ಅಪರಾಧ ಮತ್ತು ಶಿಕ್ಷೆ : ಖಲೀಲ್ ಗಿಬ್ರಾನನ ‘ಪ್ರವಾದಿ’ ~ ಅಧ್ಯಾಯ 12

ದ ಪ್ರಾಫೆಟ್’ ಕೃತಿಯು ಜಗತ್ತಿನ ಬಹುತೇಕ ಭಾಷೆಗಳಿಗೆ ಅನುವಾದಗೊಂಡಿದ್ದು, ಕನ್ನಡದಕ್ಕೂ ಬಂದಿವೆ. ‘ಅರಳಿಬಳಗ’ದ ಕವಿ ಚಿದಂಬರ ನರೇಂದ್ರ ಮತ್ತೊಮ್ಮೆ ಇದರ ಅನುಭಾವವನ್ನು ಅನುವಾದದ ಮೂಲಕ ಹರಿಸುವ ಪ್ರಯತ್ನ ಮಾಡಿದ್ದಾರೆ.

ಹಿಂದಿನ ಭಾಗವನ್ನು ಇಲ್ಲಿ ಓದಿ : https://aralimara.com/2018/08/26/pravadi/

ಮೇಲೆ
ಶಹರದ ನ್ಯಾಯಾಧೀಶನೊಬ್ಬ
ಅಪರಾಧ ಮತ್ತು ಶಿಕ್ಷೆಯ ಬಗ್ಗೆ
ಕೇಳಿದ ಸಂದೇಹಗಳಿಗೆ
ಅವನು ಉತ್ತರಿಸತೊಡಗಿದ.
ನಿಮ್ಮೊಳಗಿನ ಆತ್ಮ
ಗಾಳಿಯ ಬೆನ್ನು ಹತ್ತಿ ದೇಶಾಂತರಕ್ಕೆ ಹೋದಾಗ,
ನೀವು ಏಕಾಂಗಿ,
ಯಾವ ಕಾವಲೂ ಇಲ್ಲದವರು.
ಆಗಲೇ ನೀವು ತಪ್ಪು ಮಾಡುತ್ತೀರಿ
ಇನ್ನೊಬ್ಬರ ಮೇಲೆ, ಹಾಗಾಗಿ
ಸ್ವತಃ ನಿಮ್ಮ ಆತ್ಮದ ಮೇಲೂ.

ಈ ತಪ್ಪಿಗೋಸ್ಕರ ನೀವು
ಧನ್ಯಭಾಗ್ಯರ ಮನೆಯ ಬಾಗಿಲು ತಟ್ಟಿ
ಕಾಯಬೇಕಾಗಬಹುದು,
ಕೆಲವೊಮ್ಮೆ ಉಪೇಕ್ಷೆಗೆ ಒಳಗಾದರೂ.

ನಿಮ್ಮೊಳಗಿನ ದೈವತ್ವ ;
ಸಮುದ್ರದಂತೆ ಸದಾ ನಿಷ್ಕಲ್ಮಷ,
ನೀಲ ಆಕಾಶದಂತೆ
ಎತ್ತರೆತ್ತರಕ್ಕೆ ಎಳೆದುಕೊಂಡು ಹೋಗುತ್ತದೆಯಾದರೂ
ರೆಕ್ಕೆಗಳಿದ್ದವರನ್ನು ಮಾತ್ರ.
ದೈವತ್ವ, ಪ್ರಖರ ಸೂರ್ಯನಂತೆ ಕೂಡ
ಇಲಿಯ ಬಿಲದ ಹಾದಿ ಗೊತ್ತಿಲ್ಲ
ಹಾವಿನ ಹುತ್ತವ ಹುಡುಕುತ್ತ ಹೋಗುವುದಿಲ್ಲ.

ನಿಮ್ಮೊಳಗೆ
ಬರೀ ದೈವತ್ವ ಮಾತ್ರ ಇಲ್ಲ,
ಮನುಷ್ಯನೂ ಇದ್ದಾನೆ
ಇನ್ನೂ ಮನುಷ್ಯನಾಗದವನೂ

ಹೌದು ಅವನೇ
ಆ ನಿರಾಕಾರ ಕುಬ್ಜ,
ನಿದ್ದೆಗಣ್ಣಿನಲ್ಲಿ ಮಂಜಿನೊಳಗೆ
ತನ್ನ ಎಚ್ಚರವನ್ನು ತಾನೇ ಹುಡುಕಿಕೊಂಡು ಹೊರಟವನು.

