ಮೈ ತಣ್ಣಗಾಯಿತು. ತನ್ನನ್ನು ತಾನು ಮುಟ್ಟಿ ನೋಡಿಕೊಂಡ. ಹೆಂಡತಿಯ ಮಾತು ನೆನಪಾಯಿತು. “ಹಾಗಾದರೆ ನಾನೀಗ ಸತ್ತುಹೋಗಿದ್ದೇನೆ!” ಅವನು ಯೋಚಿಸಿದ…. ~ ಅಲಾವಿಕಾ
ಒಂದೂರಲ್ಲಿ ಒಬ್ಬನಿಗೆ ಸಾವು ಅಂದರೆ ವಿಪರೀತ ಭಯ. ಊರಿನಲ್ಲಿ ಯಾರಾದರೂ ಸತ್ತುಹೋದರು ಎಂದು ಗೊತ್ತಾದರೆ ತಾನು ನಡುಗಿಹೋಗುತ್ತಿದ್ದ. ತಾನು ಯಾವಾಗ, ಎಲ್ಲಿ, ಹೇಗೆ ಸಾಯಬಹುದು ಎಂದು ಚಿಂತೆಗೆ ಬೀಳುತ್ತಿದ್ದ.
ಒಂದು ದಿನ ಅವನ ಪಕ್ಕದ ಮನೆಯವನ ಹೆಂಡತಿ ಸತ್ತುಹೋದಳು. ಚಿಕ್ಕವಯಸ್ಸಿನ ಹೆಂಗಸು. ಅವಳ ಸಾವಿನ ಸುದ್ದಿ ಕೇಳಿದ ಮೇಲೆ ಈತನಿಗೆ ವಿಪರೀತ ಭಯವಾಗತೊಡಗಿತು. ಗಂಡ ತಲೆ ಮೇಲೆ ಕೈಹೊತ್ತು ಕುಳಿತಿದ್ದು ನೋಡಿ ಹೆಂಡತಿ ವಿಷಯ ಏನೆಂದು ವಿಚಾರಿಸಿದಳು. ಈತ ಅಂಜುತ್ತಲೇ ಕೇಳಿದ, “ನಾನು ಸಾಯುವುದು ನನಗೆ ಹೇಗೆ ಗೊತ್ತಾಗುತ್ತದೆ?”
ಅವಳು ಅವನ ಮೂತಿ ತಿವಿಯುತ್ತಾ, “ಹುಚ್ಚರಂತೆ ಏನೇನೋ ಕೇಳುತ್ತಿದ್ದೀರಲ್ಲ! ಸಾವು ಗೊತ್ತುಪಡಿಸಿಕೊಂಡು ಬರುತ್ತದೆಯೇನು? ಸತ್ತಾಗ ದೇಹ ತಣ್ಣಗಾಗುತ್ತದೆ. ಆಗ ಬೇರೆಯವರಿಗೆ ಗೊತ್ತಾಗುತ್ತದೆ, ಅಷ್ಟೆ” ಅಂದಳು.
ಈ ಮನುಷ್ಯ ಅದನ್ನು ಮನಸ್ಸಿನಲ್ಲಿಟ್ಟುಕೊಂಡ. ಆಮೇಲೆ ತನ್ನ ಪಾಡಿಗೆ ತಾನು ಪ್ರತಿನಿತ್ಯ ಹೊಲದ ಕೆಲಸಕ್ಕೆ ಹೋಗಲಾರಭಿಸಿದ.
ಹೀಗೇ ಚಳಿಗಾಲವೂ ಬಂದಿತು. ಆ ವರ್ಷ ಎಂದಿಗಿಂತ ಹೆಚ್ಚು ಚಳಿಯಿತ್ತು. ಸಾವಿನ ಭಯದ ಮನುಷ್ಯ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ನೀರಿನಲ್ಲಿ ಆಡಿದ್ದರಿಂದ ಕೈಕಾಲು ಸೆಟೆದುಕೊಂಡವು. ಮೈ ತಣ್ಣಗಾಯಿತು. ತನ್ನನ್ನು ತಾನು ಮುಟ್ಟಿ ನೋಡಿಕೊಂಡ. ಹೆಂಡತಿಯ ಮಾತು ನೆನಪಾಯಿತು. “ಹಾಗಾದರೆ ನಾನೀಗ ಸತ್ತುಹೋಗಿದ್ದೇನೆ!” ಅವನು ಯೋಚಿಸಿದ.
