ಪರ್ಷಿಯಾದ ಬಾದಶಾಹ್’ನಿಗೆ ಒಮ್ಮೆ ತನ್ನ ರಾಜ್ಯದ ಪ್ರಖ್ಯಾತ ಸೂಫಿ ಪೀರ್ (ಗುರು) ಎಷ್ಟು ಬುದ್ಧಿವಂತ ಎಂದು ಪರೀಕ್ಷಿಸುವ ಹುಕಿ ಬಂತು. ಸೂಫಿ ಪೀರನನ್ನು ಆಸ್ಥಾನಕ್ಕೆ ಕರೆಸಲಾಗುವುದಿಲ್ಲ. ಕರೆದರೆ ಆತ ಬರುವುದೂ ಇಲ್ಲ! ಹೀಗಾಗಿ ಬಾದಶಾಹ್ ತಾನೇ ಖುದ್ದಾಗಿ ಅವನ ಬಳಿ ಹೋದ.
ಹೀಗೆ ಅಚಾನಕ್ಕಾಗಿ ಬಾದಶಾಹ್’ನನ್ನು ಸ್ವಾಗತಿಸಿದ ಸೂಫಿ ಪೀರ್, ಹಣ್ಣುಹಂಪಲು ನೀಡಿ ಸತ್ಕರಿಸಿದ. ಬಾದಶಾಹ್ ಎಲ್ಲವನ್ನೂ ಸ್ವೀಕರಿಸಿ, ನಿಧಾನವಾಗಿ ಪೀಠಿಕೆ ಹಾಕುತ್ತಾ ಹೇಳಿದ. “ಪೀರ್, ಅಲ್ಲಾಹನ ಕುರಿತು ನನಗೆ ಕೆಲವು ಅನುಮಾನಗಳು ಕಾಡುತ್ತಿವೆ. ಇದನ್ನು ನೀವು ಬಗೆಹರಿಸಬೇಕು” ಎಂದ. ಪೀರ್ ಅದಕ್ಕೊಪ್ಪಿದ.
ಗಂಟಲು ಸರಿ ಮಾಡಿಕೊಂಡ ಬಾದಶಾಹ್, “ಈ ವಿಶ್ವದಲ್ಲಿ ಅಲ್ಲಾಹನು ನೆಲೆಸಿರುವ ಜಾಗ ಯಾವುದು? ಅವನ ಮುಖ ಯಾವ ಕಡೆಗಿರುತ್ತದೆ?” ಎಂದು ಎರಡು ಪ್ರಶ್ನೆಗಳನ್ನು ಕೇಳಿದ.
ಈ ಪ್ರಶ್ನೆಗಳನ್ನು ಕೇಳಿ ಪೀರ್ ಗಲಿಬಿಲಿಗೊಂಡ. ಆತನಿಗೆ ಉತ್ತರ ಗೊತ್ತಿರಲಿಲ್ಲ ಎಂದಲ್ಲ; ಆತನಿಗೆ ಅದನ್ನು ಮಾತುಗಳಲ್ಲಿ ಹೇಳಲು ಕಷ್ಟಕರವಾಗಿ ಕಂಡಿತು. ಬಳಿಯೇ ಇದ್ದ ಶಾಗಿರ್ದ್ (ಶಿಷ್ಯ), ತನ್ನ ಗುರುವಿನ ತೊಳಲಾಟವನ್ನು ನೋಡಿದ. ಪೀರನಿಗೆ ಉತ್ತರಿಸಲು ಸಾಧ್ಯವಾಗದೆ ಹೋದರೆ ಈ ಬಾದಶಾಹ್ ಅವರನ್ನು ಅಜ್ಞನೆಂದು ತಿಳಿಯುತ್ತಾನೆ. ಅವರಿಂದ ಜ್ಞಾನ ಪಡೆದ ನನಗೆ ಕೃತಜ್ಞತೆ ಸಲ್ಲಿಸಲು ಇದೇ ಸರಿಯಾದ ಸಮಯ ಎಂದು ಯೋಚಿಸಿದ.
ನಡುವೆ ಬಾಯಿ ಹಾಕಿದ ಶಾಗಿರ್ದ್. “ದಯಮಾಡಿ ಕ್ಷಮಿಸಿ. ಈ ಪ್ರಶ್ನೆಗಳಿಗೆ ನಮ್ಮ ಪೀರರೇ ಉತ್ತರಿಸಬೇಕಿಲ್ಲ. ಅವರಿಂದ ಕಲಿಯುತ್ತಿರುವ ನನ್ನಂಥವರೇ ಇವಕ್ಕೆ ಉತ್ತರ ನೀಡಲು ಸಮರ್ಥರಿದ್ದೇವೆ. ಸುಮ್ಮನೆ ಅವರ ಶಕ್ತಿ ಸಂಚಯವನ್ನೇಕೆ ಪೋಲು ಮಾಡಬೇಕು?” ಎಂದು ಕೇಳಿದ. ಬಾದಷಾಹ್’ನಿಗೆ ಯುವಕನ ಮಾತು ಕೇಳಿ ಅಚ್ಚರಿಯಾದರೂ ತನ್ನ ಅಹಂಕಾರವನ್ನು ಕೆಣಕಿದಂತಾಯ್ತು. “ಆಗಲಿ, ನೀನು ಇವಕ್ಕೆ ಸರಿಯಾಗಿ ಉತ್ತರಿಸಿದರೆ ಆಯಿತು. ಇಲ್ಲವಾದರೆ ನೀನು ನನ್ನ ಆಸ್ಥಾನದ ಕಟ್ಟಕಡೆಯ ಸೇವಕನ ಮನೆಯಲ್ಲಿ ಜೀತ ಮಾಡಿಕೊಂಡು ಇರಬೇಕಾದೀತು” ಎಂದ.
