ಕಾಯ್ದೆ, ಕಾನೂನು : ಖಲೀಲ್ ಗಿಬ್ರಾನನ ‘ಪ್ರವಾದಿ’ ~ ಅಧ್ಯಾಯ 13

 

kb

ನ್ಯಾಯವಾದಿಯೊಬ್ಬ
ಕಾಯ್ದೆ, ಕಾನೂನುಗಳ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಅವನು ಉತ್ತರಿಸತೊಡಗಿದ.

ನಿಯಮಗಳನ್ನು ಹುಟ್ಟುಹಾಕುವುದೆಂದರೆ,
ನಿಮಗೆ ಅದೇನೋ ಬಹು ದೊಡ್ಡ ಖುಶಿ
ಆದರೆ ಅವುಗಳನ್ನು ಮುರಿಯುವುದು
ಇನ್ನೂ ದೊಡ್ಡ ಖುಶಿಯ ವಿಷಯ ನಿಮಗೆ.

ಆಟ ಆಡುವ ಮಕ್ಕಳು
ಸಮುದ್ರದ ದಂಡೆಯಲ್ಲಿ
ಅಪಾರ ಜಾಗರೂಕತೆಯಿಂದ
ಮರಳಿನ ಮನೆ ಕಟ್ಟುವ ಹಾಗೆ;
ಮತ್ತು ನಗುನಗುತ್ತಾ
ಅದನ್ನು ಮುರಿದುಬಿಡುವ ಹಾಗೆ.

ಮರಳಿನ ಮನೆ ಕಟ್ಟುವಾಗ
ನಿಮಗೆ ಬೇಕಾದಷ್ಟು ಮರಳು ಒದಗಿಸುವ ಸಮುದ್ರ,
ನೀವು ಮನೆ ಮುರಿದಾಗ
ನಿಮ್ಮೊಂದಿಗೆ, ತಾನೂ ನಕ್ಕು ಬಿಡುತ್ತದೆ.

ಮನುಷ್ಯರ ಭೋಳೆತನ
ಸಮುದ್ರಕ್ಕೆ ಯಾವಾಗಲೂ ನಗುವ ವಿಷಯ.

ಆದರೆ, ಯಾರಿಗೆ ಸಮುದ್ರ ಬದುಕಲ್ಲವೋ,
ಮನುಷ್ಯ ಹುಟ್ಟು ಹಾಕಿದ ಕಾಯ್ದೆ ಕಾನೂನುಗಳು
ಮರಳಿನ ಮನೆಗಳಲ್ಲವೋ,
ಯಾರಿಗೆ ಬದುಕು ದೊಡ್ಡ ಕಲ್ಲು ಬಂಡೆಯೋ,
ಯಾರು ಕಾಯ್ದೆ ಕಾನೂನುಗಳನ್ನು ಚಾಣವಾಗಿ ಬಳಸುತ್ತ
ತಮಗೆ ಬೇಕಾದ ರೂಪವನ್ನು ಕೆತ್ತಿಕೊಳ್ಳುತ್ತಾರೋ
ಅವರ ಗತಿ ಏನು?

ಕುಣಿಯುವವರನ್ನು ಕಂಡರಾಗದ
ಕುಂಟನ ಬಗ್ಗೆ ಏನು ಹೇಳುತ್ತೀರಿ?

ಹೊತ್ತ ನೊಗವನ್ನು ಆನಂದಿಸುತ್ತ
ಗಾಣ ಸುತ್ತುವ ಎತ್ತು,
ಕಾಡಿನಲ್ಲಿ ಸ್ವಚ್ಛಂದವಾಗಿ ಓಡಾಡುವ ಜಿಂಕೆ, ಕಡವೆಗಳನ್ನು
ಪರದೇಶಿಗಳು, ಅಂಡಲೆಯುವ ಪುಂಡರು
ಎಂದು ಹೀಯಾಳಿಸಿದರೆ ಏನನ್ನುವಿರಿ?