ಈಗ, ನಿಮ್ಮೊಳಗಿರುವ ಮನುಷ್ಯನ ಬಗ್ಗೆ
ಕೆಲ ಮಾತುಗಳು:
ಅಪರಾಧದ ಬಗ್ಗೆ ಮತ್ತು
ಅಪರಾಧಕ್ಕೆ ತಕ್ಕ ಶಿಕ್ಷೆಯ ಬಗ್ಗೆ
ದೈವತ್ವಕ್ಕೆ ಗೊತ್ತಿಲ್ಲ.
ಮಂಜಿನೊಳಗೆ ನಡೆಯುತ್ತಿರುವ ಆ ಕುಬ್ಜನಿಗೂ ಗೊತ್ತಿಲ್ಲ.
ಆದರೆ ನಿಮ್ಮೊಳಗಿರುವ ಮನುಷ್ಯ ಮಾತ್ರ
ಇದನ್ನೆಲ್ಲ ಬಲ್ಲ.

ನೀವು ಆಗಾಗ ಹೀಗೆ ಮಾತನಾಡುವುದನ್ನು
ನಾನು ಕೇಳಿಸಿಕೊಂಡಿದ್ದೇನೆ,
“ತಪ್ಪು ಮಾಡಿದವ ನಮ್ಮೊಳಗಿನವನಲ್ಲ,
ಅವನ ಗುರುತು, ಪರಿಚಯ ಕೂಡ ನಮಗಿಲ್ಲ,
ಅವನು ನಮ್ಮ ಜಗತ್ತಿನೊಳಗೆ ಅತಿಕ್ರಮಣ ಮಾಡಿದವನು”

ಆದರೆ ತಿಳಿದುಕೊಳ್ಳಿ,
ಹೇಗೆ, ಪವಿತ್ರರಾದವರಿಗೆ ಮತ್ತು ನ್ಯಾಯವಂತರಿಗೆ
ನಿಮ್ಮೊಳಗಿನ ಎತ್ತರವನ್ನು ಏರಲು ಸಾಧ್ಯವಿಲ್ಲವೋ
ಹಾಗೆಯೇ, ದುಷ್ಟರಿಗೆ ಮತ್ತು ಕೈಲಾಗದವರಿಗೆ
ನಿಮ್ಮೊಳಗಿನ ಕೀಳುಮಟ್ಟಕ್ಕಿಂತ
ಕೆಳಗಿಳಿಯಲು ಸಾಧ್ಯವಿಲ್ಲ.

ಹೇಗೆ, ಗಿಡದ ಒಂದು ಎಲೆ ಮಾತ್ರ
ಇಡಿ ಗಿಡದ ಆಳ ತಿಳುವಳಿಕೆಗೆ ಗೊತ್ತಿಲ್ಲದಂತೆ
ಹಣ್ಣಾಗಲಾರದೋ,
ಹಾಗೆಯೇ, ತಪ್ಪು ಮಾಡಿದವ
ನಿಮ್ಮೆಲ್ಲರ ಗುಪ್ತ ಬಯಕೆಯ ಒಪ್ಪಿಗೆ ಇಲ್ಲದೆ
ಯಾವ ತಪ್ಪೂ ಮಾಡಲಾರ.

ನೀವೆಲ್ಲ ಕೂಡಿಯೇ ಮೆರವಣಿಗೆ ಹೊರಟಿರುವಿರಿ
ದೈವತ್ವದೆಡೆಗೆ
ದಾರಿಯೂ ನೀವೇ, ದಾರಿ ತೋರುವವರೂ.

ನಿಮ್ಮೊಳಗೊಬ್ಬ ಎಡವಿದರೆ
ಅದು ಹಿಂದೆ ಇರುವವರಿಗೆ ಎಚ್ಚರಿಕೆ
ಮುಂದೆ ದಾರಿಯಲ್ಲಿರುವ ಕಲ್ಲುಗಳ ಬಗ್ಗೆ.
ಹಾಗು ಮುಂದೆ ನಡೆಯುವವರಿಗೂ,
ಯಾರು ತಮ್ಮ ದಿಟ್ಟ ಹೆಜ್ಜೆಗಳನ್ನು ಊರುತ್ತಾ
ವೇಗವಾಗಿ ಮುನ್ನಡೆಯುತ್ತಿದ್ದಾರೋ ಅವರಿಗೂ,
ದಾರಿಯ ಅಡತಡೆಗಳ ಕುರಿತು
ಸೂಚನೆ ಕೊಡದಿರುವ ಬಗ್ಗೆ.

