`ಇಡಿಯ ಜಗತ್ತು ನನ್ನ ವಿರುದ್ಧ ಕತ್ತಿ ಮಸೆಯುತ್ತಿದೆ….’ ಏನಿದರ ಅರ್ಥ?

`ಇಡಿಯ ಜಗತ್ತು ನನ್ನ ವಿರುದ್ಧ ಕತ್ತಿ ಮಸೆಯುತ್ತಿದೆ….’ ಏನಿದರ ಅರ್ಥ? ಜಗತ್ತಿಗೆ ತನ್ನದೇ ಆದ ಪಾಡು ಇರುತ್ತದೆ. ಜನಕ್ಕೆ ನಿತ್ಯವೂ ತುತ್ತಿನ ಚೀಲ ತುಂಬಿಸಿಕೊಳ್ಳುವ ಅನಿವಾರ್ಯತೆ. ಹೀಗಿರುವಾಗ ಯಾರದ್ದಾದರೂ ವಿರುದ್ಧ ಕತ್ತಿ ಮೆಸೆಯುತ್ತ ಕೂರಲು ಅದಕ್ಕೆಲ್ಲಿ ಪುರುಸೊತ್ತು? ನಮಗೆ ಹಾಗನ್ನಿಸುವುದು ನಮ್ಮೊಳಗಿನ ಕೊರತೆಯಿಂದಲಷ್ಟೆ.  ~ ಗಾಯತ್ರಿ

ನುಷ್ಯ ತನ್ನ ಅಸ್ತಿತ್ವವನ್ನು ಖಾತ್ರಿಪಡಿಸಿಕೊಳ್ಳುವುದೇ ಅಹಂಕಾರದಿಂದ. ಒಂದು ದಿನ ತಾನು ಅವಜ್ಞೆಗೆ ಒಳಗಾದೆ, ಯಾರೂ ನನ್ನನ್ನು ಗಮನಿಸುತ್ತಿಲ್ಲ ಎಂದು ಅನ್ನಿಸಿದರೂ ಸಾಕು ತೀವ್ರ ಚಡಪಡಿಸಿಹೋಗುತ್ತಾನೆ. ಜನರ ಗಮನ ಸೆಳೆಯಲು ತಂತ್ರಗಳನ್ನು ಹೂಡುತ್ತಾನೆ. ಇದು ಅತಿರೇಕಕ್ಕೆ ಹೋದಾಗಲೇ ಅಪರಾಧಗಳು ಸಂಭವಿಸುವುದು. ತನ್ನ ಅಹಂಕಾರ ತೃಪ್ತಿಗಾಗಿ ವ್ಯಕ್ತಿಯು ತನ್ನನ್ನು ತಾನು ಸಾಬೀತುಪಡಿಸಿಕೊಳ್ಳಲು ಹೊರಡುತ್ತಾನೆ. ಇತರರೆದುರು ಅದನ್ನು ಮಾಡಲಾಗದೆ ಹೋದಾಗ ತನ್ನ್ನನ್ನು ತಾನೇ ತೃಪ್ತಿಪಡಿಸಿಕೊಳ್ಳಲು ಹೊರಡುತ್ತಾನೆ. ಎಲ್ಲ ವಿಕೃತಿಗಳ ಬೀಜ ಮೊಳೆಯುವುದು ಈ ಘಳಿಗೆಯಲ್ಲೇ.

`ಇಡಿಯ ಜಗತ್ತು ನನ್ನ ವಿರುದ್ಧ ಕತ್ತಿ ಮಸೆಯುತ್ತಿದೆ….’ ಏನಿದರ ಅರ್ಥ? ಜಗತ್ತಿಗೆ ತನ್ನದೇ ಆದ ಪಾಡು ಇರುತ್ತದೆ. ಜನಕ್ಕೆ ನಿತ್ಯವೂ ತುತ್ತಿನ ಚೀಲ ತುಂಬಿಸಿಕೊಳ್ಳುವ ಅನಿವಾರ್ಯತೆ. ಹೀಗಿರುವಾಗ ಯಾರದ್ದಾದರೂ ವಿರುದ್ಧ ಕತ್ತಿ ಮೆಸೆಯುತ್ತ ಕೂರಲು ಅದಕ್ಕೆಲ್ಲಿ ಪುರುಸೊತ್ತು? ನಮಗೆ ಹಾಗನ್ನಿಸುವುದು ನಮ್ಮೊಳಗಿನ ಕೊರತೆಯಿಂದಲಷ್ಟೆ. ನಮ್ಮನ್ನು ನಾವು ದ್ವೇಷಿಸಿಕೊಳ್ಳುತ್ತಿರುವಷ್ಟೂ ದಿನ, ನಮ್ಮನ್ನು ನಾವು ವಂಚಿಸಿಕೊಳ್ಳುತ್ತ ಇರುವಷ್ಟೂ ದಿನ ಹಾಗೆ ಭಾವಿಸುತ್ತ ಇರುತ್ತೇವೆ.