ಶಾಗಿರ್ದ್ ಬಾದಶಾಹನ ಕರಾರಿಗೆ ಒಪ್ಪಿದ. ಬಳಿಯೇ ಇದ್ದ ಮತ್ತೊಬ್ಬ ಶಾಗಿರ್ದನಲ್ಲಿ ಹೇಳಿ ಸ್ವಲ್ಪ ಹಾಲು ತರಿಸಿದ. ಅದನ್ನು ಬಾದಶಾಹನ ಮುಂದಿಡುತ್ತಾ, “ಈ ಹಾಲಿನಲ್ಲಿ ಬೆಣ್ಣೆ ಇದೆಯೇ?” ಎಂದು ಕೇಳಿದ. ಬಾದಶಾಹ್ ಇದೆಯೆಂದು ತಲೆಯಾಡಿಸಿದ. “ಹಾಗಾದರೆ ಅದು ಎಲ್ಲಿದೆ? ನಮಗೆ ತೋರಿಸಬಲ್ಲಿರಾ?” ಎಂದು ಕೇಳಿದ ಶಾಗಿರ್ದ್. “ಅದು ಹೇಗೆ ತೋರಿಸಲಾದೀತು? ಹಾಲಿನಲ್ಲಿ ಬೆಣ್ಣೆ ಅಡಗಿದೆ. ಅದನ್ನು ಹೆಪ್ಪು ಹಾಕಿ, ಕಡೆದರೆ ಸಿಗುತ್ತದೆ” ಎಂದ ಬಾದಶಾಹ್. “ಹಾಗೆಯೇ ಬಾದಶಾಹ್! ಅಲ್ಲಾಹನೂ ಇಡಿಯ ವೀಶ್ವದಲ್ಲಿ ವ್ಯಾಪಿಸಿಕೊಂಡಿದ್ದಾನೆ. ಅವನು ಯಾವುದೋ ಒಂದು ನಿರ್ದಿಷ್ಟ ಸ್ಥಾನದಲ್ಲಿ ನೆಲೆಸಿರುವುದಿಲ್ಲ” ಎಂದ ಶಾಗಿರ್ದ್.
ಈಗ, “ಅಲ್ಲಾಹನ ಮುಖ ಯಾವ ಕಡೆಗಿದೆ?” ಎಂಬ ಪ್ರಶ್ನೆ.
ಶಾಗಿರ್ದ್, ಒಂದು ಮೇಣದ ಬತ್ತಿಯನ್ನು ತರಿಸಿ ಅದನ್ನು ಹೊತ್ತಿಸಿದ. ಮತ್ತು, “ಬಾದಶಾಹ್, ಈ ಮೇಣದ ಬತ್ತಿಯ ಜ್ವಾಲೆಯ ಮುಖ ಯಾವ ದಿಕ್ಕಿಗಿದೆ?” ಎಂದು ಕೇಳಿದ. ಬಾದಶಾಹ್ ಉತ್ತರಿಸಲಾಗದೆ ತಲೆ ತಗ್ಗಿಸಿದ. “ಮೇಣದಬತ್ತಿಯ ಜ್ವಾಲೆ ಹೇಗೆ ಎಲ್ಲ ದಿಕ್ಕುಗಳಲ್ಲಿ ಸಮಾನವಾಗಿದೆಯೋ ಹಾಗೆಯೇ ಅಲ್ಲಾಹನ ಮುಖವು ಎಲ್ಲ ದಿಕ್ಕುಗಳಲ್ಲೂ ಇದೆ” ಎಂದು ವಿವರಿಸಿದ ಶಾಗಿರ್ದ್.
ಶಾಗಿರ್ದನ ಜಾಣತನದ ುತ್ತರಗಳು ಸಮರ್ಪಕವಾಗಿಯೂ ಇದ್ದವು. “ಶಿಷ್ಯನೇ ಇಷ್ಟು ಜ್ಞಾನಿಯೆಂದ ಮೇಲೆ ಗುರುವಿನ ಜ್ಞಾನವನ್ನು ಪರೀಕ್ಷಿಸುವುದೇನಿದೆ!? ನಾನೊಬ್ಬ ಮೂರ್ಖ!!” ಎಂದು ಬಾದಶಾಹ್ ತನ್ನನ್ನು ತಾನೇ ಬೈದುಕೊಂಡು, ಸೂಫಿ ಪೀರನಿಗೂ ಶಿಷ್ಯರಿಗೂ ವಂದಿಸಿ ಅಲ್ಲಿಂದ ಹೊರಟುಹೋದ.