ಸಂತ ಕಬೀರರ ‘ಪ್ರೇಮ ಗಾನ’

ಮೂಲ : ಸಂತ ಕಬೀರ | ಕನ್ನಡಕ್ಕೆ : ದಿ.ಗೋಪಾಲ ವಾಜಪೇಯಿ

ನಾವು ಪ್ರೇಮೋನ್ಮತ್ತರಯ್ಯ ನಮಗೆಂಥಾ ಎಚ್ಚರ ಹೇಳು
ಜಗದ ಬಂಧದಿಂದ ದೂರ ನಮಗ್ಯಾತರ ಸ್ನೇಹ ಹೇಳು…
ಪ್ರಿಯರನಗಲಿದವರು ಮಾತ್ರ ತಿರುಗುತಾರೆ ಬೀದಿ ಬೀದಿ
ಪ್ರಿಯ ಗೆಳೆಯ ಇಹ ನಮ್ಮೊಳಗೆ ಕಾಯಲೇಕೆ ಅವನ ಹಾದಿ?
ಕ್ಷಣವು ಬಿಟ್ಟಿರಲಾರನವನು, ಅಗಲಲಾರೆವವನ ನಾವು –
ಬೆಸೆದ ಅಸಮ ಪ್ರೇಮ ನಮದು, ಇಲ್ಲ ನಮಗೆ ಭೀತಿ ನೋವು.
ಕಬಿರಪ್ರೇಮಬಂಧದಿಂದ ಮನದ ಕೊಳೆಯ ತೊಳೆದು ಹಾಕು,
ಹೊರೆಯು ತಲೆಗೆ ಭಾರವಲ್ಲ, ಹಿಡಿದ ಹಾದಿ ನಯ ನಾಜೂಕು.

ಪ್ರೇಮಸದನವಿದುವೋ ಕಬೀರ, ಚಿಕ್ಕವ್ವನ ಮನೆ ಅಲ್ಲವಿದು –
ನೇಮ ತಿಳಿದುಕೋ ಶಿರವ ತೆಗೆದು ಒಪ್ಪಿಸಿದರೆ ‘ಒಳ ಸಾಗು’ವುದು.
ಪ್ರೇಮಸದನದ ದಾರಿ ಕಬೀರ, ಸುಗಮವಲ್ಲ ಅತಿ ಅಗಾಧವು –
ನೇಮದಂತೆ ಅಡಿಯಲಿ ಶಿರ ಒಪ್ಪಿಸೆ ಪ್ರೇಮ ‘ನಿಕಟ’ ಬಲು ಸ್ವಾದವು.

ಹೊಲದಲ್ಲಿ ಬೆಳೆಯೋದಲ್ಲಾ ಪ್ರೇಮಾ… ಪ್ಯಾಟೀಲಿ ಮಾರೋದಲ್ಲಾ ಪ್ರೇಮಾ…
ದೊರಿಯಾದರು ಸರಿ. ಪ್ರಜೆಯಾದರು ಸರಿ, ಶಿರ ಒಪ್ಪಿಸುವುದೇ ನೇಮಾ.
ಭಕುತನಾಗೋದು ಅಷ್ಟು ಸುಲಭವೇ, ಹೇಡಿಗೆ ಒಲಿಯನಪ್ಪಾ ರಾಮಾ…
ತಿಳಿದುಕೋ ಶಿರವಾ ತೆಗೆದೊಪ್ಪಿಸಿದರೆ ಸಿಗುವುದು ಹರಿಯ ಧಾಮಾ.

1 Comment

  1. ಸಂತ ಕಬೀರರ ಕನ್ನಡಾನುವಾದಕ್ಕೆ ಧನ್ಯವಾದಗಳು. ಸಂತ ಕಬೀರರ ಈ ಜ್ಞಾನ ಜಗಕ್ಕೆಲ್ಲ‌ ಹಿತ. ಆ ಜ್ಞಾನವನ್ನು ಪಸರಿಸಿದ ಅರಳಿಮರ ಮುಖಪುಟಕ್ಕೆ ಹೃತ್ಪೂರ್ವಕ ಧನ್ಯವಾದಗಳು..!
    ❤❤❤❤❤❤❤❤❤❤❤❤❤❤❤

Leave a Reply