ಕಾಲದ ಬಗ್ಗೆ ಚಿಂತನೆ ಮಾಡುವವನೊಬ್ಬ
ಕಾಲದ ಬಗ್ಗೆ ಪ್ರಶ್ನೆ ಮಾಡಿದಾಗ
ಅವನು ಉತ್ತರಿಸತೊಡಗಿದ.
ಅಳತೆಗೆ ನಿಲುಕದ,
ಅಳತೆಯೇ ಇಲ್ಲದ ಕಾಲವನ್ನು
ನೀವು ಅಳೆಯಲು ಮುಂದಾಗುತ್ತೀರಿ.
ಸಮಯಕ್ಕನುಗುಣವಾಗಿ,
ಋತುಮಾನಗಳಿಗನುಸಾರವಾಗಿ
ನಿಮ್ಮ ಸ್ವಭಾವವನ್ನು ಬದಲಾಯಿಸಿಕೊಳ್ಳಲು,
ನಿಮ್ಮ ಚೇತನದ ಧಾರೆಯನ್ನು ನಿರ್ದೇಶಿಸಿಕೊಳ್ಳಲು ಹಾತೊರೆಯುತ್ತೀರಿ.
ಕಾಲವನ್ನು ಧಾರೆಯಾಗಿಸಿ
ಅದರ ದಂಡೆಯ ಮೇಲೆ ಕುಳಿತು
ಆ ಹರಿವಿನ ಪ್ರವಾಹವನ್ನು ನೋಡ ಬಯಸುತ್ತೀರಿ.
ನಿಮ್ಮೊಳಗಿನ ಕಾಲಾತೀತ ಪ್ರಜ್ಞೆಗೆ
ಬದುಕಿನ ಅಗಾಧತೆಯ ಅರಿವಿರುವಾಗಲೂ,
ನಿನ್ನೆ ನಿನ್ನೆಯಲ್ಲ , ಇಂದಿನ ನೆನಪು ಮಾತ್ರ ಮತ್ತು
ನಾಳೆ ನಾಳೆಯಲ್ಲ ಇವತ್ತಿನ ಕನಸು ಅಷ್ಟೇ
ಎನ್ನುವುದು ಸ್ಪಷ್ಟವಾಗಿ ಗೊತ್ತಿದೆ.
ಮತ್ತೆ ಅದು,
ಯಾವುದು ನಿಮ್ಮೊಳಗೆ ಹಾಡುತ್ತಿದೆಯೋ,
ಯಾವುದು ನಿಮ್ಮೊಳಗಿನ ಮಂಥನಕ್ಕೆ ಕಾರಣವಾಗಿದೆಯೋ
ಅದು, ಇನ್ನೂ ಗಿರಕಿ ಹೊಡೆಯುತ್ತಿದೆ
ಬ್ರಹ್ಮಾಂಡದಲ್ಲಿ ನಕ್ಷತ್ರಗಳು ಚದುರಿಹೋದ
ಆ ಕ್ಷಣದ ಸುತ್ತ ಮುತ್ತ.
ಯಾರವರು ನಿಮ್ಮೊಳಗಿನವರು,
ತಮ್ಮ ಪ್ರೇಮದ ಅಸೀಮ ಶಕ್ತಿಯ ಬಗ್ಗೆ
ತಮಗೇ ಗೊತ್ತಿಲ್ಲದವರು ?
ಪ್ರೇಮ ಅಸೀಮವಾಗಿದ್ದರೂ
ತನ್ನ ಇರುವಿಕೆಯ ಕೇಂದ್ರದ ಸುತ್ತ
ಕಟ್ಟಿಹಾಕಲ್ಪಟ್ಟಿದೆಯೆಂದೂ,
ಒಂದು ಪ್ರೇಮ ಭಾವದಿಂದ ಇನ್ನೊಂದಕ್ಕೆ,
ಒಂದು ಪ್ರೇಮ ಕ್ರಿಯೆಯಿಂದ ಮತ್ತೊಂದಕ್ಕೆ
ಸಾಗಿ ಹೋಗುತ್ತಿಲ್ಲವೆಂಬುದರ
ಸುಳಿವೂ ಇಲ್ಲದವರು?
ಕಾಲವೂ ಹಾಗೇ ಅಲ್ಲವೆ, ಪ್ರೇಮದಂತೆ
ಅವಿಭಾಜ್ಯ ಮತ್ತು ಅಚಲ ?
ಆದರೆ ನೀವು
ಕಾಲವನ್ನು ಋತುಗಳಿಗನುಗುಣವಾಗಿ
ಭಾಗ ಮಾಡಲೇ ಬಯಸುವುದಾದರೆ
ಪ್ರತೀ ಋತು, ಎಲ್ಲ ಋತುಗಳನ್ನೂ ಆವರಿಸಿಕೊಳ್ಳಲಿ,
ಮತ್ತು ಇಂದು,
ನಿನ್ನೆಯನ್ನು ನೆನಪಿನಿಂದ ಅಪ್ಪಿಕೊಳ್ಳಲಿ
ಹಾಗು, ನಾಳೆಯನ್ನು
ತೀವ್ರ ಬಯಕೆಯಿಂದ.