ಪೊರೆ ಕಳಚಲು ಅಶಕ್ತವಾದ ಮುದಿ ಹಾವು
ಇತರ ಹಾವುಗಳನ್ನು ಬೆತ್ತಲೆ,
ಮಾನ ಮರ್ಯಾದೆ ಇಲ್ಲದವು ಎಂದು ದೂರಿದರೆ?

ಎಲ್ಲರಿಗಿಂತ ಮೊದಲು
ಹೊಟ್ಟೆ ಬಿರಿಯುವಂತೆ, ಅಜೀರ್ಣವಾಗುವಷ್ಟು
ಮದುವೆಯ ಊಟ ಮಾಡಿ,
ಕೈತೊಳೆದುಕೊಂಡು ವಾಪಸ್ ಹೋಗುವಾಗ,
ಔತಣವನ್ನು ಅನೈತಿಕವೆಂದೂ
ಊಟ ಹಾಕಿದವರನ್ನು ಮಹಾಕಳ್ಳರೆಂದು
ಜರೆಯುವವರ ಬಗ್ಗೆ ?

ಸೂರ್ಯನ ಪ್ರಖರ ಬೆಳಕಲ್ಲಿ ನಿಂತಿದ್ದರೂ
ಸೂರ್ಯನಿಗೆ ಬೆನ್ನು ಮಾಡಿರುವವರ ಬಗ್ಗೆ ಏನು ಹೇಳೋದು?

ಆಗ ಅವರು
ತಮ್ಮ ನೆರಳನ್ನೇ ನೋಡುತ್ತಾರೆ,
ಅದೇ ಅವರ ಕಾಯ್ದೆ, ಅದೇ ಅವರ ಕಾನೂನು.
ಅವರಿಗೆ ಸೂರ್ಯ
ಬೆಳಕು ಕೊಡುವವನಲ್ಲ, ನೆರಳು ಕೊಡುವವನು.

ಕಾನೂನಿಗೆ ಮನ್ನಣೆ ಕೊಡುವುದೆಂದರೆ
ತಲೆ ಬಗ್ಗಿಸಿ, ನೆಲದ ಮೇಲೆ ಬಿದ್ದಿರುವ
ತಮ್ಮ ನೆರಳಿನ ಸುತ್ತ ತಾವೇ ಓಡಾಡುವುದು.

ಆದರೆ ನೀವು,
ಸೂರ್ಯನತ್ತ ಮುಖಮಾಡಿ ನಡೆಯುವವರು.
ನೆಲದ ಮೇಲೆ ಬಿದ್ದಿರುವ ಯಾವ ನೆರಳು ತಾನೇ
ನಿಮ್ಮನ್ನು ಹಿಡಿದು ನಿಲ್ಲಿಸಬಹುದು?
ಗಾಳಿಯ ಬೆನ್ನು ಹತ್ತಿರುವ ನಿಮಗೆ
ಯಾವ ಗಾಳಿಯಂತ್ರ ತಾನೆ ದಾರಿ ತೋರಿಸಬಲ್ಲದು?

ಬೇರೆ ಯಾರ ಪಂಜರವನ್ನೂ ಅಲ್ಲದೆ
ನಿಮ್ಮ ನೊಗವನ್ನು ಮಾತ್ರ ಮುರಿಯಬಲ್ಲಿರಾದರೆ,
ಯಾವ ಕಾನೂನು ತಾನೆ ನಿಮ್ಮನ್ನು ಹಿಡಿದಿಡಬಲ್ಲದು?
ಬೇರೆ ಯಾರ ಕಬ್ಬಿಣದ ಸರಪಳಿಯನ್ನೂ ಎಡವದೆ
ಮೈದುಂಬಿ ನರ್ತಿಸಬಲ್ಲಿರಾದರೆ
ನಿಮಗೆ ಯಾವ ಕಾನೂನಿನ ಭಯ?
ತೊಟ್ಟ ಬಟ್ಟೆಯ ಹರಿದು
ಬೇರೆ ಯಾರ ದಾರಿಯಲ್ಲಿಯೂ ಹಾಕದಿದ್ದರೆ,
ಯಾರು ತಾನೆ ನಿಮ್ಮನ್ನು ಕಟಕಟೆಯಲ್ಲಿ ನಿಲ್ಲಿಸಬಲ್ಲರು?