ಈ ಕೆಲವು ಮಾತುಗಳು
ನಿಮಗೆ ಭಾರ ಎನಿಸಬಹುದು
ಆದರೂ ಕೇಳಿ:
ಕೊಲೆಯಾದವನು,
ತನ್ನ ಕೊಲೆಗೆ ತಾನೇ ಹೊಣೆಗಾರನಾಗಿರುವುದಿಲ್ಲ
ಎಂದು ಹೇಳುವುದು ಕಷ್ಟ.
ಸುಲಿಗೆಗೆ ಒಳಗಾದವನು
ಸುಲಿಗೆಗೆ, ತಾನೇ ಕಾರಣವಾಗಿರುವುದಿಲ್ಲ
ಎನ್ನುವುದೂ ಸಾಧ್ಯವಿಲ್ಲ.
ನೀಚರ ದುಷ್ಕೃತ್ಯಗಳಲ್ಲಿ
ನ್ಯಾಯವಂತರು ಬಾಧ್ಯಸ್ಥರಾಗಿರುವುದಿಲ್ಲ
ಎಂದು ನಿಖರವಾಗಿ ಹೇಳಲಾಗದು.
ಪಾತಕಿಗಳ ಅಪರಾಧದಲ್ಲಿ
ಶುದ್ಧ ಹಸ್ತರ ಪಾತ್ರ ಇರುವುದಿಲ್ಲ
ಎಂದೇನಲ್ಲ.

ಹೌದು, ಬಹುತೇಕ ಅಪರಾಧಿ,
ಗಾಯಗೊಂಡವನ ಆಹುತಿಯಾಗಿರುತ್ತಾನೆ.
ಇನ್ನೂ ಕೆಲವು ಬಾರಿ ಅಪರಾಧಿ,
ನಿರಪರಾಧಿಗಳ ಮತ್ತು ನಿರ್ದೋಷಿಗಳ
ಭಾರ ಹೊತ್ತಿರುತ್ತಾನೆ.

ನ್ಯಾಯದಿಂದ ಅನ್ಯಾಯವನ್ನೂ
ಒಳಿತಿನಿಂದ ಕೆಡಕನ್ನೂ
ಬೇರೆ ಮಾಡಿ ನೋಡಲಿಕ್ಕಾಗುವುದಿಲ್ಲ ;
ಏಕೆಂದರೆ
ಅವು ಕೊಡಿ ನಿಂತಿವೆ ಸೂರ್ಯನೆದುರು
ಕಪ್ಪು ಮತ್ತು ಬಿಳಿ ನೂಲನ್ನು
ಜೊತೆಯಾಗಿಯೇ ನೇಯ್ದ ನೇಯ್ಗೆಯಂತೆ.
ಕಪ್ಪು ನೂಲೇನಾದರೂ ತುಂಡಾದರೆ
ನೇಕಾರ ಕೇವಲ ಬಟ್ಟೆಯನ್ನಷ್ಚೇ ಅಲ್ಲ
ಮಗ್ಗವನ್ನೂ ಪರೀಕ್ಷಿಸಬೇಕಾಗುವುದು.

ನಿಮ್ಮಲ್ಲಿ ಯಾರಾದರೂ
ಹೆಂಡತಿಯೊಬ್ಬಳನ್ನು ವಿಶ್ವಾಸದ್ರೋಹಿಯೆಂದು
ನ್ಯಾಯದ ಕಟ್ಟೆಗೆ ಕರೆತಂದರೆ,
ಮೊದಲು
ಅವಳ ಗಂಡನ ಹೃದಯವನ್ನು
ತೂಕಕ್ಕೆ ಹಾಕಿ,
ಅವನ ಆತ್ಮವನ್ನು ಅಳತೆಪಟ್ಟಿಯಿಂದ
ಅಳತೆ ಮಾಡಿ.

