ಒಮ್ಮೆ ಸೋಮಾರಿ ವ್ಯಕ್ತಿಯೊಬ್ಬ ನಸ್ರುದ್ದೀನನ ಬಳಿ ಬಂದು, “ನನ್ನ ಹತ್ತಿರ ಕವಡೆ ಕಾಸೂ ಇಲ್ಲ, ನಾನು ಅತ್ಯಂತ ದರಿದ್ರನಾಗಿ ಬದುಕುತ್ತಿದ್ದೇನೆ. ಹಣದ ಮುಗ್ಗಟ್ಟು ತಲೆ ತಿನ್ನುತ್ತಿದೆ” ಅಂದ.
ಅದನ್ನು ಕೇಳಿ, “ಒಂದು ಕೆಲಸ ಮಾಡು. ನನಗೆ ನಿನ್ನ ಎಡಗಣ್ಣು ಬೇಕು. ಅದಕ್ಕಾಗಿ ನಾನು 100 ದೀನಾರುಗಳನ್ನು ಕೊಡಬಲ್ಲೆ. ಅಷ್ಟು ಹಣವನ್ನು ಪಡೆದು ಅದನ್ನು ಕೊಟ್ಟುಬಿಡು” ಅಂದ ನಸ್ರುದ್ದೀನ್.
ಆಗ ಆ ಸೋಮಾರಿ ವ್ಯಕ್ತಿ, “ಇದು ಸಾಧ್ಯವಿಲ್ಲ. ನಾನು ನನ್ನ ಕಣ್ಣನ್ನು ಕಳೆದುಕೊಳ್ಳಲು ಬಯಸುವುದಿಲ್ಲ” ಅನ್ನುತ್ತಾ ಎರಡು ಹೆಜ್ಜೆ ಹಿಂದೆ ಇಟ್ಟು ನಿಂತ.
“ಕೊಡು. ನಿನಗೆ ಬೇಕಿದ್ದರೆ 200 ದೀನಾರುಗಳನ್ನು ಕೊಡುತ್ತೇನೆ. ಎರಡೂ ಕಣ್ಣುಗಳನ್ನು ಕಿತ್ತು ಕೊಡು” ಅಂತ ನಸ್ರುದ್ದೀನ್, ಅವನತ್ತ ಮೂರು ಹೆಜ್ಜೆ ಮುಂದಿಟ್ಟ.
“200 ಅಲ್ಲ, ನೀನು 500 ದೀನಾರುಗಳನ್ನು ಕೊಟ್ಟರೂ, 1000 ದೀನಾರು ಕೊಟ್ಟರೂ ನಾನು ನನ್ನ ಕಣ್ಣಿನ ರೆಪ್ಪೆಯನ್ನೂ ಕೊಡಲಾರೆ!!” ಅನ್ನುತ್ತಾ ಸೋಮಾರಿ ಹತ್ತು ಹೆಜ್ಜೆ ದೂರ ನಿಂತ.
“ಹೋಗಲಿ, 10,000 ದೀನಾರುಗಳಿಗೆ ನಿನ್ನ ಪ್ರಾಣ ಕೊಡುತ್ತೀಯಾ? ನಿನ್ನ ಹಣದ ಮುಗ್ಗಟ್ಟು ತೀರಿ, ನೀನು ಅರಾಮಾಗಿ ಇರಬಹುದು” ನಸ್ರುದ್ದೀನ್ ಪಟ್ಟುಬಿಡದೆ ಕೇಳಿದ.
“ಏನು ತಮಾಷೆ ಮಾಡ್ತಿದೀಯಾ ನಸ್ರುದ್ದೀನ್? ನನಗೇನು ತಲೆ ಕೆಟ್ಟಿದೆಯೇ? ಲಕ್ಷ ದಿನಾರು ಕೊಟ್ಟರೂ ನಿನ್ನ ಸಹವಾಸ ಬೇಡ” ಅಂತ ಸೋಮಾರಿ ಬೊಬ್ಬೆ ಹಾಕಿದ.
“ಮತ್ತೆ! ಅಷ್ಟು ಬೆಲೆಬಾಳುವ ದೇಹವಿಟ್ಟುಕೊಂಡು, ಬೆಲೆ ಕಟ್ಟಲಾಗದ ಪ್ರಾಣ ಇಟ್ಟುಕೊಂಡು ಕವಡೆ ಕಾಸೂ ಇಲ್ಲ ಅನ್ನಲು ನಾಚಿಕೆಯಾಗೋದಿಲ್ಲವೆ? ನಸ್ರುದ್ದೀನ್ ಕೇಳಿದ.
ಸೋಮಾರಿಗೆ ನಸ್ರುದ್ದೀನ್ ಯಾಕೆ ಹಾಗೆ ಮಾತಾಡಿದ ಅನ್ನೋದು ಅರ್ಥವಾಯಿತು. ತಲೆ ಕೊಡವಿಕೊಂಡು ಅಲ್ಲಿಂದ ಹೊರಟುಹೋದ.
Notify me about this soofi stories