ಅಧ್ಯಾತ್ಮ ಡೈರಿ : ಕೊರತೆಯ ಕೊರಗಿಗೆ ಮುಲಾಮು ಕಂಡುಕೊಳ್ಳಿ

ನಮ್ಮ ಹೆಸರಿನ ಕ್ರಾಸ್ಡ್ ಚೆಕ್‌ನಲ್ಲಿ ನೆಮ್ಮದಿಯ ಬದುಕು ಬರೆದು ಕಳಿಸಿರುವಾಗ, ನಾವೇ ಅದನ್ನ ಎನ್‌ಕ್ಯಾಶ್ ಮಾಡ್ಕೊಳ್ಳಬೇಕಲ್ವಾ? ಇಲ್ಲಾ ಅಂದ್ರೆ, ಅದು ಹಾಗೇ ವೇಸ್ಟ್ ಆಗಿಹೋಗುತ್ತೆ. ಹೀಗೆ ನಷ್ಟ ಮಾಡಿಕೊಳ್ಳೋದಾದರೂ ಯಾವ ಪುರುಷಾರ್ಥಕ್ಕೆ!? ~ ಅಲಾವಿಕಾ

ಪ್ರತಿ ವರ್ಷ ಕೊಡಮಾಡುವ ಪ್ರಶಸ್ತಿಯೊಂದಕ್ಕೆ ಕೊಡುವಾತನ ಮಗಳ ಹೆಸರಿದೆ. ಅಲ್ಲೊಬ್ಬ ಹೆಣ್ಣುಮಗಳು ತನ್ನ ಗಂಡನ ಹೆಸರಲ್ಲಿ ಶಾಲೆ ತೆರೆದಿದ್ದಾಳೆ. ಪ್ರತಿ ಊರು, ಹಳ್ಳಿಯಲ್ಲೂ ದೊಡ್ಡ ಮೊತ್ತದಿಂದ ಹಿಡಿದು ಚಿಕ್ಕ ಸರ್ಟಿಫಿಕೇಟ್‌ವರೆಗೂ `ಸ್ಮಾರಕ ಪ್ರಶಸ್ತಿ’ ಒಂದಾದರೂ ಇರುತ್ತದೆ. ಅದರ ಹಿಂದೆ ಇಲ್ಲವಾದವರ ಬಗೆಗಿನ ಪ್ರೀತಿ, ಅವರನ್ನು ತಮ್ಮ ನಡುವೆ ನಿರಂತರವಾಗಿ ಇರಿಸಕೊಳ್ಳುವ ಕಾಳಜಿ ಇರುತ್ತದೆ. ಹೀಗೆ ತೊರೆದುಹೋದವರ ಕೊರತೆಯನ್ನ ತುಂಬಿಕೊಳ್ಳುವ ಒಳ್ಳೊಳ್ಳೆ ದಾರಿಗಳನ್ನು ಕೆಲವಷ್ಟು ಜನ ಹುಡುಕಿಕೊಂಡಿರುತ್ತಾರೆ.

ಆದರೆ ಎಲ್ಲರಿಗೂ ಇಂಥಾದ್ದು ಸಾಧ್ಯಾನಾ? ಪ್ರೀತಿ ಪಾತ್ರರ, ಇಷ್ಟ ವಸ್ತುವಿನ ಕೊರತೆಯನ್ನ ತುಂಬಿಕೊಳ್ಳೋದು ಸುಲಭಾನಾ? ಖಂಡಿತ ಇಲ್ಲ. ಅದು ಪ್ರೀತಿಪಾತ್ರರ ಜೀವ ನಷ್ಟವೂ ಆಗಿರಬಹುದು, ವ್ಯವಹಾರದ ನಷ್ಟವೂ ಆಗಿರಬಹುದು. ಅಥವಾ ಮನೆಮುದ್ದಿನ ನಾಯಿ ಮರಿಯೂ ಆಗಿರಬಹುದು. ಅವರ ಜೀವತಂತು ಇಲ್ಲವಾಗಿರುವ ವ್ಯಕ್ತಿ/ ವಸ್ತುವಿನ ಜತೆ ಗಟ್ಟಿಯಾಗಿ ಅಂಟಿಕೊಂಡುಬಿಟ್ಟಿರುತ್ತೆ. ಅದಕ್ಕೇ ಅದರ ಕೊರತೆ ಅಂಥವರಿಗೆ ಭರಿಸಲಾಗದ ನೋವು ಮೂಡಿಸಿಬಿಡುತ್ತೆ.