ಅಪರಾಧಿಯ ಮೇಲೆ ಹರಿ ಹಾಯುವವರು
ಅಪರಾಧಕ್ಕೊಳಗಾದವನ ಆತ್ಮವನ್ನೂ
ಬಗೆದು ನೋಡಲಿ.
ನ್ಯಾಯದ ಹೆಸರಲ್ಲಿ ನಿಮ್ಮಲ್ಲಿ ಯಾರಾದರೂ
ಶಿಕ್ಷೆ ನೀಡಲು ಮುಂದಾದಲ್ಲಿ,
ಕೆಡುಕಿನ ಮರದ ಬುಡಕ್ಕೆ
ಕೊಡಲಿ ಹಾಕಲು ತಯಾರಾದಲ್ಲಿ
ಮೊದಲು ಮರದ ಬೇರುಗಳನ್ನು ಪರೀಕ್ಷೆ ಮಾಡಲಿ ;
ಆಗ ನಿಮಗೇ ಗೊತ್ತಾಗುವುದು
ಈ, ಒಳಿತು ಮತ್ತು ಕೆಡಕಿನ ಬೇರುಗಳು,
ಸಮೃದ್ಧಿ ಹಾಗು ದಾರಿದ್ರ್ಯದ ಬೇರುಗಳು
ಹೇಗೆ ಭೂಮಿಯ ನಿಶಾಂತ ಹೃದಯದೊಂದಿಗೆ
ಒಂದಾಗಿ ಹೆಣೆದುಕೊಂಡಿವೆಯೆಂದು.

ನ್ಯಾಯ ಹೇಳಲು ಹಾತೊರೆಯುತ್ತಿರುವ ನ್ಯಾಯಾಧೀಶರೇ,
ಕಣ್ಣಿಗೆ ಪ್ರಾಮಾಣಿಕನಾಗಿ ಕಾಣುವ ಆದರೆ
ಅಂತರಂಗದಲ್ಲಿ ಮಹಾಕಳ್ಳ ನಾಗಿರುವವನಿಗೆ
ನೀವು ಯಾವ ನ್ಯಾಯ ಹೇಳಬಲ್ಲಿರಿ?
ಕಣ್ಣಿಗೆ ಕೊಲೆಗಾರನಾಗಿ ಕಾಣಿಸುವ ಆದರೆ
ತನ್ನ ಆತ್ಮವನ್ನು ತಾನೇ ಕೊಂದುಕೊಂಡಿರುವವನಿಗೆ
ನೀವು ಎಂಥ ದಂಡ ತಾನೇ ಕೊಡಬಲ್ಲಿರಿ?
ನೊಂದವನೂ, ಸ್ವತಃ ತುಳಿತಕ್ಕೊಳಗಾದವನು
ಹಿಂಸೆಯನ್ನು ಕೈಗೆತ್ತಿಕೊಂಡರೆ, ಸೇಡಿಗೆ ಮುಂದಾದರೆ
ಅವನನ್ನು ಯಾವ ಕಟಕಟೆಯಲ್ಲಿ ನಿಲ್ಲಿಸುತ್ತೀರಿ?
ತಾವು ಮಾಡಿದ ತಪ್ಪಿಗಿಂತ
ಈಗಾಗಲೇ ಹೆಚ್ಚು ಪಶ್ಚಾತಾಪ ಅನುಭವಿಸಿದವನಿಗೆ
ಯಾವ ಶಿಕ್ಷೆ ಕೊಡಬಲ್ಲಿರಿ?
ನೀವು ನ್ಯಾಯ ಪ್ರದಾನ ಮಾಡಲು
ಬಳಸುವ ಕಾನೂನು ಕೂಡ ಬಯಸುವುದು
ಪಶ್ಚಾತಾಪವನ್ನೇ ಅಲ್ಲವೆ?

ನೀವು ಹೇಗೆ ಪಶ್ಚಾತಾಪದ ಭಾರವನ್ನು
ಮುಗ್ಧರ ಮೇಲೆ ಹಾಕಲಾರಿರೋ.
ಹಾಗೆಯೇ ಅಪರಾಧಿಗಳ ಮನಸ್ಸಿನಿಂದ
ಪಶ್ಚಾತಾಪದ ಭಾವವನ್ನು ತೊಲಗಿಸಲಾರಿರಿ.
ಮನುಷ್ಯರು ತಮ್ಮೊಳಗೆ ಇಳಿದು ನೋಡಲೆಂದೇ
ಪಶ್ಚಾತಾಪ, ನಡುರಾತ್ರಿ ಅಚಾನಕ್ ಆಗಿ ಬಂದು
ಬಾಗಿಲು ತಟ್ಟುತ್ತದೆ.
ನೀವು, ನ್ಯಾಯವನ್ನು ತಿಳಿದವರು,
ಎಲ್ಲ ಕೃತ್ಯಗಳನ್ನು ಇಡಿಯಾಗಿ
ಪೂರ್ಣ ಬೆಳಕಲ್ಲಿ ನೋಡದೆ
ಹೇಗೆ ನ್ಯಾಯದ ತಕ್ಕಡಿ ಹಿಡಿಯುತ್ತೀರಿ?

