ಗುಲಾಮ ಮತ್ತು ಮರಣ ದೇವತೆ : ಸೂಫಿ ಹೇಳಿದ ಕಥೆ

suಬಾಗ್ದಾದಿನಲ್ಲಿ, ಒಮ್ಮೆ ಒಬ್ಬ ಗುಲಾಮ ಯಜಮಾನಲ್ಲಿಗೆ ಓಡೋಡಿ ಬಂದ.
ಬಂದವನೇ “ಮಾಲಿಕ್! ದಯವಿಟ್ಟು ನಂಗೊಂದು ಕುದುರೆ ಕೊಡಿ. ನಿಮ್ಮ ಲಾಯದಲ್ಲಿ ಅತಿ ವೇಗವಾಗಿ ಓಡುವ ಕುದುರೆಯನ್ನು ಇದೊಂದು ದಿನದ ಮಟ್ಟಿಗೆ ದಯಪಾಲಿಸಿ” ಎಂದು ಕೈ ಕೈ ಮುಗಿದು ಬೇಡತೊಡಗಿದ.

ಸರಂಜಾಮು ತರಲು ಮಾರುಕಟ್ಟೆಗೆ ಹೋದವನು ಖಾಲಿ ಕೈಲಿ ಮರಳಿರೋದೂ ಅಲ್ಲದೆ, ಕುದುರೆ ಕೊಡಿ ಅಂತ ಕೇಳ್ತಿದ್ದಾನಲ್ಲ! ಮಾಲಿಕನಿಗೆ ಆಶ್ಚರ್ಯ.

“ಕುದುರೆ ತಗೊಂಡು ನೀನೇನು ಮಾಡ್ತೀಯ? ಅದರಲ್ಲೂ ಅತಿ ಹೆಚ್ಚು ವೇಗವಾಗಿ ಓಡುವ ಕುದುರೆ!” ಅವನು ಕೇಳಿದ.
“ಮಾಲಿಕ್… ಮಾರುಕಟ್ಟೆಯ ಅಂಗಡಿ ಸಾಲಲ್ಲಿ ಮರಣ ದೇವತೆಯನ್ನು ನೋಡಿದೆ. ಅದು ನನ್ನನ್ನು ನೋಡುತ್ತಲೇ ಚಿತ್ರವಿಚಿತ್ರ ಸನ್ನೆ ಮಾಡತೊಡಗಿತು. ನನಗೆ ಗೊತ್ತು… ನಾನು ಇಲ್ಲೇ ಇದ್ದರೆ ಅದು ನನ್ನನ್ನು ಸುಮ್ಮನೆ ಬಿಡೋದಿಲ್ಲ. ಅದಕ್ಕೇ, ರಾತ್ರಿಯಾಗೋದರ ಒಳಗೆ ಡಮಾಸ್ಕಸ್ಸಿಗೆ ಹೊರಟುಹೋಗ್ತೀನಿ. ಎರಡು ದಿನ ಬಿಟ್ಟು ವಾಪಸು ಬರ್ತೀನಿ. ಒಮ್ಮೆ ಆ ಮರಣ ದೇವತೆ ಇಲ್ಲಿಂದ ಹೊರಟುಹೋಗಲಿ” ಅಂದ.

ಮಾಲಿಕ ತುಂಬಾ ದಯಾಳು. ಅವನು ಹಾಗೇ ಆಗಲೆಂದು ತನ್ನ ಗುಲಾಮನಿಗೆ ಕುದುರೆ ಕೊಟ್ಟು ಕಳಿಸಿದ. ಆಮೇಲೆ, ಅದೇನು ವಿಷಯ ನೋಡೋಣ ಅಂದುಕೊಂಡು ಮಾರುಕಟ್ಟೆ ಬಳಿ ಹೋದ. ಗುಲಾಮ ಹೇಳಿದ್ದಂತೆ, ಅಂಗಡಿ ಸಾಲಿನಲ್ಲಿ ಮರಣ ದೇವತೆ ನಿಂತಿತ್ತು.
ಮಾಲೀಕ ಅದರ ಬಳಿ ಹೋಗಿ ಕೇಳಿದ, “ನೀನೇಕೆ ನನ್ನ ಗುಲಾಮನನ್ನು ಹೆದರಿಸಿದ್ದು?”
“ನಾನು ಹೆದರಿಸಲಿಲ್ಲ! ನನಗೆ ಅವನನ್ನು ನೋಡಿ ಅಚ್ಚರಿಯಾಯಿತಷ್ಟೆ. ಅವನು ತಾನಾಗೇ ಹೆದರಿಕೊಂಡ” ಮರಣ ದೇವತೆ ಹೇಳಿತು.

“ಅವನನ್ನು ನೋಡಿ ಅಚ್ಚರಿಪಡುವಂಥದೇನಿತ್ತು ?”
“ನನ್ನ ವೇಳಾಪಟ್ಟಿಯ ಪ್ರಕಾರ, ಇವತ್ತು ರಾತ್ರಿ ಅವನ ಜೀವವನ್ನು ಡಮಾಸ್ಕಸ್ಸಿನಿಂದ ಸೆಳೆದೊಯ್ಯುವುದಿತ್ತು. ಇವನಿನ್ನೂ ಇಲ್ಲೇ ಇದ್ದಾನಲ್ಲ ಅಂತ ಅಚ್ಚರಿಯಾಯ್ತು. ಬಹುಶಃ ಈಗ ಅವನು ಇಲ್ಲಿಂದ ಹೊರಟರೂ ನಿಗದಿತ ಸಮಯಕ್ಕೆ ಅಲ್ಲಿ ತಲುಪುತ್ತಾನೆ. ನನ್ನ ಕೆಲಸಕ್ಕೆ ಅಡ್ಡಿಯಿಲ್ಲ” ಅನ್ನುತ್ತಾ, ತನ್ನ ವೇಳಾಪಟ್ಟಿ ನೋಡಿ ಖಾತ್ರಿಮಾಡಿಕೊಂಡಿತು ಮರಣ ದೇವತೆ.

(ಸಂಗ್ರಹ ಮತ್ತು ಅನುವಾದ : ಅಲಾವಿಕಾ)

Leave a Reply