ಯಾವ್ದೂ ಪರ್ಮನೆಂಟ್ ಅಲ್ಲ- ಹಾಗಂದರೆ ಫಿಲಾಸಫಿ ಹೇಳ್ತಾರೆ ಅನ್ನಿಸಬಹುದು. ಆದರೆ ಈ ಮಾತು ನಿಜದಲ್ಲಿ ನಿಜ. ಅದು ಗೊತ್ತಿದ್ದೂ ಯಾವುದೋ ಒಂದು ವಸ್ತು, ವಿಷಯ ಅಥವಾ ವ್ಯಕ್ತಿಗೆ ಅಂಟಿ ಕೂರೋದು ನಮ್ಮ ಸಹಜ ಸ್ವಭಾವ. ಹಾಗೆ ಯಾರನ್ನೂ ಯಾವುದನ್ನೂ ಹಚ್ಕೊಳ್ಳಕೂಡದು ಅಂದ್ರೆ, ಅದು ಪ್ರಾಕ್ಟಿಕೆಬಲ್ ಅನಿಸೋದಿಲ್ಲ. “ಎಲ್ಲವುದಕ್ಕೂ ಒಂದು ಮಿತಿ ಇರಬೇಕು” ಅನ್ನುವ ಒಂದೇಒಂದು ಸೂಕ್ತಿ ನಮ್ಮ ಜೀವನದ ಎಲ್ಲ ಸಂಗತಿಗಳಿಗೂ ಅಪ್ಲೇ ಆಗತ್ತೆ. ಸಂಬಂಧಗಳು ಮತ್ತು ಅವುಗಳ ಆಳದ ವಿಷಯದಲ್ಲೂ.

ನಮ್ಮ ಬಾಳು ನಮ್ಮದು
ಅಂತಿಮವಾಗಿ ನಮ್ಮ ಬಾಳು ನಮ್ಮದೇ. ನಮ್ಮ ನಮ್ಮ ತಲೆಗೆ ನಮ್ಮದೇ ಕೈ ಅನ್ನುವ ಹಾಗೆ. ಇದನ್ನೇನೂ ಸಿನಿಕತನದ ಗೊಣಗಾಟವಾಗಿ ತೆಗೆದುಕೊಳ್ಳಬೇಕಿಲ್ಲ. ನಮ್ಮ ಒಟ್ಟಾರೆ ಜೀವನ ನಮ್ಮ ಸುತ್ತಲಿನ ಜನರಿಂದ ರೂಪುಗೊಂಡಿರುತ್ತೆ, ಸರಿ. ಆದರೆ ಅದರ ವಾರಸುದಾರರು ಪೂರ್ತಿ ನಾವೇ ಆಗಿರೋದ್ರಿಂದ, ಬದುಕೋ ಜವಾಬ್ದಾರಿಯನ್ನೂ ನಾವೇ ಹೊತ್ತುಕೊಳ್ಬೇಕು. ನಾವು ನಮ್ಮ ಕುಟುಂಬದ ಮೇಲೆ ಅವಲಂಬಿತರಾಗಿರೋದ್ರಿಂದ್ಲೇ ಭಾವನಾತ್ಮಕ ಸಂಬಂಧವೂ ನಮ್ಮೊಳಗೆ ಗಟ್ಟಿಯಾಗಿರುತ್ತೆ. ಇದನ್ನು ಸ್ವಾರ್ಥ ಅಂತ ಕರೆಯಲಾಗದು. ಮನುಷ್ಯನ ಜೀವನ ರಚನೆಯೇ ಹಾಗಿದೆ. ಇದನ್ನ ಅರ್ಥ ಮಾಡಿಕೊಂಡುಬಿಟ್ಟರೆ, ಇಲ್ಲವಾಗಿರುವ ವ್ಯಕ್ತಿಯೊಟ್ಟಿಗಿನ ಬಾಂಧವ್ಯ ಮಧುರ ನೆನಪಾಗಿ ಉಳಿಯುತ್ತದೆ ಹೊರತು, ಅವರ ಗೈರುಹಾಜರಿಯೊಂದು ಕೊರತೆಯಾಗಿ ಕಾಡುವುದಿಲ್ಲ.

