ಬ್ಯಾಲೆನ್ಸ್ ಮಾಡುವುದು ಹೇಗೆ? : ಝೆನ್ ಕಥೆ

ಒಂದು ಊರಿನಲ್ಲಿ ಒಬ್ಬ ದೊಂಬರಾಟದವನಿದ್ದ. ಅವನ ಬಳಿ ಹೊಸತಾಗಿ ಒಬ್ಬ ಹುಡುಗಿ ಕೆಲಸಕ್ಕೆ ಸೇರಿಕೊಂಡಳು.

ಪ್ರತಿದಿನ ರಸ್ತೆಯಲ್ಲಿ ವಿವಿಧ ಕಸರತ್ತುಗಳನ್ನು ಪ್ರದರ್ಶನ ಮಾಡುತ್ತ ತಮ್ಮ ಆ ದಿನದ ಊಟಕ್ಕೆ ಅವರು ಹಣ ಹೊಂಚುತ್ತಿದ್ದರು. ಆದರೆ ಅವರು ಗಳಿಸುತ್ತಿದ್ದ ಹಣ ಅವರ ಖರ್ಚಿಗೆ ಸಾಕಾಗುತ್ತಿರಲಿಲ್ಲ.
ಅದಕ್ಕಾಗಿ ಅವರು ಒಂದು ಹೊಸ ಅಪಾಯಕಾರಿ ಆಟವನ್ನು ಪ್ರದರ್ಶನ ಮಾಡಬೇಕೆಂದು ನಿರ್ಧರಿಸಿದರು.

ಈ ಆಟದಲ್ಲಿ, ದೊಂಬರಾಟದ ಯಜಮಾನ ಒಂದು ಉದ್ದ ಕೋಲನ್ನು ಅವನ ತಲೆಯ ಮೇಲೆ ಬ್ಯಾಲೆನ್ಸ್ ಮಾಡಬೇಕಿತ್ತು. ಆಮೇಲೆ ಹುಡುಗಿ, ಕೋಲಿನ ತುದಿ ತಲುಪಿ ಅಲ್ಲೇ ನಿಲ್ಲಬೇಕು. ನಂತರ ಯಜಮಾನ ಕೋಲನ್ನೂ, ಹುಡುಗಿಯನ್ನೂ ಬ್ಯಾಲೆನ್ಸ್ ಮಾಡುತ್ತ 100 ಮೀಟರ್ ನಡೆಯಬೇಕು.

ಇದು ತುಂಬ ಅಪಾಯಕಾರಿ ಕಸರತ್ತಾಗಿತ್ತು. ಯಾರೊಬ್ಬರು ತಪ್ಪು ಮಾಡಿದರೂ ಹುಡುಗಿ ತೀವ್ರವಾಗಿ ಗಾಯಗೊಳ್ಳುತ್ತಿದ್ದಳು. ಆದ್ದರಿಂದ ಅವ ಹುಡುಗಿಗೆ ಸಲಹೆ ನೀಡಿದ.
“ಮೇಲೆ ಹತ್ತುವಾಗ ನನ್ನ ಕಣ್ಣನ್ನೇ ಗಮನಿಸು, ನಾನು ನಿನ್ನ ನೋಡುತ್ತಿರುತ್ತೇನೆ. ಇಬ್ಬರೂ ಒಬ್ಬರಿಗೊಬ್ಬರು ಸೂಚನೆ ಕೊಡುತ್ತ ಬ್ಯಾಲೆನ್ಸ್ ಮಾಡೋಣ”

ಹುಡುಗಿಗೆ ಈ ಸಲಹೆ ಅಷ್ಟಾಗಿ ಹಿಡಿಸಲಿಲ್ಲ.
ಅವಳಂದಳು;
“ಹಾಗೆ ಮಾಡೋದು ಬೇಡ. ನೀವು ನಿಮ್ಮನ್ನು ಗಮನಿಸುತ್ತಿರಿ ನಾನು ನನ್ನ ಮೇಲೆ ಕಣ್ಣಿಟ್ಟಿರುತ್ತೇನೆ. ಹೀಗಾದಾಗ ಮಾತ್ರ ನಾವು ಒಬ್ಬರಿಗೊಬ್ಬರು ಸಹಾಯ ಮಾಡಬಹುದು, ಅಪಘಾತವನ್ನು ತಪ್ಪಿಸಬಹುದು”

(ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ)

Leave a Reply