ಒಂಟಿತನ : ನಮಗೆ ನಾವೇ ಮಾಡಿಕೊಳ್ಳುವ ಗಾಯ! ~ ಅಧ್ಯಾತ್ಮ ಡೈರಿ

ಒಂಟಿತನದ ದುಃಖ ಒಂದು ರೀತಿಯಲ್ಲಿ, ನಮಗೆ ನಾವೇ ಗಾಯ ಮಾಡಿಕೊಂಡು ಅದರ ಉರಿ ತಗ್ಗಿಸಲು ನೆಕ್ಕುತ್ತಾ, ಗಾಯದ ರಕ್ತದ ರುಚಿಯನ್ನು ಸುಖಿಸುವಂತೆ! ~ ಅಲಾವಿಕಾ

ನುಷ್ಯ ಸಂಘ ಜೀವಿ. ಆದ್ದರಿಂದಲೇ ಒಂಟಿತನ ಮನುಷ್ಯರಲ್ಲಿ ಜಿಗುಪ್ಸೆಯನ್ನೂ ಬೇಸರವನ್ನೂ ಮೂಡಿಸುತ್ತದೆ ಎಂದು ಹೇಳಲಾಗುತ್ತದೆ. ಅದಕ್ಕೆ ಸರಿಯಾಗಿ, ನಾವು ಅತಿ ಹೆಚ್ಚು ದುಃಖಿಸುವುದು ನಮ್ಮ ಒಂಟಿನತನದ ಕುರಿತು. ನಾವು ಬಹುತೇಕವಾಗಿ ಸ್ವಾನುಕಂಪ ತೋರುವುದೂ ನಮ್ಮ ಒಂಟಿತನದ ಕುರಿತಾಗಿಯೇ. ಪರಸ್ಥಳಕ್ಕೆ ಹೋದಾಗ ಗೆಳೆಯ ಗೆಳತಿಯರನ್ನು ಮಾಡಿಕೊಳ್ಳಲಾಗಿಲ್ಲವೆಂಬ ಒಂಟಿತನ; ವರ್ಗಾವಣೆ ಅಥವಾ ಹೆಚ್ಚಿನ ಓದಿಗಾಗಿ ಬೇರೆ ಶಾಲೆ ಅಥವಾ ಕಾಲೇಜ್’ಗೆ ಸೇರಿಕೊಂಡಾಗ  ಸಹಪಾಠಿಗಳ ಹೊಂದಾಣಿಕೆಯಾಗದೆ ಒಂಟಿತನ, ವಯಸ್ಸಿಗೆ ಬಂದಾಗ ಸಂಗಾತಿ ಇಲ್ಲವೆಂಬ ಒಂಟಿತನ, ದಾಂಪತ್ಯದಲ್ಲಿ ಬಿರುಕು ಮೂಡಿ ಬೇರೆಯಾದಾಗಿನ ನಂತರದ ಒಂಟಿತನ, ವೃದ್ಧಾಪ್ಯದ ಒಂಟಿತನ – ಈ ಎಲ್ಲವನ್ನು ಹಳಿದುಕೊಳ್ಳುವುದು ಸಾಮಾನ್ಯ. ಹಳಿಯುವುದರ ಜೊತೆಗೇ ನಮ್ಮ ಬಗ್ಗೆ ನಾವು ಪಟ್ಟುಕೊಳ್ಳುವ ಸಹಾನುಭೂತಿ “ಅಯ್ಯೋ ನಾನೆಷ್ಟು ಪಾಪ! ನಾನೆಷ್ಟು ದುರದೃಷ್ಟವಂತೆ/ವಂತ!!” ಎಂದೆಲ್ಲ ಗೋಳಾಡುವುದು ಕೂಡಾ.

ಇದು ಒಂದು ರೀತಿಯಲ್ಲಿ, ನಮಗೆ ನಾವೇ ಗಾಯ ಮಾಡಿಕೊಂಡು, ಅದರ ಉರಿ ತಗ್ಗಿಸಲು ನೆಕ್ಕುತ್ತಾ, ಗಾಯದ ರಕ್ತದ ರುಚಿಯನ್ನು ಸುಖಿಸುವಂತೆ!