ಓಶೋ ಹೇಳುತ್ತಾರೆ, `ನಮ್ಮನ್ನು ನಾವು ಹೇಗೆ ನೋಡಿಕೊಳ್ಳುತ್ತೇವೋ ಆ ದೃಷ್ಟಿಯನ್ನು ಜಗತ್ತಿನ ಮೇಲೆ ಆರೋಪಿಸುತ್ತೇವೆ’ ಎಂದು. ಮತ್ತೊಬ್ಬರ ಅಭಿಪ್ರಾಯಗಳನ್ನು ನಮ್ಮೊಳಗೆ ನಾವೆ ರೂಪಿಸಿಕೊಳ್ಳುತ್ತಾ ಅದಕ್ಕೆ ಸ್ಪಂದಿಸುತ್ತಾ ಮನಸ್ಸನ್ನು ಕದಡಿಕೊಳ್ಳುತ್ತೇವೆ. ಇದರಿಂದ ಅಶಾಂತಿ ಉಂಟಾಗುತ್ತದೆ. ವಾಸ್ತವವಾಗಿ ಕೊಳದ ನೀರು ನೆಲದ ಕಂಪನದಿಂದ ಕಲಕಿ ರಾಡಿಯಾಗುತ್ತ ಇರುತ್ತದೆ. ನಾವು ಮಾತ್ರ ಯಾರೋ ಹೊರಗಿನಿಂದ ಕಲ್ಲೆಸೆಯುತ್ತ ಇದ್ದಾರೆಂದು ದೂರುತ್ತೇವೆ. ಸಮಸ್ಯೆಯ ಮೂಲ ನಮ್ಮೊಳಗೇ ಇದೆ ಎಂಬುದನ್ನು ಕಂಡುಕೊಳ್ಳಲು ಯಾರೂ ಇಷ್ಟಪಡುವುದಿಲ್ಲ. ಜನರಿಗೆ ಇತರರತ್ತ ಬೆಟ್ಟು ಮಾಡುವುದೆಂದರೆ ವಿಪರೀತ ಖುಷಿ. ಹೀಗೆ ಮಾಡುವ ಮೂಲಕ ಅವರು ತಮ್ಮನ್ನು ತಾವು ಸರಿ ಪಡಿಸಿಕೊಳ್ಳುವ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾರೆ. ದೂರುವ ಮನಸ್ಥಿತಿಯ ಹಿಂದೆ ಇರುವುದು ಇಂಥಾ ಎಸ್ಕೇಪಿಸ್ಟ್ ಮನೋಭಾವವೇ.

ದಾವ್ ಹೇಳುತ್ತದೆ, `ಸುಖವಾಗಿರಬೇಕೇ, ಸುಮ್ಮನಿರು!’ ಎಂದು. ಸುಖವಾಗಿರಲಿಕ್ಕೆ, ಸಂತೋಷ ಅನುಭವಿಸಲಿಕ್ಕೆ ಏನೂ ಮಾಡಬೇಕಿಲ್ಲ. ಸುಮ್ಮನಿದ್ದರೆ ಸಾಕು. ಡೋಜೆನ್‍ಗೆ ಜ್ಞಾನೋದಯವಾಗಿದ್ದು ಇಂಥದೊಂದು `ಸುಮ್ಮನೆ’ ಘಳಿಗೆಯಲ್ಲೇ. ಮರದ ನೆರಳಿನಲ್ಲಿ ಕುಳಿತಿರುತ್ತಾನೆ ಡೋಜೆನ್. ಗಾಳಿ ಬೀಸುತ್ತ ಇರುತ್ತದೆ. ಎಲೆಯೊಂದು ತೊಟ್ಟು ಕಳಚಿ ಗಾಳಿ ಬಂದತ್ತ ತೇಲುತ್ತಾ ಅಲೆಲೆಯಾಗಿ ಕೆಳಗಿಳಿದು ನೆಲ ಮುಟ್ಟುತ್ತದೆ. ಗಾಳಿಗೆ ಅದು ಅತ್ತಿತ್ತ ಚಲಿಸಿದರೂ ಅಂತಿಮವಾಗಿ ಏನಾಗಬೇಕಿತ್ತೋ, ಎಲ್ಲಿಗೆ ಸೇರಬೇಕಿತ್ತೋ ಅಲ್ಲಿಗೆ ಸೇರುತ್ತದೆ. ಇದನ್ನು ಕಂಡ ಡೋಜೆನ್ ಅಂದುಕೊಳ್ಳುತ್ತಾನೆ, `ನಮ್ಮ ಬದುಕೂ ಹೀಗೆಯೇ. ಸುಮ್ಮನಿದ್ದರೆ ಸಾಕು, ಅಸ್ತಿತ್ವ ನಮ್ಮನ್ನು ದಡ ಮುಟ್ಟಿಸುತ್ತದೆ’ ಎಂದು. ಡೋಜೆನ್ ಹೇಳುತ್ತಾನೆ, `ಸಂತೋಷವನ್ನು ಅರಸಿ ಹೋಗುವುದೆಲ್ಲಿಗೆ? ಅದು ನಿಮ್ಮೊಳಗೇ ಇರುತ್ತದೆ. ನೀವು ಇರುವಲ್ಲೇ ಸಂತೋಷ ಪಡಲಾರಿರಿ ಎಂದಾದ ಮೇಲೆ ಅದನ್ನು ಬೇರೆಲ್ಲೂ ಪಡೆಯುಲು ಸಾಧ್ಯವೇ ಇಲ್ಲ!’