“ಸತ್ತವರು ನಿಂತಿರುತ್ತಾರೆಯೇ? ಖಂಡಿತಾ ಇಲ್ಲ! ಹಾಗಾದರೆ ನಾನು ನೆಲದ ಮೇಲೆ ಮಲಗಿಕೊಳ್ಳುತ್ತೇನೆ” ಅವನ ಯೋಚನೆ ಮುಂದುವರೆಯಿತು. ಆತ ಸತ್ತವರ ಹಾಗೆ ನೆಲದ ಮೇಲೆ ಬಿದ್ದುಕೊಂಡ.
ಯಾರೋ ಅವನ ಹೆಸರನ್ನು ಕೂಗಿದರು. “ಸತ್ತವರು ಮಾತಾಡುತ್ತಾರೆಯೇ? ಇಲ್ಲ!” ಅವನು ಯೋಚಿಸಿದ. ನಾನು ಸತ್ತುಹೋಗಿದ್ದೇನೆ. ನಾನು ಮಾತಾಡುವಂತಿಲ್ಲ ಎಂದು ತೀರ್ಮಾನ ಮಾಡಿಕೊಂಡ. ತುಟಿ ಬಿಗಿದುಕೊಂಡು ಸುಮ್ಮನಾದ.
ಇಬ್ಬರು ದಾರಿಹೋಕರು ಅವನ ಹೊಲವನ್ನು ಹಾದುಹೋಗುತ್ತಿದ್ದರು. ನೆಲದ ಮೇಲೆ ಬಿದ್ದಿದ್ದ ಭಯದ ಮನುಷ್ಯನನ್ನು ನೋಡಿದರು. ಅವನಾದರೂ ಉಸಿರು ಬಿಗಿಹಿಡಿದು ನಿಶ್ಚಲವಾಗಿ ಮಲಗಿದ್ದ. ಈತ ಸತ್ತೇಹೋಗಿರಬೇಕೆಂದು ಅವರು ಭಾವಿಸಿದರು.
“ದಾರಿಯ ಮೇಲಿನ ಹೆಣವನ್ನು ಹಾಗೇ ಬಿಟ್ಟುಹೋದರೆ ಪಾಪ ತಗಲುತ್ತದೆ. ಇದು ಯಾವುದೋ ಅನಾಥ ಹೆಣ ಇರಬೇಕು” ಎಂದು ಅವರು ಮಾತಾಡಿಕೊಂಡರು. ಹೆಣವನ್ನು ಎತ್ತಿಕೊಂಡು ಹತ್ತಿರದ ಸ್ಮಶಾನದಲ್ಲಿ ದಫನ್ ಮಾಡಲು ನಿರ್ಧರಿಸಿದರು.
ಇದನ್ನೆಲ್ಲ ಕೇಳಿಸಿಕೊಂಡರೂ ಆ ಮನುಷ್ಯ ಸುಮ್ಮನೇ ಬಿದ್ದುಕೊಂಡಿದ್ದ. ಏಕೆಂದರೆ ಅವನು ಸತ್ತಿದ್ದೇನೆಂದು ಭಾವಿಸಿದ್ದ, ಮತ್ತು ಸತ್ತುಹೋದವರು ಮಾತಾಡಬಾರದಲ್ಲ!?
ದಾರಿಹೋಕರು ಅವನನ್ನು ಎತ್ತಿಕೊಂಡು ಹೋಗಿ, ಗುಂಡಿ ತೆಗೆದು ದಫನ್ ಮಾಡಿದರು. ಅಗೆದ ಮಣ್ಣನ್ನೆಲ್ಲ ಅವನ ಮೇಲೆ ಸುರಿದು ಸಮತಟ್ಟು ಮಾಡಿ ಗುರುತಿನ ಕಲ್ಲು ನೆಟ್ಟರು.
ಹೀಗೆ ಸಾಯುವ ಭಯದ ಮನುಷ್ಯ ಎರಡು ಸಾವುಗಳನ್ನು ಕಂಡ. ಮೊದಲಿಗೆ ಬದುಕಿದ್ದೂ ಸತ್ತುಹೋಗಿದ್ದ. ಆಮೇಲೆ ಮಣ್ಣಿನ ಗುಂಡಿಯಲ್ಲಿ ಉಸಿರುಗಟ್ಟಿ ನಿಜವಾಗಿಯೂ ಸತ್ತು ಹೋದ.
ವಿಶೇಷ ಟಿಪ್ಪಣಿ : ಈ ಕಥೆಯ ನೀತಿಯನ್ನು ನೀವೇ ಕಂಡುಕೊಳ್ಳಿ