ಹೌದು. ಹಾಗೆನ್ನದೆ ಬೇರೆ ದಾರಿಯೇ ಇಲ್ಲ. ನಾವು, ಮನುಷ್ಯರು ಸುಖ ನೀಡದ ಯಾವುದನ್ನೂ ಮಾಡುವುದಿಲ್ಲ. ನಾವು ಪ್ರೇಮಿಸುವುದು, ದ್ವೇಷಿಸುವುದು, ದುಃಖಿಸುವುದು ಎಲ್ಲವೂ ನಮ್ಮ ಅಂತರಂಗಕ್ಕೆ ಸುಖ – ಸಂತೋಷ ನೀಡುತ್ತದೆ ಅನ್ನುವ ಕಾರಣಕ್ಕೇ. ದುಃಖಿಸಿದಷ್ಟೂ ನಾವು ಯಾವುದಕ್ಕಾಗಿ ದುಃಖಿಸುತ್ತಿದ್ದೇವೋ ಆ ಕಾರಣದ ಜೊತೆಗಿನ ನಮ್ಮ ಸಂಬಂಧವನ್ನು ಸೆಲೆಬ್ರೇಟ್ ಮಾಡುತ್ತಿರುತ್ತೇವೆ. ಅದರ ಜೊತೆಗಿನ ನಮ್ಮ ಗುರುತನ್ನು ಖಾಯಂಗೊಳಿಸಿಕೊಳ್ಳುತ್ತ ಇರುತ್ತೇವೆ ಮತ್ತು ಅದಕ್ಕೆ ಅಂಟಿಕೊಂಡೇ ಇರಲು ಬಯಸುತ್ತ ಇರುತ್ತೇವೆ. ನಾವು ದ್ವೇಷಿಸುವುದು ನಮ್ಮ ಅಹಂಕಾರವನ್ನು ತೃಪ್ತಿಪಡಿಸಿಕೊಳ್ಳಲಿಕ್ಕಾಗಿ. ಮತ್ತು ಪ್ರೇಮವನ್ನೂ ಕೂಡ ನಾವು ಮಾಡುವುದು ನಮ್ಮನ್ನು ನಾವು ಪ್ರೇಮಿಸಿಕೊಳ್ಳುವುದರಿಂದಲೇ. ಆದ್ದರಿಂದ, ನಮ್ಮ ಒಂಟಿತನಕ್ಕೆ ನಾವು ಅನುಕಂಪಿಸುವುದು ಕೂಡಾ ಅದನ್ನು ವಿಜೃಂಭಿಸಲೆಂದೇ ಹೊರತು ಬೇರೇನೂ ಅಲ್ಲ.

ವಾಸ್ತವದಲ್ಲಿ ಒಂಟಿತನ ಎಂಬುದು ಅಸ್ತಿತ್ವದಲ್ಲೇ ಇಲ್ಲದ ಸಂಗತಿ. ಅಸ್ತಿತ್ವದಲ್ಲಿರುವ ಯಾವ ಜಡ – ಚೇತನಗಳೂ ಒಂಟಿಯಲ್ಲ. ಇಡಿಯ ಜಗತ್ತು ಒಳಹೆಣಿಗೆಯಿಂದ ಒಂದಕ್ಕೊಂದು ಸಂಬಂಧಿಯಾಗಿದೆ. ಹೀಗಿರುವಾಗ ನಾವು ಹೇಗೆ ತಾನೆ ನಮ್ಮ ಮೇಲೆ ಒಂಟಿತನವನ್ನು ಆರೋಪಿಸಿಕೊಳ್ಳಲು ಸಾಧ್ಯ? ನಾನು ಈಗ ತಿನ್ನುವ ಒಂದು ಚಾಕೊಲೇಟ್ ಇನ್ಯಾರದೋ ಮನೆಯಲ್ಲಿ ಒಂದು ಮಗುವಿನ ಹೊಟ್ಟೆ ತುಂಬಿಸುತ್ತದೆ. ನಾನು ದುಡಿದರೆ, ಇನ್ಯಾರದೋ ಮನೆಯ ಒಲೆ ಉರಿಯುವುದು ಸಾಧ್ಯವಾಗುತ್ತದೆ. ಇದು ಹೀಗೆ : ನಾನು ಹಣ ಕೊಟ್ಟು ಚಾಕೊಲೇಟ್ ಕೊಳ್ಳುವುದರಿಂದ ಅಂಗಡಿಯವನಿಗೆ ಒಂದಷ್ಟು ಲಾಭ ಆಗುತ್ತದೆಯಲ್ಲವೆ? ಅದಕ್ಕಾಗಿಯೇ ಅವನು ಚಾಕೊಲೇಟ್ ಉತ್ಪಾದಕರಿಂದ ಹಣ ಕೊಟ್ಟು ಅದನ್ನು ಕೊಂಡಿರುತ್ತಾನಲ್ಲ? ಆ ಉತ್ಪಾದಕರು ಕಾರ್ಮಿಕರಿಗೆ ಸಂಬಳ ಕೊಟ್ಟು ಚಾಕೊಲೇಟ್ ತಯಾರಿ ಮಾಡಿಸಿರುತ್ತಾನೆ. ಚಾಕೊಲೇಟ್ ಕೊಳ್ಳುವವರು ಇದ್ದರಷ್ಟೇ ಆ ಕಾರ್ಮಿಕರ ಮನೆಯ ಮಗುವಿಗೆ ಊಟ.

