ಒಳಿತು ಕೆಡಕು : ಖಲೀಲ್ ಗಿಬ್ರಾನನ ‘ಪ್ರವಾದಿ’ ~ ಅಧ್ಯಾಯ 21

Inspirational Quotes Kahlil Gibran Life Kahlil Gibran Quotes | K

ಊರಿನ ಹಿರಿಯಜ್ಜ
ಒಳಿತು ಕೆಡಕುಗಳ ಬಗ್ಗೆ ಮಾಡಿದ ಪ್ರಶ್ನೆಗೆ
ಅವನು ಉತ್ತರಿಸತೊಡಗಿದ.

ನಿಮ್ಮೊಳಗಿರುವ ಒಳಿತಿನ ಬಗ್ಗೆಯೇನೋ ಮಾತನಾಡಬಹುದು
ಆದರೆ ಕೆಡುಕಿನ ಬಗ್ಗೆ ಸಾಧ್ಯವಿಲ್ಲ.

ಏಕೆಂದರೆ,
ಕೆಡಕು ಬೇರೇನೂ ಅಲ್ಲ;
ಹಸಿವೆ ಬಾಯಾರಿಕೆಗಳಿಂದ
ಬಳಲಿ ಬೆಂಡಾದ ನಿಮ್ಮ ಒಳಿತೇ ಹೌದು.

ಒಳಿತಿಗೆ ಹಸಿವೆಯಾದರೆ
ಅದು ಸುಮ್ಮನೇ ಕೂಡುವುದಿಲ್ಲ
ಕಗ್ಗತ್ತಲ ಗುಹೆಗೂ
ಅನ್ನ ಹುಡುಕಿಕೊಂಡು ಹೋಗುತ್ತದೆ,
ಬಾಯಾರಿಕೆಯಾದರೆ
ಬಗ್ಗಡದ ನೀರನ್ನೂ ಕುಡಿಯುತ್ತದೆ.

ನೀವು ನಿಮ್ಮೊಂದಿಗೆ ಒಂದಾದಾಗ ಮಾತ್ರ
ಒಳಿತನ್ನು ಸಾಧಿಸುತ್ತೀರಿ.

ಆದರೆ, ನೀವು ನಿಮ್ಮೊಡನೆ
ಒಂದಾಗದೇ ಹೋದ ಮಾತ್ರಕ್ಕೆ
ಕೆಡುಕಿಗೆ ವಾರಸುದಾರರೇನಲ್ಲ.

ಏಕೆಂದರೆ, ಒಡೆದ ಮನೆ
ಕೇವಲ ಒಡೆದ ಮನೆಯೇ ಹೊರತು
ದರೋಡೆಕೋರರ ತಂಗುದಾಣವಲ್ಲ.

ಮತ್ತು ಚುಕ್ಕಾಣಿಯಿಲ್ಲದ ಹಡಗು
ಗೊತ್ತು ಗುರಿಯಿಲ್ಲದೇ
ಅಪಾಯಕಾರಿ ದ್ವೀಪಗಳ ಸುತ್ತ
ಗಿರಕಿ ಹೊಡೆಯಬಲ್ಲದೇ ಹೊರತು,
ನೀರಿನಾಳಕ್ಕೆ ಮುಳುಗಿಯೆನೂ ಹೋಗುವುದಿಲ್ಲ.

ನಿಮ್ಮನ್ನೇ ನೀವು ಕೊಟ್ಟುಕೊಂಡಾಗ
ಒಳಿತನ್ನು ಸಾಧಿಸುವಿರಿ.

ಹಾಗೆಂದ ಮಾತ್ರಕ್ಕೆ,
ಸ್ವಂತಕ್ಕೆ ಲಾಭ ಮಾಡಿಕೊಂಡಾಗ
ಕೆಡಕನ್ನೇನೂ ಆಹ್ವಾನಿಸುವುದಿಲ್ಲ.

ಏಕೆಂದರೆ ಸ್ವಂತಕ್ಕಾಗಿ ಹಾತೊರೆದಾಗ
ನೀವು, ಭೂಮಿಯನ್ನು ಅಪ್ಪಿಕೊಂಡು
ಅವಳ ಮೊಲೆ ಹಾಲು ಹೀರುವ ಬೇರಿನಂತೆ.

“ ಪಕ್ವವಾಗು, ಪೂರ್ಣವಾಗು,
ನನ್ನಂತೆ ಸಮಸ್ತವನ್ನೂ ಅರ್ಪಿಸಿಕೊಳ್ಳುವ ಧನಿಯಾಗು “
ಎಂದು ಹಣ್ಣು , ಬೇರಿಗೆ ಉಪದೇಶ ಮಾಡುವ ಹಾಗಿಲ್ಲ.

