ಮನುಷ್ಯರ ಜೀವನ ನೀರಿನ ಅಲೆಗಳಂತೆ ಚಂಚಲ : ಭರ್ತೃಹರಿಯ ವೈರಾಗ್ಯ ಶತಕ

ಆಯುರ್ವರ್ಷಶತಂನೃಣಾಂ ಪರಿಮಿತಂ ರಾತ್ರೌತದರ್ಧಂ ಗತಂ
ತಸ್ಯಾರ್ಧಸ್ಯ ಪರಸ್ಯ ಚಾರ್ಧಮಪರಂ ಬಾಲತ್ವ ವೃದ್ಧತ್ವಯೋಃ |
ಶೇಷಂ ವ್ಯಾಧಿವಿಯೋಗದುಃಖ ಸಹಿತಂ ಸೇವಾದಿಭಿರ್ನೀಯತೆ
ಜೀವೇ ವಾರಿತರಂಗಚಂಚಲತರೇ ಸೌಖ್ಯಂ ಕುತಃ ಪ್ರಾಣೀನಾಮ್ || ವೈರಾಗ್ಯ ಶತಕ ||

ಅರ್ಥ: ಮನುಷ್ಯರ ಆಯಸ್ಸು ನೂರು ವರ್ಷಗಳಿಗೆ ಮಿತವಾಗಿದೆ. ಅದರಲ್ಲಿ ಅರ್ಧ ಭಾಗ ರಾತ್ರಿಯಲ್ಲಿ ಕಳೆದು ಹೋಗುತ್ತದೆ. ಉಳಿದ ಅರ್ಧ ಭಾಗ ಬಾಲ್ಯ ಮತ್ತು ಮುಪ್ಪುಗಳಲ್ಲಿ ಕಳೆದು ಹೋಗುತ್ತದೆ. ಇನ್ನುಳಿದ ಅರ್ಧ ಭಾಗ ರೋಗ, ವಿಯೋಗ, ದುಃಖಗಳಿಂದ ಕೂಡಿರುತ್ತದೆ. ಜೀವನವು ಹೀಗೆ ನೀರಿನ ಅಲೆಗಳಂತೆ ಚಂಚಲವಾಗಿರುವಾಗ, ಸುಖ ಹೇಗೆ ತಾನೆ ದೊರಕೀತು?

ತಾತ್ಪರ್ಯ: ಭರ್ತೃಹರಿಯ ಈ ಹೇಳಿಕೆ ನಿರಾಶಾದಯಕವಾಗಿ ಕಂಡರೂ, ಈ ಮೂಲಕ ಅವನು ವಾಸ್ತವವನ್ನೇ ಹೇಳಿದ್ದಾನೆ. ಮನುಷ್ಯನ ಬದುಕು ಎಷ್ಟೊಂದು ಕ್ಷಣಿಕ ಎನ್ನುವುದನ್ನು ಈ ಶ್ಲೋಕದ ಮೂಲಕ ಭರ್ತೃಹರಿ ಬಿಂಬಿಸುತ್ತಾನೆ. ಜೀವನದ ಅವಧಿ ಕಡಿಮೆ. ಸಾಧಿಸಬೇಕಾದದ್ದು ಬೆಟ್ಟದ್ದಷ್ಟಿದೆ. ಈ ಅರಿವು ಮನುಷ್ಯರಿಗೆ ಇರಬೇಕು.
ಮನುಷ್ಯರ ಆಯುಷ್ಯಕ್ಕೆ ಆರಂಭ ಏಂತೋ, ಅಂತೆ ಒಂದು ಕೊನೆಯೂ ಇದೆಯಲ್ಲವೇ? ಯಾವುದಕ್ಕೆ ಆರಂಭವಿದೆಯೋ, ಅದಕ್ಕೆ ಮುಕ್ತಾಯುವೂ ಇದೆ.

ಬದುಕಿರುವಾಗ ಜೀವನದ ವಿವಿಧ ಸಮಸ್ಯೆಗಳನ್ನು ಎದುರಿಸುವಾಗ ಸಂಸಾರದ ತಾಪತ್ರಯಗಳಲ್ಲಿ ಕಾಲ ಗತಿಸಿದ್ದೇ ತಿಳಿಯುವುದಿಲ್ಲ. ಆದರೆ ಕಾಲಕ್ಕೆ ತನ್ನ ಗತಿ ತಿಳಿದಿರುತ್ತದೆ. ಮನುಷ್ಯರಿಗೆ ನೂರು ವರ್ಷವನ್ನು ಪೂರ್ಣಾಯುಷ್ಯ ಎಂದು ಕರೆಯಲಾಗಿದೆ. ಆದರೆ ಈ ನೂರು ವರ್ಷಗಳೂ ನಮ್ಮ ಖಾತೆಗೆ ಜಮಾ ಆಗುವುದಿಲ್ಲ. ಅದರಲ್ಲೂ ರಾತ್ರಿಗಳ ನಿದ್ರೆಯಲ್ಲಿ ಅರ್ಧ ಭಾಗ ಹೋಗುತ್ತದೆ. ಅಂದರೆ ಐವತ್ತು ವರ್ಷ ಹೋಯಿತು. ಉಳಿದ ಅರ್ಧ ಭಾಗ ಬಾಲ್ಯ ಹಾಗೂ ಮುಪ್ಪು ಎಂಬ ಅವಸ್ಥೆಯಲ್ಲಿ ಕಳೆದು ಹೋಗುತ್ತದೆ. ಬಹುತೇಕವಾಗಿ ಬಾಲ್ಯ ಹಾಗೂ ಮುಪ್ಪಿಗೆ ಹೆಚ್ಚಿನ ಅಂತರವಿಲ್ಲ. ಕಾರಣ ಎರಡು ಅವಸ್ಥೆಗಳಲ್ಲಿಯೂ ಮನುಷ್ಯರು ಪರಾವಲಂಬಿಗಳೇ ಆಗಿರುತ್ತಾರೆ. ಇನ್ನು ಉಳಿದದ್ದು ಇಪ್ಪತ್ತೈದು ವರ್ಷ. ಇದೂ ನಮ್ಮ ಪಾಲಿಗೆ ಸಂಪೂರ್ಣವಾಗಿ ಸಿಗುವುದಿಲ್ಲ. ಅದರಲ್ಲಿ ಕೆಲವು ಭಾಗ ರೋಗ, ವಿಯೋಗ, ಇತ್ಯಾದಿಗಳಲ್ಲಿ ಕಳೆದು ಹೋಗುತ್ತದೆ.

ಈ ಪ್ರಕಾರ ಮನುಷ್ಯರ ಜೀವನ ನೀರಿನ ಅಲೆಗಳಂತೆ ಚಂಚಲ. ಯಾವುದನ್ನು ಸುಖವೆಂದು ತಿಳಿಯುತ್ತೇವೆಯೋ, ಅದು ನಿಜವಾಗಿ ಸುಖ ಆಗಿರುವುದಿಲ್ಲ. ಆದ್ದರಿಂದ, ಜೀವನವನ್ನು ನೈಜ ಸುಖದ ಹುಡುಕಾಟಕ್ಕೆ ಬಳಸಬೇಕು ಎನ್ನುವುದೇ ಭರ್ತೃಹರಿಯ ಅಭಿಪ್ರಾಯ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.