ಮುಂದುವರೆಯುತ್ತದೆ……….
ಹಿಂದಿನ ಭಾಗವನ್ನು ಇಲ್ಲಿ ಓದಿ : https://aralimara.wordpress.com/2018/09/29/pravadi-7/
ಲೇಖಕರ ಕುರಿತು: ಖಲೀಲ್ ಗಿಬ್ರಾನ್ ತನ್ನ ಅಲೌಕಿಕ ಕೃತಿ “ಪ್ರವಾದಿ” ಯನ್ನು (THE PROPHET) ಮೊದಲು ರಚಿಸಿದ್ದು ಅರೇಬಿಕ್ ಭಾಷೆಯಲ್ಲಿ; ತನ್ನ ಇಪ್ಪತ್ತರ ಹರೆಯದಲ್ಲಿ! ಆಮೇಲೆ ಇಂಗ್ಲೀಷ್ ಭಾಷೆಗೆ ಅದನ್ನು ತರ್ಜುಮೆ ಮಾಡಿದ್ದೂ ಅವನೇ. ಅಮೇರಿಕೆಯ ಉದ್ದಗಲಕ್ಕೂ “ಪುಟ್ಟ ಕಪ್ಪು ಪುಸ್ತಕ” “ಪುಟ್ಟ ಬೈಬಲ್” ಎಂದು ಈ ಪುಸ್ತಕ ಖ್ಯಾತಿ ಪಡೆಯಿತು. ಈ ಖ್ಯಾತಿಗೆ ತಲೆ ಕೊಡದ ಗಿಬ್ರಾನ್, “ನಾನು ಪ್ರವಾದಿ ಕೃತಿಯನ್ನು ಬರೆಯುತ್ತಿದ್ದಂತೆ, ಪ್ರವಾದಿ ಕೃತಿ ನನ್ನನ್ನು ಬರೆಯಿತು” ಎಂದುಬಿಟ್ಟಿದ್ದ.
ಅನುವಾದಕರ ಕುರಿತು: ಚಿದಂಬರ ನರೇಂದ್ರ ಮೂಲತಃ ಧಾರವಾಡದವರು, ವೃತ್ತಿಯಿಂದ ಮೆಕಾನಿಕಲ್ ಇಂಜಿನಿಯರ್, ಕಂಪನಿಯೊಂದರಲ್ಲಿ ಡಿಸೈನ್ ವಿಭಾಗದ ಮುಖ್ಯಸ್ಥ. ಸಿನೇಮಾ, ಸಾಹಿತ್ಯ ಹವ್ಯಾಸಗಳು. ಕವಿ ಮತ್ತು ಅನುವಾದಕ. ಝೆನ್ ಕಥೆ, ಸೂಫಿ ಕಾವ್ಯ, ಗುಲ್ಜಾರ್ ಕವಿತೆಗಳ ಅನುವಾದಗಳಿಂದ ಜನಪ್ರಿಯರು.

ಲೇಖಕರ ಕುರಿತು: ಖಲೀಲ್ ಗಿಬ್ರಾನ್ ತನ್ನ ಅಲೌಕಿಕ ಕೃತಿ “ಪ್ರವಾದಿ” ಯನ್ನು (THE PROPHET) ಮೊದಲು ರಚಿಸಿದ್ದು ಅರೇಬಿಕ್ ಭಾಷೆಯಲ್ಲಿ; ತನ್ನ ಇಪ್ಪತ್ತರ ಹರೆಯದಲ್ಲಿ! ಆಮೇಲೆ ಇಂಗ್ಲೀಷ್ ಭಾಷೆಗೆ ಅದನ್ನು ತರ್ಜುಮೆ ಮಾಡಿದ್ದೂ ಅವನೇ. ಅಮೇರಿಕೆಯ ಉದ್ದಗಲಕ್ಕೂ “ಪುಟ್ಟ ಕಪ್ಪು ಪುಸ್ತಕ” “ಪುಟ್ಟ ಬೈಬಲ್” ಎಂದು ಈ ಪುಸ್ತಕ ಖ್ಯಾತಿ ಪಡೆಯಿತು. ಈ ಖ್ಯಾತಿಗೆ ತಲೆ ಕೊಡದ ಗಿಬ್ರಾನ್, “ನಾನು ಪ್ರವಾದಿ ಕೃತಿಯನ್ನು ಬರೆಯುತ್ತಿದ್ದಂತೆ, ಪ್ರವಾದಿ ಕೃತಿ ನನ್ನನ್ನು ಬರೆಯಿತು” ಎಂದುಬಿಟ್ಟಿದ್ದ.

[…] ಹಿಂದಿನ ಭಾಗವನ್ನು ಇಲ್ಲಿ ಓದಿ : https://aralimara.com/2018/09/30/pravadi-8/ […]
LikeLike