ನಾನೇನೂ ಕಳೆದುಹೋಗಿಲ್ಲ. ನಾನೆಲ್ಲಿದೀನಿ ಅಂತ ನಂಗೆ ಗೊತ್ತಿದೆ. ಆದ್ರೆ… ನಾನು ಕಳೆದುಹೋಗಿದ್ದಕ್ಕೇ ಈಗ ಇಲ್ಲಿದೀನಾ…!? ಅದು ಮಾತ್ರ ಗೊತ್ತಿಲ್ಲ!! ~ Winnie – the Pooh
ಊರಿಗೊಂದು ದಾರಿ ಆದ್ರೆ, ಜಾಣನಿಗೇ ಒಂದು ದಾರಿ ಅನ್ನುವ ಮಾತಿದೆ. ಜನಸಾಮಾನ್ಯರಿಗೆ ಜಾಣರ ದಾರಿಗಳು ಯಾವತ್ತೂ ತಪ್ಪಾಗಿಯೇ ಕಾಣುತ್ತವೆ. ವಿಚಿತ್ರವಾಗಿಯೂ ವಿಲಕ್ಷಣವಾಗಿಯೂ ತೋರುತ್ತವೆ. ಕೊರೆದಿಟ್ಟ ದಾರಿಗಳಲ್ಲಿ ನಡೆದು, ಗುರುತು ಮಾಡಿಟ್ಟ ಗುರಿಯನ್ನಷ್ಟೆ ಸೇರುವ ಈ ಜನಸಾಮಾನ್ಯರು, ತಮ್ಮದೇ ದಾರಿ ಮಾಡಿಕೊಂಡು ನಡೆಯುವ ಜಾಣರನ್ನು ಜೀವನ ಯಾನದಲ್ಲಿ “ಕಳೆದುಹೋದವರು” ಎಂದೇ ಭಾವಿಸುತ್ತಾರೆ.
ಆದರೆ, ಜಾಣರಿಗೆ ಗೊತ್ತಿರುತ್ತದೆ, ತಾವು ಎಲ್ಲಿದ್ದೀವೆಂದು. ಅವರು ತಮ್ಮನ್ನು ತಾವು ಕಂಡುಕೊಂಡಿದ್ದಾರೆ. ಹಾಗೆಂದೇ ತಮ್ಮದೇ ದಾರಿಯಲ್ಲಿ, ತಮ್ಮ ಗುರಿಯನ್ನು ಗುರುತಿಸಿಕೊಂಡು ಹೊರಟಿದ್ದಾರೆ. ಜನರ ಪಾಲಿಗೆ ಕಳೆದುಹೋಗದೆ ನಮ್ಮನ್ನು ನಾವು ಕಂಡುಕೊಳ್ಳಲು ಸಾಧ್ಯವಿದೆಯೇ? ಖಂಡಿತಾ ಇಲ್ಲ!
ಹಾಗೇ ಜಾಣರಿಗೆ ತಾವು ಕಳೆದುಹೋಗಿಲ್ಲವೆಂದು ಗೊತ್ತಿರುತ್ತದೆ. ತಾವು ಎಲ್ಲಿದ್ದೇವೆಂದು ಅವರು ಕಂಡುಕೊಂಡಿರುತ್ತಾರೆ. ಆದರೆ, ಅವರು ಆ ಜಾಗವನ್ನು, ಆ ದಾರಿಯನ್ನು ತಲುಪಿದ್ದು ಹಾಗೆ ಕಳೆದುಹೋಗಿದ್ದರಿಂದಲೇನಾ ಅನ್ನೋದು ಅವರಿಗೆ ಖಾತ್ರಿ ಇರೋದಿಲ್ಲ. ಏಕೆಂದರೆ ಅದು ಅದು ಅವರ ಸಹಜ ನಡೆ. ಉದ್ದೇಶಪೂರ್ವಕ ಆಯ್ಕೆಯಾಗಿದ್ದಿದ್ದರೆ ಅವರಿಗೆ ಖಚಿತವಾಗಿರುತ್ತಿತ್ತು. ಆದರೆ ಈಗ, ಜನಗಳು ಅವರತ್ತ ಬೆಟ್ಟು ಮಾಡಿ “ಕಳೆದುಹೋದವರು” ಅನ್ನುತ್ತಿರುವುದರಿಂದ ಈ ಯೋಚನೆ ಬಂದಿದೆ.
ಇದು, “ವಿನ್ನೀ – ದ ಪೂ” (Winnie – The Pooh) ಕಾಮಿಕ್ಸ್’ನಲ್ಲಿ ಬರುವ ಸಂಭಾಷಣೆಯ ತುಣುಕು.
ಈ ಚಿಕ್ಕ ತುಣುಕಿನಲ್ಲಿ ದೊಡ್ಡ ತಿಳಿವೇ ಅಡಗಿದೆ. “ಲೋಕದ ಪಾಲಿಗೆ ಕಳೆದುಹೋದವರಾಗಿ ಕಂಡರೇನಂತೆ? ನಮಗೆ ನಾವೆಲ್ಲಿದ್ದೀವಿ ಅಂತ ಗೊತ್ತಿದ್ದರೆ ಸಾಕು” ಅನ್ನುವ ಸಮಾಧಾನವನ್ನಿದು ನೀಡುತ್ತದೆ.