ಆರ್ಫಲೀಸ್’ನ ಮಹಾಜನರೇ,

ನೀವು ನಗಾರಿಯ ಬಾಯಿ ಮುಚ್ಚಿಸಬಹುದು,
ವಾದ್ಯದ ತಂತಿಗಳನ್ನು ಸಡಿಲ ಮಾಡಬಹುದು
ಆದರೆ, ಆಕಾಶದಲ್ಲಿ ಹಾರುವ ಹಕ್ಕಿಯ ಮೇಲೆ
ಹಾಡದಂತೆ
ಹಕ್ಕು ಚಲಾಯಿಸಬಹುದೆ?

ಮುಂದುವರೆಯುತ್ತದೆ……….

ಹಿಂದಿನ ಭಾಗವನ್ನು ಇಲ್ಲಿ ಓದಿ : https://aralimara.com/2018/09/01/pravadi12/

gibranಲೇಖಕರ ಕುರಿತು: ಖಲೀಲ್ ಗಿಬ್ರಾನ್ ತನ್ನ ಅಲೌಕಿಕ ಕೃತಿ “ಪ್ರವಾದಿ” ಯನ್ನು (THE PROPHET) ಮೊದಲು ರಚಿಸಿದ್ದು ಅರೇಬಿಕ್ ಭಾಷೆಯಲ್ಲಿ; ತನ್ನ ಇಪ್ಪತ್ತರ ಹರೆಯದಲ್ಲಿ! ಆಮೇಲೆ ಇಂಗ್ಲೀಷ್ ಭಾಷೆಗೆ ಅದನ್ನು ತರ್ಜುಮೆ ಮಾಡಿದ್ದೂ ಅವನೇ. ಅಮೇರಿಕೆಯ ಉದ್ದಗಲಕ್ಕೂ “ಪುಟ್ಟ ಕಪ್ಪು ಪುಸ್ತಕ” “ಪುಟ್ಟ ಬೈಬಲ್” ಎಂದು ಈ ಪುಸ್ತಕ ಖ್ಯಾತಿ ಪಡೆಯಿತು. ಈ ಖ್ಯಾತಿಗೆ ತಲೆ ಕೊಡದ ಗಿಬ್ರಾನ್, “ನಾನು ಪ್ರವಾದಿ ಕೃತಿಯನ್ನು ಬರೆಯುತ್ತಿದ್ದಂತೆ, ಪ್ರವಾದಿ ಕೃತಿ ನನ್ನನ್ನು ಬರೆಯಿತು” ಎಂದುಬಿಟ್ಟಿದ್ದ.

ChiNa

ಅನುವಾದಕರ ಕುರಿತು: ಚಿದಂಬರ ನರೇಂದ್ರ ಮೂಲತಃ ಧಾರವಾಡದವರು, ವೃತ್ತಿಯಿಂದ ಮೆಕಾನಿಕಲ್ ಇಂಜಿನಿಯರ್, ಕಂಪನಿಯೊಂದರಲ್ಲಿ ಡಿಸೈನ್ ವಿಭಾಗದ ಮುಖ್ಯಸ್ಥ. ಸಿನೇಮಾ, ಸಾಹಿತ್ಯ ಹವ್ಯಾಸಗಳು. ಕವಿ ಮತ್ತು ಅನುವಾದಕ. ಝೆನ್ ಕಥೆ, ಸೂಫಿ ಕಾವ್ಯ, ಗುಲ್ಜಾರ್ ಕವಿತೆಗಳ ಅನುವಾದಗಳಿಂದ ಜನಪ್ರಿಯರು.

1 Comment

Leave a Reply