ಪೂರ್ಣ ಬೆಳಕಲ್ಲಿ ನಿಮಗೆ ಗೊತ್ತಾಗುವುದು,
ಗೆದ್ದು ನಿಂತವನು, ಜಾರಿ ಬಿದ್ದವನು
ಬೇರೆ ಯಾರೂ ಅಲ್ಲ, ಒಬ್ಬನೇ,
ತನ್ನ ನೀಚ ಕತ್ತಲು ಮತ್ತು ದಿವ್ಯ ಹಗಲಿನ ನಡುವಿನ
ಸಂಧಿ ಕಾಲದಲ್ಲಿ ನಿಂತವನು.
ಮತ್ತು, ದೇವಸ್ಥಾನದ ಅಡಿಗಲ್ಲು
ಪಾಯದ ಅತ್ಯಂತ ಕೆಳಗಿನ ಕಲ್ಲಿಗಿಂತ
ಮೇಲೆ ಇಲ್ಲವೆಂದು.

ಮುಂದುವರೆಯುತ್ತದೆ……….

gibran

ಲೇಖಕರ ಕುರಿತು: ಖಲೀಲ್ ಗಿಬ್ರಾನ್ ತನ್ನ ಅಲೌಕಿಕ ಕೃತಿ “ಪ್ರವಾದಿ” ಯನ್ನು (THE PROPHET) ಮೊದಲು ರಚಿಸಿದ್ದು ಅರೇಬಿಕ್ ಭಾಷೆಯಲ್ಲಿ; ತನ್ನ ಇಪ್ಪತ್ತರ ಹರೆಯದಲ್ಲಿ! ಆಮೇಲೆ ಇಂಗ್ಲೀಷ್ ಭಾಷೆಗೆ ಅದನ್ನು ತರ್ಜುಮೆ ಮಾಡಿದ್ದೂ ಅವನೇ. ಅಮೇರಿಕೆಯ ಉದ್ದಗಲಕ್ಕೂ “ಪುಟ್ಟ ಕಪ್ಪು ಪುಸ್ತಕ” “ಪುಟ್ಟ ಬೈಬಲ್” ಎಂದು ಈ ಪುಸ್ತಕ ಖ್ಯಾತಿ ಪಡೆಯಿತು. ಈ ಖ್ಯಾತಿಗೆ ತಲೆ ಕೊಡದ ಗಿಬ್ರಾನ್, “ನಾನು ಪ್ರವಾದಿ ಕೃತಿಯನ್ನು ಬರೆಯುತ್ತಿದ್ದಂತೆ, ಪ್ರವಾದಿ ಕೃತಿ ನನ್ನನ್ನು ಬರೆಯಿತು” ಎಂದುಬಿಟ್ಟಿದ್ದ.

ChiNa

ಅನುವಾದಕರ ಕುರಿತು: ಚಿದಂಬರ ನರೇಂದ್ರ ಮೂಲತಃ ಧಾರವಾಡದವರು, ವೃತ್ತಿಯಿಂದ ಮೆಕಾನಿಕಲ್ ಇಂಜಿನಿಯರ್, ಕಂಪನಿಯೊಂದರಲ್ಲಿ ಡಿಸೈನ್ ವಿಭಾಗದ ಮುಖ್ಯಸ್ಥ. ಸಿನೇಮಾ, ಸಾಹಿತ್ಯ ಹವ್ಯಾಸಗಳು. ಕವಿ ಮತ್ತು ಅನುವಾದಕ. ಝೆನ್ ಕಥೆ, ಸೂಫಿ ಕಾವ್ಯ, ಗುಲ್ಜಾರ್ ಕವಿತೆಗಳ ಅನುವಾದಗಳಿಂದ ಜನಪ್ರಿಯರು.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.