ಹೀಗೆ ನಾವು ನೇರವಾಗಿ ಒಡನಾಡದೆ ಹೋದರೂ ಒಬ್ಬರಿಗಾಗಿ ಮತ್ತೊಬ್ಬರು ಇರುತ್ತೇವೆ. ಮತ್ತು, ಒಬ್ಬರಿಂದಾಗಿಯೇ ಮತ್ತೊಬ್ಬರು ಇರುತ್ತೇವೆ. ಹೀಗಾಗಿ ನಾವು ಒಂಟಿಯಲ್ಲ. ಆದರೆ ನಮಗೆ ಅದು ಬೇಕಿಲ್ಲ. ನಮಗೆ ಅವಲಂಬನೆ ಬೇಕು. ನಮ್ಮನ್ನು ನಾವು ನಿಭಾಯಿಸಿಕೊಳ್ಳಲು ಆಗದೆ ಹೋದಾಗ ಅದನ್ನು ಯಾರ ಮೇಲಾದರೂ ಹೊರಿಸಲು ಒಂದು ಬಾಂಧವ್ಯ ಬೇಕು. ಅಂಥದೊಂದು ಬಂಧ ಸಾಧ್ಯವಾಗದೇ ಹೋಗುವುದನ್ನು ನಾವು ಒಂಟಿತನ ಎಂದುಕೊಳ್ಳುತ್ತೇವೆ. ಇದು ನಮ್ಮ ಸ್ವಾರ್ಥ ಮತ್ತು ವೈಫಲ್ಯದ ಫಲಿತಾಂಶವಷ್ಟೆ. ನಮಗೆ ನಮ್ಮನ್ನು ಬದುಕನ್ನು ನಿರ್ವಹಿಸಿಕೊಳ್ಳಲು ಬರುವುದಿಲ್ಲ. ಆ ಕಾರಣದಿಂದಾಗಿಯೇ ನಾವು ಭಾವುಕರಾಗುವುದು. ಪ್ರೀತಿ, ಪ್ರೇಮ, ಗೆಳೆತನ ಎಂಬಿತ್ಯಾದಿ ಭಾವುಕತೆ ನಮ್ಮಲ್ಲಿ ಉದಿಸುವುದು ಈ ಅವಲಂಬನೆಯ ಕಾರಣದಿಂದಾಗಿಯೇ. ನಮ್ಮ ಅಂತರಂಗದ ಖುಷಿಗೆ ನಾವು ಯಾರ ಮೇಲೆ ಡಿಪೆಂಡ್ ಆಗಿರುತ್ತೇವೆಯೋ ಅವರು ಜೊತೆಗಿಲ್ಲದೆ ಹೋದರೆ ಆಗುವ ದುಃಖವದು. ಅಥವಾ, ನನಗೆ ಅವಲಂಬನೆಯನ್ನು ನೀಡಿ, ನಮ್ಮ ಅಂತರಂಗವನ್ನು ಖುಷಿ ಪಡಿಸುವವರು ಇಲ್ಲವಲ್ಲಾ ಅನ್ನುವ ದುಃಖ.