ಹಣ್ಣಿಗೆ ಹೇಗೆ ‘ಅರ್ಪಣೆ’ ಸಾರ್ಥಕತೆಯೋ
ಹಾಗೆಯೇ ಬೇರಿನ ಧನ್ಯತೆ ‘ಸ್ವೀಕಾರ’ ದಲ್ಲಿದೆ.

ಮಾತಿನಲ್ಲಿ ಪೂರ್ತಿ ಎಚ್ಚರವಿರುವಾಗಲೇ
ನೀವು ಒಳಿತನ್ನು ಸಾಧಿಸುವಿರಿ.
ಆದರೆ ನೀವು ನಿದ್ದೆಯಲ್ಲಿದ್ದಾಗಲೂ
ನಾಲಿಗೆ, ಉದ್ದೇಶರಹಿತವಾಗಿ ಬಡಬಡಿಸುತ್ತಿದ್ದರೆ
ಅದು ಅಂಥ ಕೆಡಕೇನಲ್ಲ.

ತಡವರಿಸುವ ಮಾತುಗಳು ಕೂಡ
ದುರ್ಬಲ ನಾಲಗೆಯನ್ನು ಗಟ್ಟಿಗೊಳಿಸುತ್ತವೆ.

ನಿಮ್ಮ ಗುರಿಯತ್ತ
ಧೃಢವಾದ, ದಿಟ್ಟ ಹೆಜ್ಜೆಗಳನ್ನು ಹಾಕುತ್ತ ನಡೆದಾಗಲೇ
ನೀವು ಒಳಿತನ್ನು ಸಾಧಿಸುವಿರಿ.

ಆದರೆ ಅತ್ತ ನೀವು, ಕುಂಟುತ್ತ ಸಾಗಿದರೂ
ಕೆಡಕನ್ನೇನೂ ಜೊತೆ ಮಾಡಿಕೊಳ್ಳುವುದಿಲ್ಲ.
ಕುಂಟುತ್ತ ನಡೆಯುವವರೂ
ಹಿಮ್ನುಖವಾಗಿ ಪ್ರಯಾಣಿಸುವುದಿಲ್ಲ.

ಆದರೆ ನೀವು, ಶಕ್ತಿಶಾಲಿಗಳು,
ಮಿಂಚಿನಂತೆ ಸಂಚಾರ ಮಾಡಬಲ್ಲವರು,
ದುರ್ಬಲರ ಎದುರು ಕುಂಟುತ್ತ ಸಾಗಬೇಡಿ
ಅಂತಃಕರಣದ ಹೆಸರಿನಲ್ಲಿ.

ಅಪಾರ ವಿಧದಲ್ಲಿ ನೀವು
ಒಳಿತನ್ನು ಸಾಧಿಸಿರುವಿರಿ,
ಆದರೆ ಹಾಗಾಗದಿರುವಾಗಲೂ
ಕೆಡಕನ್ನೇನೂ ಅಪ್ಪಿಕೊಂಡಿಲ್ಲ.

ಆಗ ನೀವು ನಿರುತ್ಸಾಹಿಗಳು,
ಸೋಮಾರಿಗಳು ಮಾತ್ರ.

ಜಿಂಕೆಗಳು
ಆಮೆಗಳಿಗೆ ಚುರುಕುತನವನ್ನ ಕಲಿಸಲಾಗದಿರುವುದು
ವಿಷಾದದ ಸಂಗತಿ.

ನಿಮ್ಮೊಳಗಿರುವ ಅಪಾರಕ್ಕಾಗಿ
ತುಡಿಯುವದರಲ್ಲಿಯೇ
ನಿಮ್ಮ ಒಳಿತಿದೆ.
ಮತ್ತು ಈ ತುಡಿತ ನಿಮ್ಮೆಲ್ಲರಲ್ಲೂ ಇದೆ.