ನಮ್ಮೊಳಗಿನ ಆನಂದವನ್ನು ಹೊರಗೆ ತರಬೇಕೆಂದರೆ ಮೊದಲು ಅದರ ಇರುವನ್ನು ಅರಿತುಕೊಳ್ಳಬೇಕು. ಈ ಅರಿವು ಸಾಧ್ಯವಾಗುವುದು ಅಹಂಕಾರದ ತೆರೆ ಸರಿದಾಗ ಮಾತ್ರ. ಅಹಂಕಾರದ ಮುಸುಕಿನಿಂದ ಈಚೆ ಬಂದರೆ ನಮ್ಮೆಲ್ಲ ಒಳಿತು ಕೆಡುಕುಗಳಿಗೂ ನಾವೇ ಬಾಧ್ಯಸ್ಥರು ಎನ್ನುವ ಅರಿವು ಮೂಡುತ್ತದೆ. ಇದರ ಜೊತೆಗೇ ನಮ್ಮ ನಮ್ಮ ಸುಖದುಃಖಗಳಿಗೂ ನಾವೇ ಜವಾಬ್ದಾರರೆಂಬುದು ಮನದಟ್ಟಾಗಿ, ಸದಾ ಸಂತಸದಿಂದ ಇರುವ ಆತ್ಮದ ಸಹಜ ಸ್ವಭಾವವು ಪ್ರಕಟಗೊಳ್ಳುತ್ತದೆ.

 

3 Comments

  1. ನಮ್ಮ ಮನಸ್ಸಿನ ಸ್ಥಿತಿ ಸ್ದಿಮಿತದಲ್ಲಿರಲು ಉತ್ತಮ ಉಪಾಯವೆಂದರೆ ಸುಮ್ಮನಿರುವುದು, ಅದರಲ್ಲಿ ಅಡಗಿದೆ ಸುಖದ ಅನುಭವಕ್ಕೆ ದಾರಿ.
    ಸಮಕಾಲೀನ ಪರಿಸ್ಥಿತಿ ಏನು ಮಾಡೀತು – ಅದು ನಾವು ಯಾವ ರೀತಿ ಪ್ರತಿಕ್ರಿಯಿಸುತ್ತೇವೆಯೋ ಹಾಗಿರುತ್ತದೆ. ಅಲ್ಲಿಯೂ ಸುಮ್ಮನಿದ್ದುಬುಡಿ

  2. ಸುಖವಾಗಿರಬೇಕೆ ಸುಮ್ಮನಿರು.. ಸರಿ. ಸಮಕಾಲೀನ ಸುತ್ತಮುತ್ತೀನ ಪರಿಸರಕ್ಕೆ, ಸಮಾಜಕ್ಕೆ ಪ್ರತಿಕ್ರೀಯಿಸದೇ ಇರಬೇಕೆ? ಆ ನಿಟ್ಟಿನ ಕೆಲಸ ಅಥವಾ ಕರ್ತವ್ಯ ಮಾಡುವುದು ಬೇಡವೇ?

    1. ನಮ್ಮ ಮನಸ್ಸಿನ ಸ್ಥಿತಿ ಸ್ದಿಮಿತದಲ್ಲಿರಲು ಉತ್ತಮ ಉಪಾಯವೆಂದರೆ ಸುಮ್ಮನಿರುವುದು, ಅದರಲ್ಲಿ ಅಡಗಿದೆ ಸುಖದ ಅನುಭವಕ್ಕೆ ದಾರಿ.
      ಸಮಕಾಲೀನ ಪರಿಸ್ಥಿತಿ ಏನು ಮಾಡೀತು – ಅದು ನಾವು ಯಾವ ರೀತಿ ಪ್ರತಿಕ್ರಿಯಿಸುತ್ತೇವೆಯೋ ಹಾಗಿರುತ್ತದೆ. ಅಲ್ಲಿಯೂ ಸುಮ್ಮನಿದ್ದುಬುಡಿ

Leave a Reply