ಇನ್ನು ಕೆಲವರು ತಮ್ಮದೇ ಆಲೋಚನೆಗಳನ್ನು ಎದುರಿಸಲಾಗದ್ದಕ್ಕೆ ಒಂಟಿತನವೆಂದರೆ ಹೆದರುತ್ತಾರೆ. ಸಾಮಾನ್ಯವಾಗಿ ನಾವು ಒಬ್ಬರೇ ಇದ್ದಾಗ ನಮ್ಮ ಚಿಂತೆಗಳು ಹೊರಬರುವುದು. ಅವನ್ನು ಎದುರಿಸಲಾಗದೆ ನಾವು ನಮ್ಮಿಂದಲೇ ಓಡತೊಡಗುತ್ತೇವೆ.

ಇದಕ್ಕೊಂದು ದೃಷ್ಟಾಂತವಿದೆ: ಒಮ್ಮೆ ಒಬ್ಬ ಸಂತ ರಾಜನಿಗೆ , “ನಾವು ಸುಖ ದುಃಖಗಳನ್ನು ಬೇರೆಯವರಲ್ಲಿ ಹುಡುಕುತ್ತೇವೆ. ವಾಸ್ತವದಲ್ಲಿ ಅವೆಲ್ಲವೂ ನಮ್ಮೊಳಗೇ ಇದೆ” ಎಂದು ಬೋಧಿಸುತ್ತಿದ್ದ. ರಾಜ ಅದನ್ನು ಒಪ್ಪಲಿಲ್ಲ. ಸಂತ ಅದನ್ನು ಸಾಬೀತುಪಡಿಸಲು ಮುಂದಾದ. “ನಿನ್ನ ರಾಜ್ಯದ ಆರೋಗ್ಯವಂತ ಯುವ ಗೃಹಸ್ಥನನ್ನು ಕರೆಸಿ, ಆರು ತಿಂಗಳು ಅವನನ್ನು ಒಂಟಿಯಾಗಿಡು, ಅನಂತರ ಮಾತಾಡೋಣ” ಅಂದ. ರಾಜ ಹಾಗೆಯೇ ಮಾಡಿದ. ನಾಲ್ಕು ದಿನ ತಿಂದುಂಡು ಸುಖವಾಗಿದ್ದ ಯುವ ಗೃಹಸ್ಥ, ಐದನೇ ದಿನಕ್ಕೆ ಗೋಳಿಡತೊಡಗಿದ. ಅವನ ಒಳಗಿನದೇ ಚಿಂತೆಗಳು ಅವನನ್ನು ಮುತ್ತಿ ತಿನ್ನತೊಡಗಿದ್ದವು. ನನ್ನ ಹೆಂಡತಿ, ನನ್ನ ಮಗು ಎಂದೆಲ್ಲ ದುಃಖಿಸಿದ. ಅವರಿಗೆ ಎಲ್ಲ ರೀತಿಯ ಅನುಕೂಲ ಮಾಡಿಕೊಡಲಾಗಿದೆ, ಅವರು ಸುಖವಾಗಿದ್ದಾರೆ ಎಂದರೂ ಅವನಿಗೆ ಸಮಾಧಾನವಿಲ್ಲ. ವಾಸ್ತವದಲ್ಲಿ, ಅವನ ಪ್ರೀತಿ ನಿಜವಾಗಿದ್ದರೆ ಅವರು ಸುಖವಾಗಿದ್ದಾರೆ ಅಂದಾಗ ಸುಮ್ಮನಿರಬೇಕಿತ್ತು. ಆದರೆ ಅವನಿಗೆ ಸಮಾಧಾನವಿಲ್ಲ. ಕಾರಣ, ಅವನಿಗೆ ನಿಜಕ್ಕೂ ಇರುವುದು ಹೆಂಡತಿ – ಮಕ್ಕಳ ಚಿಂತೆಯಲ್ಲ, ತನ್ನ ಚಿಂತೆ! ತನಗೆ ಅವರಿಲ್ಲದೆ ಸಮಯ ಹೋಗುವುದಿಲ್ಲ ಅನ್ನುವ ಚಿಂತೆ!!

