನ ಪ್ರವಚನದಲ್ಲಿ ಸಂಕೀರ್ಣ ಬೌದ್ಧ ಸೂತ್ರಗಳನ್ನು ಬಳಸುತ್ತಿರಲಿಲ್ಲ ಬದಲಾಗಿ ಸರಳವಾಗಿ ಝೆನ್ ಬಳಕೆಯನ್ನು ನೇರವಾಗಿ ಸಾಮಾನ್ಯ ಜನರಿಗೆ ಮುಟ್ಟುವಂತೆ ವಿವರಿಸುತ್ತಿದ್ದ.

ಅವನ ಸಭೆಗಳಿಗೆ ಸೇರುತ್ತಿದ್ದ ಅಪಾರ ಜನಸಂಖ್ಯೆಯನ್ನು ಕಂಡು ಆ ಊರಿನ ದೇವಸ್ಥಾನದ ಮುಖ್ಯ ಅರ್ಚಕನಿಗೆ ತಂಬಾ ಸಿಟ್ಟು ಬರುತ್ತಿತ್ತು. ಅವನ ಹತ್ತಿರ ಬರುತ್ತಿದ್ದ ಸುಮಾರು ಜನ ಈಗ ಬಾಂಕಿಯ ಪ್ರವಚನ ಕೇಳಲು ಹೋಗುತ್ತಿದ್ದರು.

ಒಂದು ದಿನ ಅರ್ಚಕ, ಬಾಂಕಿಯ ಸಭೆಗೆ ಬಂದು ಅವನನ್ನು ವಾಗ್ವಾದಕ್ಕೆ ಆಹ್ವಾನಿಸಿದ,
“ ಬಾಂಕಿ, ಇಲ್ಲಿ ಕುಳಿತಿರುವವರಿಗೆಲ್ಲ ನೀನು ಮೋಡಿ ಮಾಡಿದ್ದೀ…. ಆದ್ದರಿಂದ ಅವರು ನಿನ್ನ ಮಾತು ಕೇಳುತ್ತಾರೆ. ನಿನ್ನ ಮಾತುಗಳಿಗೆ ಅಂಥ ಶಕ್ತಿ ಇದ್ದರೆ, ನಾನು ನಿನ್ನ ಮಾತು ಕೇಳುವಂತೆ ಮಾಡು ನೋಡೋಣ

ಬಾಂಕಿ ಪ್ರೀತಿಯಿಂದ ಅರ್ಚಕನನ್ನು ಮಾತಾಡಿಸಿದ.
ಬಾಂಕಿ : ಗುರುಗಳೇ, ಇಲ್ಲಿ ಮೇಲೆ ಬನ್ನಿ ಸಾಧ್ಯವಾದರೆ ನಿಮ್ಮ ಪಂಥವನ್ನು ಸ್ವೀಕರಿಸುತ್ತೇನೆ
ಅರ್ಚಕ ಎಲ್ಲ ಜನರನ್ನು ನೂಕಿಕೊಂಡು ವೇದಿಕೆಯ ಹತ್ತಿರ ಹೋದ.

ಬಾಂಕಿ : ಇಲ್ಲಿ ಮೇಲೆ ಬನ್ನಿ , ನನ್ನ ಎಡಕ್ಕೆ ಕುಳಿತುಕೊಳ್ಳಿ.
ಅರ್ಚಕ ವೇದಿಕೆಯನ್ನೇರಿ ಎಡ ಭಾಗದಲ್ಲಿ ಕುಳಿತುಕೊಂಡ.

ಬಾಂಕಿ : ಓಹ್ ! ಅಲ್ಲಿ ಬೇಡ, ನನ್ನ ಬಲಕ್ಕೆ ಕುಳಿತುಕೊಳ್ಳಿ ಮಾತಿಗೆ ಅನುಕೂಲವಾಗುವುದು.
ಅರ್ಚಕ ಎದ್ದು ಬಾಂಕಿಯ ಬಲಕ್ಕೆ ಹೋಗಿ ಕುಳಿತುಕೊಂಡ.

ಬಾಂಕಿ : ನೋಡಿ, ನೀವು ತುಂಬ ಒಳ್ಳೆಯ ಮನುಷ್ಯರ ಹಾಗೆ ಕಾಣುತ್ತೀರಿ. ನನ್ನ ಎಲ್ಲ ಮಾತುಗಳನ್ನು ನಮ್ರತೆಯಿಂದ ಪಾಲಿಸಿದಿರಿ. ಈಗ ಹೋಗಿ ಕೆಳಗೆ ಕುಳಿತು ಪ್ರವಚನ ಕೇಳಿ.

ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ

Leave a Reply