ಇಲ್ಲಿ ಮತ್ತೊಂದು ಅಂಶ ಗಮನಿಸಬೇಕು. ಮನೋವೈಜ್ಞಾನಿಕ ವಿಶ್ಲೇಷಣೆಗಳು ನಮ್ಮ ಪ್ರತಿಕ್ರಿಯೆಗಳ ಅಂತರಾಳವನ್ನು ಬಿಚ್ಚಿಡುವ ಮೂಲಕ ನಿರ್ಲಿಪ್ತತೆ ಬೆಳೆಸಿಕೊಳ್ಳುವ ಕೆಲಸ ಹಗುರ ಮಾಡಿದೆ. ನಮ್ಮೊಳಗಿನ ಭಾವನಾತ್ಮಕ ಏರುಪೇರುಗಳು ಹಾರ್ಮೋನ್‌ಗಳ ಕರಾಮತ್ತಿನಿಂದ ಉಂಟಾಗುತ್ತವೆ ಹೊರತು ನಮ್ಮ ಸ್ವಂತದ ಆಪ್ತತೆ, ಅನುಭವಗಳಿಂದಲ್ಲ ಅನ್ನುವುದನ್ನು ಇವು ಸ್ಪಷ್ಟಪಡಿಸ್ತವೆ. ನಮ್ಮ ಪ್ರೀತಿಪಾತ್ರರು ಅಗಲಿದಾಗ ಹೊಮ್ಮುವ ಪ್ರತಿಕ್ರಿಯೆ ಕೂಡಾ ಇದರಿಂದ ಪ್ರೇರಿತವಾದದ್ದೇ. ಆದ್ದರಿಂದ, ನಮ್ಮ ಪ್ರೀತಿಪಾತ್ರರು ಅಗಲಿದಾಗ ನಾವು ಎಷ್ಟು ಅಳ್ತೇವೆ, ಎಷ್ಟು ಮಿಸ್ ಮಾಡ್ಕೊಳ್ತೇವೆ ಅಥವಾ ಎಷ್ಟು ಕಾಲ ಶೋಕಾಚರಣೆ ಮಾಡ್ತೇವೆ ಅನ್ನೋದರ ಮೇಲೆ ನಮ್ಮ ಪ್ರೇಮದ ಪ್ರಮಾಣ ನಿರ್ಧಾರವಾಗೋದಿಲ್ಲ. ನಾವು ಅವರ ಆಶಯಗಳನ್ನು ಎಷ್ಟರ ಮಟ್ಟಿಗೆ ಕಾಯ್ದುಕೊಳ್ಳುತ್ತೇವೆ ಅನ್ನುವುದೇ ಅವರ ಮೇಲಿನ ನಮ್ಮ ಪ್ರೀತಿಗೆ ಪ್ರಮಾಣ. 