ಕೆಲವರಲ್ಲಿ ಈ ತುಡಿತ,
ಬೆಟ್ಟ ಗುಡ್ಡಗಳ ರಹಸ್ಯಗಳನ್ನ ಮತ್ತು
ಕಾಡಿನ ಹಾಡುಗಳನ್ನ ಹೊತ್ತು
ಸಮುದ್ರದತ್ತ ತೀವ್ರವಾಗಿ ಧಾವಿಸುತ್ತಿರುವ
ಪ್ರವಾಹದಂತಿದ್ದರೆ;

ಇನ್ನೂ ಕೆಲವರಲ್ಲಿ
ಸಮುದ್ರ ಸೇರುವ ಮುಂಚೆಯೇ
ಅಂಕು ಡೊಂಕುಗಳಲ್ಲಿ, ತಿರುವುಗಳಲ್ಲಿ
ತನ್ನ ಉತ್ಸಾಹ ಕಳೆದುಕೊಂಡು
ಮಂದವಾಗಿ ಹರಿಯುತ್ತಿರುವ ತೊರೆಯಂತೆ.

ತೀವ್ರವಾಗಿ ತುಡಿಯುತ್ತಿರುವವನು
ತನ್ನ ಹಾಗಿಲ್ಲದ ಇನ್ನೊಬ್ಬನನ್ನು ಕೇಳದಿರಲಿ,
“ ಯಾಕೆ ನೀನು ನಿಧಾನ ?
ಯಾಕೆ ನೀನು ನಿಂತು ನಿಂತು ಪ್ರಯಾಣ ಮಾಡುತ್ತೀ? “

ಒಳಿತು, ಬೆತ್ತಲೆಯಿರುವವನನ್ನು
ಅವನ ಬಟ್ಟೆಗಳ ಬಗ್ಗೆ,
ಮನೆಯಿಲ್ಲದವನನ್ನು
ಅವನ ಮನೆಯ ವಿಳಾಸದ ಬಗ್ಗೆ
ಪ್ರಶ್ನೆ ಮಾಡುವುದಿಲ್ಲ .

ಮುಂದುವರೆಯುತ್ತದೆ……….

ಹಿಂದಿನ ಭಾಗವನ್ನು ಇಲ್ಲಿ ಓದಿ : https://aralimara.com/2018/09/30/pravadi-8/

gibranಲೇಖಕರ ಕುರಿತು: ಖಲೀಲ್ ಗಿಬ್ರಾನ್ ತನ್ನ ಅಲೌಕಿಕ ಕೃತಿ “ಪ್ರವಾದಿ” ಯನ್ನು (THE PROPHET) ಮೊದಲು ರಚಿಸಿದ್ದು ಅರೇಬಿಕ್ ಭಾಷೆಯಲ್ಲಿ; ತನ್ನ ಇಪ್ಪತ್ತರ ಹರೆಯದಲ್ಲಿ! ಆಮೇಲೆ ಇಂಗ್ಲೀಷ್ ಭಾಷೆಗೆ ಅದನ್ನು ತರ್ಜುಮೆ ಮಾಡಿದ್ದೂ ಅವನೇ. ಅಮೇರಿಕೆಯ ಉದ್ದಗಲಕ್ಕೂ “ಪುಟ್ಟ ಕಪ್ಪು ಪುಸ್ತಕ” “ಪುಟ್ಟ ಬೈಬಲ್” ಎಂದು ಈ ಪುಸ್ತಕ ಖ್ಯಾತಿ ಪಡೆಯಿತು. ಈ ಖ್ಯಾತಿಗೆ ತಲೆ ಕೊಡದ ಗಿಬ್ರಾನ್, “ನಾನು ಪ್ರವಾದಿ ಕೃತಿಯನ್ನು ಬರೆಯುತ್ತಿದ್ದಂತೆ, ಪ್ರವಾದಿ ಕೃತಿ ನನ್ನನ್ನು ಬರೆಯಿತು” ಎಂದುಬಿಟ್ಟಿದ್ದ.

ChiNa

ಅನುವಾದಕರ ಕುರಿತು: ಚಿದಂಬರ ನರೇಂದ್ರ ಮೂಲತಃ ಧಾರವಾಡದವರು, ವೃತ್ತಿಯಿಂದ ಮೆಕಾನಿಕಲ್ ಇಂಜಿನಿಯರ್, ಕಂಪನಿಯೊಂದರಲ್ಲಿ ಡಿಸೈನ್ ವಿಭಾಗದ ಮುಖ್ಯಸ್ಥ. ಸಿನೇಮಾ, ಸಾಹಿತ್ಯ ಹವ್ಯಾಸಗಳು. ಕವಿ ಮತ್ತು ಅನುವಾದಕ. ಝೆನ್ ಕಥೆ, ಸೂಫಿ ಕಾವ್ಯ, ಗುಲ್ಜಾರ್ ಕವಿತೆಗಳ ಅನುವಾದಗಳಿಂದ ಜನಪ್ರಿಯರು.

 

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.