ಆಮೇಲೆ ಹೆಣ್ಣು ಮಗಳೊಬ್ಬಳು
ನೋವಿನ ಬಗ್ಗೆ ಹೇಳು ಎಂದಳು.
ಅವನು ಉತ್ತರಿಸತೊಡಗಿದ.
ನಿಮ್ಮ ತಿಳುವಳಿಕೆಯನ್ನು
ಸುಖವಾಗಿ ಆವರಿಸಿಕೊಂಡಿರುವ ಚಿಪ್ಪನ್ನು
ಒಡೆಯುವುದೇ, ನೋವು.
ಹಣ್ಣಿನ ಹೃದಯವನ್ನು
ಸೂರ್ಯನ ಎದುರು ನಿಲ್ಲಿಸಲು,
ಹೇಗೆ ಅದರ ಸಿಪ್ಪೆಯನ್ನು ಸುಲಿಯಲೇಬೇಕಾಗುತ್ತದೆಯೋ
ಹಾಗೆಯೇ ನೋವನ್ನು ಗ್ರಹಿಸಬೇಕು ನೀವು.
ಬದುಕಿನಲ್ಲಿ ನಿತ್ಯ ನಡೆಯುವ ಪವಾಡಗಳಿಗೆ
ನಿಮ್ಮ ಹೃದಯದ ಬೆರಗನ್ನು
ನೀವು ಸಾಕ್ಷಿ ಮಾಡಿದ್ದೇ ಆದಲ್ಲಿ
ನಿಮಗೇ ಗೊತ್ತಾಗುತ್ತದೆ
ನೋವಿನ ಮಾಯೆ ಆನಂದಕ್ಕಿಂತ ಕಡಿಮೆಯೇನಲ್ಲ ;
ಮತ್ತು
ಭೂಮಿಯ ಮೇಲೆ ಹಾಯ್ದು ಹೋಗುವ
ವಿವಿಧ ಋತುಮಾನಗಳನ್ನು ನೀವು ಸಹಜವಾಗಿ ಒಪ್ಪಿಕೊಂಡಂತೆಯೇ,
ಹೃದಯದ ವಿವಿಧ ಭಾವನೆಗಳನ್ನು ಕೂಡ
ಮುಕ್ತವಾಗಿ ಒಪ್ಪಿಕೊಳ್ಳುವಿರಿ.
ದುಗುಡದ ಕೊರೆಯುವ ಚಳಿಗಾಲವನ್ನೂ
ಸಮಾಧಾನದಿಂದ ಕಾಣುವಿರಿ.
ನಿಮ್ಮ ಬಹುತೇಕ ನೋವು,
ನೀವೇ ಸ್ವತಃ ಆರಿಸಿಕೊಂಡದ್ದು.
ನೋವು, ನಿಮ್ಮೊಳಗಿನ ವೈದ್ಯ
ನಿಮ್ಮ ಕಾಯಿಲೆಯನ್ನು ಗುಣಪಡಿಸಲು ಕೊಟ್ಟ
ಕಹಿ ಕಷಾಯ.
ಅಂತೆಯೇ, ವೈದ್ಯನನ್ನು ನಂಬಿ,
ಅವನು ಕೊಟ್ಟ ಔಷಧಿಯನ್ನು
ಎರಡು ಮಾತನಾಡದೇ
ಶಾಂತ ಚಿತ್ತದಿಂದ ಸೇವಿಸಿರಿ.
ವೈದ್ಯನ ನಡೆ ನುಡಿ ಕಠಿಣವಾದರೂ,
ಅವನ ಹಿಂದೆ ಕಾಣದ ಕೈಯ್ಯೊಂದರ
ಅಪಾರ ಕರುಣೆಯ ಪ್ರೇರಣೆಯಿದೆ.
ಅವನು ನಿಮಗಿತ್ತ ಬಟ್ಟಲು
ನಿಮ್ಮ ತುಟಿಯನ್ನು ಸುಡುತ್ತದೆಯಾದರೂ,
ಆ ಬಟ್ಟಲನ್ನು ಕುಂಬಾರ,
ತನ್ನ ಪವಿತ್ರ ಕಣ್ಣೀರಿನ ಹಸಿಯಿಂದ
ಸೃಷ್ಟಿ ಮಾಡಿದ್ದಾನೆ.
ಮುಂದುವರೆಯುತ್ತದೆ……….
ಹಿಂದಿನ ಭಾಗವನ್ನು ಇಲ್ಲಿ ಓದಿ : https://aralimara.com/2018/09/08/pravadi14/
ಲೇಖಕರ ಕುರಿತು: ಖಲೀಲ್ ಗಿಬ್ರಾನ್ ತನ್ನ ಅಲೌಕಿಕ ಕೃತಿ “ಪ್ರವಾದಿ” ಯನ್ನು (THE PROPHET) ಮೊದಲು ರಚಿಸಿದ್ದು ಅರೇಬಿಕ್ ಭಾಷೆಯಲ್ಲಿ; ತನ್ನ ಇಪ್ಪತ್ತರ ಹರೆಯದಲ್ಲಿ! ಆಮೇಲೆ ಇಂಗ್ಲೀಷ್ ಭಾಷೆಗೆ ಅದನ್ನು ತರ್ಜುಮೆ ಮಾಡಿದ್ದೂ ಅವನೇ. ಅಮೇರಿಕೆಯ ಉದ್ದಗಲಕ್ಕೂ “ಪುಟ್ಟ ಕಪ್ಪು ಪುಸ್ತಕ” “ಪುಟ್ಟ ಬೈಬಲ್” ಎಂದು ಈ ಪುಸ್ತಕ ಖ್ಯಾತಿ ಪಡೆಯಿತು. ಈ ಖ್ಯಾತಿಗೆ ತಲೆ ಕೊಡದ ಗಿಬ್ರಾನ್, “ನಾನು ಪ್ರವಾದಿ ಕೃತಿಯನ್ನು ಬರೆಯುತ್ತಿದ್ದಂತೆ, ಪ್ರವಾದಿ ಕೃತಿ ನನ್ನನ್ನು ಬರೆಯಿತು” ಎಂದುಬಿಟ್ಟಿದ್ದ.
ಅನುವಾದಕರ ಕುರಿತು: ಚಿದಂಬರ ನರೇಂದ್ರ ಮೂಲತಃ ಧಾರವಾಡದವರು, ವೃತ್ತಿಯಿಂದ ಮೆಕಾನಿಕಲ್ ಇಂಜಿನಿಯರ್, ಕಂಪನಿಯೊಂದರಲ್ಲಿ ಡಿಸೈನ್ ವಿಭಾಗದ ಮುಖ್ಯಸ್ಥ. ಸಿನೇಮಾ, ಸಾಹಿತ್ಯ ಹವ್ಯಾಸಗಳು. ಕವಿ ಮತ್ತು ಅನುವಾದಕ. ಝೆನ್ ಕಥೆ, ಸೂಫಿ ಕಾವ್ಯ, ಗುಲ್ಜಾರ್ ಕವಿತೆಗಳ ಅನುವಾದಗಳಿಂದ ಜನಪ್ರಿಯರು.
1 Comment