ಕಣ್ಣಾಚೆ, ಮನದಾಚೆ…
ಮನೆಯಲ್ಲಿ ಸಾವು ಸಂಭವಿಸಿದಾಗ ಅಥವಾ ಏನಾದರೂ ದೊಡ್ಡ ಅವಗಢ ನಡೆದಾಗ ನಾವು ನಿರ್ಭಾವುಕರಾಗಿರಲು ಸಾಧ್ಯವಿಲ್ಲ. ಒಂದಷ್ಟು ದಿನಗಳ ವರೆಗೆ, ತಿಂಗಳವರೆಗೆ, ಕೆಲವರ ಪಾಲಿಗೆ ವರ್ಷದವರೆಗೂ ಅದರ ಶೋಕ ಇರುತ್ತದೆ. ಆದರೆ ಅದನ್ನು ತೀರಾ ಗಂಭೀರವಾಗಿ ತೆಗೆದುಕೊಂಡು ಬದುಕಿರುವವರೂ ಸತ್ತಂತೆ ಇದ್ದುಬಿಟ್ಟರೆ, ಸತ್ತವರ ಬಗ್ಗೆ ಅವರಿಗಿರುವ ಪ್ರೀತಿಯನ್ನು ಮೆಚ್ಚಿಕೊಳ್ಳಲು ಮನಸು ಬರುತ್ತದೆಯೇ? ‘ಔಟ್ ಆಫ್ ಸೈಟ್, ಔಟ್ ಆಫ್ ಮೈಂಡ್’ ಅನ್ನುವ ಮಾತನ್ನ ಕೇಳಲು ಚೂರು ಕಹಿ ಅನ್ನಿಸಿದರೂ ಅದೇ ನಿಜ. ಅಥವಾ ಅದೇ ನಿಜವಾಗಬೇಕು ಕೂಡಾ. ಅಲ್ಲವೆ?

ಕೊರತೆಯ ಕೊರಗಿಗೆ ಮುಲಾಮು ಕಂಡುಹಿಡಿದುಕೊಂಡವರು ಸಾಕಷ್ಟಿದ್ದಾರೆ. ಮತ್ತೆ ಕೆಲವರ ಮನಸ್ಸಿನ ಗಾಯ, ಕಾಲದೊಂದಿಗೆ ಮಾಯುತ್ತದೆ. ಆದರೆ ಒಂದು ಬಗೆಯ ಸ್ವಾನುಕಂಪದ ಜನರಿಗೆ ಮಾತ್ರ ಇಂಥಾ ‘ಕಳೆದುಕೊಳ್ಳುವ ನೋವು’ಗಳು ವಾಸಿಯಾಗದ ಕಾಯಿಲೆಯಾಗಿ ಉಳಿದುಬಿಡುತ್ತದೆ. ಅಂಥವರು ಆಪ್ತರೊಡನೆ ಸಮಾಲೋಚನೆ ನಡೆಸಿ, ಅಗತ್ಯ ಬಿದ್ದರೆ ಕೌನ್ಸೆಲಿಂಗ್ ಅಥವಾ ಚಿಕಿತ್ಸೆ ಪಡೆದು ಜೀವನೋಲ್ಲಾಸ ಮರಳಿ ಪಡೆಯಬೇಕು.
ನಮ್ಮ ಹೆಸರಿನ ಕ್ರಾಸ್ಡ್ ಚೆಕ್‌ನಲ್ಲಿ ನೆಮ್ಮದಿಯ ಬದುಕು ಬರೆದು ಕಳಿಸಿರುವಾಗ, ನಾವೇ ಅದನ್ನ ಎನ್‌ಕ್ಯಾಶ್ ಮಾಡ್ಕೊಳ್ಳಬೇಕಲ್ವಾ? ಇಲ್ಲಾ ಅಂದ್ರೆ, ಅದು ಹಾಗೇ ವೇಸ್ಟ್ ಆಗಿಹೋಗುತ್ತೆ. ಹೀಗೆ ನಷ್ಟ ಮಾಡಿಕೊಳ್ಳೋದಾದರೂ ಯಾವ ಪುರುಷಾರ್ಥಕ್ಕೆ!?

Leave a Reply