ಕೊನೆಗೂ ಯುವ ಗೃಹಸ್ಥ ಕಾಡಿಬೇಡಿ ರಾಜನ ಕೃಪೆ ಗಿಟ್ಟಿಸಿ ಹೊರಗೆ ಬಂದ. ರಾಜನಿಗೆ ಸಂತನ ಮಾತು ಅರ್ಧದಷ್ಟು ಒಪ್ಪಿಗೆಯಾಯ್ತು. ಈಗ ಸಂತ, ಒಬ್ಬ ಸಾಧಕನನ್ನು ಕರೆಸಿ ಆರು ತಿಂಗಳು ಒಂಟಿಯಾಗಿ ಇರಿಸುವಂತೆ ಸೂಚಿಸಿದ. ಅದರಂತೆ ರಾಜ ಒಬ್ಬ ಸಾಧಕನನ್ನು ಕರೆಸಿದ. ಆ ಸಾಧಕ ಆರು ತಿಂಗಳಲ್ಲ, ವರ್ಷವಾಗುತ್ತಾ ಬಂದರೂ ಅಲ್ಲಿಂದ ಹೊರಡುವ ಬೇಡಿಕೆಯಲ್ಲೇ ಮುಂದಿಡಲಿಲ್ಲ! ತನ್ನ ಪಾಡಿಗೆ ತನ್ನ ಓದು, ಬರಹ, ಸಾಧನೆಗಳನ್ನು ಮಾಡಿಕೊಂಡು ಹಾಯಾಗಿದ್ದುಬಿಟ್ಟಿದ್ದ! ಏಕೆಂದರೆ ಅವನು ತನ್ನೊಳಗಿನ ಸುಖವನ್ನು, ಭಾವನೆಗಳನ್ನು ಕಂಡುಕೊಂಡಿದ್ದ. ಅವನು ಯಾರ ಮೇಲೂ ಅವಲಂಬಿತನಾಗಿರಲಿಲ್ಲ.

ರಾಜನಿಗೆ ಈಗ ಸಂತನ ಮಾತು ಸಂಪೂರ್ಣ ಒಪ್ಪಿತವಾಯಿತು.

ನಾವು ಒಂಟಿತನದ ಭಾವನೆಯಿಂದ ಹೊರಗೆ ಬರಬೇಕೆಂದರೆ, ಮೊದಲು ಅವಲಂಬನೆಗಳನ್ನು ಬೇಡವಾಗಿಸಿಕೊಳ್ಳಬೇಕು. ಸಂತಸ ಪಡಲು ನಾವು ಹೊರಗಿನ ಆಸರೆ ಪಡೆಯಬೇಕಿಲ್ಲ, ಅದು ನಮ್ಮೊಳಗೇ ಇದೆ ಅನ್ನುವುದು ಅರ್ಥವಾಗಿಬಿಟ್ಟರೆ, ಅರ್ಧ ಕೆಲಸ ಮುಗಿದಂತೆ. ಇನ್ನು, ಆರ್ಥಿಕ, ಸಾಮಾಜಿಕ ಅವಲಂಬನೆಗಳು ವ್ಯವಹಾರ ಮಾತ್ರದ ಅವಲಂಬನೆಯಾಗಿರಬೇಕು. ಅದನ್ನು ಮನಸ್ಸಿಗೆ ಜೋಡಿಸಿಕೊಳ್ಳಬಾರದು. ಹಾಗೆಂದ ಮಾತ್ರಕ್ಕೆ ಹೃದಯಹೀನರಾಗಿ ನಡೆದುಕೊಳ್ಳಬೇಕೆಂದಲ್ಲ, ಪೂರ್ಣಹೃದಯಿಗಳಾಗಿರಬೇಕು ಎಂದು! ನಾವು ವ್ಯಾವಹಾರಿಕ ಸಂಗತಿಗಳ ಜೊತೆಗೆ ಸಂಬಂಧ ಬೆಳೆಸಿಕೊಳ್ಳುವ ಮೂಲಕ ಅಷ್ಟಕ್ಕೇ ಸೀಮಿತರಾಗಿಬಿಡುತ್ತೇವೆ. ಸಂಬಂಧಪಟ್ಟವರನ್ನು ಮಾತ್ರ ಪ್ರೀತಿಸಲು, ಕಾಳಜಿ ತೋರಲು ಶುರು ಮಾಡುತ್ತೇವೆ. ಹಾಗಿಲ್ಲವಾದಾಗ ಮಾತ್ರ ನಮಗೆ ಇಡಿಯ ಸಮಾಜವನ್ನು, ಜಗತ್ತನ್ನು ಸಮಾನವಾಗಿ ಪ್ರೀತಿಸುವುದು ಸಾಧ್ಯವಾಗುತ್ತದೆ. ಆಗ ಒಂಟಿತನದ ದುಃಖವೂ ನಮ್ಮಿಂದ ದೂರವಾಗುತ್ತದೆ.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.