ಪ್ರೇಮದ ಕಾರವಾನು ಯಾವ ಹಾದಿ ನಡೆಯುವುದೋ ಅದೇ ನನ್ನ ಧರ್ಮ. ನಾನು ಪ್ರೇಮ ಪಥಿಕ ! ~ ಇಬ್ನ್ ಅರಬಿ
ಇದು ಬಹಳ ಸ್ಪಷ್ಟವಿದೆ. ದ್ವೇಷ ಲೋಕವನ್ನು ನಾಶ ಮಾಡುತ್ತದೆ; ಪ್ರೇಮ ಬೆಸೆಯುತ್ತದೆ. ಎಲ್ಲ ಜಡ – ಚೇತನಗಳ ನಡುವೆ, ಜೀವ – ಜೀವಗಳ ನಡುವೆ, ಮನಸ್ಸು – ಆಲೋಚನೆಗಳ ನಡುವೆ, ಆಲೋಚನೆ – ಕೃತಿಗಳ ನಡುವೆ ಸೌಹಾರ್ದವಿದ್ದರೆ ಮಾತ್ರ ಸೃಷ್ಟಿಯ ಸಮತೋಲನ ಸಾಧ್ಯ. ಈ ಸೌಹಾರ್ದದ ಕೀಲಿ ಕೈ ಪ್ರೇಮ.
ಸೂಫಿ ಇಬ್ನ್ ಅರಬಿ ಹೇಳುತ್ತಾನೆ, “ಪ್ರೇಮದ ಕಾರವಾನು ಯಾವ ಹಾದಿ ನಡೆಯವುದೋ ಅದೇ ನನ್ನ ಧರ್ಮ” ಎಂದು. ಪ್ರೇಮಿಗಳೇ ತುಂಬಿದ ಯಾತ್ರಿಕರ ಗುಂಪನ್ನು ಇಬ್ನ್ ಅರಬಿ ಹಿಂಬಾಲಿಸುತ್ತಿದ್ದಾನೆ. ಅವರು ನಡೆಯವ ದಾರಿ ಶಾಂತಿ – ಸಹಿಷ್ಣುತೆಗಳ ದಾರಿ. ಪ್ರೇಮಿಗಳು ದ್ವೇಷ ಹಿಂಸೆಗಳ ದಾರಿಯಲ್ಲಿ ನಡೆಯಲಾರರು. ಅಂಥದೊಂದು ದಾರಿಯ ನಿರ್ಮಾಣವನ್ನೂ ಮಾಡಲಾರರು.
ಪ್ರೇಮಿಗಳು ನಡೆಯುವ ದಾರಿ ಸರ್ವ ಮಂಗಳದ ದಾರಿ. ಸುಖ – ಸಂತೃಪ್ತಿಯ ದಾರಿ. ಪ್ರೇಮವೇ ಧರ್ಮವಲ್ಲ, ಪ್ರೇಮ ನಡೆಯುವ ದಾರಿ ಧರ್ಮ. ಪ್ರೇಮವಷ್ಟೇ ನಡೆಯುವ ದಾರಿ ಧರ್ಮ. ಧರ್ಮದ ದಾರಿಯಲ್ಲಿ ದ್ವೇಷದ ಮೆರವಣಿಗೆ ಸಾಧ್ಯವಿಲ್ಲ.
ಇಬ್ನ್ ಅರಬಿ ಇಂಥಾ ದಾರಿಯಲ್ಲಿ ‘ಪ್ರೇಮ ಪಥಿಕನಾಗಿದ್ದೇನೆ ನಾನು’ ಎಂದು ಹೇಳಿಕೊಳ್ಳುತ್ತಾನೆ. ಈ ದಾರಿ ನಮ್ಮದೂ ಆದರೆ, ನಾವೂ ಅವನ ಸಹಪಯಣಿಗರೇ! ಇಲ್ಲಿ ಕಾಲದ ಹಂಗಿಲ್ಲ…